ಕೇಟ್ ಮಿಲೆಟ್ ಅವರ ಚಿಂತನೆಗಳಲ್ಲಿ ಲಿಂಗ ಸಂಬಂಧಗಳನ್ನೇ ಅಧಿಕಾರ ಮತ್ತು ಅಧೀನತೆಯ ಸಂಬಂಧಗಳಾಗಿ ನೋಡಲಾಗುತ್ತದೆ. ಆ ದೃಷ್ಟಿಯಿಂದ ನೋಡಿದಾಗ ಮಹಿಳೆ ಹೇಗೆ ಕಾಣಬೇಕು, ಏನು ಧರಿಸಬೇಕು, ಎಷ್ಟು ತೂಕ ಇರಬೇಕು ಎನ್ನುವ ನಿರೀಕ್ಷೆಗಳು ಕೇವಲ ಸೌಂದರ್ಯದ ವಿಚಾರಗಳಲ್ಲ. ಮಹಿಳೆಯ ಬದುಕು ಮತ್ತು ದೇಹದ ಬಗ್ಗೆ ಯಾರು ನಿರ್ಧರಿಸಬೇಕು ಎನ್ನುವ ಅಧಿಕಾರದ ಪ್ರಶ್ನೆಯೂ ಅದರೊಳಗಿದೆ.
ಒಬ್ಬ ಮಹಿಳೆ ಸ್ವಲ್ಪ ದಪ್ಪವಾಗಿದ್ದರೆ ಗಮನಕ್ಕೆ ಬರುತ್ತದೆ. ಸ್ವಲ್ಪ ತೆಳ್ಳಗಾಗಿದ್ದರೆ ಅದೂ ಗಮನಕ್ಕೆ ಬರುತ್ತದೆ. ಮದುವೆಯಾದರೆ ದೇಹದ ಬಗ್ಗೆ ಮಾತು. ಮಗುವಾದರೆ ದೇಹದ ಬಗ್ಗೆ ಮಾತು. ವಯಸ್ಸಾದರೆ ಮತ್ತೆ ದೇಹದ ಬಗ್ಗೆ ಮಾತು. ಮಹಿಳೆಯ ದೇಹಕ್ಕೆ ಮಾತ್ರ ಯಾಕೆ ಇಷ್ಟೊಂದು ಜನರ ಗಮನ?
ಇತ್ತೀಚೆಗೆ ಕತ್ರಿನಾ ಕೈಫ್ ಅವರ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದಾಗಲೂ ಇದೇ ಪ್ರಶ್ನೆ ಮತ್ತೆ ಎದುರಿಗೆ ಬಂತು. ಮಗು ಹುಟ್ಟಿದ ನಂತರ ಅವರ ದೇಹದಲ್ಲಿ ಆಗಿರುವ ಸಹಜ ಬದಲಾವಣೆಗಳನ್ನೇ ಕೆಲವರು ಚರ್ಚೆಯ ವಿಷಯ ಮಾಡಿಕೊಂಡರು. ಹಿಂದಿನ ಚಿತ್ರಗಳ ಜೊತೆ ಹೋಲಿಸಿ ತೂಕ ಹೆಚ್ಚಾಗಿದೆ, ಹಿಂದಿನಂತಿಲ್ಲ ಎನ್ನುವ ರೀತಿಯ ಟೀಕೆಗಳೂ ಬಂದವು. ಕೆಲವರು ಅವರನ್ನು ಸಮರ್ಥಿಸಿದರು. ಆದರೆ ಇಲ್ಲಿ ಗಮನಿಸಬೇಕಾದದ್ದು ಕತ್ರಿನಾ ಹೇಗೆ ಕಾಣುತ್ತಾರೆ ಅನ್ನೋದಕ್ಕಿಂತ, ಒಬ್ಬ ಮಹಿಳೆಯ ದೇಹವನ್ನು ಸಾರ್ವಜನಿಕವಾಗಿ ಪರಿಶೀಲಿಸುವ ಹಕ್ಕು ನಮಗೆ ಎಲ್ಲಿಂದ ಬಂತು ಅನ್ನೋದು.
