“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ ಮಾತನಾಡುತ್ತಾನೋ, ಅಲ್ಲಿ ಅಂಧಭಕ್ತ ದ್ವೇಷವನ್ನು ಹರಡುತ್ತಾನೆ..."
‘ವ್ಯವಸ್ಥೆ ವರ್ಸಸ್ ವಿದ್ಯಾರ್ಥಿ’ (Sytem Versus Students). ಇಲ್ಲಿ ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಆದರೆ, ವ್ಯವಸ್ಥೆಯು ಪ್ರಶ್ನಿಸುವವರನ್ನು ಬಯಸುವುದಿಲ್ಲ”- ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇಂದೋರ್‌ನಲ್ಲಿ ನಡೆಸಿದ ‘ಛಾತ್ರೋಂ ಕೀ ಗೂಂಜ್’ ಕಾರ್ಯಕ್ರಮದಲ್ಲಿ ಕೇಂದ್ರೀಕರಿಸಿದ ವಿಷಯ.
“ಈ ವ್ಯವಸ್ಥೆಯೇ ವಿದ್ಯಾರ್ಥಿಗಳ ಸ್ಥಿತಿಗೆ ಕಾರಣ. ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು ವ್ಯವಸ್ಥೆ ಬಯಸುವುದಿಲ್ಲ” ಎಂಬುದನ್ನು ಎಳೆಎಳೆಯಾಗಿ ಪ್ರತಿಪಾದಿಸುವ ರಾಹುಲ್, ಕಿಕ್ಕಿರಿದು ತುಂಬಿದ್ದ ಯುವಜನರ ಮನಸೂರೆಗೊಳ್ಳುತ್ತಾರೆ. ಕಾರ್ಯಕ್ರಮ ಮುಗಿಯುವವರೆಗೂ ‘ರಾಹುಲ್… ರಾಹುಲ್’ ಎಂಬ ಘೋಷಣೆಗಳು ಮೊಳಗುತ್ತವೆ.
ರಾಜಸ್ಥಾನದ ಕೋಟ, ಉತ್ತರಖಾಂಡ್‌ನ ಡೆಹ್ರಾಡೂನ್, ಉತ್ತರಪ್ರದೇಶದ ಪ್ರಯಾಗ್ ರಾಜ್, ಮಹಾರಾಷ್ಟ್ರದ ಪುಣೆ ನಂತರ ಮಧ್ಯಪ್ರದೇಶದ ಇಂದೋರ್‌ನಲ್ಲಿ ಆಯೋಜನೆಗೊಂಡ ‘ಛಾತ್ರೋಂ ಕೀ ಗೂಂಜ್’ (ವಿದ್ಯಾರ್ಥಿಗಳ ಕೂಗು) ಭಾರೀ ಯಶಸ್ಸನ್ನೇ ಕಂಡಿದೆ.

ಕಾರ್ಯಕ್ರಮದ ದೃಶ್ಯಾವಳಿಗಳು ಹೆಚ್ಚುತ್ತಿರುವ ರಾಹುಲ್ ಮೇನಿಯಾವನ್ನು ಸೂಚಿಸುತ್ತಿವೆ. ಎತ್ತ ನೋಡಿದರೂ ವಿದ್ಯಾರ್ಥಿಗಳೇ ತುಂಬಿದ್ದರು. ವೇದಿಕೆಯ ಸುತ್ತಲಿನ ರಸ್ತೆಗಳು ಜನದಟ್ಟಣೆಯಿಂದ ಕೂಡಿದ್ದವು. ರಾಹುಲ್ ಗಾಂಧಿಯವರಿಗೆ ಅಭೂತಪೂರ್ವ ಸ್ವಾಗತವನ್ನು ಇಂದೋರ್ ನೀಡಿತು. ರಾಹುಲ್ ಆಗಮಿಸುವಷ್ಟರಲ್ಲಿ, ವೇದಿಕೆಯು ಕಿಕ್ಕಿರಿದು ತುಂಬಿತ್ತು. ರಾಹುಲ್ ಅವರನ್ನು ನೋಡುವುದಕ್ಕಾಗಿ ಅನೇಕ ಜನರು ಬ್ಯಾರಿಕೇಡ್‌ಗಳನ್ನು ಹತ್ತಿ ಕುಳಿತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ವೇದಿಕೆಯ ಸುತ್ತಲೂ ಕಿಲೋಮೀಟರ್‌ಗಳವರೆಗೆ ಜನಸಂದಣಿ ತುಂಬಿತ್ತು.
ವ್ಯವಸ್ಥೆ ವರ್ಸಸ್ ವಿದ್ಯಾರ್ಥಿ
ಪ್ರಶ್ನೆಪತ್ರಿಕೆ ಸೋರಿಕೆ, ಅಪಾರದರ್ಶಕತೆ, ನೌಕರಿಗಳ ಭರ್ತಿಯಲ್ಲಿ ವಿಳಂಬ, ಮೀಸಲಾತಿ ಗೊಂದಲ ಹಾಗೂ 27% ಒಬಿಸಿ ಮೀಸಲಾತಿಯನ್ನು ಬಿಜೆಪಿ ಸರ್ಕಾರ 14%ಗೆ ಇಳಿಸಿರುವುದು- ಮೊದಲಾದ ಸಂಕಷ್ಟಗಳನ್ನು ವಿದ್ಯಾರ್ಥಿಗಳು ಹೇಳಿಕೊಳ್ಳುತ್ತಿದ್ದಂತೆ, ಈ ಪರಿಸ್ಥಿತಿಗೆ ‘ವ್ಯವಸ್ಥೆ’ ಕಾರಣ ಎಂಬುದನ್ನು ರಾಹುಲ್ ಪ್ರತಿಪಾದಿಸುತ್ತಾರೆ.
ಇದನ್ನೂ ಓದಿರಿ: ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ – ಯುಪಿಯಲ್ಲಿ ಸಿನಿಮಾ ಆಗುವುದೇ?
