ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ ‘ಮತದಾನದ ಹಕ್ಕು’ ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ ಜೋಡಿ ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡು ಇಡೀ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಾವೊಬ್ಬ ನಿಷ್ಪಕ್ಷಪಾತ ಸಾಂವಿಧಾನಿಕ ಅಧಿಕಾರಿ ಎಂಬುದನ್ನು ಸಂಪೂರ್ಣವಾಗಿ ಮರೆತು, ಸರ್ಕಾರದ ಕೈಗೊಂಬೆಯಾಗಿ ಸರ್ವಾಧಿಕಾರಿ ಧೋರಣೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ದೇಶದ 96 ಕೋಟಿ ಮತದಾರರಿಗೆ ಇನ್ನಿಲ್ಲದ ಕಿರುಕುಳ ನೀಡಿ ರೇಜಿಗೆ ಹುಟ್ಟಿಸಿದ್ದಾರೆ. ಇದು ಅಕ್ಷರಶಃ ದೇಶದ್ರೋಹದ ಕೃತ್ಯ. ಈ ಕೃತ್ಯದಲ್ಲಿ ಜ್ಞಾನೇಶ್ ಕುಮಾರ್ ಅವರ ಪಾತ್ರ ಎಷ್ಟಿದೆಯೋ, ಮೋದಿ-ಶಾ ಕೈವಾಡ ಅದಕ್ಕಿಂತಲೂ ಹೆಚ್ಚಿದೆ ಎಂಬುದೂ ಸ್ಪಷ್ಟ.
‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸಿದ ಸ್ಫೋಟಕ ತನಿಖಾ ವರದಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಚುನಾವಣಾ ಆಯೋಗದ ಮುಖ್ಯ ಭಾಗವೇ ಆಗಿರುವ ಇಬ್ಬರು ಆಯುಕ್ತರ ಧ್ವನಿಯನ್ನು ಸಂಪೂರ್ಣವಾಗಿ ಅಡಗಿಸಿ, ಏಕಪಕ್ಷೀಯವಾಗಿ ಜ್ಞಾನೇಶ್ ಕುಮಾರ್ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೇ ಎಸಗಿದ ಮಹಾಅಪರಾಧ ಮತ್ತು ದೇಶದ ಪ್ರಜೆಗಳ ಸಾರ್ವಭೌಮತ್ವಕ್ಕೆ ಬಗೆದ ದ್ರೋಹ.
ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆ
ಐತಿಹಾಸಿಕ ಟಿ.ಎನ್. ಶೇಷನ್ ಮತ್ತು ಅನೂಪ್ ಬರಣ್ವಾಲ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟ ತೀರ್ಪು ನೀಡಿತ್ತು. “ಚುನಾವಣಾ ಆಯೋಗವು ಸರ್ವಸಮ್ಮತ ಆಡಳಿತಾತ್ಮಕ ಒಮ್ಮತದ ಆಧಾರದ ಮೇಲೆಯೇ ಕಾರ್ಯನಿರ್ವಹಿಸಬೇಕು. ಮುಖ್ಯ ಚುನಾವಣಾ ಆಯುಕ್ತರು ಅಂತಿಮ ನಿರ್ಧಾರಕ ಅಥವಾ ಸರ್ವಾಧಿಕಾರಿಯಲ್ಲ. ಅವರು ‘ಸಮಾನರಲ್ಲಿ ಮೊದಲಿಗರು’ (primus inter pares) ಮಾತ್ರ. ಪ್ರತಿಯೊಬ್ಬ ಆಯುಕ್ತರಿಗೂ ಸಮಾನ ಅಧಿಕಾರವಿದೆ” ಎಂದು ಸ್ಪಷ್ಟಪಡಿಸಿತ್ತು.