ಒಬ್ಬರ ದೇಹ ನೋಡಿ ನಮಗೆ ಏನನಿಸುತ್ತದೆ ಅಂತ ಹೇಳೋದು ಒಂದು. ಆದರೆ ಮಹಿಳೆಯ ದೇಹ ಹೀಗೇ ಇರಬೇಕು, ಹಾಗೇ ಇರಬೇಕು ಅಂತ ಸಮಾಜವೇ ಒಂದು ಅಳತೆ ಇಟ್ಟು, ಅದಕ್ಕೆ ತಕ್ಕಂತೆ ಬದಲಾಗಬೇಕು ಎನ್ನುವ ಒತ್ತಡ ಹಾಕೋದು ಬೇರೆ. ಮೊದಲನೆಯದು ಒಬ್ಬರ ಅಭಿಪ್ರಾಯ ಇರಬಹುದು. ಆದರೆ ಎರಡನೆಯದು ನಿಧಾನವಾಗಿ ನಿಯಂತ್ರಣವಾಗುತ್ತದೆ.

ಈ ನಿಯಂತ್ರಣ ಯಾವಾಗಲೂ ಆದೇಶದ ರೂಪದಲ್ಲೇ ಬರಬೇಕಿಲ್ಲ. ಸ್ವಲ್ಪ ತೂಕ ಕಡಿಮೆ ಮಾಡಿಕೊಳ್ಳಿ, ಮಗು ಆದಮೇಲೆ ಹೀಗೆ ಇರಬಾರದು, ಇಷ್ಟು ವಯಸ್ಸಾದ ಮೇಲೂ ಹೀಗೆ ಡ್ರೆಸ್ ಮಾಡುತ್ತೀರಾ, ಸ್ವಲ್ಪ ನೋಡಿಕೊಳ್ಳಿ ಎನ್ನುವ ಮಾತುಗಳ ಮೂಲಕವೂ ಅದು ಬರುತ್ತದೆ. ಒಂದೊಂದು ಮಾತು ಸಣ್ಣದಾಗಿ ಕಾಣಬಹುದು. ಆದರೆ ಅದೇ ಮಾತು ಮತ್ತೆ ಮತ್ತೆ ಕೇಳಿಬಂದಾಗ, ಮಹಿಳೆ ತನ್ನ ದೇಹವನ್ನು ಸಮಾಜದ ಅಳತೆಯಲ್ಲಿ ನೋಡಲು ಶುರುಮಾಡುತ್ತಾಳೆ. ಹೆರಿಗೆಯ ನಂತರ ದೇಹ ಬದಲಾಗೋದು ಸಹಜ. ಹೊಟ್ಟೆ ಮೊದಲಿನಂತಿರದಿರಬಹುದು. ತೂಕ ಹೆಚ್ಚಾಗಬಹುದು. ಸ್ತನಗಳಲ್ಲಿ ಬದಲಾವಣೆ ಆಗಬಹುದು. ಮಗುವಿನ ಆರೈಕೆ, ನಿದ್ರೆಯ ಕೊರತೆ, ಹಾರ್ಮೋನುಗಳ ಬದಲಾವಣೆ, ದೈಹಿಕ ಶ್ರಮ ಇವೆಲ್ಲವೂ ದೇಹದ ಮೇಲೆ ಪರಿಣಾಮ ಬೀರುತ್ತವೆ. ಆದರೆ ಈ ಬದಲಾವಣೆಗಳಿಗಿಂತ ಹಿಂದಿನ ದೇಹಕ್ಕೆ ಎಷ್ಟು ಬೇಗ ಮರಳಬೇಕು ಎನ್ನುವ ನಿರೀಕ್ಷೆಯೇ ಮುಖ್ಯವಾಗುತ್ತದೆ. ತಾಯಿಯಾದ ಮಹಿಳೆಯ ಅನುಭವಕ್ಕಿಂತ, ಅವಳು ಮತ್ತೆ ಹೇಗೆ ಕಾಣಿಸುತ್ತಿದ್ದಾಳೆ ಅನ್ನೋದೇ ಚರ್ಚೆಯಾಗುತ್ತದೆ.
