“ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸರ್ವಪಕ್ಷ ನಿಯೋಗದೊಂದಿಗೆ ಬಾರದಿದ್ದರೆ, ಬಿಜೆಪಿಯವರದ್ದು ಕಪಟ ನಾಟಕ ಎಂಬುದು ಸಾಬೀತಾಗುತ್ತದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಬಿಜೆಪಿ ನಾಯಕರು ಮನವರಿಕೆ ಮಾಡಿಕೊಡದಿದ್ದರೆ, ರೈತರ ಹಿತಕ್ಕಾಗಿ ನಾವೇ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬರ ವಿಚಾರದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ಹೋಗುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ವಿರೋಧ ಪಕ್ಷಗಳು ಸರ್ವಪಕ್ಷ ನಿಯೋಗದೊಂದಿಗೆ ಸೇರದಿದ್ದರೆ, ರಾಜ್ಯದ ರೈತರ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ರೈತರಿಗೆ 25 ಸಾವಿರ, 50 ಸಾವಿರ ಪರಿಹಾರ ನೀಡಿ ಎಂದು ಹೇಳುವವರು ಕೇಂದ್ರ ಸರ್ಕಾರದ ಬಳಿ ಮಾತನಾಡಿ ಅವರೂ ಪರಿಹಾರ ಕೊಡಿಸಬೇಕು. ರೈತರ ಹಿತಾಸಕ್ತಿಯನ್ನು ರಾಜ್ಯ ಸರ್ಕಾರ ಕಡೆಗಣಿಸುವುದಿಲ್ಲ. ರಾಜ್ಯದ ರೈತರ ಹಿತ ಕಾಪಾಡಲು ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ” ಎಂದಿದ್ದಾರೆ.
“ಬರ ಪರಿಸ್ಥಿತಿಯ ಅಧ್ಯಯನ ಕುರಿತು ಅಕ್ಟೋಬರ್ 3ರಂದು ಕೇಂದ್ರದ ತಂಡ ಬರುತ್ತಿದೆ. ಆ ಸಮಿತಿಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಕಾನೂನಿನ ಚೌಕಟ್ಟಿನಲ್ಲಿ ನಮ್ಮ ಅಧಿಕಾರಿಗಳು ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ.
“ಕಸ್ತೂರಿರಂಗನ್ ವರದಿ ಮತ್ತು ಬರ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ನಡೆಸುವ ಸಂಬಂಧ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಲಾಗುವುದು. ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಕೇಂದ್ರ ಸಚಿವರ, ಪ್ರಧಾನಮಂತ್ರಿಯವರ ಭೇಟಿಗೆ ಸಮಯ ಕೇಳುತ್ತೇನೆ. ಸಮಯ ಪಡೆದು, ರಾಜ್ಯದ ಪರವಾಗಿ ಅಗತ್ಯವಿರುವ ಮನವಿಯನ್ನು ಸಲ್ಲಿಸುವ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ.