ಆದರೆ, ಜ್ಞಾನೇಶ್ ಕುಮಾರ್ ಸುಪ್ರೀಂ ಕೋರ್ಟ್‌ನ ಈ ಸ್ಪಷ್ಟ ಆದೇಶಗಳನ್ನೇ ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ. ಸಹೋದ್ಯೋಗಿ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನು ಕತ್ತಲಲ್ಲಿಟ್ಟು ಅಸಂವಿಧಾನಿಕವಾಗಿ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಜ್ಞಾನೇಶ್ ಕುಮಾರ್ ಅವರ ಈ ಧೋರಣೆಯಿಂದ ಅಸಮಾಧಾನಗೊಂಡ ಇಬ್ಬರೂ ಆಯುಕ್ತರು ಕಳೆದ 10 ತಿಂಗಳಲ್ಲಿ ಬರೋಬ್ಬರಿ 14 ಬಾರಿ ಲಿಖಿತ ಪತ್ರ ಬರೆದು, ‘ಎಸ್‌ಐಆರ್ ವಿಚಾರದಲ್ಲಿ ಜ್ಞಾನೇಶ್ ಕುಮಾರ್ ನಿರ್ಧಾರಗಳು ಅಕ್ರಮ, ನಿಯಮಬಾಹಿರ ಮತ್ತು ಏಕಪಕ್ಷೀಯ’ ಎಂದು ಆಕ್ಷೇಪ ದಾಖಲಿಸಿದ್ದಾರೆ.
ಮಾತ್ರವಲ್ಲದೆ, ಮತದಾರರ ನೋಂದಣಿ ಸಾಫ್ಟ್‌ವೇರ್, ಡೇಟಾಬೇಸ್ ಭದ್ರತೆ ಮತ್ತು ಹೆಸರುಗಳ ಸೇರ್ಪಡೆ ಹಾಗೂ ತೆಗೆದುಹಾಕುವಿಕೆಯಂತಹ ಪ್ರಮುಖ ನಿರ್ಧಾರಗಳನ್ನು ತಮ್ಮ ಗಮನಕ್ಕೆ ತರದೆ ತೆಗೆದುಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪಗಳನ್ನೂ ಮಾಡಿದ್ದಾರೆ. ಆದರೆ, ಇದಾವುದಕ್ಕೂ ಕಿವಿಗೊಡದ ಜ್ಞಾನೇಶ್ ಕುಮಾರ್, ತಮಗಿಷ್ಟ ಬಂದಂತೆ ಎಸ್‌ಐಆರ್ ಪ್ರಕ್ರಿಯೆ ನಡೆಸಿದ್ದಾರೆ, ಬೇಕಾಬಿಟ್ಟಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಕೊನೆಗೆ ಆಯೋಗದೊಳಗಿನ ಈ ಅಕ್ರಮಗಳನ್ನು ಸಹಿಸಲಾರದೆ, ಇಬ್ಬರು ಆಯುಕ್ತರು ಕೇಂದ್ರ ಕ್ಯಾಬಿನೆಟ್ ಸೆಕ್ರೆಟರಿಗೆ ದೂರು ಪತ್ರ ಬರೆಯುವ ಸ್ಥಿತಿ ನಿರ್ಮಾಣವಾಗಿರುವುದು ಸಾಂವಿಧಾನಿಕ ನಿಯಮಗಳನ್ನು ಹೇಗೆ ಧೂಳೀಪಟ ಮಾಡಲಾಗಿದೆ ಎಂಬುದಕ್ಕೆ ಸಾಕ್ಷಿ.
ನೇಮಕಾತಿ ಪ್ರಕ್ರಿಯೆಯಲ್ಲೇ ಇತ್ತು ಪ್ರಜಾಪ್ರಭುತ್ವ ವಿರೋಧಿ ಹುನ್ನಾರ
ಚುನಾವಣಾ ಆಯೋಗ ಮತ್ತು ಎಸ್‌ಐಆರ್ ಪ್ರಕ್ರಿಯೆ ಮೂಲಕ ದೇಶದ ಮತದಾರರ ಮೇಲೆ ಎಸಗಲಾಗಿರುವ ಕ್ರೌರ್ಯಕ್ಕೆ ಜ್ಞಾನೇಶ್ ಕುಮಾರ್ ಮಾತ್ರ ಕಾರಣ ಅಲ್ಲ. ಅವರೊಬ್ಬರೇ ಇದಕ್ಕೆ ಹೊಣೆಗಾರರೂ ಅಲ್ಲ, ಅಪರಾಧಿಯೂ ಅಲ್ಲ. ಜ್ಞಾನೇಶ್ ಕುಮಾರ್ ಜೊತೆಗೆ ಪ್ರಧಾನಿ ಮೋದಿ ಮತ್ತು ಅವರ ಅತ್ಯಾಪ್ತ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇರ ಕೈವಾಡವಿದೆ.
ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಗೆ ತಂದು ಕೂರಿಸಿದ್ದೇ ಈ ‘ಮೋ-ಶಾ’ ಜೋಡಿ. 2023ರಲ್ಲಿ ಮೋದಿ ಸರ್ಕಾರ ಹೊಸ ಕಾಯ್ದೆ ಜಾರಿ ಮಾಡಿತು. ಆ ಕಾಯ್ದೆ ಮೂಲಕ ಸಿಇಸಿ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಹಾಕಿ, ತನ್ನದೇ ಕ್ಯಾಬಿನೆಟ್ ಸಚಿವನನ್ನು ಸೇರಿಸಿಕೊಂಡಿತು. ಅಂದರೆ, ತಮಗೆ ಬೇಕಾದ ಸೂತ್ರದ ಬೊಂಬೆಯನ್ನು ತಾವೇ ನೇಮಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿತು. ಈ ಕಾಯ್ದೆ ಜಾರಿಯಾದ ಮೇಲೆ ರಚನೆಯಾದ ಆಯ್ಕೆ ಸಮಿತಿಯಲ್ಲಿ ಪ್ರಧಾನಿ ಮೋದಿ, ಅವರ ಆಪ್ತಮಿತ್ರ ಅಮಿತ್ ಶಾ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಇದ್ದರು. ಸಮಿತಿಯಲ್ಲಿ ಮೆಜಾರಿಟಿ ಆಡಳಿತ ಪಕ್ಷದ್ದೇ ಆಗಿದ್ದರಿಂದ, ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದರೂ ಬಹುಮತದ ಆಧಾರದ ಮೇಲೆ ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಯಿತು.
ಇದನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರು ಬುಧವಾರ ನಡೆದ ವಿಚಾರವಣೆ ವೇಳೆ ಅತ್ಯಂತ ಕಠಿಣವಾಗಿ ಪ್ರಶ್ನಿಸಿದ್ದಾರೆ. “ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ತಂಡವೇ ತನಗೆ ಬೇಕಾದ ಅಂಪೈರ್‌ನನ್ನು ನೇಮಿಸಿಕೊಂಡರೆ, ಆ ಅಂಪೈರ್ ಎಷ್ಟೇ ಸರಿಯಾದ ನಿರ್ಧಾರ ನೀಡಿದರೂ ಆತನ ಮೇಲೆ ಸಂಶಯ ಇದ್ದೇ ಇರುತ್ತದೆ” ಎಂದು ಮಾರ್ಮಿಕವಾಗಿ ಹೇಳಿದ್ದರು.
ಆಯ್ಕೆ ಸಮಿತಿ ಮೇಲೆ ಸರ್ಕಾರವೇ ಸಂಪೂರ್ಣ ಕಂಟ್ರೋಲ್ ಇಟ್ಟುಕೊಂಡು ಆಯುಕ್ತರನ್ನು ನೇಮಿಸಿದಾಗ, ಇಡೀ ಪ್ರಕ್ರಿಯೆಯ ನಿಷ್ಪಕ್ಷಪಾತತೆಯೇ ನಾಶವಾಗುತ್ತದೆ ಎಂಬುದು ನ್ಯಾಯಮೂರ್ತಿಗಳ ಕಳವಳ. ಆದರೂ, ಕಳೆದ ಮೂರು ವರ್ಷಗಳಿಂದ ಸಿಇಸಿ ಆಯ್ಕೆ ಸಮಿತಿ ವಿರುದ್ಧ ಕಾನೂನು ಹೋರಾಟ ನಡೆಯುತ್ತಿದ್ದರೂ, ಈ ತಗಾದೆಯ ತ್ವರಿತ ವಿಚಾರಣೆ ನಡೆಸಿ ತೀರ್ಪು ನೀಡುವಲ್ಲಿ ಸುಪ್ರೀಂ ಕೋರ್ಟ್‌ನ ಅನಿರ್ದಿಷ್ಟ ವಿಳಂಬವು ದುರದೃಷ್ಟಕರ. ಇತ್ತೀಚೆಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದ್ವಿಪೀಠವು ಈ ವಿಚಾರವನ್ನು ವಿಸ್ತೃತ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.