ಕೇಟ್ ಮಿಲೆಟ್ ಅವರ ಚಿಂತನೆಗಳಲ್ಲಿ ಲಿಂಗ ಸಂಬಂಧಗಳನ್ನೇ ಅಧಿಕಾರ ಮತ್ತು ಅಧೀನತೆಯ ಸಂಬಂಧಗಳಾಗಿ ನೋಡಲಾಗುತ್ತದೆ. ಆ ದೃಷ್ಟಿಯಿಂದ ನೋಡಿದಾಗ ಮಹಿಳೆ ಹೇಗೆ ಕಾಣಬೇಕು, ಏನು ಧರಿಸಬೇಕು, ಎಷ್ಟು ತೂಕ ಇರಬೇಕು ಎನ್ನುವ ನಿರೀಕ್ಷೆಗಳು ಕೇವಲ ಸೌಂದರ್ಯದ ವಿಚಾರಗಳಲ್ಲ. ಮಹಿಳೆಯ ಬದುಕು ಮತ್ತು ದೇಹದ ಬಗ್ಗೆ ಯಾರು ನಿರ್ಧರಿಸಬೇಕು ಎನ್ನುವ ಅಧಿಕಾರದ ಪ್ರಶ್ನೆಯೂ ಅದರೊಳಗಿದೆ.
ಕನ್ನಡ ಸಾಹಿತ್ಯದಲ್ಲಿ ಈ ಪ್ರಶ್ನೆ ಹೊಸದಲ್ಲ. ಬಾನು ಮುಷ್ತಾಕ್ ಅವರ ‘ಹೈ ಹೀಲ್ಡ್ ಷೂ’ ಕಥೆಯನ್ನು ನೋಡಬಹುದು. ಗರ್ಭಿಣಿಯಾದ ಹೆಂಡತಿಗೆ ಪತಿ ತನ್ನ ಇಷ್ಟದ ಫ್ಯಾಷನ್‌ಗೆ ಹೊಂದುವಂತೆ ಎತ್ತರದ ಹಿಮ್ಮಡಿ ಚಪ್ಪಲಿ ತೊಡಿಸಲು ಒತ್ತಾಯಿಸುತ್ತಾನೆ. ಗರ್ಭಿಣಿ ಮಹಿಳೆಯ ದೇಹಕ್ಕೆ ಯಾವುದು ಆರಾಮ, ಯಾವುದು ಅನಾರೋಗ್ಯಕರ ಅನ್ನೋದಕ್ಕಿಂತ, ಪುರುಷನ ಕಣ್ಣಿಗೆ ಆ ದೇಹ ಹೇಗೆ ಕಾಣಬೇಕು ಅನ್ನೋದೇ ಮುಖ್ಯವಾಗುತ್ತದೆ. ದೇಹದ ಆರಾಮಕ್ಕಿಂತ ಅದು ಹೇಗೆ ಕಾಣುತ್ತದೆ ಅನ್ನೋದು ಮುಖ್ಯವಾಗುವ ಈ ಸನ್ನಿವೇಶವೇ ಕಥೆಯ ಸಂಘರ್ಷವನ್ನು ತೀವ್ರಗೊಳಿಸುತ್ತದೆ. ಬಾನು ಮುಷ್ತಾಕ್ ಸ್ವತಃ ಈ ಕಥೆಯನ್ನು ಪಿತೃಪ್ರಭುತ್ವಕ್ಕೆ ಮಹಿಳೆಯೊಬ್ಬಳು ತಂತ್ರಪೂರ್ವಕವಾಗಿ ಮತ್ತು ತನ್ನ ಘನತೆಯನ್ನು ಉಳಿಸಿಕೊಂಡು ನೀಡುವ ಪ್ರತಿರೋಧವಾಗಿ ವಿವರಿಸಿದ್ದಾರೆ. ಇಲ್ಲಿ ಪಾಪ್ ಕಲ್ಚರ್‌ನ ಕತ್ರಿನಾ ಅವರಿಂದ ಹಿಡಿದು ಸಾಹಿತ್ಯಿಕ ಕಥೆಯ ಪಾತ್ರದವರೆಗೆ ವಾತಾವರಣ ಬೇರೆಯಾಗಿದ್ದರೂ, ಎದುರಾಗುವ ಸಮಾಜದ ನಿಯಂತ್ರಣದ ಪ್ರಶ್ನೆ ಒಂದೇ.

