ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗ್ರಾಮ ಒನ್ ಫ್ರಾಂಚೈಸಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಆಪರೇಟರ್‌ಗಳಿಗೆ ಸೂಕ್ತ ರಕ್ಷಣೆ ಹಾಗೂ ದಿನಭತ್ಯೆ ನೀಡಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲಾಧಿಕಾರಿಗಳ ಮುಖಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಸೆ.19ರಂದು ಕೆರೂರು ಹೋಬಳಿಯಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಗ್ರಾಮ ಒನ್ ಆಪರೇಟರ್‌ಗಳು ಸಾರ್ವಜನಿಕರ ಸೇವೆಗಾಗಿ ಭಾಗವಹಿಸಿದ್ದರು. ಆದರೆ, ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ಕಂಪ್ಯೂಟರ್ ಸಿಸ್ಟಂ, ಪ್ರಿಂಟರ್, ಪೇಪರ್, ವಿದ್ಯುತ್ ಹಾಗೂ ಇಂಟರ್‌ನೆಟ್ ಮೂಲಸೌಕರ್ಯಗಳನ್ನು ಇಲಾಖೆಯಿಂದ ಒದಗಿಸಿರಲಿಲ್ಲ ಎಂದು ಫ್ರಾಂಚೈಸಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿ ಹೋಬಳಿ ಮಟ್ಟದಲ್ಲಿ ಕನಿಷ್ಠ 8 ಗ್ರಾಮ ಒನ್ ಆಪರೇಟರ್‌ಗಳನ್ನು ಆಯ್ಕೆ ಮಾಡಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಇಲಾಖೆಯ ವತಿಯಿಂದಲೇ ಕಲ್ಪಿಸಬೇಕು. ಕಾರ್ಯಕ್ರಮದ ಸಂದರ್ಭದಲ್ಲಿ ಆಪರೇಟರ್‌ಗಳ ಸುರಕ್ಷತೆಗಾಗಿ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ಕರ್ತವ್ಯ ನಿರ್ವಹಿಸುವ ದಿನಕ್ಕೆ ದಿನಭತ್ಯೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ಯಾವುದೇ ಪ್ರಜಾ ಸೇವಾ ಅಭಿಯಾನಗಳಲ್ಲಿ ಭಾಗವಹಿಸಲು ನಿರಾಕರಿಸುವುದಾಗಿ ಫ್ರಾಂಚೈಸಿಗಳು ಎಚ್ಚರಿಕೆ ನೀಡಿದ್ದಾರೆ. ಆದರೆ, ಎಂದಿನಂತೆ ಪ್ರತಿ ಶನಿವಾರ ಗ್ರಾಮ ಒನ್ ಕೇಂದ್ರಗಳಲ್ಲಿ ನಾಗರಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಸೇವೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಬಾದಾಮಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದ್ದು, ಅದರ ಪ್ರತಿಯನ್ನು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೂ ನೀಡಲಾಗಿದೆ. ಸೆ.21ರಂದು ತಹಶೀಲ್ದಾರ ಕಚೇರಿಯಿಂದ ಮನವಿಯನ್ನು ಸ್ವೀಕರಿಸಲಾಗಿದೆ.