13 ಕೋಟಿ ಮತದಾರರ ಹಕ್ಕು ಹರಣ, ಡಿಜಿಟಲ್ ಹೆಜ್ಜೆಗಳ ಅಕ್ರಮ
ಒಂದೆಡೆ, ಈ ಆಯ್ಕೆ ಸಮಿತಿಯ ವಿಚಾರದಲ್ಲಿ ಸ್ಪಷ್ಟ ತೀರ್ಪು ನೀಡಲು ಸುಪ್ರೀಂ ಕೋರ್ಟ್ ವಿಳಂಬ ಮಾಡುತ್ತಿದ್ದರೆ, ಇನ್ನೊಂದೆಡೆ ಮೋದಿ-ಶಾ ಜೋಡಿ ಜ್ಞಾನೇಶ್ ಕುಮಾರ್ ಮೂಲಕ ಎಸ್‌ಐಅರ್ ಜಾರಿಗೊಳಿಸಿ ದೇಶದ 96.8 ಕೋಟಿ ಮತದಾರರ ಡೇಟಾಬೇಸ್ ಮೇಲೆ ಕಾನೂನುಬಾಹಿರವಾಗಿ ನಿಯಂತ್ರಣ ಸಾಧಿಸಿದೆ. ನಿಯಮದ ಪ್ರಕಾರ, ಮತದಾರರ ಪಟ್ಟಿ ನಿರ್ಧಾರಗಳನ್ನು ಸ್ಥಳೀಯ ERO ಅಧಿಕಾರಿಗಳು ತೆಗೆದುಕೊಳ್ಳಬೇಕು. ಆದರೆ, ‘ERO-NET’ ಸಾಫ್ಟ್‌ವೇರ್ ಅನ್ನು ದೆಹಲಿಯಲ್ಲಿರುವ ಸಣ್ಣ ಐಟಿ ಸೆಲ್ ಕಂಟ್ರೋಲ್ ಮಾಡುತ್ತಿದ್ದು, ಸ್ಥಳೀಯ ಅಧಿಕಾರಿಗಳ ಹಕ್ಕನ್ನೇ ಕಸಿದುಕೊಳ್ಳಲಾಗಿದೆ.
ಉದಾಹರಣೆಗೆ, ಗೋವಾದಲ್ಲಿ ಅಧಿಕಾರಿಗಳು ಪರಿಶೀಲಿಸಿ 97 ಜನ ಅರ್ಹ ಮತದಾರರು ಎಂದು ನಿರ್ಧರಿಸಿದರೂ, ಸಾಫ್ಟ್‌ವೇರ್‌ನಲ್ಲಿ ಅವರಿಗೆ ಸರಿಯಾದ ಆಕ್ಸೆಸ್ ಇಲ್ಲದ ಕಾರಣ ಆ 97 ಮಂದಿಯನ್ನು ಮತಪಟ್ಟಿಗೆ ಸೇರಿಸಲು ಆಗಲೇ ಇಲ್ಲ. ಈ ಸಮಸ್ಯೆ ಬಗ್ಗೆ ಗೋವಾ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳೇ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದರೂ ಆಯೋಗ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಪರಿಣಾಮ, ಆ 97 ಜನ ಅರ್ಹರಾಗಿದ್ದರೂ ಮತದ ಹಕ್ಕನ್ನೇ ಕಳೆದುಕೊಂಡರು.
ಈ ಲೇಖನ ಓದಿದ್ದೀರಾ?: ‘SIR ಪ್ರಕ್ರಿಯೆ ಕುರಿತು ನಮಗೆ ಏನನ್ನೂ ತಿಳಿಸದೇ ತೀರ್ಮಾನ’: ಗ್ಯಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು
ಇಷ್ಟೇ ಅಲ್ಲ, ಅರ್ಹ ಯುವ ಮತದಾರರನ್ನು ಹೊರಗಿಡಲು ‘ಫಾರ್ಮ್-6’ ನಲ್ಲಿ 2000ನೇ ಇಸವಿಯ ಪೋಷಕರ ದಾಖಲೆ ಕೇಳುವ ಸಂವಿಧಾನಬಾಹಿರ ಪ್ರಶ್ನೆಯನ್ನು ಸೇರಿಸಲಾಯಿತು. 18 ವರ್ಷ ಪೂರೈಸಿದ ಯುವಜನರು ಮತದ ಹಕ್ಕು ಪಡೆಯಲು ‘ಪೌರತ್ವ ಮತ್ತು ವಯಸ್ಸು’ ಸಾಕಾಗಿತ್ತು. ಆದರೆ, ಆಯೋಗ ‘ಪ್ರೊಜಿನಿ ಮ್ಯಾಪಿಂಗ್’ ಕಡ್ಡಾಯ ಮಾಡಿ ಹೊಸ ಮತದಾರರ ಸೇರ್ಪಡೆಗೆ ಅಡ್ಡಿಪಡಿಸಿತು.
