ಕನ್ನಡ ಬೌದ್ಧಿಕ ಲೋಕದ ‘ಪರಸ್ಪರ ಮೆಚ್ಚುಗೆ ಸಮಾಜ’ಕ್ಕೆ ಸವಾಲಾಗಿದ್ದ ಕೆವಿಎನ್

Date:

ರಾಜಕೀಯ, ಸಂಸ್ಕೃತಿ, ಜನಪದ, ಭಾಷೆ, ಕಾವ್ಯ, ಸಾಹಿತ್ಯ, ಸಿನಿಮಾ ಹೀಗೆ ಯಾವುದೇ ಆಗಿರಲಿ ಮೂಲಕ್ಕೆ ಇಳಿದು, ವಿಜ್ಞಾನಿಯ ತರಹ fundamental ಗಳನ್ನು ಚಿಂತಿಸುವ ಬಗೆಯನ್ನು- ಅದರ ಅಗತ್ಯವನ್ನು- ಕರ್ನಾಟಕ ಸಾಂಸ್ಕೃತಿಕ ಲೋಕದ ಜತೆಗೆ ಚರ್ಚೆಗೆ ಇಟ್ಟವರು ಕೆವಿಎನ್. ಅವರು ಮನಗಾಣಿಸಿದ ಈ ದಾರಿಯಲ್ಲಿ ನಾವೆಲ್ಲರೂ ಚಿಂತಿಸಬಹುದಾದರೆ ಖಂಡಿತಾ ಇನ್ನೂ ಉತ್ತಮ ಕರ್ನಾಟಕವನ್ನು ನಮ್ಮ ಮುಂದಿನ ಪೀಳಿಗೆಗೆ ನಾವು ಬಿಟ್ಟುಹೋಗಬಹುದು. 

ನನ್ನ ಮತ್ತು ಕೆವಿಎನ್ ಅವರ ಪರಿಚಯ ಬಹಳ ದೀರ್ಘ ಕಾಲದ್ದು ಅಲ್ಲವಾದರೂ, ನಾನು ಕನ್ನಡ ಸಾಹಿತ್ಯ, ಪತ್ರಿಕಾ ಮತ್ತು ಬೌದ್ಧಿಕ ಲೋಕವನ್ನು ಪ್ರವೇಶಿಸಿ ಪಡೆದುಕೊಂಡಿದ್ದ ತಿಳಿವಳಿಕೆಯನ್ನು ತೀವ್ರವಾಗಿ ಪ್ರಶ್ನಿಸಿ ಹೊಸ ದಾರಿಗಳನ್ನು ಅನ್ವೇಷಿಸುವಂತೆ ಪ್ರಭಾವಿಸಿದವರು ಅವರು. ಆ ಪ್ರಭಾವ ಎಂದಿಗೂ ಬೋಧನಾಪ್ರಧಾನವಾಗಿರಲಿಲ್ಲ; Sermon ರೀತಿಯಲ್ಲಂತೂ ಇರಲೇ ಇಲ್ಲ; ನಾನು ತಿಳಿದವ-ನೀನು ಕಲಿಯುತ್ತಿರುವವ ಎಂಬ ರೀತಿಯಲ್ಲಿ ಅವರ ಜತೆಗೆ ಒಂದು ದಿನವೂ ಒಂದು ಕ್ಷಣವೂ ಕಳೆದಿದ್ದಿಲ್ಲ. ಅವರ ಜತೆಗೆ ಆಡಿರುವ ಪ್ರತಿ ಮಾತೂ ಸಂವಾದವೇ, ಪ್ರತಿ ಚರ್ಚೆಯೂ ಓಪನ್ ಎಂಡೆಂಡ್ discussion ಆದಂತದ್ದು; ಒಂದು ಕಡೆ ವಿಜ್ಞಾನದ ಅನ್ವೇಷಣೆಯಂತೆ ಯಾವುದೇ ವಿಷಯದ ಮೂಲಕ್ಕೆ ಇಳಿದು, ಇದು ಇಂದಿನ ಸತ್ಯ, ಇನ್ನೂ ಅನ್ವೇಷಿಸಿದರೆ-ಮಥಿಸಿದರೆ ಮತ್ತೊಂದು ಹೊಳಹು ಮತ್ತೊಂದು ಆಯಾಮ ಸಿಗಬಹುದು ಎಂಬಂತೆ ಅವರ ಮಾತುಗಳು ಇರುತ್ತಿದ್ದರೆ, ಮತ್ತೊಂದು ಕಡೆ ಅವರು ಸಂವಾದಿಸುವ ಮಾರ್ಗ ಯಾವತ್ತೂ ಪ್ರಜಾಸತ್ತಾತ್ಮಕವಾದದ್ದು. ಕೆವಿಎನ್ ಅವರು ಸಣ್ಣ ಕೂಟದಲ್ಲಿ ಚರ್ಚಿಸುವ ಸಂಗತಿಗಳಾಗಲೀ, ನೂರು ಜನಗಳ ನಡುವೆ ಯಾವುದೋ ಕಮ್ಮಟದ ನಿರ್ದೇಶಕರಾಗಿ ಚರ್ಚಿಸುವಾಗ ಆಗಲೀ ಪ್ರತಿಯೊಬ್ಬರ ಮಾತನ್ನೂ ಪೂರ್ತಿಯಾಗಿ ಮತ್ತು ಸಾವಧಾನವಾಗಿ ಕೇಳಿಸಿಕೊಳ್ಳುವ, ಅದರ ಬಗ್ಗೆ ಚಿಂತಿಸಿ ಅದನ್ನು ವಿಸ್ತರಿಸುವ ಗುಣ ಅವರದ್ದು. ಅಂತಹ ಆ ಮಾತುಗಳು ಉಳಿದವರಿಗೆ ಬಹಳ ಪ್ರಾಥಮಿಕ ಮಾಹಿತಿಗಳಂತೆ ಅನಿಸಿದರೂ ಕೆವಿಎನ್ ಎಂದಿಗೂ ಅವುಗಳನ್ನು ಅಲ್ಲಗೆಳೆಯುವಂತೆ ಮಾತನಾಡಿದ್ದನ್ನು ನಾನು ಕಂಡಿಲ್ಲ. ಈ ನಿಟ್ಟಿನಲ್ಲಿ ಅವರು Democratic to the core. ಆದರೆ ಆ ಚರ್ಚೆಗಳಲ್ಲಿ ಒಂದು underlaying condition ಇದ್ದೇ ಇರುತ್ತಿತ್ತು: ನಾವಾಡುವ ಮಾತುಗಳು ಮತ್ತೊಬ್ಬರ ಘನತೆಗೆ ಕುಂದು ತರುವಂತಿದ್ದರೆ ಕೆವಿಎನ್ composure ಮೀರುತ್ತಿತ್ತು. ಸಂವಿಧಾನದ ವಿಧಿಗಳಿಗೆ ರೀಸನಬಲ್ ರಿಸ್ಟ್ರಿಕ್ಷನ್‌ಗಳ ತರಹ ಅದು. ಸಂವಿಧಾನದ ನಿರ್ದೇಶನ ತತ್ವಗಳ ಬಗ್ಗೆ ಕೆವಿಎನ್ ಹೆಚ್ಚು ಮಾತಾಡ್ತಾ ಇದ್ದದ್ದು ಈ ಸಮಯದಲ್ಲಿ ನೆನಪಿಗೆ ಬರ್ತಾ ಇದೆ, ಅದನ್ನು ಮುಂದೆ ಈ ನೆನಪುಗಳ ಗುಚ್ಛದಲ್ಲಿ ತರುವುದಕ್ಕೆ ಪ್ರಯತ್ನಿಸುತ್ತೇನೆ.

- Advertisement -

ಇದನ್ನು ಓದಿದ್ದೀರಾ?: ಕೆವಿಎನ್: ಕನ್ನಡದ ಘನವಿವೇಕ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿವಾದಾತ್ಮಕ ಮತಾಂತರ ನಿಷೇಧ ಕಾಯ್ದೆ ರದ್ದತಿಯತ್ತ ರಾಜ್ಯ ಸರ್ಕಾರದ...

ಈ ಕಾಯ್ದೆಯ ರಚನಾ ಪ್ರಕ್ರಿಯೆಯಲ್ಲಿಯೇ ಹಲವು ಲೋಪಗಳಿದ್ದವು ಎಂಬುದು ಹಳೆಯ ಸರ್ಕಾರಿ ದಾಖಲೆಗಳಿಂದಲೇ ಸಾಬೀತಾಗಿದೆ. 2022ರಲ್ಲಿ ಸುಗ್ರೀವಾಜ್ಞೆ ಹಾಗೂ ಮಸೂದೆಗೆ ಸಂಪುಟದ ಅನುಮೋದನೆ ಪಡೆಯುವ ಮುನ್ನವೇ ರಾಜ್ಯ ಕಾನೂನು ಇಲಾಖೆಯು ಇದರ ಹಲವು...

ಶಿವಮೊಗ್ಗ | ವಿಮಾನ ಹಾರಾಟ ಸ್ಥಗಿತಕ್ಕೆ ಕಾರಣ ಯಾರು?

ಮಲೆನಾಡಿನ ಬಹುದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ, ಈಗ ಚರ್ಚೆಯ ಕೇಂದ್ರವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನ ಸೇವೆಗಳು ನಿರಂತರವಾಗಿ ಮುಂದುವರಿಯಬೇಕೆಂಬುದು ಮಲೆನಾಡಿನ ಜನರ ನಿರೀಕ್ಷೆ. ಆದರೆ,...