ಮಹಿಳೆಯ ದೇಹ ಹೇಗಿರಬೇಕು ಅನ್ನೋದನ್ನ ಮಹಿಳೆಯೇ ನಿರ್ಧರಿಸುತ್ತಾಳೆಯೇ, ಅಥವಾ ಸಮಾಜ ಅವಳ ಪರವಾಗಿ ನಿರ್ಧರಿಸುತ್ತದೆಯೇ? ಬಾನು ಅವರ ಮತ್ತೊಂದು ಕಥೆ ‘ಒಮ್ಮೆ ಹೆಣ್ಣಾಗು ಪ್ರಭುವೆ’ ಅನ್ನೋ ಶೀರ್ಷಿಕೆಯಲ್ಲೇ ಒಂದು ತೀವ್ರವಾದ ಪ್ರಶ್ನೆ ಅಡಗಿದೆ. ಪುರುಷನಿಗೆ ಮಹಿಳೆಯ ಬದುಕನ್ನು, ಮಹಿಳೆಯ ದೇಹ, ಮಹಿಳೆಯ ಅನುಭವವನ್ನು ಅರ್ಥಮಾಡಿಕೊಳ್ಳಬೇಕೆಂದರೆ ಒಮ್ಮೆ ಮಹಿಳೆಯಾಗಿ ಬದುಕಿ ನೋಡು ಎನ್ನುವ ವ್ಯಂಗ್ಯ ಅದರೊಳಗಿದೆ. ಬಾನು ಅವರ ಬರಹದಲ್ಲಿ ಮಹಿಳೆಯ ಅನುಭವ ಕೇವಲ ಕರುಣೆಗೆ ಅರ್ಹವಾದ ವಿಷಯವಲ್ಲ. ಅದು ಸಮಾಜವನ್ನು ಪ್ರಶ್ನಿಸುವ ದೃಷ್ಟಿಯೂ ಆಗುತ್ತದೆ.
ಗ್ಲಾಮರ್ ಜಗತ್ತಿನ ಕತ್ರಿನಾ ಅವರಿಂದ ಹಿಡಿದು ಮಧ್ಯಮ ವರ್ಗದ ಮನೆಯ ಮಹಿಳೆಯವರೆಗೆ ಸಂದರ್ಭಗಳು ಬದಲಾಗಬಹುದು. ಮದುವೆಯಾಗದವಳಿಗೆ ದೇಹದ ಬಗ್ಗೆ ಸಲಹೆ, ಮದುವೆಯಾದವಳಿಗೆ ಸೌಂದರ್ಯದ ಬಗ್ಗೆ ನಿರೀಕ್ಷೆ, ಮಗುವಾದವಳಿಗೆ ಹಿಂದಿನ ದೇಹಕ್ಕೆ ಮರಳುವ ಒತ್ತಡ, ವಯಸ್ಸಾದವಳಿಗೆ ಉಡುಗೆ ಮತ್ತು ರೂಪದ ಬಗ್ಗೆ ಟೀಕೆ. ಸಂದರ್ಭಗಳು ಬೇರೆ. ಆದರೆ ದೇಹವನ್ನು ಯಾವಾಗಲೂ ಸರಿಪಡಿಸಿಕೊಳ್ಳಬೇಕು ಎನ್ನುವ ಮನಸ್ಥಿತಿ ಒಂದೇ. ಶ್ರಮಜೀವಿ ಮಹಿಳೆಯ ದೇಹವನ್ನು ನೋಡಿದಾಗ, ಅದರ ದುಡಿಮೆಯನ್ನು ಕಾಣೋದಕ್ಕಿಂತ ಅದು ಹೇಗೆ ಕಾಣುತ್ತದೆ ಅನ್ನೋದನ್ನ ನೋಡುವ ಸಮಾಜವಿದೆ. ದಿನವಿಡೀ ಕೆಲಸ ಮಾಡುವ, ಮನೆ ಮತ್ತು ಹೊರಗಿನ ಕೆಲಸ ಎರಡನ್ನೂ ಹೊರುವ ಮಹಿಳೆಯ ದೇಹಕ್ಕೆ ವಿಶ್ರಾಂತಿ ಬೇಕಾಗಿರಬಹುದು. ಆದರೆ ಅವಳಿಗೂ ದೇಹ ನೋಡಿಕೊಳ್ಳಬೇಕು ಎನ್ನುವ ಮಾತು ಬರುತ್ತದೆ. ಮತ್ತೊಂದೆಡೆ, ಸೌಂದರ್ಯ ಮತ್ತು ದೇಹದ ಆರೈಕೆಗೆ ಸಮಯ, ಹಣ ಮತ್ತು ಅವಕಾಶ ಇರುವ ಮಹಿಳೆಯ ಮೇಲೆ ಬೇರೆ ರೀತಿಯ ಒತ್ತಡವಿರುತ್ತದೆ. ಜಾತಿ, ವರ್ಗ, ವಯಸ್ಸು, ಧರ್ಮ ಮತ್ತು ವೃತ್ತಿಯೂ ಈ ಅನುಭವವನ್ನು ಬದಲಿಸುತ್ತವೆ. ಎಲ್ಲ ಮಹಿಳೆಯರನ್ನೂ ಸಮಾಜ ಒಂದೇ ಕಣ್ಣಿನಿಂದ ನೋಡುವುದಿಲ್ಲ.
