ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಕ್ರಿಮಿನಲ್ ಪ್ರಕರಣಗಳಿಂದ ಕಾನೂನು ರಕ್ಷಣೆ ನೀಡಲಾಗಿದೆ ಎಂದ ಮಾತ್ರಕ್ಕೆ ಅವರು ಯಾವುದೇ ಹೊಣೆಗಾರಿಕೆಯಿಂದ ಮುಕ್ತರಾಗಲು ಸಾಧ್ಯವಿಲ್ಲ. ಮೋದಿ ಸರ್ಕಾರದಿಂದ ಪಡೆದಿರುವ ಈ ಇಮ್ಯೂನಿಟಿ ಪಡೆದು ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ. ಚುನಾವಣಾ ಆಯೋಗದ ಕಾರ್ಯವೈಖರಿ, ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳು ಮತ್ತು ಇಬ್ಬರು ಚುನಾವಣಾ ಆಯುಕ್ತರು ದಾಖಲಿಸಿರುವ ಆಕ್ಷೇಪಗಳ ಕುರಿತು ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಅಧಿಕಾರಾವಧಿಯಲ್ಲಿ ಕ್ರಿಮಿನಲ್ ಪ್ರಕರಣಗಳಿಂದ ಸಂವಿಧಾನದ 361ನೇ ವಿಧಿಯಡಿ ರಕ್ಷಣೆ ಇದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧವೂ ನಿರ್ದಿಷ್ಟ ಅನುಮತಿಯಿಲ್ಲದೆ ಕ್ರಿಮಿನಲ್ ಪ್ರಕರಣ ಆರಂಭಿಸಲು ಸಾಧ್ಯವಿಲ್ಲ. ಆದರೆ ರಾಷ್ಟ್ರಪತಿ ಹಾಗೂ ನ್ಯಾಯಮೂರ್ತಿಗಳನ್ನು ಸಂವಿಧಾನದಲ್ಲಿ ನಿಗದಿಪಡಿಸಿರುವ ವಿಶೇಷ ಪ್ರಕ್ರಿಯೆಯ ಮೂಲಕ ಹುದ್ದೆಯಿಂದ ತೆಗೆದುಹಾಕಲು ಅವಕಾಶವಿದೆ ಎಂದು ಸಿಬಲ್ ಹೇಳಿದ್ದಾರೆ.
ಚುನಾವಣಾ ಆಯೋಗದ ವಿಷಯದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆ ಉನ್ನತ ನ್ಯಾಯಾಂಗದ ನ್ಯಾಯಮೂರ್ತಿಗಳಿಗೆ ಇರುವ ಪ್ರಕ್ರಿಯೆಗೆ ಹೋಲುತ್ತದೆ. ಆದರೆ ಚುನಾವಣಾ ಆಯೋಗದ ಸದಸ್ಯರಿಗೆ ಕ್ರಿಮಿನಲ್ ಪ್ರಕರಣಗಳಿಂದ ಸಂವಿಧಾನವೇ ಯಾವುದೇ ರಕ್ಷಣೆ ನೀಡಿಲ್ಲ. ಆದರೂ 2023ರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕ, ಸೇವಾ ಷರತ್ತು ಮತ್ತು ಅಧಿಕಾರಾವಧಿ ಕಾಯ್ದೆ ಮೂಲಕ ಸಿಇಸಿ ಮತ್ತು ಚುನಾವಣಾ ಆಯುಕ್ತರಿಗೆ ಕ್ರಿಮಿನಲ್ ಪ್ರಕರಣ ಆರಂಭಿಸುವುದರಿಂದ ರಕ್ಷಣೆ ನೀಡಲಾಗಿದೆ. ಈ ರಕ್ಷಣೆ ಅವರ ಅಧಿಕಾರಾವಧಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ರಕ್ಷಣೆಗೆ ಒಂದು ಕಾರಣವೆಂದರೆ ಚುನಾವಣಾ ಆಯೋಗವು ಸ್ವತಂತ್ರವಾಗಿ ಮತ್ತು ಯಾವುದೇ ಹೊರಗಿನ ಒತ್ತಡವಿಲ್ಲದೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಾಗಬೇಕು ಎಂಬುದಾಗಿರಬಹುದು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ರಕ್ಷಣೆ ಆಯೋಗದ ಅಧಿಕಾರವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುತ್ತಿದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ ಎಂದು ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.