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

‘ಪರಸ್ಪರ ಮೆಚ್ಚುಗೆ ಸಮಾಜ’ಕ್ಕೆ ಕೆವಿಎನ್ ಸವಾಲಾಗಿದ್ದವರು ಎಂದೆ; ಕೆವಿಎನ್ ಅವರನ್ನು ಮುನ್ನುಡಿ ಅಥವಾ ಬೆನ್ನುಡಿ ಬರೆಯಲು ಕೇಳಿಕೊಂಡು ಹೋಗುತ್ತಿದ್ದ ಯಾವುದೇ ಬರಹಗಾರರನ್ನು ಕೇಳಿ ನೋಡಿ ಅಥವಾ ಸ್ವತಃ ನಾವೇ ಓದಿ ನೋಡಿದರೂ ತಿಳಿಯತ್ತೆ, ಸುಖಾಸುಮ್ಮನೆ ಹೊಗಳಲು ಅಥವಾ ಕೇವಲ ಉತ್ತೇಜನಕಾರಿ ಮಾತುಗಳನ್ನಾಡುವ ಜಾಯಮಾನ ಅವರದ್ದು ಅಲ್ಲವೇ ಅಲ್ಲ. ಯಾವುದೇ ವಿಷಯದ ಬಗ್ಗೆ ಬಗ್ಗೆ ಓದಿದರೂ, ಅದರ ಬಗ್ಗೆ ಸಣ್ಣ ಟಿಪ್ಪಣಿ ಬರೆದರೂ ಬಹಳ ಸೂಕ್ಷ್ಮವಾಗಿ, ಅಂದರೆ ಕ್ಲೋಸ್ ರೀಡಿಂಗ್ ಮಾಡಿ, ಆ ವಿಷಯವನ್ನು ವಿಸ್ತರಿಸುವಂಥ, ಪ್ರಶ್ನೆಗಳನ್ನು ಎತ್ತುವಂಥ ನಿಷ್ಠುರ ಬರವಣಿಗೆ ಅವರದ್ದು. ಇಂತಹ ನಿಷ್ಠುರವಾದಿ ಮಾತುಗಳಿಗೆ ನಾನು witness ಆಗಿದ್ದ ಒಂದು ಸಂದರ್ಭವನ್ನು ಇಲ್ಲಿ ನೆನಪಿಸಿಕೊಂಡರೆ ಕೆವಿಎನ್ ಅವರ ವ್ಯಕ್ತಿತ್ವದ ಒಂದು ಮಹಾನ್ ಗುಣ ನಮ್ಮ ಅರಿವಿಗೆ ಬಾರದೆ ಇರದು; ಕುವೆಂಪು ಅವರ ಐಕಾನಿಕ್ ಭಾಷಣಗಳಾದ ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಮತ್ತು ‘ವಿಚಾರ ಕ್ರಾಂತಿಗೆ ಆಹ್ವಾನ’ ಭಾಷಣಗಳಿಗೆ 50 ವರ್ಷ ತುಂಬಿದ ಸಮಯದಲ್ಲಿ ‘ಜಾಗೃತ ಕರ್ನಾಟಕ’ ತಂಡದಿಂದ ಮೈಸೂರಿನಲ್ಲಿ, ಕುವೆಂಪು ಅವರು ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಭಾಷಣ ಮಾಡಿದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲು ನಿಶ್ಚಯಿಸಿದಾಗ, ಆಯೋಜನೆಯಲ್ಲಿ ಭಾಗಿಯಾಗಿದ್ದ ನನಗೆ, ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮುಖ್ಯ ಭಾಷಣ ಮಾಡಲು ಕೆವಿಎನ್ ಅವರೇ ಸೂಕ್ತ ವ್ಯಕ್ತಿ ಅನ್ನಿಸಿತು. (ಅವರು ‘ವಿಚಾರ ಕ್ರಾಂತಿಗೆ ಆಹ್ವಾನ’ದ ಬಗ್ಗೆ ಹಲವು ಚಿಂತಕರ ಬಳಿ ಬರೆಯಿಸಿ ಒಂದು ಪುಸ್ತಕದ ರೂಪದಲ್ಲಿ ತರಬೇಕೆನ್ನುವ ಬಗ್ಗೆ ಒಂದೆರಡು ಬಾರಿ ಚರ್ಚಿಸಿದ್ದರು; ಆದರೆ ಅದು take-off ಆಗಿರಲಿಲ್ಲ). ಕೆವಿಎನ್ ಅವರ ಬಳಿ ವಿನಂತಿಸಿಕೊಂಡಾಗ, ಮೊದಲು ‘ಈ ಕಾರ್ಯಕ್ರಮಕ್ಕೆ ನಾನ್ಯಾಕೆ’ ಎನ್ನುವ ಮಾತುಗಳನ್ನು ಆಡಿದರಾದರೂ, ಈ ಭಾಷಣಗಳ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಳ್ಳಬೇಕು ಅನ್ನುವ ತುಡಿತ ಅವರಿಗೆ ಇತ್ತಾದ್ದರಿಂದ ಒಪ್ಪಿಕೊಂಡರು. ಅಂದು ಕುವೆಂಪು ಚಿಂತನೆಗಳನ್ನು ವಿಸ್ತರಿಸುವ ಅವರ ಉಪನ್ಯಾಸದ ಮಾತುಗಳು ಕುವೆಂಪು ಅವರ ಕ್ರಾಂತಿಕಾರಕ ಭಾಷಣದಷ್ಟೇ ಮುಖ್ಯವಾಗಿದ್ದವು; ಮೂಲ ಭಾಷಣದ ಚಿಂತನೆಯಲ್ಲಿದ್ದ ಕೆಲವು shortcomings ಅನ್ನು ಅವರು ಪ್ರಸ್ತಾಪಿಸಿದ್ದು ಎಂದಿನಂತೆ ಕುವೆಂಪು ಅವರ ತೀವ್ರ ಅಭಿಮಾನಿಗಳಿಗೆ ನಿರಾಸೆಯನ್ನುಂಟುಮಾಡಿತು ಮತ್ತು ಕೆಲವರಿಗೆ ಆಕ್ರೋಶವನ್ನು ತಂದಿತು. ಇದು ಪುಸ್ತಕ ರೂಪದಲ್ಲಿ ‘ಹೊಸ ಓದುಗರಿಗೆ ಕುವೆಂಪು’ ಸಂಕಲನದಲ್ಲಿ ಪ್ರಕಟಗೊಂಡ ಮೇಲೆ ಕೂಡ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಅದಿರಲಿ; ಕುವೆಂಪು ಅವರು ಪ್ರತಿಪಾದಿಸಿದ್ದ ‘ಸಂಸ್ಕೃತಿ-ವಿಚಾರ ಕ್ರಾಂತಿ’ ಹಾಗೂ ಸಾಮಾಜಿಕ-ಆರ್ಥಿಕ ಕ್ರಾಂತಿಗಳನ್ನು ಎದುರುಬದುರಿಗಿಟ್ಟು, ವೈಯಕ್ತಿಕ ನೆಲೆಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿ ಇನ್ನೂ ಹತ್ತಾರು ಸಂಗತಿಗಳನ್ನು ಕೆವಿಎನ್ ಅಂದು ಚರ್ಚಿಸಿದ್ದರು. ಭಾಷಣ ಮುಗಿಸಿದ ಮಾತುಗಳನ್ನು ಇಲ್ಲಿ quote ಮಾಡುವುದಾದರೆ (ಕೆವಿಎನ್ ಔಟ್ ಆಫ್ ಕಾಂಟೆಕ್ಸ್ಟ್ ಕೋಟ್ ಮಾಡುವುದನ್ನು ಎಂದಿಗೂ ಒಪ್ಪುತ್ತಿರಲಿಲ್ಲ- ಆದರೆ ಇಲ್ಲಿ ನಾನು ಹಾಗೆ ಮಾಡುತ್ತಿಲ್ಲ ಎಂಬ ನಂಬಿಕೆಯೊಂದಿಗೆ), ”ಕುವೆಂಪು ಅವರು ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಉಪನ್ಯಾಸವನ್ನು ಪ್ರಾರಂಭ ಮಾಡಿದಾಗ ಒಂದು ಮಾತನ್ನು ಹೇಳಿದ್ದರು. ನಾನು ಹೇಳುವುದೆಲ್ಲ ನಿಮಗೆ ಆಪ್ಯಾಯಮಾನವಾಗಿರುತ್ತದೆ ಎಂದು ತಿಳಿದುಕೊಂಡು ನಾನು ಮಾತನಾಡುತ್ತಿಲ್ಲ, ನಿಮಗೆ ಇಷ್ಟವಾಯಿತೋ ನಿಮಗೆ ಒಪ್ಪಿಗೆಯಾಯಿತೋ ಎಂದು ನಾನು ಮಾತನಾಡುತ್ತಿಲ್ಲ ಎಂದು. ನಾನು ಕೂಡ ಇಂದು ಅದೇರೀತಿ ಮಾತನಾಡಿದ್ದು, ನಿಮಗೆ ಇಷ್ಟವಾಯಿತೋ ಅನ್ನುವುದು ಬಹಳ ಮುಖ್ಯವಲ್ಲ. ನನಗೆ ಏನು ಅನ್ನಿಸುತ್ತದೋ ಅದನ್ನು ನಾನು ನಿಮ್ಮ ಜೊತೆ ಹಂಚಿಕೊಳ್ಳುವುದಕ್ಕೆ ನಾನು ಈ ವೇದಿಕೆಯನ್ನು ಬಳಸಿಕೊಂಡಿದ್ದೇನೆ. ದುರುಪಯೋಗಪಡಿಸಿಕೊಂಡಿದ್ದೇನೆ ಅನ್ನಿಸಿದ್ದರೆ ಮನ್ನಿಸಿ.”

