ಪಾನ್ ಮಸಾಲಾ ಬ್ರ್ಯಾಂಡ್‌ವೊಂದರ ದಾರಿತಪ್ಪಿಸುವ ಜಾಹೀರಾತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಜಾರಿಗೊಳಿಸಲಾಗಿದ್ದ ಜಾಮೀನು ಸಹಿತ ವಾರೆಂಟ್‌ಗೆ ‘ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ'(ಎನ್‌ಸಿಡಿಆರ್‌ಸಿ) ತಡೆ ನೀಡಿದೆ. ಅಲ್ಲದೆ , ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾಪಗಳ ಮೂಲ ದಾಖಲೆಗಳನ್ನು ತನ್ನ ಮುಂದೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದೆ.
ಎನ್‌ಸಿಡಿಆರ್‌ಸಿ ಅಧ್ಯಕ್ಷ ನ್ಯಾಯಮೂರ್ತಿ ಎ.ಪಿ. ಸಾಹಿ ಮತ್ತು ಸದಸ್ಯ ಭರತ್ ಕುಮಾರ್ ಪಾಂಡೆ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ. ಜೈಪುರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಸಂಪೂರ್ಣ ದಾಖಲೆಗಳನ್ನು ತರಿಸಿಕೊಂಡು ರಾಷ್ಟ್ರೀಯ ಆಯೋಗಕ್ಕೆ ಕಳಿಸುವಂತೆ ರಾಜಸ್ಥಾನ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಪೀಠವು ಸೂಚಿಸಿದೆ. ಮುಂದಿನ ವಿಚಾರಣೆಯು 2026ರ ಏಪ್ರಿಲ್ 14ರಂದು ನಡೆಯಲಿದ್ದು, ಅಲ್ಲಿಯವರೆಗೆ ಜಿಲ್ಲಾ ಆಯೋಗ ಹೊರಡಿಸಿರುವ ಯಾವುದೇ ವಾರಂಟ್ ಜಾರಿಯನ್ನು ತಡೆಹಿಡಿಯಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
‘ರಾಜ್‌ಶ್ರೀ ಏಲಕ್ಕಿ’ ಹೆಸರಿನಲ್ಲಿ ಪಾನ್ ಮಸಾಲಾದ ಪರೋಕ್ಷ ಪ್ರಚಾರ ಮಾಡಲಾಗುತ್ತಿದೆ ಮತ್ತು ಇದು ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ದಾರಿತಪ್ಪಿಸುವ ಜಾಹೀರಾತಾಗಿದೆ ಎಂದು ಆರೋಪಿಸಿ 2025ರ ಡಿಸೆಂಬರ್‌ನಲ್ಲಿ ಜೈಪುರ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಲಾಗಿತ್ತು. ಈ ಬ್ರ್ಯಾಂಡ್‌ನ ರಾಯಭಾರಿಯಾಗಿರುವ ಕಾರಣ ನಟ ಸಲ್ಮಾನ್ ಖಾನ್ ಅವರನ್ನು 2ನೇ ಎದುರುದಾರರನ್ನಾಗಿ ಹೆಸರಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಜಿಲ್ಲಾ ಆಯೋಗವು 2026ರ ಜನವರಿ 6ರಂದು ಮಧ್ಯಂತರ ಆದೇಶವೊಂದನ್ನು ಹೊರಡಿಸಿ, ದಾರಿತಪ್ಪಿಸುವ ಜಾಹೀರಾತುಗಳನ್ನು ನೀಡದಂತೆ ಪ್ರತಿವಾದಿಗಳಿಗೆ ಸೂಚಿಸಿತ್ತು.
ಇದನ್ನು ಓದಿದ್ದೀರಾ? ಅಮೆರಿಕದ ಸಾಮ್ರಾಜ್ಯಶಾಹಿ ಅಹಂಕಾರಕ್ಕೆ ಇರಾನ್ ಸಡ್ಡು: ವಾಷಿಂಗ್ಟನ್ ಮುಂದಿಟ್ಟ 10 ಕಠಿಣ ಹಕ್ಕೊತ್ತಾಯಗಳು
ನಂತರ, ಸಲ್ಮಾನ್ ಖಾನ್ ಅವರಿದ್ದ ಜಾಹೀರಾತು ಫಲಕವೊಂದನ್ನು ಆಧರಿಸಿ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಗ್ರಾಹಕ ಕಾಯ್ದೆಯ ಸೆಕ್ಷನ್ 72ರ ಅಡಿ ನ್ಯಾಯಾಲಯ ನಿಂದನೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜನವರಿ 15ರಂದು ಸಲ್ಮಾನ್ ಖಾನ್ ವಿರುದ್ಧ ಜಿಲ್ಲಾ ಆಯೋಗವು ಜಾಮೀನು ಸಹಿತ ವಾರೆಂಟ್ ಜಾರಿಗೊಳಿಸಿತ್ತು. ಜೊತೆಗೆ, ನಟನ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ‘ವಿಶೇಷ ಕಾರ್ಯಪಡೆ’ (ಎಸ್‌ಟಿಎಫ್) ರಚನೆಗೂ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಪರ ಹಿರಿಯ ವಕೀಲ ರವಿ ಪ್ರಕಾಶ್ ಅವರು ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿ ವಾದ ಮಂಡಿಸಿದ್ದರು. ನಟನಿಗೆ ಸರಿಯಾದ ರೀತಿಯಲ್ಲಿ ನೋಟಿಸ್ ನೀಡದೆ ಏಕಪಕ್ಷೀಯವಾಗಿ ಆದೇಶ ಹೊರಡಿಸಲಾಗಿದೆ ಹಾಗೂ ವಾರೆಂಟ್ ಜಾರಿ ಮತ್ತು ಎಸ್‌ಟಿಎಫ್ ರಚನೆಯಂತಹ ಕಠಿಣ ಕ್ರಮಗಳು ಗ್ರಾಹಕ ಕಾಯ್ದೆ ಪ್ರಕ್ರಿಯೆಗಳಲ್ಲಿ ಅಸಾಮಾನ್ಯ ಮತ್ತು ಅಸಮಂಜಸವಾಗಿವೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಾದವನ್ನು ಆಲಿಸಿದ ಆಯೋಗವು ಪ್ರಸ್ತುತ ವಾರೆಂಟ್ ಜಾರಿಗೆ ತಡೆ ನೀಡಿದ್ದು, ದಾಖಲೆಗಳ ಸಮಗ್ರ ಪರಿಶೀಲನೆಗೆ ಮುಂದಾಗಿದೆ.