“ಇದು ವ್ಯವಸ್ಥೆ (ಸಿಸ್ಟಂ). ದೇಶದ ಮೇಲೆ ವ್ಯವಸ್ಥೆ ಹಿಡಿತ ಸಾಧಿಸಿದೆ. ವ್ಯವಸ್ಥೆಯಲ್ಲಿ ವಿವಿಧ ಹಂತಗಳಿವೆ. ಉನ್ನತ ಮಟ್ಟದಲ್ಲಿ ಆರು ಜನ ಕುಳಿತುಕೊಂಡು ವ್ಯವಸ್ಥೆಯನ್ನು ನಡೆಸುತ್ತಾರೆ. ಅವರೆಂದರೆ- ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತಾ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್, ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಮತ್ತು ಇನ್ನಿಬ್ಬರು ಬಿಲೇನಿಯರ್‌ಗಳಾದ ಅದಾನಿ ಮತ್ತು ಅಂಬಾನಿ” ಎಂದು ಉಲ್ಲೇಖಿಸಿದ ರಾಹುಲ್ ಗಾಂಧಿಯವರು, “ನಮ್ಮೆಲ್ಲರ ಫೋನ್ ಗಳನ್ನು ಟ್ಯಾಪ್ ಮಾಡಲಾಗುತ್ತಿದೆ” ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ವಿವರಿಸುವ ರಾಹುಲ್, “ದನಿ ಅಡಗಿಸುವ, ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುವ, ಮೊಳೆ ಇರುವ ಲಾಠಿಗಳಿಂದ ಹೊಡೆಯುವ, ಪೆಲೆಟ್ ಗನ್ ಬಳಸಿ ಗಾಯಗೊಳಿಸುವ ಕೆಲಸವನ್ನು ಅಮಿತ್ ಶಾ ಅವರು ನಡೆಸುತ್ತಾರೆ. ‘ಹಿಂದೂಸ್ಥಾನವನ್ನು ನಿಯಂತ್ರಿಸಬೇಕಾದರೆ ಕೇವಲ 500 ಜನರನ್ನು ನಿಯಂತ್ರಿಸಿದರೆ ಸಾಕು’ ಎಂದು ಔಪಚಾರಿಕ ಮಾತುಗಳಲ್ಲಿ ಅಜಿತ್ ದೋವೆಲ್ ಹೇಳುತ್ತಾರೆ. ದೂರವಾಣಿ ಕರೆಗಳು, ವಾಟ್ಸಾಪ್, ಫೇಸ್‌ಬುಕ್ ಸಂವಹನಗಳ ಮೇಲೆ ಹಿಡಿತ ಸಾಧಿಸಿಕೊಂಡು ದೋವೆಲ್ ಕುಳಿತಿದ್ದಾರೆ. ಇವರೇ ಫೋನ್ ಟ್ಯಾಪಿಂಗ್ ಮಾಡಿಸುತ್ತಾರೆ ಮತ್ತು ಅಮಿತ್ ಶಾ, ನರೇಂದ್ರ ಮೋದಿ ಅವರಿಗೆ ಮಾಹಿತಿಯನ್ನು ನೀಡುತ್ತಾರೆ. ನಿಮ್ಮ ಫೋನ್‌ಗಳ ಒಳಗೆ ದೋವೆಲ್ ಕುಳಿತ್ತಿದ್ದಾರೆ” ಎಂದು ಗಂಭೀರ ಸಂಗತಿಯನ್ನು ತಿಳಿಸುತ್ತಾರೆ.

“ಮಧ್ಯದಲ್ಲಿ ಮೋಹನ್ ಭಾಗವತ್ ಜಿ ಇದ್ದಾರೆ. ಇವರು ವಿಚಾರಧಾರೆಯ ಬಗ್ಗೆ, ಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ. ಇವರ ಸಂಘಟನೆಗೆ ಶಾಲೆಗಳನ್ನು ನಡೆಸಲು, ಕಾಲೇಜುಗಳನ್ನು ನಡೆಸಲು, ಸಂಸ್ಥೆಗಳನ್ನು ನಡೆಸಲು ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ. ಒಂದು ಕಡೆ ಅದಾನಿ ಹಾಗೂ ಮತ್ತೊಂದು ಕಡೆ ಅಂಬಾನಿ ಇದ್ದಾರೆ. ಅದಾನಿಯವರು ಸಂಪೂರ್ಣ ಹಣಕಾಸು ವ್ಯವಸ್ಥೆಯನ್ನು ನಿಭಾಯಿಸುತ್ತಾರೆ. ಸಂಪೂರ್ಣ ಹಣವು ಗುತ್ತಿಗೆಗಳ ಮೂಲಕ ಗಳಿಸಲ್ಪಡುತ್ತದೆ. ನಿಮ್ಮ ಶಾಲೆ, ವಿಶ್ವವಿದ್ಯಾಲಯಗಳ ಗುತ್ತಿಗೆಯಿಂದ ಬರುವ ಹಣವೆಲ್ಲವೂ ತಿರುಗಿ ಬಿಜೆಪಿಗೆ ನೀಡಲ್ಪಡುತ್ತದೆ. ನರೇಂದ್ರ ಮೋದಿಯವರ ಮಾರ್ಕೆಟಿಂಗ್‌ಗಾಗಿ, ವ್ಯವಸ್ಥೆಯನ್ನು ನಡೆಸುವುದಕ್ಕಾಗಿ, ಆ ಹಂತದ ಕೆಳಗೆ ವಿವಿಧ ವ್ಯಕ್ತಿಗಳಿದ್ದಾರೆ. ಪ್ರತಿ ಸಂಸ್ಥೆಯನ್ನೂ ಆಕ್ರಮಿಸಿಕೊಂಡಿದ್ದಾರೆ” ಎನ್ನುವ ರಾಹುಲ್, “ಹಿಂದೂಸ್ಥಾನದಲ್ಲಿ ಎಷ್ಟೋ ಜನ ಕ್ರಿಕೆಟಿಗರು ಇದ್ದಾರೆ. ತೆಂಡೂಲ್ಕರ್ ಇದ್ದಾರೆ, ಕಪಿಲ್ ದೇವ್ ಇದ್ದಾರೆ- ಆದರೆ ವ್ಯವಸ್ಥೆಯು ಅಮಿತ್ ಶಾರ ಮಗನಿಗೆ ಕ್ರಿಕೆಟ್‌ನ ಸಂಪೂರ್ಣ ಗುತ್ತಿಗೆಯನ್ನು ನೀಡಿದೆ. ಆದರೆ ಇಲ್ಲಿ ಮೆರಿಟೋಕ್ರಸಿ (ಅರ್ಹತೆಗೆ ಮನ್ನಣೆ) ಕುರಿತು ಮಾತನಾಡಲಾಗುತ್ತದೆ” ಎಂದು ಕುಟುಕುತ್ತಾರೆ.