ಕೆವಿಎನ್ ಎದುರುಗಿರುವವರನ್ನು ಮೆಚ್ಚಿಸಲೆಂದು ಆಪ್ಯಾಯಮಾನವಾಗಿ ಮಾತನಾಡಿದ್ದು ಇಲ್ಲವೇ ಇಲ್ಲ ಎನ್ನಬಹುದು; ಇದಕ್ಕೆ ಇನ್ನೂ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ‘ಮುನ್ನೋಟ’ ಎಂಬ ಪುಸ್ತಕ ಮಳಿಗೆಯಲ್ಲಿ ನುಡಿಯ ಬಗ್ಗೆ ಇಟ್ಟುಕೊಂಡಿದ್ದ ಒಂದು ಚರ್ಚೆಯಲ್ಲಿ ಕೂಡ ‘ವಲಸೆ’ ಎನ್ನುವುದು ಮನುಕುಲದ ಒಂದು ಸಾಮಾನ್ಯ, ಅಗತ್ಯ ಹಾಗೂ ಪ್ರಾಚೀನ ವಿದ್ಯಮಾನ ಎಂಬುದನ್ನು ವಿವರಿಸಿ ಅಲ್ಲಿ ನೆರೆದಿದ್ದ ಬಹಳಷ್ಟು ವಲಸೆ ವಿರೋಧಿ ಗುಂಪಿನ ಜತೆಗೆ ಸಂವಾದಕ್ಕೆ ತೆರೆದುಕೊಂಡಿದ್ದರು. ಅವರ ‘ನುಡಿಗಳ ಅಳಿವು’ ಪುಸ್ತಕ ಕೂಡ ನುಡಿಗಳನ್ನು ಉಳಿಸುವ ಕೈಂಕರ್ಯವನ್ನು ಹೆಚ್ಚು ವಿಚಾರ ಮಾಡದೆ ಪ್ರತಿಪಾದಿಸುವವರಿಗೆ ಸವಾಲೆಸೆದಿತ್ತು. ಸಮುದಾಯ ಕೇಂದ್ರಿತ ವಾದವನ್ನು ಒಳಗೊಂಡಿದ್ದ ಈ ದೀರ್ಘ ಪ್ರಬಂಧ ಭಾಷೆಯ ಬಗೆಗಿನ ಭಿನ್ನ ನೋಟವನ್ನು ಪ್ರತಿಪಾದಿಸಿ ಇಂದಿಗೂ ಬಹು ಚರ್ಚಿತ ಕೃತಿಯಾಗಿ ಉಳಿದುಕೊಂಡಿದೆ. ನನ್ನ ವೈಯಕ್ತಿಕ ನೆಲೆಯಲ್ಲಿ ಹೇಳುವುದಾದರೆ ಕೆವಿಎನ್ ಅವರ ಈ ಚರ್ಚೆಯನ್ನು ಕೌಂಟರ್ ಮಾಡುವ ಯಾವುದೇ ವಿಚಾರಪ್ರಧಾನ ಪ್ರಬಂಧವಾಗಲೀ ಅಥವಾ ಪುಸ್ತಕವಾಗಲೀ ಬಂದಿಲ್ಲ. ಭಾವನಾತ್ಮಕ ನೆಲೆಯಲ್ಲಿ ಒಂದಷ್ಟು ಟೀಕೆಗಳು ಕೇಳಿಬಂದಿವೆಯಷ್ಟೇ.