ಮೊದಲು ನಮ್ಮ ದೇಹದಲ್ಲಿ ಏನೋ ಕೊರತೆಯಿದೆ ಅನ್ನೋದನ್ನ ನಮಗೆ ನಂಬಿಸಲಾಗುತ್ತದೆ. ನಂತರ ಅದನ್ನು ಸರಿಪಡಿಸಿಕೊಳ್ಳಲು ಬೇಕಾದ ವಸ್ತುಗಳನ್ನೇ ಮಾರುಕಟ್ಟೆ ನಮ್ಮ ಮುಂದೆ ಇಡುತ್ತದೆ. ಸೌಂದರ್ಯವರ್ಧಕಗಳು, ತೂಕ ಇಳಿಸುವ ಉತ್ಪನ್ನಗಳು, ಉಡುಪುಗಳು, ಚಿಕಿತ್ಸೆಗಳು ಹೀಗೆ ಒಂದೊಂದಾಗಿ ಬರುತ್ತವೆ. ನೀನು ಈಗಿರುವ ಹಾಗೆ ಸಾಕಾಗುವುದಿಲ್ಲ ಎನ್ನುವ ಭಾವನೆ ಮೂಡಿದಾಗ, ಅದಕ್ಕೆ ಪರಿಹಾರವನ್ನೂ ಮಾರುಕಟ್ಟೆ ತೋರಿಸುತ್ತದೆ. ಈಗ ಅದಕ್ಕೆ ತಂತ್ರಜ್ಞಾನವೂ ಸೇರಿದೆ. ಫಿಲ್ಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆಯ ಸಾಧನಗಳು ಮುಖವನ್ನು ಮಾತ್ರ ಬದಲಿಸುವುದಿಲ್ಲ. ಚರ್ಮ, ಸೊಂಟ, ದೇಹದ ಆಕಾರ, ಕೂದಲು ಹೀಗೆ ಎಲ್ಲವನ್ನೂ ಬದಲಿಸಬಹುದು. ಪರದೆಯ ಮೇಲೆ ಕಾಣುವ ಈ ರೂಪಗಳು ನೈಜ ದೇಹಕ್ಕೆ ಹೊಸ ಅಳತೆಗಳನ್ನು ಸೃಷ್ಟಿಸುತ್ತವೆ. ಫಿಲ್ಟರ್‌ಗಳು ಕೆಲವೊಮ್ಮೆ ನೈಜ ದೇಹವನ್ನೇ ತಪ್ಪೇನೋ ಎನ್ನುವಂತೆ ಮಾಡುತ್ತವೆ.