“ಈಗ ಒಂದು ಆಸಕ್ತಿದಾಯಕ ವಿಷಯವನ್ನು ಹೇಳುತ್ತೇನೆ—ಸಿಸ್ಟಮ್‌ಗೆ ವಿದ್ಯಾರ್ಥಿಗಳಿಂದ ಅಪಾಯವಿದೆ. ಯಾಕೆ ಅಪಾಯವಿದೆ? ಏಕೆಂದರೆ ವಿದ್ಯಾರ್ಥಿ ಪ್ರಶ್ನೆ ಕೇಳುತ್ತಾನೆ. ಅಮಿತ್ ಶಾ ಅವರ ಮಗ ಕ್ರಿಕೆಟ್ ಅಸೋಸಿಯೇಷನ್‌ನ ಚೇರ್ಮನ್ ಹೇಗೆ ಆದರು ಎಂದು ವಿದ್ಯಾರ್ಥಿಗಳು ಕೇಳುತ್ತಾರೆ. ಹಿಂದೂಸ್ತಾನ್‌ನ ಸಂಪೂರ್ಣ ವ್ಯವಹಾರವನ್ನು ಇಬ್ಬರು ವ್ಯಕ್ತಿಗಳು ಹೇಗೆ ವಶಪಡಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿ ಕೇಳುತ್ತಾನೆ. ನ್ಯಾಯಾಂಗ ಮತ್ತು ಇತರ ಸಂಸ್ಥೆಗಳು ತಮ್ಮ ಕೆಲಸವನ್ನು ಯಾಕೆ ಮಾಡುವುದಿಲ್ಲ ಎಂದು ವಿದ್ಯಾರ್ಥಿ ಕೇಳುತ್ತಾನೆ. ಎಲೆಕ್ಷನ್ ಕಮಿಷನ್ ತನ್ನ ಕೆಲಸವನ್ನು ಯಾಕೆ ಮಾಡುವುದಿಲ್ಲ ಎಂದು ವಿದ್ಯಾರ್ಥಿ ಕೇಳುತ್ತಾನೆ. ಅದಕ್ಕಾಗಿಯೇ ಸಿಸ್ಟಮ್ ವಿದ್ಯಾರ್ಥಿಯನ್ನು ಬಯಸುವುದಿಲ್ಲ, ಸಿಸ್ಟಮ್ ಅಂಧಭಕ್ತನನ್ನು ಬಯಸುತ್ತದೆ” ಎಂದು ವಿಶ್ಲೇಷಿಸುತ್ತಾರೆ.
ವಿದ್ಯಾರ್ಥಿ ವರ್ಸಸ್ ಅಂಧ ಭಕ್ತ
ರಾಹುಲ್ ಗಾಂಧಿಯವರು ‘ವಿದ್ಯಾರ್ಥಿ ವರ್ಸಸ್ ಅಂಧಭಕ್ತ’ ಎಂಬ ನಿರೂಪಣೆಯನ್ನು ವಿನೂತನವಾಗಿ ಮಂಡಿಸಿದ್ದಾರೆ. ವಿದ್ಯಾರ್ಥಿಗಳ ಗುಣಕ್ಕೂ ಅಂಧಭಕ್ತರ ಗುಣಕ್ಕೂ ಇರುವ ವ್ಯತ್ಯಾಸಗಳನ್ನು ಹೇಳುತ್ತಾ, ಮೋದಿ ಬೆಂಬಲಿಗರನ್ನು ಕುಟುಕುತ್ತಾರೆ. “ಮೋದಿಯವರು ವಿಷ್ಣುವಿನ ಅವತಾರ, 2014ರ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಮೋದಿ ಇಲ್ಲದಿದ್ದರೆ ಭಾರತವು ಚೀನಾ ಪಾಲಾಗುತ್ತಿತ್ತು” ಎನ್ನುವಂತಹ ಅಂಧಭಕ್ತರ ವಿಡಿಯೊ ತುಣುಕುಗಳನ್ನು ಪ್ರದರ್ಶಿಸುವ ರಾಹುಲ್, ಅಂಧಭಕ್ತರು ಮತ್ತು ವಿದ್ಯಾರ್ಥಿಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿ ಮಾಡುತ್ತಾರೆ.