WhatsApp Image 2026 11 13 at 16.54.48
ಕೆ.ವಿ. ನಾರಾಯಣ

ಶಿಕ್ಷಣ, ಕಲಿಕೆ, ಭಾಷೆಯ ಬಗ್ಗೆ ಸಾಕಷ್ಟು ಚಿಂತನೆಗಳನ್ನು ನಡೆಸಿದ್ದ ಕೆವಿಎನ್ ಸರ್ಕಾರಿ ಶಾಲೆಗಳ ಬಗ್ಗೆ ಹೇಳುತ್ತಿದ್ದ ಮಾತು ಈ ಸಮಯದಲ್ಲಿ ನೆನಪಿಗೆ ಬರುತ್ತಿದೆ. ಈ ಸಮಯ ಅಂತ ಯಾಕೆ ಹೇಳುತ್ತಿದ್ದೇನೆಂದರೆ, ಸದರಿ ಮುಖ್ಯಮಂತ್ರಿಗಳು ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ವಹಿಸುವ ಬಗ್ಗೆ ಮಾತುಗಳನ್ನು ಆಡುತ್ತಿದ್ದಾರೆ. ಶಿಕ್ಷಣ ನೀತಿಯ ಬಗೆಗಿನ ಚರ್ಚೆಯೊಂದರಲ್ಲಿ ಕೆವಿಎನ್ ಆಡಿದ ಮಾತುಗಳನ್ನು ನೆನಪಿನ ಆಧಾರದಲ್ಲಿ recount ಮಾಡುವುದಾದರೆ, ‘ಇವತ್ತು ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಗಳು ಯಾಕಿಷ್ಟು ಕೀಳರಿಮೆ ಬೆಳೆಸಿಕೊಂಡಿವೆಯೋ? ಸರ್ಕಾರಿ ಶಾಲೆಗಳ ಬಹಳ ದೊಡ್ಡ ಸಾಧನೆ socialization. ಶಿಕ್ಷಣದ ಮುಖ್ಯ ಗುರಿಯೊಂದನ್ನು ಸರ್ಕಾರಿ ಶಾಲೆಗಳು ಸಾಧಿಸಿವೆ. ಇದನ್ನು ಸರ್ಕಾರಗಳು ಗಟ್ಟಿಯಾಗಿ ಪ್ರತಿಪಾದಿಸಬೇಕು’ ಎಂದಿದ್ದರು.