ಸಾಮಾಜಿಕ ಮಾಧ್ಯಮ ಈ ದೃಷ್ಟಿಯನ್ನು ಇನ್ನಷ್ಟು ವೇಗಗೊಳಿಸುತ್ತದೆ. ಒಂದು ದೇಹದ ಬಗ್ಗೆ ಬಂದ ಕಾಮೆಂಟ್ ಸಾವಿರಾರು ಜನರಿಗೆ ತಲುಪುತ್ತದೆ. ಒಂದು ಹೋಲಿಕೆ ಮತ್ತೊಂದು ಹೋಲಿಕೆಯನ್ನು ಹುಟ್ಟಿಸುತ್ತದೆ. ಹೀಗೆ ಸಮಾಜದ ಹೊರಗಿನ ಕಣ್ಣು ನಿಧಾನವಾಗಿ ನಮ್ಮದೇ ಕಣ್ಣಾಗುತ್ತದೆ. ಕನ್ನಡಿಯ ಮುಂದೆ ನಿಂತಾಗ ಮಹಿಳೆ ತನ್ನ ದೇಹವನ್ನು ತಾನೇ ಪರಿಶೀಲಿಸಿಕೊಳ್ಳುತ್ತಾಳೆ. ಫೋಟೋ ತೆಗೆಸಿಕೊಳ್ಳುವಾಗ ತನ್ನ ದೇಹದ ಯಾವ ಭಾಗ ಕಾಣಿಸುತ್ತಿದೆ ಅಂತ ಯೋಚಿಸುತ್ತಾಳೆ. ಹೊಸ ಬಟ್ಟೆ ತೊಡುವಾಗ ಅದು ತನಗೆ ಇಷ್ಟವೇ ಅನ್ನೋದಕ್ಕಿಂತ, ಇತರರು ಏನು ಹೇಳಬಹುದು ಅನ್ನೋದು ಮುಖ್ಯವಾಗುತ್ತದೆ. ಸಮಾಜ ಹೇಳಿದ ಅಳತೆಯನ್ನು ಅವಳು ತನ್ನೊಳಗೆ ಹೊತ್ತುಕೊಂಡು, ತನ್ನನ್ನೇ ತಾನು ಕಾವಲು ಕಾಯಲು ಶುರುಮಾಡುತ್ತಾಳೆ.
ಇದರ ಪರಿಣಾಮ ಕೇವಲ ಆತ್ಮವಿಶ್ವಾಸದ ಕೊರತೆಯಲ್ಲ. ನಿರಂತರ ದೇಹದ ಟೀಕೆಗಳು ದೇಹದ ಬಗ್ಗೆ ಅಸಮಾಧಾನ, ನಾಚಿಕೆ, ಆತಂಕ ಮತ್ತು ತನ್ನದೇ ದೇಹದಿಂದ ದೂರವಾಗುವ ಭಾವನೆಗಳನ್ನು ಬೆಳೆಸಬಹುದು. ಗಾಯಕಿ ನೇಹಾ ಭಾಸಿನ್ ತಮ್ಮ ಯೌವನದಲ್ಲಿ ದೇಹದ ಬಗ್ಗೆ ಎದುರಿಸಿದ ಟೀಕೆಗಳಿಂದ ತಾವು ತೀವ್ರವಾಗಿ ಪ್ರಭಾವಿತರಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಇದು ಒಂದು ಕಾಮೆಂಟ್ ಬರೆದವರಿಗೆ ಕ್ಷಣಮಾತ್ರದ ಮಾತಾಗಿರಬಹುದು. ಆದರೆ ಅದನ್ನು ಓದಿದ ವ್ಯಕ್ತಿಯ ಬದುಕಿನಲ್ಲಿ ಆ ಮಾತು ದೀರ್ಘಕಾಲ ಉಳಿದು ಯಾವ ಪರಿಣಾಮ ಬೀರುತ್ತದೆ ಅನ್ನೋದನ್ನು ಅರಿತು ಬರೆಯುವ ಜವಾಬ್ದಾರಿಯೂ ನಮಗಿರುತ್ತದೆ ಅನ್ನೋದನ್ನ ಮರೆಯಬಾರದು.