“ವಿದ್ಯಾರ್ಥಿ ಎಂದರೆ ಯಾರು? ವಿದ್ಯಾರ್ಥಿ ಎಂದರೆ- ವಿದ್ಯಾರ್ಥಿ ಭಾರತದ ಭವಿಷ್ಯ. ವಿದ್ಯಾರ್ಥಿಯಿಲ್ಲದೆ ಯಾವುದೇ ದೇಶ ಬಲವಾಗಿರಲು ಸಾಧ್ಯವಿಲ್ಲ. ವಿದ್ಯಾರ್ಥಿಯ ಅತಿ ದೊಡ್ಡ ಗುಣವೆಂದರೆ ಕುತೂಹಲ, ಪ್ರಶ್ನೆಗಳನ್ನು ಕೇಳುವುದು. ವಿದ್ಯಾರ್ಥಿಗಳು ಸ್ವಾಭಾವಿಕವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ, ಕುತೂಹಲಿಗಳಾಗಿರುತ್ತಾರೆ, ವಿವಿಧ ವಿಷಯಗಳ ಬಗ್ಗೆ ಪ್ರಶ್ನಿಸುತ್ತಾರೆ. ವಿದ್ಯಾರ್ಥಿಗಳ ಎರಡನೆಯ ಗುಣವೆಂದರೆ ಪ್ರೀತಿ/ಸ್ನೇಹ, ವಿದ್ಯಾರ್ಥಿಗಳು ದ್ವೇಷಿಸುವುದಿಲ್ಲ. ವಿದ್ಯಾರ್ಥಿಗಳು ಪರಸ್ಪರ ಪ್ರೀತಿಯಿಂದ ವರ್ತಿಸುತ್ತಾರೆ, ಒಬ್ಬರನ್ನೊಬ್ಬರು ಗೌರವಿಸುತ್ತಾರೆ. ಮೂರನೆಯ ಗುಣವೆಂದರೆ ವಿನಮ್ರತೆ; ಯಾರು ಪ್ರಶ್ನೆ ಕೇಳುತ್ತಾರೋ, ಪ್ರಶ್ನೆಗೆ ಉತ್ತರ ಹುಡುಕುತ್ತಾರೋ, ಅವರಲ್ಲಿ ಅಹಂಕಾರವಿರಲು ಸಾಧ್ಯವೇ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ವಿನಮ್ರರಾಗಿರುತ್ತಾರೆ, ನಿರ್ಭೀತರಾಗಿರುತ್ತಾರೆ, ಸಹಿಷ್ಣುಗಳಾಗಿರುತ್ತಾರೆ, ಇತರರ ವಿಚಾರಧಾರೆಗಳನ್ನು, ಇತರರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ; ಅವರು ಜಗಳವಾಡುವುದಿಲ್ಲ, ಬೆದರಿಸುವುದಿಲ್ಲ, ಭಯಪಡಿಸುವುದಿಲ್ಲ. ಕೊನೆಯ ಹಾಗೂ ಅತ್ಯಂತ ಪ್ರಮುಖವಾದ ಗುಣವೆಂದರೆ, ವಿದ್ಯಾರ್ಥಿಗಳು ಪ್ರಾಮಾಣಿಕರಾಗಿರುತ್ತಾರೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ. ಈ ಗುಣಗಳನ್ನು ನಾವು ರಕ್ಷಿಸಬೇಕು, ಏಕೆಂದರೆ ಈ ಗುಣಗಳಿಂದಲೇ ದೇಶವು ನಿರ್ಮಾಣವಾಗುತ್ತದೆ. ಆದರೆ ಇಂದು ನಾವು ವಿದ್ಯಾರ್ಥಿಗಳೊಂದಿಗೆ ಮಾತನಾಡಿದರೆ, ವಿದ್ಯಾರ್ಥಿಗಳು ಖುಷಿಯಾಗಿಲ್ಲ, ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ, ವಿದ್ಯಾರ್ಥಿಗಳಿಗೆ ಭವಿಷ್ಯ ಕಾಣಿಸುತ್ತಿಲ್ಲ” ಎಂದು ರಾಹುಲ್ ವಿಷಾದಿಸುತ್ತಾರೆ.
“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ ಮಾತನಾಡುತ್ತಾನೋ, ಅಲ್ಲಿ ಅಂಧಭಕ್ತ ದ್ವೇಷವನ್ನು ಹರಡುತ್ತಾನೆ, ದ್ವೇಷದಿಂದ ಮಾತನಾಡುತ್ತಾನೆ. ವಿದ್ಯಾರ್ಥಿ ಎಲ್ಲಿ ವಿನಮ್ರನಾಗಿರುತ್ತಾನೋ, ವಿನಯಶೀಲನಾಗಿರುತ್ತಾನೋ, ಇತರರ ಮಾತುಗಳನ್ನು ಕೇಳುತ್ತಾನೋ, ಅಲ್ಲಿ ಅಂಧಭಕ್ತ ಅಹಂಕಾರದಿಂದ ತುಂಬಿರುತ್ತಾನೆ, ಅಹಂಕಾರಿಯಾಗಿರುತ್ತಾನೆ. ವಿದ್ಯಾರ್ಥಿ ಎಲ್ಲಿ ಹೆದರುವುದಿಲ್ಲವೋ, ನಿರ್ಭೀತನಾಗಿರುತ್ತಾನೋ, ಅಲ್ಲಿ ಅಂಧಭಕ್ತ ಹೆದರುಪುಕ್ಕಲನಾಗಿ, ಹೇಡಿಯಾಗಿರುತ್ತಾನೆ. ವಿದ್ಯಾರ್ಥಿಯು ಮಹಿಳೆಯರನ್ನು ಎಲ್ಲಿ ಗೌರವಿಸುತ್ತಾನೋ, ಅಲ್ಲಿ ಅಂಧಭಕ್ತ ಪಿತೃಪ್ರಭುತ್ವದ ಮನಸ್ಥಿತಿಯವನಾಗಿರುತ್ತಾನೆ, ಮಹಿಳೆಯರ ಮೇಲೆ ಆಕ್ರಮಣ ಮಾಡುತ್ತಾನೆ, ಮಹಿಳೆಯರನ್ನು ಅವಮಾನಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರಾಮಾಣಿಕನಾಗಿರುತ್ತಾನೋ, ಅಲ್ಲಿ ಅಂಧಭಕ್ತ ಅಪ್ರಾಮಾಣಿಕನಾಗಿರುತ್ತಾನೆ, ಸುಳ್ಳುಗಾರನಾಗಿರುತ್ತಾನೆ. ವಿದ್ಯಾರ್ಥಿ ಪ್ರಶ್ನೆ ಕೇಳುವುದನ್ನು ಸಿಸ್ಟಮ್ ಬಯಸುವುದಿಲ್ಲ, ಅದಕ್ಕಾಗಿಯೇ ಸಿಸ್ಟಮ್ ಅಂಧಭಕ್ತನನ್ನು ಸಿದ್ಧಪಡಿಸುತ್ತದೆ, ಅಂಧಭಕ್ತನನ್ನು ಪ್ರೋತ್ಸಾಹಿಸುತ್ತದೆ, ಅಂಧಭಕ್ತನನ್ನು ದೇಶಾದ್ಯಂತ ಹರಡುತ್ತದೆ” ಎಂದು ರಾಹುಲ್ ವ್ಯಾಖ್ಯಾನಿಸುತ್ತಾರೆ.