ಸಮುದಾಯ ಕೇಂದ್ರಿತ ಚಿಂತನೆಗಳನ್ನು ಮಂಡಿಸುತ್ತಿದ್ದ ಕೆವಿಎನ್ ಅವರು ವೈಯಕ್ತಿಕ ಸಾಧನೆ ಅಥವಾ ವೈಯಕ್ತಿಕ ನೆಲೆಯ ಬದಲಾವಣೆಗಳ ಬಗ್ಗೆ ಅಷ್ಟು ಮಹತ್ವ ಕೊಡುತ್ತಿರಲಿಲ್ಲ. ಅದು ಅವರ ಬದುಕಿನಲ್ಲಿಯೂ ನಮಗೆಲ್ಲರಿಗೂ ಕಾಣುತ್ತಿತ್ತು. ಸಮಾನತೆಯ ಆಶಯ, ದಾರಿ, ಗುರಿ structural ಆದ ಸಮಸ್ಯೆ ಎಂದು ಪ್ರತಿಪಾದಿಸುತ್ತಿದ್ದ ಅವರು, ಯಾರದ್ದೋ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಎಂದಿಗೂ ಬೆಟ್ಟು ಮಾಡಿ ತೋರಿದ್ದೇ ಇಲ್ಲ. ಹೀಗಾಗಿ ಸಮಾನತೆಯ ಪ್ರಶ್ನೆ ಬಂದಾಗ ಅವರು ಸಂವಿಧಾನದಲ್ಲಿದ್ದ directive principles ಬಗ್ಗೆ ಹೆಚ್ಚು ಚಿಂತಿಸುತ್ತಿದ್ದು ಮತ್ತು ಚರ್ಚಿಸುತ್ತಿದ್ದಿದು ನನಗೆ ನೆನಪಿದೆ. ಅವು ಕೇವಲ ನಿರ್ದೇಶನ ತತ್ವಗಳಾಗಿ, ಸಂವಿಧಾನದ ಮೂಲ ತತ್ವಗಳಾಗಿರದೆ, ಅಂದರೆ ಸಂಪನ್ಮೂಲಗಳ ಸಮಾನ ಹಂಚಿಕೆ ನಾಗರಿಕರ ಮೂಲ ಹಕ್ಕಾಗಿರದೆ ಇರುವುದು ಮತ್ತು ಅದನ್ನು ಸಾಧಿಸುವುದು ಸರ್ಕಾರಗಳ ಕಡ್ಡಾಯ ಕರ್ತವ್ಯ ಆಗದೆ ಇರುವುದು ಯಾಕೆ ಎಂಬುದು ಅವರ ಇಂದಿನ ಪ್ರಶ್ನೆ ಆಗಿರುತ್ತಿತ್ತು. ಇದರ ಬಗ್ಗೆ ಅವರಲ್ಲಿ ಒಂದು ರೀತಿಯ ಅಸಮಾಧಾನ ಕೂಡ ಇದೆ ಎಂದು ನನಗೆ ಆಗಾಗ ಅನ್ನಿಸುತ್ತಿತ್ತು. ಇದನ್ನು ಅವರ ಬಳಿ ಹೆಚ್ಚು ಚರ್ಚೆ ಮಾಡಬೇಕು ಅಂತ ನನಗೆ ಆಗಾಗ ಅನ್ನಿಸಿತ್ತಾದರೂ ನಾನೇ ಸಿದ್ಧತೆಯ ಕೊರತೆಯಿಂದಾಗ ಮುಂದೂಡುತ್ತಲೇ ಇದ್ದೆ. ಕೊನೆಗೆ ಅದು ಸಾಧ್ಯವಾಗದೆ ಹೋಯಿತು.