ಸಿಇಸಿ ಮತ್ತು ಇತರ ಚುನಾವಣಾ ಆಯುಕ್ತರಿಗೆ ಆಜೀವ, ಸಂಪೂರ್ಣ ರಕ್ಷಣೆ ನೀಡುವುದು ಸಂವಿಧಾನದ ಆಶಯಕ್ಕೆ ಹೊಂದಿಕೆಯಾಗುವುದಿಲ್ಲ. ದೇಶದ ಬೇರೆ ಯಾವುದೇ ಸಾಂವಿಧಾನಿಕ ಹುದ್ದೆಗೆ ಇಂತಹ ಅನಿಯಮಿತ ರಕ್ಷಣೆ ಇಲ್ಲ. ಈ ವಿಚಾರ ಈಗ ಸುಪ್ರೀಂ ಕೋರ್ಟ್‌ನಲ್ಲೂ ಪ್ರಶ್ನೆಗೊಳಪಟ್ಟಿದೆ ಎಂದು ಅವರು ಹೇಳಿದ್ದಾರೆ.
2023ರ ಕಾಯ್ದೆಯ ಪ್ರಕಾರ ಚುನಾವಣಾ ಆಯೋಗ ಸಾಧ್ಯವಾದಷ್ಟು ಒಮ್ಮತದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕು. ಒಮ್ಮತ ಸಾಧ್ಯವಾಗದಿದ್ದರೆ ಬಹುಮತದ ನಿರ್ಧಾರ ಅನ್ವಯಿಸುತ್ತದೆ. ಇತ್ತೀಚಿನ ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿಯಲ್ಲಿ, ಸಿಇಸಿ ಗ್ಯಾನೇಶ್ ಕುಮಾರ್ ಅವರು ಕೆಲವು ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದು, ಇದರಿಂದ ಲಕ್ಷಾಂತರ ಮತದಾರರ ಹೆಸರುಗಳನ್ನು ಅನುಮತಿಯಿಲ್ಲದೆ ತೆಗೆದುಹಾಕುವುದು ಅಥವಾ ಸೇರಿಸುವುದು ನಡೆದಿದೆ ಎಂದು ವರದಿಯಾಗಿದೆ. ಈ ಪ್ರಕ್ರಿಯೆಗೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇಬ್ಬರು ಆಯುಕ್ತರು 10 ತಿಂಗಳಲ್ಲಿ ಹಲವು ಬಾರಿ ತಮ್ಮ ಆಕ್ಷೇಪಗಳನ್ನು ದಾಖಲಿಸಿರುವುದಾಗಿ ವರದಿಯಾಗಿದೆ.
ಇಬ್ಬರು ಚುನಾವಣಾ ಆಯುಕ್ತರು ವ್ಯಕ್ತಪಡಿಸಿದ ಪ್ರಮುಖ ಆಕ್ಷೇಪವೆಂದರೆ ಚುನಾವಣಾ ಆಯೋಗದ ECINET ಪೋರ್ಟಲ್‌ನ ನಿಯಂತ್ರಣವನ್ನು ಕೇಂದ್ರೀಕರಿಸಿರುವುದು. ಸಾಮಾನ್ಯವಾಗಿ ಮತದಾರರ ಹೆಸರು ಸೇರ್ಪಡೆ ಅಥವಾ ತೆಗೆದುಹಾಕುವ ಪ್ರಕ್ರಿಯೆ ಚುನಾವಣಾ ನೋಂದಣಿ ಅಧಿಕಾರಿ (ERO), ಉಪ ಚುನಾವಣಾ ನೋಂದಣಿ ಅಧಿಕಾರಿ (DERO) ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (AERO) ಮಟ್ಟದಲ್ಲಿ ERONET ಮೂಲಕ ನಡೆಯಬೇಕು. ಆದರೆ ECINET ನಿಯಂತ್ರಣ ಕೇಂದ್ರೀಕೃತವಾಗಿರುವುದರಿಂದ ಸ್ಥಳೀಯ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಯಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಇದಕ್ಕೆ ಉದಾಹರಣೆಯಾಗಿ ಗೋವಾದ ಪ್ರಕರಣವನ್ನು ಸಿಬಲ್ ಉಲ್ಲೇಖಿಸಿದ್ದಾರೆ. ಅಲ್ಲಿ ಅರ್ಹರಾಗಿದ್ದ 97 ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಸಂಬಂಧಿಸಿದ AEROಗೆ ECINET ಪ್ರವೇಶ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಎರಡನೇ ಪ್ರಮುಖ ಆಕ್ಷೇಪ ಫಾರ್ಮ್-6 ಬದಲಾವಣೆಗೆ ಸಂಬಂಧಿಸಿದೆ. ಹೊಸ ಮತದಾರರು ನೋಂದಣಿ ಮಾಡಿಕೊಳ್ಳಲು ಬಳಸುವ ಫಾರ್ಮ್-6ರಲ್ಲಿ ಈ ಹಿಂದೆ ಪೋಷಕರು ಮತ್ತು ಅಜ್ಜ-ಅಜ್ಜಿಯರ ವಿವರಗಳನ್ನು ಕೇಳಲಾಗುತ್ತಿರಲಿಲ್ಲ. ಆದರೆ ಈ ವರ್ಷ ಫಾರ್ಮ್‌ನಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಅರ್ಜಿದಾರರ ಅಥವಾ ಅವರ ಪೋಷಕರ ಹೆಸರು ಹಿಂದಿನ ಮತದಾರರ ಪಟ್ಟಿಯಲ್ಲಿ ಇತ್ತೇ ಎಂಬುದನ್ನು ಕೇಳುವ ಹೊಸ ಅಂಶ ಸೇರಿಸಲಾಗಿತ್ತು. ಈ ಬದಲಾವಣೆಗೆ ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪಿಸಿದ್ದರು. ಸಿಬಲ್ ಪ್ರಕಾರ, ಫಾರ್ಮ್-6 ಬದಲಾಯಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಸೇರಿದ್ದು, ಸಿಇಸಿ ಏಕಪಕ್ಷೀಯವಾಗಿ ಅದರಲ್ಲಿ ಬದಲಾವಣೆ ಮಾಡಿರುವುದು ಪ್ರಶ್ನಾರ್ಹವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಮತ್ತಷ್ಟು ತೆಗೆದುಹಾಕಲು ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿರುವ ವಿಚಾರಕ್ಕೂ ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮೇಲ್ಮನವಿಗಳ ಸಂಪೂರ್ಣ ವಿವರಗಳು ಇನ್ನೂ ಸಾರ್ವಜನಿಕವಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಅಳಿಸಲಾದ ಮತದಾರರ ಹೆಸರುಗಳ ಬಗ್ಗೆ ನ್ಯಾಯಮಂಡಳಿಗಳು ನಡೆಸಿದ ಸೀಮಿತ ಪರಿಶೀಲನೆಯಲ್ಲಿ ಸುಮಾರು ಶೇ.93ರಷ್ಟು ಹೆಸರುಗಳನ್ನು ತಪ್ಪಾಗಿ ತೆಗೆದುಹಾಕಲಾಗಿತ್ತು ಎಂಬುದು ಗೊತ್ತಾಗಿದೆ ಎಂದು ಸಿಬಲ್ ಹೇಳಿದ್ದಾರೆ.
ಇಂತಹ ಕ್ರಮಗಳಿಂದ ಸಿಇಸಿ ನೀಡಿದ ನಿರ್ದೇಶನದ ಮೇರೆಗೆ ನಿರ್ದಿಷ್ಟ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಇಂತಹ ಕ್ರಮಗಳು ಆಡಳಿತಾರೂಢ ಪಕ್ಷಕ್ಕೆ ಚುನಾವಣೆಯಲ್ಲಿ ಅನುಕೂಲವಾಗುವ ಉದ್ದೇಶ ಹೊಂದಿವೆಯೇ ಎಂಬ ಪ್ರಶ್ನೆಯೂ ಇದರಿಂದ ಎದ್ದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದು ಸಮಸ್ಯೆ 2002ರ ಮತದಾರರ ಪಟ್ಟಿಗೆ ಸಂಬಂಧಿಸಿದೆ. ಹಿಂದೆ ಮತ ಚಲಾಯಿಸಿದ್ದರೂ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಫಾರ್ಮ್-6 ತುಂಬುವಂತೆ ಸೂಚಿಸಲಾಗಿದೆ. ಫಾರ್ಮ್-6 ಹೊಸ ಮತದಾರರ ನೋಂದಣಿಗೆ ಬಳಸುವ ಅರ್ಜಿ. ಅದರಲ್ಲಿ ಅರ್ಜಿದಾರರು ಈ ಹಿಂದೆ ಎಂದಿಗೂ ಮತ ಚಲಾಯಿಸಿಲ್ಲ ಎಂದು ಘೋಷಿಸಬೇಕಾಗುತ್ತದೆ. ಹೀಗಾಗಿ ಹಿಂದೆ ಮತ ಚಲಾಯಿಸಿದ್ದ ವ್ಯಕ್ತಿ ಮತ್ತೆ ನೋಂದಣಿ ಮಾಡಿಕೊಳ್ಳಲು ಇದೇ ಫಾರ್ಮ್ ಬಳಸುವಂತೆ ಸೂಚಿಸಿದರೆ, ಅವರು ತಪ್ಪು ಘೋಷಣೆ ನೀಡಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಸಿಬಲ್ ಹೇಳಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಮುಖ್ಯ ಚುನಾವಣಾ ಆಯುಕ್ತರ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ಹಿನ್ನೆಲೆಯಲ್ಲಿ ದೇಶದ ಯುವಕರು ಸಿಇಸಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಬಿಜೆಪಿ ಮಿತ್ರಪಕ್ಷಗಳೂ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಸಾರ್ವಜನಿಕವಾಗಿ ಹೇಳಿವೆ ಎಂದು ಸಿಬಲ್ ಉಲ್ಲೇಖಿಸಿದ್ದಾರೆ.