ಇದನ್ನೂ ಓದಿರಿ: ಚಾಮರಾಜ ಕ್ಷೇತ್ರದ ಮೇಲೆ ‘ನಿರುದ್ಯೋಗಿ’ ಪ್ರತಾಪ್ ಸಿಂಹ ಕಣ್ಣು; ಹಿಂದುತ್ವವೇ ಅಸ್ತ್ರ
“ಅಂಧಭಕ್ತ ಹೇಳುತ್ತಾನೆ- ಹಿಂದೂಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಅಂಧಭಕ್ತ ಹೇಳುತ್ತಾನೆ- ಅಭಿವೃದ್ಧಿ ಬೇಡ, ಮೋದಿಜಿ ವಿಷ್ಣುವಿನ ಅವತಾರ. ಆದರೆ ಅಂಧಭಕ್ತ, ಎಂದಿಗೂ ಪ್ರಶ್ನೆ ಕೇಳುವುದಿಲ್ಲ. ನಮ್ಮ ಶಾಲೆಗಳು ಮತ್ತು ಕಾಲೇಜುಗಳ ಸ್ಥಿತಿ ಏಕೆ ಹೀಗಾಯಿತು ಎಂದು ಅಂಧಭಕ್ತ ಎಂದಿಗೂ ಪ್ರಶ್ನೆ ಮಾಡುವುದಿಲ್ಲ? ನಮ್ಮ ಮೂಲಸೌಕರ್ಯ ಏಕೆ ಮುರಿದುಬಿದ್ದಿದೆ? ನಮ್ಮ ಪೇಪರ್ ಲೀಕ್ ಏಕೆ ಆಗುತ್ತಿವೆ ಎಂದು ಕೇಳುವುದಿಲ್ಲ. ಆದರೆ ವಿದ್ಯಾರ್ಥಿ ಈ ಧ್ವನಿಯನ್ನು ಎತ್ತುತ್ತಾನೆ” ಎಂದು ಪ್ರತಿಪಾದಿಸುತ್ತಾರೆ.
ಯುವಜನರ ಮಾತು
ಕೇವಲ ಏಕಮುಖ ಭಾಷಣ ಮಾಡದೆ, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವ ಕಾರಣದಿಂದ ‘ಛಾತ್ರೋಂ ಕೀ ಗೂಂಜ್’ ಸರಣಿ ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಇಂದೋರ್‌ನ ಕಾರ್ಯಕ್ರಮದಲ್ಲಿ ಮಾಖನ್‌ಲಾಲ್ ಚತುರ್ವೇದಿ ವಿಶ್ವವಿದ್ಯಾಲಯದ ತನ್ಮಯ್ ಎಂಬ ವಿದ್ಯಾರ್ಥಿ ಮಾತನಾಡಿ, “ರಾಹುಲ್ ಜೀ, ನೀವು ಈಗ ಹೇಳಿದಂತೆ ಸರ್ಕಾರ ಕೇವಲ ಅಂಧಭಕ್ತರನ್ನು ಮಾತ್ರ ಇಷ್ಟಪಡುತ್ತದೆ, ಇದು ಸಂಪೂರ್ಣವಾಗಿ ಸತ್ಯವಾಗಿದೆ, ಏಕೆಂದರೆ ನಾವು ಆ ವಿಶ್ವವಿದ್ಯಾಲಯದಲ್ಲಿ ಓದಲು ಹೋದಾಗ, ನಮ್ಮೊಂದಿಗೆ ತಾರತಮ್ಯ ಮಾಡಲಾಗುತ್ತದೆ, ಯಾಕೆಂದರೆ- ನಾವು ಹೇಡಿಗಳಲ್ಲ, ಯಾಕೆಂದರೆ ನಾವು ಅಹಂಕಾರಿಗಳಲ್ಲ, ದ್ವೇಷಿಗಳಲ್ಲ ಮತ್ತು ವಾಟ್ಸಾಪ್ ವಿಶ್ವವಿದ್ಯಾಲಯದಲ್ಲಿ ಓದಿದವರಲ್ಲ. ಅವರಿಗೆ ಅಂಧಭಕ್ತರು ಇಷ್ಟವಾಗುತ್ತಾರೆ. ನಾನು ಅಲ್ಲಿ 3 ವರ್ಷ ಓದಿದ ನಂತರ ಮಾಸ್ಟರ್ಸ್‌ಗೆ ಅರ್ಜಿ ಸಲ್ಲಿಸಿದಾಗ, ನನ್ನದು ಗೋಲ್ಡ್ ಮೆಡಲ್ ರೆಕಾರ್ಡ್ ಇದ್ದರೂ ನನಗೆ ಮಾಸ್ಟರ್ಸ್‌ನಲ್ಲಿ ಪ್ರವೇಶ ನೀಡಲಿಲ್ಲ. ಯಾಕೆಂದರೆ- ನಾನು ಅಂಧಭಕ್ತನಲ್ಲ! ಸಂದರ್ಶನದ ಸ್ಕೋರ್‌ಶೀಟ್‌ಗಾಗಿ ನಾನು ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದೆ. “ನಮ್ಮ ಬಳಿ ಯಾವುದೇ ಸ್ಕೋರ್‌ಶೀಟ್ ನಿರ್ವಹಿಸಿಲ್ಲ” ಎಂದು ಆಡಳಿತ ವರ್ಗ ಹೇಳಿತು. ಇದು ಬಹಳ ಹಾಸ್ಯಾಸ್ಪದ ವಿಷಯವಾಗಿದೆ, ಯಾಕೆಂದರೆ- ಅಂಧಭಕ್ತನೇ ಅಲ್ಲಿನ ವಿ ಸಿ (ವೈಸ್ ಚಾನ್ಸಲರ್). ಅವರಿಗೆ ಅಂಧಭಕ್ತ ವಿದ್ಯಾರ್ಥಿಗಳೇ ಬೇಕು” ಎಂದು ತಾವು ಎದುರಿಸಿದ ತಾರತಮ್ಯವನ್ನು ಹಂಚಿಕೊಂಡರು.