ಇದನ್ನು ಓದಿದ್ದೀರಾ?: ಕೆವಿಎನ್- ನಿಜ ಅರ್ಥದ ಕನ್ನಡದ ನಾಡೋಜ

70ರ ದಶಕದಲ್ಲಿ ವಿಶ್ವದಾದ್ಯಂತ ನಡೆದ ವಿದ್ಯಮಾನಗಳ ಬಗ್ಗೆ ಕೆವಿಎನ್ ಆಗಾಗ ಹಂಚಿಕೊಳ್ಳುತ್ತಿದ್ದರು. ಆ ಕಾಲಘಟ್ಟದ ಹೋರಾಟಗಳು ಅವರನ್ನು ಹೆಚ್ಚು ಕಾಡಿದಂತೆ ತೋರುತ್ತದೆ. ಇವತ್ತಿನ ಹೋರಾಟಗಳ ಬಗ್ಗೆ ಕೂಡ ಸಾಕಷ್ಟು ಚಿಂತಿತರಾಗಿದ್ದ ಅವರು, ಸಾರ್ತ್ರೆ ಅಸ್ತಿತ್ವವಾದದಿಂದ ಮಾರ್ಕ್ಸ್ ವಾದಕ್ಕೆ ಹೊರಳಿಕೊಂಡಾಗ ಬರೆದ ‘a plea to intellectuals’ ಅನ್ನು ಕನ್ನಡ ಓದುಗರಿಗೆ ಒದಗಿಸಿದರು. ಕರ್ನಾಟಕದಲ್ಲಿ ಮತ್ತು ದೇಶದ ಮಟ್ಟದಲ್ಲಿ ಹೋರಾಟಗಳನ್ನು ಯಾರು ಲೀಡ್ ಮಾಡುತ್ತಿದ್ದಾರೆ, ಅದು ಸರಿಯೇ ಎಂಬುದು ಹಲವು ದಶಕಗಳ ಚರ್ಚೆಯಾದರೂ ಇತ್ತೀಚಿನ ವರ್ಷಗಳಲ್ಲಿ ಅದು ತೀವ್ರ ಸ್ವರೂಪ ಪಡೆದಿದೆ. ಈ ನಿಟ್ಟಿನಲ್ಲಿ ಸಾರ್ತ್ರೆಯ ಈ ಪಠ್ಯ ಆತ್ಮಾವಲೋಕನಕ್ಕೆ ಮತ್ತು ಹೋರಾಟಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಒಂದು ಮಾರ್ಗದರ್ಶನ ನೀಡಬಲ್ಲುದಾಗಿತ್ತು. ತಕ್ಷಣಕ್ಕೆ ಅದು ಸಾಧ್ಯವಾಗಿಲ್ಲವಾದರೂ ಮುಂದಿನ ದಿನಗಳಲ್ಲಾದರೂ ಕರ್ನಾಟಕದ ಹೋರಾಟಗಳ ಆತ್ಮಾವಲೋಕನಕ್ಕೆ, ಅದರಲ್ಲಿಯೂ ಶೋಷಕ ವರ್ಗದ ‘ಲೀಡರ್’ಗಳಿಗೆ ಇದು ಪ್ರಶ್ನಿಸಿಕೊಳ್ಳುವುದಕ್ಕೆ ಅವಕಾಶ ನೀಡಬಲ್ಲುದೇನೋ. ಆ ಸಾಧ್ಯತೆಗಳ ಬಗ್ಗೆ ಕೆವಿಎನ್ ಅವರಿಗೆ ನಂಬಿಕೆ ಇತ್ತೆಂದು ತೋರುತ್ತದೆ!

Context ಇಲ್ಲದೆ ಕೋಟ್ ಮಾಡುವುದನ್ನು ಒಪ್ಪದ ಕೆವಿಎನ್ ಅವರು ಹೋದ ವರ್ಷ ಕುಪ್ಪಳಿಯಲ್ಲಿ ನಡೆದ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಬಗೆಗಿನ ಕಮ್ಮಟದ ಚರ್ಚೆಯಲ್ಲಿ, ಕಾದಂಬರಿಯ ಆರಂಭದಲ್ಲಿ ಬರುವ ‘ಇಲ್ಲಿ ಯಾರೂ ಮುಖ್ಯರಲ್ಲಿ, ಯಾರೂ ಅಮುಖ್ಯರಲ್ಲ’ ಎಂಬ ಸಾಲುಗಳ ಬಗ್ಗೆ ಸುದೀರ್ಘ ಚರ್ಚೆಗಳನ್ನು ನಡೆಸಿದರು. ಈ ಸಾಲುಗಳನ್ನು ಸುಖಾಸುಮ್ಮನೆ ಆಗಾಗ ಎಲ್ಲೆಂದರಲ್ಲಿ ಉದಾಹರಿಸುವ ನನ್ನಂತವರಿಗೆ ಹೊಸ ಸವಾಲನ್ನು ಒಡ್ಡಿದರು ಮತ್ತು ತಿದ್ದಿದರು. ಮಲೆಗಳಲ್ಲಿ ಮದುಮಗಳು ಕಾದಂಬರಿಯ ನಿರೂಪಣಾ ವಿಧಾನಗಳು, ಪಾತ್ರಗಳ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಕಟ್ಟಿಕೊಟ್ಟು ಕಾದಂಬರಿಯನ್ನು ಹೀಗೂ ಓದಬಹುದು ಮತ್ತು ಯಾವುದೇ ಓದು ನಿಕಟ ಓದು ಆಗಿರಬೇಕು ಎಂಬುದನ್ನು ಮನಗಾಣಿಸಿದರು. ರಾಜಕೀಯ, ಸಂಸ್ಕೃತಿ, ಜನಪದ, ಭಾಷೆ, ಕಾವ್ಯ, ಸಾಹಿತ್ಯ, ಸಿನಿಮಾ ಹೀಗೆ ಯಾವುದೇ ಆಗಿರಲಿ ಮೂಲಕ್ಕೆ ಇಳಿದು, ವಿಜ್ಞಾನಿಯ ತರಹ (ಅವರು ವಿಜ್ಞಾನದ ವಿದ್ಯಾರ್ಥಿ ಆಗಿದ್ದ ಕಾರಣಕ್ಕೋ ಇರಬಹುದು) fundamental ಗಳನ್ನು ಚಿಂತಿಸುವ ಬಗೆಯನ್ನು ಅದರ ಅಗತ್ಯವನ್ನು ಕರ್ನಾಟಕ ಸಾಂಸ್ಕೃತಿಕ ಲೋಕದ ಜತೆಗೆ ಚರ್ಚೆಗೆ ಇಟ್ಟವರು ಕೆವಿಎನ್. ಕೆವಿ ನಾರಾಯಣ ಅವರು ಮನಗಾಣಿಸಿದ ಈ ದಾರಿಯಲ್ಲಿ ನಾವೆಲ್ಲರೂ ಚಿಂತಿಸಬಹುದಾದರೆ ಖಂಡಿತಾ ಇನ್ನೂ ಉತ್ತಮ ಕರ್ನಾಟಕವನ್ನು ನಮ್ಮ ಮುಂದಿನ ಪೀಳಿಗೆಗೆ ನಾವು ಬಿಟ್ಟುಹೋಗಬಹುದು. ಸಮಾನತೆ, ಪ್ರಜಾಸತ್ತಾತ್ಮಕತೆ, ಸಂವಾದ ಮತ್ತು ಆಳಕ್ಕಿಳಿದು ಚಿಂತಿಸುವ ಬಗೆಗಳನ್ನು ನಮ್ಮೆಲ್ಲರ ಜತೆಗೆ ಚರ್ಚಿಸಿ, ಕಣ್ಮರೆಯಾದ ಕೆವಿಎನ್ ಅವರ ಚಿಂತನೆಗಳನ್ನು ಸಂವಾದಿಸುವುದು ಮತ್ತು ಅಳವಡಿಸಿಕೊಳ್ಳುವುದು ಅವರಿಗೆ ನಾವು ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ ಇಂದು ನನಗೆ ಅನ್ನಿಸುತ್ತದೆ.