ಆದರೆ ಈ ನಿಯಂತ್ರಣದ ವಿರುದ್ಧ ಮತ್ತೊಂದು ಧ್ವನಿಯೂ ಬೆಳೆಯುತ್ತಿದೆ. ಅನೇಕ ಮಹಿಳೆಯರು ತಮ್ಮ ದೇಹವನ್ನು ಸಮಾಜದ ಅಳತೆಯಲ್ಲಿ ನೋಡುವುದನ್ನ ನಿಧಾನವಾಗಿ ನಿರಾಕರಿಸುತ್ತಿದ್ದಾರೆ. ದಪ್ಪವಾಗಿದ್ದರೆ ದಪ್ಪವಾಗಿಯೇ, ಸಣ್ಣವಾಗಿದ್ದರೆ ಸಣ್ಣವಾಗಿಯೇ, ಹೆರಿಗೆಯ ನಂತರ ಬದಲಾಗಿದ್ದರೆ ಬದಲಾಗಿದ್ದಂತೆಯೇ ತಮ್ಮ ದೇಹವನ್ನು ಒಪ್ಪಿಕೊಳ್ಳುವ ಮಾತುಗಳು ಹೆಚ್ಚುತ್ತಿವೆ. ಇಲ್ಲಿಯೂ ಒಂದು ಎಚ್ಚರಿಕೆ ಬೇಕು. ದೇಹವನ್ನು ಪ್ರೀತಿಸಲೇಬೇಕು ಎನ್ನುವುದು ಮತ್ತೊಂದು ಕಡ್ಡಾಯವಾಗಬಾರದು. ಪ್ರತಿದಿನ ಕನ್ನಡಿಯ ಮುಂದೆ ನಿಂತು ನಾನು ಸುಂದರ ಅಂತ ಹೇಳಿಕೊಳ್ಳಲು ಸಾಧ್ಯವಾಗದ ದಿನಗಳೂ ಇರಬಹುದು. ದೇಹದ ಬಗ್ಗೆ ಸದಾ ಸಂತೋಷವಾಗಿರಬೇಕೆಂಬ ಒತ್ತಡವೂ ಬೇಡ. ತನ್ನ ದೇಹವನ್ನು ದ್ವೇಷಿಸದೆ, ಅದು ತನ್ನದೇ ಅಂತ ಒಪ್ಪಿಕೊಂಡು ಬದುಕುವ ಸ್ವಾತಂತ್ರ್ಯ ಸಾಕು.
ಇದನ್ನೂ ಓದಿ ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು
ದೇಹ ಕೇವಲ ಹೊರಗಿನಿಂದ ಕಾಣುವ ಆಕಾರವಲ್ಲ. ಅದು ಬದುಕಿನ ಅನುಭವಗಳನ್ನು ಹೊತ್ತುಕೊಂಡಿರುತ್ತದೆ. ಹೆರಿಗೆ, ವಯಸ್ಸು, ಅನಾರೋಗ್ಯ, ಕೆಲಸ, ಶ್ರಮ, ಸಂತೋಷ, ನೋವು ಎಲ್ಲವೂ ಅದರ ಮೇಲೆ ತಮ್ಮ ಗುರುತುಗಳನ್ನು ಬಿಡುತ್ತವೆ. ಆ ಗುರುತುಗಳನ್ನು ಅಳಿಸುವುದೇ ಆರೈಕೆ ಅನ್ನೋ ಕಲ್ಪನೆಯನ್ನು ಪ್ರಶ್ನಿಸಬೇಕಾದ ಸಮಯ ಇದು. ಅಂತಿಮವಾಗಿ ಪ್ರಶ್ನೆ ಮಹಿಳೆಯ ದೇಹ ಸುಂದರವಾಗಿದೆಯೇ ಇಲ್ಲವೇ ಅನ್ನೋದಲ್ಲ. ಆ ದೇಹದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಯಾರಲ್ಲಿದೆ ಅನ್ನೋದು. ಸಮಾಜಕ್ಕೆ ಅಭಿಪ್ರಾಯ ಇರಬಹುದು. ಮಾರುಕಟ್ಟೆಗೆ ಅದನ್ನು ಮಾರಾಟದ ವಸ್ತುವಾಗಿ ನೋಡಬಹುದು. ಸಾಮಾಜಿಕ ಮಾಧ್ಯಮಕ್ಕೆ ಅದನ್ನು ಕಾಮೆಂಟ್‌ಗಳ ವಿಷಯವಾಗಿಸಬಹುದು. ಆದರೆ ಹೇಗಿರಬೇಕು, ಏನು ಧರಿಸಬೇಕು, ಎಷ್ಟು ತೂಕ ಇರಬೇಕು, ಯಾವಾಗ ಬದಲಾಗಬೇಕು ಎನ್ನುವುದನ್ನ ಅಂತಿಮವಾಗಿ ಮಹಿಳೆಯೇ ನಿರ್ಧರಿಸಬೇಕು.

ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.



