2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನಿರ್ಮಿಸಿಯೇ ತೀರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ನರೇಂದ್ರ ಮೋದಿ ಮಾತನಾಡಿದ್ದಾರೆ. “140 ಕೋಟಿ ಭಾರತೀಯರ ಶಕ್ತಿಯಿಂದ ದೇಶವು ಇಂದು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯ ಹೊಸ ಎತ್ತರಗಳನ್ನು ತಲುಪುತ್ತಿದೆ. ಭಾರತವು ದೊಡ್ಡ ಕನಸುಗಳನ್ನು ಕಾಣುತ್ತಿದ್ದು, ಹೊಸ ಎತ್ತರಗಳನ್ನು ತಲುಪುವತ್ತ ಸಾಗುತ್ತಿದೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾದಾಗ, ಜಗತ್ತು ನಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗಲಿದೆ” ಎಂದಿದ್ದಾರೆ.
“ದೇಶದ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಬೇಕಿದೆ. ಕಳೆದ 12 ವರ್ಷಗಳಲ್ಲಿ ದೇಶದ ರಕ್ಷಣಾ ಉತ್ಪಾದನೆಯು ನಾಲ್ಕು ಪಟ್ಟು ಹೆಚ್ಚಾಗಿದೆ” ಎಂದು ಹೇಳಿದ್ದಾರೆ.
“ಭಾರತವು ಈ ಹಿಂದೆ ಇದ್ದ ‘ನೋ-ಗೋ ಪ್ರದೇಶಗಳನ್ನು’ ಇಂದು ‘ಗೋ-ಅಹೆಡ್ ಪ್ರದೇಶಗಳಾಗಿ’ ಯಶಸ್ವಿಯಾಗಿ ಪರಿವರ್ತಿಸಿದೆ ಎಂದಿದ್ದಾರೆ.
“ಪ್ರತಿಯೊಂದು ಹೃದಯವೂ ವಂದೇ ಮಾತರಂ ಎಂಬ ಭಾವನೆಯಿಂದ ಮಿಡಿಯುತ್ತಿದೆ. ಪ್ರತಿಯೊಂದು ಮನೆ ಮತ್ತು ಪ್ರತಿಯೊಂದು ಹೃದಯದಲ್ಲೂ ತ್ರಿವರ್ಣ ಧ್ವಜವಿದೆ. ಹೊಸ ಶಕ್ತಿಯೊಂದಿಗೆ, ಹೊಸ ಸಂಕಲ್ಪದೊಂದಿಗೆ ದೇಶ ಮುನ್ನಡೆಯುತ್ತಿದೆ” ಎಂದು ಹೇಳಿದರು.