ಅದಕ್ಕೆ ರಾಹುಲ್, “ಒಂದು ಆಸಕ್ತಿದಾಯಕ ವಿಷಯವಿದೆ, ಈ ಸಿಸ್ಟಮ್‌ನಲ್ಲಿರುವ ಜನರು ದೇಶದಲ್ಲಿ ಅಂಧಭಕ್ತರನ್ನು ಬಯಸುತ್ತಾರೆ, ಆದರೆ ತಮ್ಮ ಮಕ್ಕಳನ್ನು ಎಂದಿಗೂ ಅಂಧಭಕ್ತರನ್ನಾಗಿ ಮಾಡುವುದಿಲ್ಲ. ಇದು ಸಂಪೂರ್ಣವಾಗಿ ಸತ್ಯ. ಇವರ ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಓದುತ್ತಾರೆ. ಇವರು ದೇಶದ ಯುವಕರನ್ನು ಅಂಧಭಕ್ತರನ್ನಾಗಿ ಮಾಡಲು ಬಯಸುತ್ತಾರೆ, ಆದರೆ ತಮ್ಮ ಮಕ್ಕಳನ್ನು ಓದಲು ಹೊರದೇಶಕ್ಕೆ ಕಳುಹಿಸುತ್ತಾರೆ. ಎಲ್ಲಾ ವ್ಯವಹಾರಗಳ ಮೇಲೂ ಅವರನ್ನು ಕೂರಿಸುತ್ತಾರೆ. ಸಂಪೂರ್ಣವಾಗಿ ಸತ್ಯ. ಸರಿ ತಾನೇ?” ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಆ ವಿದ್ಯಾರ್ಥಿ, “ರಾಹುಲ್ ಜಿ, ಕೊನೆಯದಾಗಿ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ನಮ್ಮ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಮತ್ತು ಎಲ್ಲಾ ಪ್ರಾಧ್ಯಾಪಕರು ಇದನ್ನು ಕೇಳುತ್ತಿದ್ದಾರೆ. ನಾನು ಅವರಿಗೆ ಕಿವಿ ತೆರೆದು ಹೇಳಲು ಬಯಸುತ್ತೇನೆ- ರಾಹುಲ್ ಜಿ ನಮ್ಮೊಂದಿಗೆ ನಿಂತಿರುವವರೆಗೆ, ನಾವು ಹೆದರುವುದಿಲ್ಲ, ಹೊರದಬ್ಬಿಸಿಕೊಳ್ಳುವುದಿಲ್ಲ ಮತ್ತು ತಲೆಬಾಗುವುದಿಲ್ಲ” ಎನ್ನುತ್ತಾನೆ.
ರಂಜಿತ್ ಕಿಸಾನ್‌ವಂಶಿ ಎಂಬ ಉದ್ಯೋಗಾಕಾಂಕ್ಷಿ ಮಾತನಾಡುತ್ತಾ, ತಾವು ಎದುರಿಸಿದ ವ್ಯವಸ್ಥೆಯ ಕಿರುಕುಳವನ್ನು ಹಂಚಿಕೊಳ್ಳುತ್ತಾರೆ. “ಮಧ್ಯಪ್ರದೇಶ ಲೋಕಸೇವಾ ಆಯೋಗದಲ್ಲಾದ ನೇಮಕಾತಿ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಲು ಮಧ್ಯಪ್ರದೇಶ ಲೋಕಸೇವಾ ಆಯೋಗಕ್ಕೆ ಹೋಗಿದ್ದೆವು. ಅಲ್ಲಿನ ನೌಕರರು ಅಧಿಕಾರಿಗಳು ನಮ್ಮ ಮನವಿಯನ್ನು ಸ್ವೀಕರಿಸಲಿಲ್ಲ. ನಂತರ ನಾವು ಇತರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದೆವು. ಎಲ್ಲರನ್ನೂ ಒಟ್ಟುಗೂಡಿಸಿ ಸುಮಾರು 5000 ವಿದ್ಯಾರ್ಥಿಗಳು ಮಧ್ಯಪ್ರದೇಶ ಲೋಕಸೇವಾ ಆಯೋಗದ ಮುಂದೆ ಹೋಗಿ ಕುಳಿತೆವು. ನಾಲ್ಕು ರಾತ್ರಿ ಹೋರಾಟ ನಡೆದಾಗ ಅವರು ನಮ್ಮೊಂದಿಗೆ ಮಾತನಾಡಲು ಕರೆದರು. ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರು, ‘ನೀವು ಭೋಪಾಲ್ ಬನ್ನಿ, ನಿಮ್ಮ ಬೇಡಿಕೆಗಳನ್ನು ನಾನು ಈಡೇರಿಸುತ್ತೇನೆ, ನೀವು ಬಂದು ನನಗೆ ತಿಳಿಸಿ’ ಎಂದರು. ನಾವು ಅಲ್ಲಿಗೆ ಹೋದಾಗ, ‘ನೀವು ಆಂದೋಲನವನ್ನು ಮುಕ್ತಾಯಗೊಳಿಸಿ, ನಾವು ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೇವೆ’ ಎಂದರು. ಅಲ್ಲಿಂದ ನಾವು ವಾಪಸ್ ಇಂದೋರ್‌ಗೆ ಬಂದಾಗ, ನನ್ನ ಮೇಲೆ ಮತ್ತು ನನ್ನ ಮಿತ್ರರ ಮೇಲೆ ಎಫ್‌ಐಆರ್ ದಾಖಲಾಗಿರುವುದು ತಿಳಿಯಿತು. ನಂತರ ನನ್ನನ್ನು ಎತ್ತಿಕೊಂಡು ಜೈಲಿಗೆ ಹಾಕಲಾಯಿತು. ನಾಲ್ಕು ದಿನ ನಾವು ಜೈಲಿನಲ್ಲಿದ್ದೆವು. ಹೈಕೋರ್ಟ್‌ನಿಂದ ನಮಗೆ ಜಾಮೀನು ಸಿಕ್ಕಿತು. ಮಧ್ಯಪ್ರದೇಶದೊಳಗೆ ಯಾವುದೇ ನೇಮಕಾತಿ ಸಮಸ್ಯೆಯ ಬಗ್ಗೆ ನಾವು ಮಾತನಾಡಿದರೆ, ನಮ್ಮನ್ನು ಜೈಲಿಗೆ ಹಾಕಲಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
