‘ನೀಟ್-ಪಿಜಿ’ (NEET-PG) ಪರೀಕ್ಷೆಯ ಮೂಲ ಪ್ರಶ್ನೆಪತ್ರಿಕೆಗಳು ಹಾಗೂ ಕೀ ಉತ್ತರಗಳನ್ನು ಅಭ್ಯರ್ಥಿಗಳಿಗೆ ಏಕೆ ಬಹಿರಂಗಪಡಿಸುತ್ತಿಲ್ಲ ಎಂಬುದರ ಬಗ್ಗೆ ಲಿಖಿತ ವಿವರಣೆ ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷಾ ಮಂಡಳಿಗೆ (NBEMS) ಸುಪ್ರೀಂ ಕೋರ್ಟ್ ಸೋಮವಾರ ಸೂಚನೆ ನೀಡಿದೆ.
‘ಡೆಮಾಕ್ರಟಿಕ್ ಮೆಡಿಕಲ್ ಅಸೋಸಿಯೇಷನ್’ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು ನಡೆಸಿತು. ಪರೀಕ್ಷೆ ಮುಗಿದ ತಕ್ಷಣವೇ ಅಭ್ಯರ್ಥಿಗಳ ಖಾತೆಗಳಿಗೆ ಅವರ ಒಎಂಆರ್ (OMR) ಉತ್ತರ ಪತ್ರಿಕೆ, ಪ್ರಶ್ನೆಪತ್ರಿಕೆ ಮತ್ತು ಕೀ ಉತ್ತರಗಳನ್ನು ಅಪ್‌ಲೋಡ್ ಮಾಡಲು ಎನ್‌ಬಿಇಎಂಎಸ್‌ಗೆ ನಿರ್ದೇಶನ ನೀಡುವಂತೆ ಈ ಅರ್ಜಿಯಲ್ಲಿ ಕೋರಲಾಗಿತ್ತು.
ವಿಚಾರಣೆ ವೇಳೆ ಎನ್‌ಬಿಇಎಂಎಸ್ ಪರ ವಕೀಲರು ವಾದ ಮಂಡಿಸಿ, “ಸ್ನಾತಕೋತ್ತರ ವೈದ್ಯಕೀಯ ಪರೀಕ್ಷೆಯ ಪ್ರಶ್ನೆಗಳ ಬ್ಯಾಂಕ್ ಸೀಮಿತವಾಗಿದ್ದು, ಅದೊಂದು ‘ರಾಷ್ಟ್ರೀಯ ಸಂಪತ್ತು’ ಆಗಿದೆ. ಪದೇಪದೇ ಪ್ರಶ್ನೆಗಳನ್ನು ಬಹಿರಂಗಪಡಿಸಿದರೆ, ಮುಂದಿನ ಕೆಲವೇ ವರ್ಷಗಳಲ್ಲಿ ತಜ್ಞರು ಸಿದ್ಧಪಡಿಸಿದ ಪ್ರಶ್ನೆಗಳ ಕೊರತೆ ಎದುರಾಗಲಿದ್ದು, ಭವಿಷ್ಯದ ಪರೀಕ್ಷೆಗಳ ಪಾವಿತ್ರ್ಯತೆಗೆ ಧಕ್ಕೆಯಾಗಲಿದೆ. ಪ್ರಸ್ತುತ ಪೋರ್ಟಲ್‌ನಲ್ಲಿ ಕೇವಲ ಪ್ರಶ್ನೆಗಳ ಐಡಿ ಮತ್ತು ಸರಿಯಾದ ಉತ್ತರವನ್ನು ಮಾತ್ರ ನೀಡಲಾಗುತ್ತಿದೆ” ಎಂದು ಸಮರ್ಥಿಸಿಕೊಂಡರು.
ಮಂಡಳಿಯ ಈ ವಾದವನ್ನು ತಳ್ಳಿಹಾಕಿದ ಸುಪ್ರೀಂ ಪೀಠವು, “ಹಾಗಾದರೆ ಪಾರದರ್ಶಕತೆಯ ಕಥೆಯೇನು?” ಎಂದು ಖಾರವಾಗಿ ಪ್ರಶ್ನಿಸಿತು. ವಿದೇಶಗಳಲ್ಲಿ ಹಾಗೂ ಏಮ್ಸ್ (AIIMS) ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಗೌಪ್ಯತೆಯ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಬೇರೆ ದೇಶಗಳಲ್ಲಿ ಅನುಸರಿಸುವ ಪದ್ಧತಿಗಳು ಭಾರತಕ್ಕೆ ಮಾದರಿಯಾಗಲು ಸಾಧ್ಯವಿಲ್ಲ ಎಂದು ಕಡ್ಡಿಮುರಿದಂತೆ ಹೇಳಿತು.
ಮಂಡಳಿಯು ಪ್ರಶ್ನೆಪತ್ರಿಕೆಗಳನ್ನು ನೀಡಲು ಹಿಂದೇಟು ಹಾಕುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರೊಬ್ಬರು, “ಒಂದೆಡೆ ಮಂಡಳಿ ಭದ್ರತೆಯ ನೆಪವೊಡ್ಡುತ್ತಿದೆ, ಆದರೆ ಮತ್ತೊಂದೆಡೆ ಹಿಂದಿನ ವರ್ಷಗಳ ನೀಟ್-ಪಿಜಿ ಪ್ರಶ್ನೆಪತ್ರಿಕೆಗಳು ಅಮೆಜಾನ್‌ನಂತಹ (Amazon) ಆನ್‌ಲೈನ್ ವೇದಿಕೆಗಳಲ್ಲಿ ಮಾರಾಟಕ್ಕೆ ಮುಕ್ತವಾಗಿ ಲಭ್ಯವಿವೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಪ್ರಶ್ನೆಗಳನ್ನು ಬಹಿರಂಗಪಡಿಸುವುದರಿಂದ ಪರೀಕ್ಷೆಯ ಪಾವಿತ್ರ್ಯತೆಗೆ ಹೇಗೆ ಧಕ್ಕೆಯಾಗುತ್ತದೆ ಎಂಬುದನ್ನು ಸಮರ್ಥಿಸಿಕೊಂಡು ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಪೀಠವು ಎನ್‌ಬಿಇಎಂಎಸ್‌ಗೆ ಆದೇಶಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ರಚನಾತ್ಮಕ ಸಮಸ್ಯೆಗಳ ಕುರಿತು ಅಖಿಲ ಭಾರತ ವೈದ್ಯಕೀಯ ಸಂಘಟನೆಗಳ ಒಕ್ಕೂಟ ಮತ್ತು ಯುನೈಟೆಡ್ ಡಾಕ್ಟರ್ಸ್ ಫ್ರಂಟ್ ಸಲ್ಲಿಸಿರುವ ಅರ್ಜಿಗಳೊಂದಿಗೇ ಈ ಅರ್ಜಿಯ ವಿಚಾರಣೆಯನ್ನೂ ಮುಂದೂಡಲಾಗಿದೆ.




