ದೇಶದಲ್ಲಿ ಒಂದಾದ ಬಳಿಕ ಒಂದರಂತೆ ಭೀಕರ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದೆ. ಇತ್ತೀಚೆಗೆ 13 ವರ್ಷದ ಬಾಲಕಿ ಮೇಲೆ 30ಕ್ಕೂ ಅಧಿಕ ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಕೃತ್ಯ ಬೆಳಕಿಗೆ ಬಂದಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಮತ್ತೊಂದು ಗ್ಯಾಂಗ್ ರೇಪ್ ನಡೆದಿದೆ. ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಪುರದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಗೆ ಮಾದಕ ವಸ್ತು ನೀಡಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಆರೋಪಿಗಳು ಬಾಲಕಿಗೆ ಬಲವಂತವಾಗಿ ಅಮಲು ಪದಾರ್ಥ ಅಥವಾ ಮಾದಕ ದ್ರವ್ಯವನ್ನು ನೀಡಿದ್ದಾರೆ. ಬಾಲಕಿಯು ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯ ಮೇಲೆ ಈ ಕ್ರೂರ ಕೃತ್ಯ ಎಸಗಿದ್ದಾರೆ. ಬಾಲಕಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸರು ಬಿಎನ್‌ಎಸ್ ಮತ್ತು ಪೋಕ್ಸೋ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಐದು ದಿನಗಳ ಕಾಲ ಬಾಲಕಿ ಮೇಲೆ 30 ನರಾಧಮರ ವಿಕೃತಿ: ‘ಮೋಶಾ’ ಮೌನ ಮುರಿಯುವುದು ಯಾವಾಗ?
ಇನ್ನು ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ಸದ್ಯ ಉತ್ತರಾಖಂಡದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ.