ಟ್ರೈಬಲ್ ವಿದ್ಯಾರ್ಥಿಗಳ ಮಾತು
ಇಂದೋರ್‌ನ ‘ಛಾಂತ್ರೋಕಿ ಗೂಂಜ್’ನಲ್ಲಿ ಟ್ರೈಬಲ್ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿತ್ತು. ಮಧ್ಯಪ್ರದೇಶದ ಜನಸಂಖ್ಯೆಯಲ್ಲಿ ಶೇ.21ರಷ್ಟು ಟ್ರೈಬಲ್ ಸಮುದಾಯಗಳಿರುವುದು ಗಮನಾರ್ಹ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಸೂರಜ್ ಠಾಕೂರ್ ಎಂಬವರು ಮಾತನಾಡುತ್ತಾ, “2022ರಲ್ಲಿ ಸಿವಿಲ್ ಜಡ್ಜ್ ಹುದ್ದೆಯ ವೇಕೆನ್ಸಿ ಬರುತ್ತದೆ. ಅದರಲ್ಲಿ 121 ಹುದ್ದೆಗಳು ಟ್ರೈಬಲ್‌ಗಾಗಿ ಮೀಸಲಿರುತ್ತವೆ. ಆದರೆ ನಮ್ಮ ದುರಾದೃಷ್ಟವೆಂದರೆ ಇಲ್ಲಿನ ಸಿಸ್ಟಮ್ 121 ಪೋಸ್ಟ್‌ಗಳಲ್ಲಿ ಒಂದೇ ಒಂದು ಟ್ರೈಬಲ್‌ಗೂ ಪೋಸ್ಟ್ ನೀಡಲಿಲ್ಲ” ಎನ್ನುತ್ತಾರೆ. ಅದಕ್ಕೆ ರಾಹುಲ್, “ನೀವು ಹೇಳಿದ್ದು ಸಂಪೂರ್ಣವಾಗಿ ಸತ್ಯವಾದ ಮಾತು. ಇವರು ಆದಿವಾಸಿ ವಿದ್ಯಾರ್ಥಿಗಳು ರೂಪುಗೊಳ್ಳುವುದನ್ನು ಬಯಸುವುದಿಲ್ಲ. ಯಾರು ವಿದ್ಯಾರ್ಥಿಯಾಗುವುದನ್ನೂ ಇವರು ಬಯಸುವುದಿಲ್ಲ. ಇವರಿಗೆ ಇಡೀ ದೇಶವೇ ಅನಕ್ಷರಸ್ಥರಾಗಿ ಇರಬೇಕು” ಎಂದು ವಾಗ್ದಾಳಿ ನಡೆಸುತ್ತಾರೆ.
ಪ್ರಿಯಾಂಕಾ ಸೆಂಗರ್ ಎಂಬ ಟ್ರೈಬಲ್ ವಿದ್ಯಾರ್ಥಿನಿ ಮಾತನಾಡುತ್ತಾ, “12ನೇ ತರಗತಿಯ ನಂತರ ನಾನು ಸರ್ಕಾರಿ ಹಾಸ್ಟೆಲ್‌ಗೆ ಅಪ್ಲೈ ಮಾಡಿದಾಗ ನನಗೆ ಅಡ್ಮಿಷನ್ ಸಿಗಲಿಲ್ಲ. ನನ್ನ ಬಹಳಷ್ಟು ಸ್ನೇಹಿತೆಯರು ಅಡ್ಮಿಷನ್ ಸಿಗದ ಕಾರಣ ಓದುವುದನ್ನು ಬಿಟ್ಟುಬಿಟ್ಟಿದ್ದಾರೆ. ಅಡ್ಮಿಷನ್ ಸಿಗದ ಕಾರಣ ನಾನು ಅನಿವಾರ್ಯವಾಗಿ ರೂಮ್‌ಗಳಲ್ಲಿ ವಾಸಿಸಬೇಕಾಗಿ ಬಂದಿದೆ. ರೂಮ್‌ನ ಸಮಸ್ಯೆ ಎಷ್ಟಿದೆ ಎಂದರೆ, ಪ್ರತಿ ತಿಂಗಳು ರೂಮ್ ಬಾಡಿಗೆ ನೀಡಬೇಕಾಗುತ್ತದೆ. ವಸತಿ ಭತ್ಯೆಯು ವರ್ಷದ ಕೊನೆಯಲ್ಲಿ ಸಿಗುತ್ತದೆ, ಹಾಗಾಗಿ ಪ್ರತಿ ತಿಂಗಳು ರೂಮ್ ಬಾಡಿಗೆ ನೀಡಲು ತಂದೆ-ತಾಯಿ ಒಡವೆಯನ್ನು ಅಡಮಾನ ಇಡುತ್ತಾರೆ ಅಥವಾ ಜಮೀನನ್ನು ಅಡಮಾನ ಇಡುತ್ತಾರೆ, ಇದರಿಂದ ಅವರು ನಮ್ಮ ಓಡಾಟದ ಮತ್ತು ಓದುವ ಖರ್ಚನ್ನು ನೀಡಬಹುದು. ಗ್ಯಾಸ್ ಸಿಲಿಂಡರ್ ನಮಗೆ ಮೊದಲು ಸಾವಿರ ಅಥವಾ 1200ಕ್ಕೆ ಸಿಗುತ್ತಿತ್ತು, ಈಗ ಆ ಗ್ಯಾಸ್ ಸಿಲಿಂಡರ್ 2000 ಅಥವಾ 2500ಕ್ಕೆ ಸಿಗುತ್ತಿದೆ. ಬಸ್ ಪಾಸ್ ಮೊದಲು 200ಕ್ಕೆ ಆಗುತ್ತಿತ್ತು, ಈಗ 600ಕ್ಕೆ ಆಗುತ್ತಿದೆ. ಇಷ್ಟು ಬೆಲೆ ಏರಿಕೆಯ ನಡುವೆಯೂ ನಾವು ಆದಿವಾಸಿ ಸಮಾಜದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಹೇಗೆ ಮುಂದುವರಿಸುವುದು?” ಎಂದು ಪ್ರಶ್ನಿಸುತ್ತಾರೆ.