Guruprasad D.N.
ಗುರುಪ್ರಸಾದ್ ಡಿ.ಎನ್.
+ posts

ಲೇಖಕ, ಪ್ರಕಾಶಕ, ಸಂಘಟಕ. ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕನ್ನಡ ಸಾಹಿತ್ಯ ಮತ್ತು ಪುಸ್ತಕಗಳ ಮೇಲಿನ ಅಪಾರ ಪ್ರೀತಿಯಿಂದಾಗಿ 2010ರಲ್ಲಿ ವೃತ್ತಿಯನ್ನು ತೊರೆದು ಆಕೃತಿ ಪುಸ್ತಕ ಮಳಿಗೆಯನ್ನು ಆರಂಭಿಸಿದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಗುರುಪ್ರಸಾದ್ ಡಿ.ಎನ್.
ಗುರುಪ್ರಸಾದ್ ಡಿ.ಎನ್.
ಲೇಖಕ, ಪ್ರಕಾಶಕ, ಸಂಘಟಕ. ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕನ್ನಡ ಸಾಹಿತ್ಯ ಮತ್ತು ಪುಸ್ತಕಗಳ ಮೇಲಿನ ಅಪಾರ ಪ್ರೀತಿಯಿಂದಾಗಿ 2010ರಲ್ಲಿ ವೃತ್ತಿಯನ್ನು ತೊರೆದು ಆಕೃತಿ ಪುಸ್ತಕ ಮಳಿಗೆಯನ್ನು ಆರಂಭಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕಾಲಘಟ್ಟದ ದುರಂತ, ಸಮಾಜದ ನಿಶ್ಯಬ್ದ-ಆಜಂ ಖಾನ್

ಹನ್ನೊಂದು ತಿಂಗಳ ಜೈಲುವಾಸವನ್ನು ಮುಗಿಸಿ ಬಿಡುಗಡೆಗೊಂಡು ಮನೆಗೆ ತೆರಳುವ ದಿನ.  ಅದೆಷ್ಟು...

ಬೀದರ್‌ | ಕನೇರಿ ಸ್ವಾಮಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹ

ಭಾರತದ ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂದು ಹೇಳಿಕೆ ನೀಡಿರುವ ಕನೇರಿ ಕಾಡಸಿದ್ದೇಶ್ವರ...

ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ತಕ್ಷಣ ನೀರು ಹರಿಸಲು ಆಗ್ರಹ; ನ.16ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆ

ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಅಡಿಕೆ, ಬಾಳೆ, ತೆಂಗು,...

ಹಳೇ ಮೈಸೂರು | ಕಲ್ಯಾಣದಿಂದ ಬೊಪ್ಪೇಗೌಡನಪುರದವರೆಗೆ: ಜನಪದ ಕಾವ್ಯದ ಬೆಳಕಿನಲ್ಲಿ ಮಂಟೇಸ್ವಾಮಿ

ಒಂದು ಜನಪದ ಕಾವ್ಯ, ನೂರಾರು ವರ್ಷಗಳ ಮೌಖಿಕ ಪರಂಪರೆ, ತಲೆಮಾರುಗಳಿಂದ ತಂಬೂರಿಯ...