ಬಿಹಾರದ ಜಮುಯಿಯಲ್ಲಿ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳನ್ನು ಯುವಕರ ಗುಂಪೊಂದು ನಡುರಸ್ತೆಯಲ್ಲಿ ತಡೆದು ನಿಲ್ಲಿಸಿ, ಅನುಚಿತವಾಗಿ ವರ್ತಿಸಿ, ಎಳೆದಾಡಿ ಕಿರುಕುಳ ನೀಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ದೌರ್ಜನ್ಯದ ಎರಡು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಜಮುಯಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಘಟನೆಯು ಸೆಪ್ಟೆಂಬರ್ 19ರ ಸಂಜೆ ಜಮುಯಿಯ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಟ್ಯೂಷನ್ ಮುಗಿಸಿಕೊಂಡು ಜಮುಯಿ ಪಟ್ಟಣದ ನಿವಾಸಿಗಳಾಗಿರುವ 10ನೇ ತರಗತಿಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ (ಇಬ್ಬರೂ ಅಪ್ರಾಪ್ತರು) ಸ್ಕೂಟರ್ನಲ್ಲಿ ‘ಮಾರ್ವಾ ಪಹಾಡ್’ ಎಂಬ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿಂದ ಹಿಂದಿರುಗುವಾಗ ಯುವಕರ ಗುಂಪೊಂದು ಇವರನ್ನು ಅಡ್ಡಗಟ್ಟಿದೆ.
ವಿದ್ಯಾರ್ಥಿನಿಯ ಜೊತೆಯಲ್ಲಿದ್ದ ಬಾಲಕನನ್ನು ಬಲವಂತವಾಗಿ ಬೇರೆಡೆಗೆ ಕಳುಹಿಸಿದ ದುಷ್ಕರ್ಮಿಗಳು, ವಿದ್ಯಾರ್ಥಿನಿಯನ್ನು ಸುತ್ತುವರಿದು ಆಕೆಯ ಹೆಸರು ಮತ್ತು ವಿಳಾಸ ಕೇಳಿ ಬೆದರಿಸಿದ್ದಾರೆ. ಈ ವೇಳೆ ಯುವಕರು ಆಕೆಯನ್ನು ರಸ್ತೆಯಲ್ಲಿ ಎಳೆದಾಡುತ್ತಿರುವುದು ಮತ್ತು ಅನುಚಿತವಾಗಿ ಸ್ಪರ್ಶಿಸಿರುವುದು ವೈರಲ್ ಆಗಿರುವ ವಿಡಿಯೊದಲ್ಲಿ ಸೆರೆಯಾಗಿದೆ. ಕೆಲವರು ಆಕೆಯನ್ನು ರಕ್ಷಿಸಲು ಯತ್ನಿಸಿದರೂ, ಪುಂಡರು ಮತ್ತೆ ಕಿರುಕುಳ ಮುಂದುವರಿಸಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಈ ದೌರ್ಜನ್ಯ ನಡೆದಿದೆ ಎನ್ನಲಾಗಿದ್ದು, 1 ನಿಮಿಷ 2 ಸೆಕೆಂಡು ಹಾಗೂ 35 ಸೆಕೆಂಡುಗಳ ಎರಡು ಪ್ರತ್ಯೇಕ ವಿಡಿಯೊಗಳು ಹರಿದಾಡುತ್ತಿವೆ.
ಘಟನೆಯಲ್ಲಿ ಸಂತ್ರಸ್ತರು ಅಪ್ರಾಪ್ತರಾಗಿದ್ದರಿಂದ ಮತ್ತು ಭಯದಿಂದಾಗಿ ಅವರ ಕುಟುಂಬಸ್ಥರು ಆರಂಭದಲ್ಲಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ವಿಡಿಯೊಗಳು ವೈರಲ್ ಆದ ನಂತರ ಎಚ್ಚೆತ್ತ ಜಮುಯಿ ಪೊಲೀಸರು ತಕ್ಷಣವೇ ಸಂತ್ರಸ್ತರನ್ನು ಪತ್ತೆ ಹಚ್ಚಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಮುಯಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಶ್ವಜಿತ್ ದಯಾಳ್, “ವೈರಲ್ ವಿಡಿಯೊ ಮತ್ತು ಅಪ್ರಾಪ್ತರಿಗೆ ನೀಡಲಾದ ಕಿರುಕುಳದ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಪ್ರಸ್ತುತ ಎಫ್ಐಆರ್ನಲ್ಲಿ ಯಾರೊಬ್ಬರ ಹೆಸರನ್ನೂ ಉಲ್ಲೇಖಿಸಿಲ್ಲ. ಬದಲಾಗಿ ವಿಡಿಯೊ ಮತ್ತು ಲಭ್ಯವಿರುವ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ವಿಡಿಯೊಗಳ ನೈಜತೆ ಹಾಗೂ ಘಟನೆ ನಡೆದ ಸ್ಥಳದ ಪರಿಶೀಲನೆ ನಡೆಸಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಮುಖ್ಯ ಆರೋಪಿಯನ್ನು ಬಂಧಿಸಿದ ಬಳಿಕ ಇತರರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುವುದು ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಎಲ್ಲಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.




