ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶವ್ಯಾಪಿ ಬೃಹತ್ ಪ್ರತಿಭಟನೆಗಳಿಗೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ಕೊಟ್ಟಿದೆ. ಪ್ರತಿಭಟನೆ ಜೊತೆಗೆ, ದಕ್ಷಿಣ ಭಾರತದಲ್ಲಿ ತನ್ನ ಸಂಘಟನಾತ್ಮಕ ಶಕ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಈ ಕಾರ್ಯತಂತ್ರದ ಭಾಗವಾಗಿ ತೆಲಂಗಾಣವನ್ನು ದಕ್ಷಿಣದ ಪ್ರಮುಖ ಕೇಂದ್ರವನ್ನಾಗಿ ಮಾಡಿಕೊಂಡಿರುವ ಸಿಜೆಪಿ, ಹೈದರಾಬಾದ್‌ನಲ್ಲಿ ತಮ್ಮ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮಹತ್ವದ ಸಭೆ ನಡೆಸಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ಪ್ರಶ್ನಿಸಿ ಸಿಜೆಪಿ ‘ಇಲೆಕ್ಷನ್ ಕಮಿಷನ್ ಠೀಕ್ ಕರೋ’ (ಚುನಾವಣಾ ಆಯೋಗವನ್ನು ಸರಿಪಡಿಸಿ) ಎಂಬ ಅಭಿಯಾನ ಘೋಷಿಸಿದೆ. ಆಡಳಿತಾತ್ಮಕ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಪ್ರಮುಖ ಮೂರು ಬೇಡಿಕೆಗಳನ್ನು ಸಿಜೆಪಿ ಘೋಷಿಸಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ಸ್ವತಂತ್ರ ತನಿಖೆಯಾಗಬೇಕು ಹಾಗೂ ಚುನಾವಣಾ ಆಯುಕ್ತರ ನೇಮಕಾತಿಯ ಕಾನೂನು ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದೆ.
ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್ 3 ರಂದು ಮುಂಬೈನಿಂದ ದೇಶವ್ಯಾಪಿ ಸರಣಿ ಪ್ರತಿಭಟನೆಗಳನ್ನು ಸಿಜೆಪಿ ಆರಂಭಿಸುತ್ತಿದೆ. ಬೆಂಗಳೂರು, ಹೈದರಾಬಾದ್, ಪ್ರಯಾಗ್‌ರಾಜ್ ಹಾಗೂ ದೆಹಲಿಯಲ್ಲಿ ಸರಣಿ ಪ್ರತಿಭಟನೆಗಳು ನಡೆಯಲಿವೆ ಎಂದು ಸಿಜೆಪಿ ಹೇಳಿದೆ.
ಹೈದರಾಬಾದ್‌ನಲ್ಲಿ ನಡೆದ ಈ ಸಭೆಯು ಕೇವಲ ಪ್ರತಿಭಟನೆಯ ಸಿದ್ಧತೆಯಾಗಿರದೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಮತದಾರರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ದಕ್ಷಿಣದ ರಾಜ್ಯಗಳಲ್ಲಿ ಬಲವಾದ ತಳಮಟ್ಟದ ಯುವಜನರ ಜಾಲವನ್ನು ನಿರ್ಮಿಸಲು ಸಿಜೆಪಿ ನಿರ್ಧರಿಸಿದೆ.
ಸಭೆಯಲ್ಲಿ ದಕ್ಷಿಣ ವಲಯದ ಉಸ್ತುವಾರಿ, ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ವಿಜಯ್ ರೆಡ್ಡಿ ಮಲ್ಲಂಗಿ, ದಕ್ಷಿಣ ವಲಯದ ಸಂಯೋಜಕರಾದ ಸ್ಟ್ಯಾನ್ಲಿ ಕೊರಾನಿ, ಅಶೋಕ್ ಉಪ್ಪು ಹಾಗೂ ಶ್ರೀಜಾ ರೆಡ್ಡಿ ಇದ್ದರು.