ಸೆಪ್ಟೆಂಬರ್ 26ರಂದು ಚುನಾವಣಾ ಆಯೋಗ ಹೊರಡಿಸಿದ ಹೇಳಿಕೆಯಲ್ಲಿ ಕೆಲವು ಕ್ರಮಗಳನ್ನು ಬದಲಾಯಿಸುವುದಾಗಿ ತಿಳಿಸಲಾಗಿದೆ. ನೋಟಿಸ್ ಪಡೆದ ಮತದಾರರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು (BLOs) ತೆರಳಿ ದಾಖಲೆಗಳನ್ನು ಸಂಗ್ರಹಿಸಿ ECINETನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ಬಳಿಕ ERO ಈ ದಾಖಲೆಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: SIR ಅಕ್ರಮ | ಗ್ಯಾನೇಶ್ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?
ಇಂತಹ ಮತದಾರರನ್ನು ಸಾಮಾನ್ಯವಾಗಿ ERO ಅಥವಾ AERO ಮುಂದೆ ವಿಚಾರಣೆಗೆ ಕರೆಯಲಾಗುವುದಿಲ್ಲ. ಅಗತ್ಯವಿರುವ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಚಾರಣೆ ನಡೆಯಲಿದೆ. ಆನ್‌ಲೈನ್ ವಿಚಾರಣೆಯ ವ್ಯವಸ್ಥೆಯನ್ನು ಬಲಪಡಿಸಲಾಗುವುದು. ಜೊತೆಗೆ ಸ್ಥಳೀಯ ಚುನಾವಣಾ ಅಧಿಕಾರಿಗಳಿಗೆ ECINET ಪ್ರವೇಶ ನೀಡಲಾಗುವುದು ಎಂದು ಆಯೋಗ ತಿಳಿಸಿದೆ.
ಸಿಬಲ್ ಪ್ರಕಾರ, ಸ್ಥಳೀಯ ಅಧಿಕಾರಿಗಳಿಗೆ ECINET ಪ್ರವೇಶ ನೀಡುವ ನಿರ್ಧಾರವು ಈ ಹಿಂದೆ ಅಂತಹ ಪ್ರವೇಶದ ಕೊರತೆ ಇತ್ತು ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮತ್ತಷ್ಟು ಗಂಭೀರಗೊಳಿಸಿದೆ. ಕೊನೆಯಲ್ಲಿ, ಸರ್ಕಾರ ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡಂತೆ ಸೆಪ್ಟೆಂಬರ್ 26ರ ಹೇಳಿಕೆ ಹೊರಡಿಸಿ ಸಿಇಸಿಯ ರಾಜೀನಾಮೆಯಿಂದ ಉಂಟಾಗಬಹುದಾದ ಮುಜುಗರವನ್ನು ತಪ್ಪಿಸಲು ಪ್ರಯತ್ನಿಸಿದೆ ಎಂದು ಸಿಬಲ್ ಆರೋಪಿಸಿದ್ದಾರೆ. ಇಂತಹ ಕ್ರಮಗಳಿಂದ ಸಿಇಸಿಯ ಕಾರ್ಯವೈಖರಿ ಕುರಿತು ಎದ್ದಿರುವ ಪ್ರಶ್ನೆಗಳು ಬಗೆಹರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಸಿಇಸಿಯ ನಿರ್ದೇಶನದ ಮೇರೆಗೆ ಅಕ್ರಮ ನಡೆದಿದೆ ಎಂಬ ಸಾರ್ವಜನಿಕ ಅನುಮಾನವನ್ನು ಸೆಪ್ಟೆಂಬರ್ 26ರ ಹೇಳಿಕೆಯೊಂದರಿಂದ ನಿವಾರಿಸಲು ಸಾಧ್ಯವಿಲ್ಲ. ಸಿಇಸಿ ರಾಜೀನಾಮೆ ನೀಡುವುದು ಅಗತ್ಯ ಎಂದು ಸಿಬಲ್ ಸ್ಪಷ್ಟಪಡಿಸಿದ್ದಾರೆ.