ರಾಹುಲ್ ನೀಡಿದ ಅಂಕಿ-ಅಂಶ
“ಮೊದಲು ಐಐಟಿಗಳು ರೂಪುಗೊಂಡವು, ಶಾಲೆಗಳು ರೂಪುಗೊಂಡವು, ನವೋದಯ ವಿದ್ಯಾಲಯಗಳು ರೂಪುಗೊಂಡವು, ಈಗ ಸಂಪೂರ್ಣವಾಗಿ ಹಿಂದಕ್ಕೆ ಕೊಂಡೊಯ್ಯಲಾಗುತ್ತಿದೆ. 2014ರ ಮೊದಲು ನಮ್ಮ ಸರ್ಕಾರವಿದ್ದಾಗ, ಬಜೆಟ್‌ನ 4.6% ರಷ್ಟು ಶಿಕ್ಷಣಕ್ಕೆ ಹೋಗುತ್ತಿತ್ತು. ನಂತರ ಬಜೆಟ್ ಅನ್ನು ಕಡಿಮೆ ಮಾಡುತ್ತಾ- 2014 ರಲ್ಲಿ 2.6% ರಷ್ಟು ಬಜೆಟ್ ಶಿಕ್ಷಣಕ್ಕೆ ಹೋಗುತ್ತದೆ. 7.7 ಲಕ್ಷ ಕೋಟಿ ರೂಪಾಯಿಗಳು, ಶಿಕ್ಷಣಕ್ಕೆ ಹೋಗಬೇಕಿತ್ತು. ಆದರೆ ಅದು ಶತಕೋಪ್ಯಾಧಿಪತಿಗಳ ಕೈಗೆ ಹೋಯಿತು, ಅದು ಅದಾನಿ-ಅಂಬಾನಿ ಕೈಗೆ ಹೋಯಿತು. ಕಳೆದ 10 ವರ್ಷಗಳಲ್ಲಿ ಕೋಟ್ಯಂತರ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ಕಸಿದುಕೊಳ್ಳಲಾಗಿದೆ. 10 ಲಕ್ಷ ಉದ್ಯೋಗಗಳ ಬಗ್ಗೆ ಮಾತನಾಡಲಾಗುತ್ತದೆ, ಆದರೆ ಇಂದು ಭಾರತದಲ್ಲಿ 10 ಲಕ್ಷ ಶಿಕ್ಷಕರ ಹುದ್ದೆಗಳು ಖಾಲಿ ಬಿದ್ದಿವೆ” ಎಂದು ಅಂಕಿ-ಅಂಶ ಮುಂದಿಟ್ಟರು.
ರಾಜಕೀಯ ವಿಡಂಬನೆ ಇತ್ಯಾದಿ
‘ಛಾತ್ರೋಂ ಕೀ ಗೂಂಜ್’ ಸರಣಿಯಲ್ಲಿ ರಾಹುಲ್ ಗಾಂಧಿಯವರು ಕೇವಲ ಗಂಭೀರ ಮುಖದಲ್ಲಿ ಕಾಣಿಸಿಕೊಂಡಿಲ್ಲ. ಹಾಸ್ಯಪ್ರಜ್ಞೆ, ರಾಜಕೀಯ ವಿಡಂಬನೆಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಇಂದೋರ್‌ನ ವೇದಿಕೆಯಲ್ಲಿ ಸ್ಟಾಂಡ್ ಅಪ್ ಕಾಮಿಡಿಯನ್ ಪುಲ್ಕಿತ್ ಅವರು ಕಾಣಿಸಿಕೊಂಡರು. ಮೋದಿಯವರಂತೆ ಮಿಮಿಕ್ರಿ ಮಾಡಿ, ಪ್ರಸಿದ್ಧರಾಗಿರುವ ಅವರು ಇಲ್ಲಿಯೂ ‘My friend, Great Harassment” ಅಣಕದ ಮೂಲಕ ಯುವಸಮೂಹವನ್ನು ರೊಚ್ಚಿಗೆಬ್ಬಿಸಿದರು. ಈ ಜೋಕ್ ಮೇಲೆ ಬಿಜೆಪಿ ತಿರುಗಿಬಿದ್ದಿದೆ. ಆದರೆ ಇಡೀ ಕಾರ್ಯಕ್ರಮದ ಆಶಯವು ಬಿಜೆಪಿ ಮುಚ್ಚಿ ಹಾಕಲಾಗದಷ್ಟು ಗಟ್ಟಿಯಾಗಿದೆ.