ಜೊತೆಗೆ, ಇಲ್ಲಸಲ್ಲದ ಪ್ರಶ್ನೆಗಳು ಮತ್ತು ದಾಖಲೆಗಳನ್ನು ಕೇಳಿ, ದೇಶಾದ್ಯಂತ ಕನಿಷ್ಠ 13 ಕೋಟಿ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ, ಯಾವುದೇ ಪಾರದರ್ಶಕತೆಯಿಲ್ಲದೆ ವೋಟರ್ ಲಿಸ್ಟ್‌ನಿಂದ ಡಿಲೀಟ್ ಮಾಡಲಾಯಿತು. ಅರ್ಹ ಮತದಾರರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ದೇಶದ್ರೋಹ ಮತ್ತು ಕ್ರಿಮಿನಲ್ ಅಪರಾಧವಲ್ಲವೇ? ಈ ಅಪರಾಧದಲ್ಲಿ ಜ್ಞಾನೇಶ್ ಕುಮಾರ್, ಮೋದಿ ಮತ್ತು ಅಮಿತ್ ಶಾ ನೇರ ಆರೋಪಿಗಳಲ್ಲವೇ?
ಗ್ಯಾನೇಶ್ ಕುಮಾರ್ – ಮೇಧಾ ರೂಪಂ: ತಪ್ಪು ಕಾರಣಗಳಿಗಾಗಿ ಸುದ್ದಿಯ ಸುಳಿಯಲ್ಲಿ ಐಎಎಸ್ ಅಪ್ಪ-ಮಗಳ ಜೋಡಿ
ಈಗ ಸತ್ಯಗಳು ಬಹಿರಂಗವಾಗಿವೆ. ಮೋದಿ-ಶಾ ಅವರ ಅಸಲಿ ಯೋಜನೆ ಬಟಾಬಯಲಾಗಿದೆ. ಈಗಲಾದರೂ, ಸಿಇಸಿ ಆಯ್ಕೆ ಸಮಿತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಿದೆ. ತಕ್ಷಣವೇ ಈ ಪ್ರಸ್ತುತ ಆಯ್ಕೆ ಸಮಿತಿಯನ್ನು ರದ್ದುಗೊಳಿಸಿ, ಹಳೆಯ ಸಮಿತಿಯಾದ ‘ಪ್ರಧಾನಿ, ವಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ’ಗಳನ್ನು ಒಳಗೊಂಡ ಸಮಿತಿಯನ್ನೇ ಮರುಸ್ಥಾಪಿಸಬೇಕು.
ಸಂವಿಧಾನಿಕ ಪಾವಿತ್ರ್ಯವನ್ನು ಗಾಳಿಗೆ ತೂರಿ, ದೇಶದ ಜನರನ್ನು ವಂಚಿಸಿರುವ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ವಜಾಗೊಳಿಸಿ, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಬಂಧಿಸಬೇಕು. ಎಸ್‌ಐಆರ್ ಹೆಸರಿನಲ್ಲಿ ಅಕ್ರಮವಾಗಿ ಡಿಲೀಟ್ ಮಾಡಲಾದ ಪ್ರತಿಯೊಬ್ಬ ಭಾರತೀಯ ಮತದಾರನ ಹೆಸರನ್ನು ತಕ್ಷಣವೇ ಮರಳಿ ಪಟ್ಟಿಗೆ ಸೇರಿಸಬೇಕು. ಮಾತ್ರವಲ್ಲದೆ, ಎಸ್‌ಐಆರ್ ಪ್ರಕ್ರಿಯೆ ನಡೆದ ಬಳಿಕ ನಡೆದ ಎಲ್ಲ ಚುನಾವಣೆಗಳನ್ನೂ ರದ್ದುಗೊಳಿಸಿ, ಹಳೆಯ ಪಾರದರ್ಶಕ ಮತಪಟ್ಟಿಯ ಆಧಾರದಲ್ಲಿ ಮರುಚುನಾವಣೆ ನಡೆಸಬೇಕು. ಭಾರತದ ಪ್ರಜಾಪ್ರಭುತ್ವವನ್ನು ಜೀವಂತವಾಗಿಡಲು ಈ ಕಠಿಣ ಕ್ರಮಗಳು ಅತ್ಯಗತ್ಯವಾಗಿವೆ.



