ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಇಂದು ನವದೆಹಲಿಯಲ್ಲಿ ಭೇಟಿ ಮಾಡಿ, ಕರ್ನಾಟಕದ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಗೆ ಸಂಬಂಧಿಸಿದ ಬಾಕಿ ಮರುಪಾವತಿ ಮೊತ್ತಗಳ ಬಿಡುಗಡೆಗೆ ಮನವಿ ಮಾಡಿದರು.
ಕೆಎಂಎಸ್ 2025-26ರಲ್ಲಿ ರಾಜ್ಯವು 5.69 ಲಕ್ಷ ಮೆಟ್ರಿಕ್ ಟನ್ ರಾಗಿ, 2.21 ಲಕ್ಷ ಮೆಟ್ರಿಕ್ ಟನ್ ಜೋಳ ಹಾಗೂ 0.0567 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸಿದ್ದು, ಇದರ ಒಟ್ಟು ಮೌಲ್ಯ ₹4,422.17 ಕೋಟಿ. ಈ ಪೈಕಿ ಭಾರತ ಸರ್ಕಾರವು ಇದುವರೆಗೆ ₹190.10 ಕೋಟಿ ಬಿಡುಗಡೆ ಮಾಡಿದ್ದು, ಉಳಿದ ₹4,232.07 ಕೋಟಿ ಮರುಪಾವತಿಯನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವರ ಬಳಿ ಮನವಿ ಮಾಡಿದರು.
ಇದನ್ನೂ ಓದಿ: ರೈತರ ಪಾಲಿಗೆ ಸತ್ತು ಹೋದ ಕಾಂಗ್ರೆಸ್ ಸರ್ಕಾರ: ಎ ಎಸ್ ಪಾಟೀಲ ನಡಹಳ್ಳಿ ವಾಗ್ದಾಳಿ
ಹಾಗೆಯೇ ಕೆಎಂಎಸ್ 2022-23ಕ್ಕೆ ಸಂಬಂಧಿಸಿದ ₹375.99 ಕೋಟಿ ತಾತ್ಕಾಲಿಕ ಸಬ್ಸಿಡಿ ಹಕ್ಕುಪತ್ರವು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದ್ದು, ಅದನ್ನೂ ಶೀಘ್ರ ಮಂಜೂರು ಮಾಡುವಂತೆ ಕೋರಿದರು.ಇದರ ಜತೆಗೆ, ಕೆಎಂಎಸ್ 2009-10ರಿಂದ 2024-25ರವರೆಗಿನ ಅವಧಿಗೆ ಸಂಬಂಧಿಸಿದ ₹1,902.58 ಕೋಟಿ ಎಂಎಸ್‌ಪಿ ಬಾಕಿ ಮರುಪಾವತಿ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಸಚಿವರು ಮನವಿ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ₹1,902.58 ಕೋಟಿ ಬಾಕಿ ಮರುಪಾವತಿ ಪ್ರಕರಣವನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಹಾಗೆಯೇ ಕೆಎಂಎಸ್ 2025-26ರ ಮರುಪಾವತಿ ಹಕ್ಕುಪತ್ರಗಳು ರಾಜ್ಯ ಸರ್ಕಾರದಿಂದ ಸಲ್ಲಿಕೆಯಾದ ತಕ್ಷಣ ನಿಯಮಾನುಸಾರ ಪರಿಶೀಲಿಸಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ₹190.10 ಕೋಟಿ ಬಿಡುಗಡೆ ಮಾಡಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಸಚಿವ ಮುನಿಯಪ್ಪ ಬಾಕಿ ಇರುವ ಎಲ್ಲ ಮರುಪಾವತಿ ಮೊತ್ತಗಳು ಶೀಘ್ರ ಬಿಡುಗಡೆಯಾಗಲಿದ್ದು, ಇದರಿಂದ ರಾಜ್ಯದಲ್ಲಿ ಎಂಎಸ್‌ಪಿ ಖರೀದಿ ಕಾರ್ಯಗಳು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಯಲಿದೆ. ರೈತರಿಗೆ ಸಕಾಲದಲ್ಲಿ ಪಾವತಿ ಮಾಡಲು ಅನುಕೂಲವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



