2004ರ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕವಾಗಿ ತಮ್ಮನ್ನು ‘ಜೆರ್ಸಿ ಹಸು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದೂ ಸೇರಿದಂತೆ ಹಲವು ಪ್ರಮುಖ ರಾಜಕೀಯ ವಿಷಯಗಳನ್ನು ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ದಾಖಲಿಸಿದ್ದಾರೆ. ಮೋದಿ-ಬಿಜೆಪಿ-ಆರ್ಎಸ್ಎಸ್ ಎಸಗಿರುವ ವಿವಾದಾತ್ಮಕ ಸಂಗತಿಗಳನ್ನು ದಾಖಲಿಸಿರುವ ಭಾಗಗಳನ್ನು ಪುಸ್ತಕದಿಂದ ತೆಗೆದುಹಾಕಲು ಸೋನಿಯಾ ಗಾಂಧಿ ಅವರಿಗೆ ಪ್ರಕಾಶನ ಸಂಸ್ಥೆ ‘ಪೆಂಗ್ವಿನ್ ಇಂಡಿಯಾ’ ಒತ್ತಾಯಿಸಿತ್ತು ಎಂದು ವರದಿಯಾಗಿದೆ. ಆದರೆ, ಪ್ರಕಾಶಕರ ಒತ್ತಡಕ್ಕೆ ಸೋನಿಯಾ ಗಾಂಧಿ ಒಪ್ಪದ ಕಾರಣ, ಅವರ ಪುಸ್ತಕವನ್ನು ಪ್ರಕಟಿಸಲು ಪೆಂಗ್ವಿನ್ ಇಂಡಿಯಾ ಹಿಂದೆ ಸರಿದಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೀವನಗಾಥೆ ‘Belonging: A Journey of Love’ ಭಾರತದಲ್ಲಿ ಪ್ರಕಟವಾಗುವ ಪ್ರಕ್ರಿಯೆ ಹಠಾತ್ ಸ್ಥಗಿತಗೊಂಡಿದೆ. ಇದರ ಹಿಂದೆ, ಮೋದಿ ಅವರ ‘ಜೆರ್ಸಿ ಹಸು’ ನಿಂದನೆ, ಪ್ರಧಾನಿ ಮೋದಿ ಮತ್ತು ಆರ್ಎಸ್ಎಸ್ನ ಕುತಂತ್ರಗಳು ಹಾಗೂ ಚೀನಾದ ಗಡಿ ಅತಿಕ್ರಮಣಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳನ್ನು ಉಲ್ಲೇಖಿಸಿರುವುದು ಪ್ರಮುಖ ಕಾರಣ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ವರದಿಯ ಪ್ರಕಾರ, ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ (PRHI) ಆರಂಭದಲ್ಲಿ ಪುಸ್ತಕದ ಹಲವು ಭಾಗಗಳ ಬಗ್ಗೆ ಆಕ್ಷೇಪ ಎತ್ತಿತ್ತು. ಮುಖ್ಯವಾಗಿ, ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಹಿಂದಿನ ಪ್ರಧಾನಿಗಳೊಂದಿಗೆ ಹೋಲಿಸಿ ಬರೆದ ವೈಯಕ್ತಿಕ ಅನಿಸಿಕೆಗಳು, ಮೋದಿ ಅವರೊಂದಿಗೆ ನಡೆಸಿದ ಭೇಟಿಗಳ ವಿವರಗಳು, ಆರ್ಎಸ್ಎಸ್ ಕುರಿತ ವಿಶ್ಲೇಷಣೆಗಳು ಹಾಗೂ ಭಾರತದ ಭೂಭಾಗವನ್ನು ಚೀನಾ ಅತಿಕ್ರಮಿಸಿಕೊಂಡಿರುವುದು ಮತ್ತು ಮೋದಿ ಮೌನದ ಕುರಿತ ಉಲ್ಲೇಖಗಳನ್ನು ತೆಗೆದುಹಾಕಲು ಅಥವಾ ತಿದ್ದುಪಡಿ ಮಾಡಲು ಪ್ರಕಾಶಕರು ಪಟ್ಟು ಹಿಡಿದಿದ್ದರು. ಆದರೆ, ತಮ್ಮ ದೀರ್ಘ ರಾಜಕೀಯ ಪಯಣದ ನೈಜ ಚಿತ್ರಣವನ್ನು ತಿದ್ದಲು ಅಥವಾ ಮೃದುಗೊಳಿಸಲು ಸೋನಿಯಾ ಗಾಂಧಿ ಸ್ಪಷ್ಟವಾಗಿ ನಿರಾಕರಿಸಿದ್ದರು.
