ಬಿಹಾರದ ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳಿಗೆ ಸಾರ್ವಜನಿಕ ರಸ್ತೆಯಲ್ಲಿ ‘ನೈತಿಕ ಗೂಂಡಾಗಿರಿ’ (Moral Policing) ನಡೆಸಿ, ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಸಂಜೆ ವೇಳೆಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಗುಂಪೊಂದು ಬಲವಂತವಾಗಿ ತಡೆದು ನಿಲ್ಲಿಸಿದೆ. ವಿದ್ಯಾರ್ಥಿನಿಯು ಕೈಜೋಡಿಸಿ ತಮ್ಮನ್ನು ಬಿಟ್ಟುಬಿಡುವಂತೆ ಗೋಗರೆದರೂ, ಪುಂಡರ ಗುಂಪು ಆಕೆಯ ಮೇಲೆ ದೌರ್ಜನ್ಯ ಎಸಗಿ, ಎಳೆದಾಡಿ ಕಿರುಕುಳ ನೀಡಿದೆ.
ಇದನ್ನೂ ಓದಿ: ಮೋದಿ ಉಪನಾಮ ಟೀಕೆ ಪ್ರಕರಣ| ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಕುತ್ತು ತರಲಿದೆಯೇ ಜೈಲು ಶಿಕ್ಷೆ
ಈ ಕುರಿತು ‘ಎಕ್ಸ್’ (X) ವೇದಿಕೆಯಲ್ಲಿ ಸರಣಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಜಮುಯಿಯ ವಿಡಿಯೋ ಅತ್ಯಂತ ಕಳವಳಕಾರಿಯಾಗಿದೆ. ಬಾಲಕಿಯು ಎಷ್ಟೇ ಬೇಡಿಕೊಂಡರೂ ಆಕೆಯ ಮೇಲೆ ದೌರ್ಜನ್ಯ ಎಸಗಲಾಗಿದೆ. ಈ ರೀತಿಯಾಗಿ ವರ್ತಿಸಲು ಈ ಪುಂಡರಿಗೆ ಹಕ್ಕು ನೀಡಿದವರು ಯಾರು” ಎಂದು ಪ್ರಶ್ನಿಸಿದ್ದಾರೆ.
“ಇದು ನಮ್ಮ ‘ಸಂಸ್ಕೃತಿ’ಯಲ್ಲ, ಇದು ಪಿತೃಪ್ರಭುತ್ವದ ವಿಕೃತಿ. ಮಹಿಳೆಯರ ದೇಹ, ಅವರ ಸಂಚಾರ ಮತ್ತು ನಿರ್ಧಾರಗಳನ್ನು ನಿಯಂತ್ರಿಸುವ ಹಕ್ಕು ಪುರುಷರಿಗಿದೆ ಎನ್ನುವ ಮನಸ್ಥಿತಿಯೇ ಇದಕ್ಕೆ ಕಾರಣ. ಈ ಘಟನೆ ಸೆಪ್ಟೆಂಬರ್ 19ರಂದು ನಡೆದಿದ್ದರೂ, ಆರೋಪಿಗಳು ಇನ್ನೂ ಏಕಾಗಿ ಜೈಲು ಪಾಲಾಗಿಲ್ಲ? ರಾಜ್ಯದ ರಸ್ತೆಗಳಲ್ಲಿ ಸಂಜೆ 7 ಗಂಟೆಯ ನಂತರ ಹೆಣ್ಣುಮಕ್ಕಳು ಸುರಕ್ಷಿತವಾಗಿರಲು ಸಾಧ್ಯವಿಲ್ಲವೇ ಎನ್ನುವುದಕ್ಕೆ ಬಿಹಾರ ಸರ್ಕಾರ ಉತ್ತರಿಸಬೇಕು” ಎಂದು ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದ ವಿರುದ್ಧ ಹರಿದಾಯ್ದಿದ್ದಾರೆ.
ವೈರಲ್ ವಿಡಿಯೋದಲ್ಲಿ ಕಂಡುಬರುವ ಪ್ರತಿಯೊಬ್ಬ ವ್ಯಕ್ತಿಯನ್ನು ತಕ್ಷಣವೇ ಗುರುತಿಸಿ, ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಿ ಶೀಘ್ರವೇ ಶಿಕ್ಷೆ ವಿಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಮುಯಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ವೀಡಿಯೋ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಕೆಲವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