ಆದರೆ, ತಮ್ಮ ಬೇಡಿಕೆಗೆ ಸೋನಿಯಾ ಗಾಂಧಿ ಒಪ್ಪದ ಕಾರಣ ಪುಸ್ತಕ ಪ್ರಕಟಿಸುವ ಒಪ್ಪಂದ ರದ್ದಾಗಿದೆ ಎಂಬ ಆರೋಪಗಳನ್ನು ಪೆಂಗ್ವಿನ್ ಇಂಡಿಯಾ ತಳ್ಳಿಹಾಕಿದೆ. ವಾಸ್ತವಗಳನ್ನು ಪರಿಶೀಲನೆ ಮಾಡುವುದು ಮತ್ತು ಪುಸ್ತಕದ ಗುಣಮಟ್ಟದ ಹಿತದೃಷ್ಟಿಯಿಂದ ಲೇಖಕರಿಗೆ ತಿದ್ದುಪಡಿ ಸಲಹೆ ನೀಡುವುದು ಪ್ರಕಾಶಕರ ಸಾಮಾನ್ಯ ಜವಾಬ್ದಾರಿಯಷ್ಟೇ ಹೊರತು, ತಾವಾಗಿಯೇ ಪ್ರಕಟಣೆಯಿಂದ ಹಿಂದೆ ಸರಿಯಲಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ಸಮರ್ಥನೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದ್ದು, ಪೆಂಗ್ವಿನ್ನ ಜಾಗತಿಕ ಸಂಸ್ಥೆಯು ಪುಸ್ತಕವನ್ನು ಯಥಾವತ್ತಾಗಿ ಪ್ರಕಟಿಸಲು ಸಿದ್ಧವಾಗಿರುವಾಗ, ಭಾರತೀಯ ಘಟಕ ಮಾತ್ರ ಪ್ರಧಾನಿ ಮೋದಿ ಅವರ ‘ಎಕ್ಸಾಮ್ ವಾರಿಯರ್ಸ್’ ಹಾಗೂ ಆರ್ಎಸ್ಎಸ್ ಕುರಿತ ಪುಸ್ತಕಗಳನ್ನು ಪ್ರಕಟಿಸಲು ತೋರಿಸುವ ಉತ್ಸಾಹವನ್ನು ಸೋನಿಯಾ ಅವರ ಪುಸ್ತಕದ ವಿಷಯದಲ್ಲಿ ತೋರಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದೆ.
ಈ ನಡುವೆ, ಸೋನಿಯಾ ಗಾಂಧಿ ಅವರ ಆತ್ಮಕಥನದ ಜಾಗತಿಕ ಬಿಡುಗಡೆಗೆ ಯಾವುದೇ ಅಡ್ಡಿ ಎದುರಾಗಿಲ್ಲ. ಪೆಂಗ್ವಿನ್ನ ಜಾಗತಿಕ ಅಂಗಸಂಸ್ಥೆಯಾದ ‘ಆಲ್ಫ್ರೆಡ್ ಎ. ಕ್ನಾಫ್’ ನವೆಂಬರ್ 10ರಂದು ಜಾಗತಿಕವಾಗಿ ಈ ಪುಸ್ತಕವನ್ನು ಬಿಡುಗಡೆ ಮಾಡಲಿದೆ. ಭಾರತದಲ್ಲೂ ‘ಹಾರ್ಪರ್ ಕಾಲಿನ್ಸ್’ ಸಂಸ್ಥೆಯು ಈ ಪುಸ್ತಕದ ಪ್ರಕಟಣೆ ಮತ್ತು ವಿತರಣೆಯ ಹಕ್ಕನ್ನು ಪಡೆದುಕೊಳ್ಳುವ ಅಂತಿಮ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಭಾರತ-ಚೀನಾ ಗಡಿ ವಿವಾದ ಮತ್ತು ಮೋದಿ ವಿರುದ್ಧದ ಕಟು ಉಲ್ಲೇಖಗಳು ಈಗ ಕೇವಲ ಪುಸ್ತಕದ ಸಾಲುಗಳಾಗಿ ಉಳಿಯದೆ, ರಾಜಕೀಯ ರಂಗದಲ್ಲಿ ಪ್ರಕಟಣಾ ಸ್ವಾತಂತ್ರ್ಯ ಮತ್ತು ರಾಜಕೀಯ ಒತ್ತಡಗಳ ಕುರಿತಾದ ಹೊಸ ಸಂಘರ್ಷಕ್ಕೆ ಕಾರಣವಾಗಿವೆ.
ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯಲ್ಲಿ ಅವರು ಇಟಲಿಯಿಂದ ಭಾರತದ ಪ್ರಮುಖ ರಾಜಕೀಯ ಕುಟುಂಬಕ್ಕೆ ಬಂದ ತಮ್ಮ ಜೀವನಯಾನ, ರಾಜೀವ್ ಗಾಂಧಿಯವರೊಂದಿಗೆ ವಿವಾಹ, ಅವರ ಹತ್ಯೆಯ ನಂತರ ರಾಜಕೀಯದ ಸಾರ್ವಜನಿಕ ಬದುಕಿಗೆ ತಳ್ಳಲ್ಪಟ್ಟದ್ದು, ಕಾಂಗ್ರೆಸ್ ನಾಯಕತ್ವ ಹಾಗೂ 2004ರಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನು ತಿರಸ್ಕರಿಸಿದ ನಿರ್ಧಾರ ಸೇರಿದಂತೆ ಹಲವು ಪ್ರಮುಖ ರಾಜಕೀಯ ವಿದ್ಯಾಮಾನಗಳನ್ನು ಸಹ ದಾಕಲಿಸಿದ್ದಾರೆ ಎಂದು ತಿಳಿದುಬಂದಿದೆ.



