ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟವು ‘ಮತ ಉಳಿಸಿ, ದೇಶ ಉಳಿಸಿ’ ಘೋಷದೊಂದಿಗೆ ಬೃಹತ್ ಹೋರಾಟ ದಾಖಲಿಸಿದೆ. ಯಶಸ್ವಿಗೊಳಿಸಿದೆ.
ದೇಶದ ವಿವಿಧ ಭಾಗಗಳಿಂದ ಹರಿದುಬಂದ ಜನಸಾಗರ ಮತ್ತು ವಿರೋಧ ಪಕ್ಷಗಳ ಪ್ರಮುಖ ನಾಯಕರ ಉಪಸ್ಥಿತಿಯು ಚುನಾವಣಾ ಆಯೋಗದ ಕಾರ್ಯವೈಖರಿಯ ವಿರುದ್ಧದ ಆಕ್ರೋಶವನ್ನು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ನಾಯಕರು ಒಂದೇ ವೇದಿಕೆಯಲ್ಲಿ ಕೈಜೋಡಿಸಿರುವುದು ವಿಪಕ್ಷಗಳ ಒಗ್ಗಟ್ಟಿನ ಸಂದೇಶವನ್ನೂ ರವಾನಿಸಿದೆ. ಮಾತ್ರವಲ್ಲದೆ, ಈ ಪ್ರತಿಭಟನೆಯು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯೂ ಆಗಿದೆ.
ಆದಾಗ್ಯೂ, ರಾಮಲೀಲಾ ಮೈದಾನದಲ್ಲಿ ನೆರೆದಿದ್ದ ಬೃಹತ್ ಜನಸಮೂಹವನ್ನು ಕಂಡು ತಮ್ಮ ರಾಜಕೀಯ ಹೋರಾಟ ಸಂಪೂರ್ಣ ಯಶಸ್ವಿಯಾಯಿತು ಎಂದು ವಿಪಕ್ಷಗಳು ತೃಪ್ತಿಪಟ್ಟುಕೊಳ್ಳಲಾಗದು. ಬೃಹತ್ ಸಮಾವೇಶಗಳನ್ನು ಆಯೋಜಿಸುವುದು, ಸಾವಿರಾರು ಕಾರ್ಯಕರ್ತರನ್ನು ಕರೆತರುವುದು ಹಾಗೂ ಆಕರ್ಷಕ ಭಾಷಣಗಳ ಮೂಲಕ ಸರ್ಕಾರದ ವೈಫಲ್ಯಗಳನ್ನು ಟೀಕಿಸುವುದು ರಾಜಕೀಯ ಪಕ್ಷಗಳ ಸಂಘಟನಾ ಸಾಮರ್ಥ್ಯವನ್ನು ತೋರುತ್ತದೆ. ಆದರೆ, ಅದರಾಚೆಗೆ, ಜನರ ನಡುವೆ ಶಾಶ್ವತವಾದ ಮತ್ತು ಆಳವಾದ ರಾಜಕೀಯ ಬದಲಾವಣೆಯನ್ನು ತರುವುದಿಲ್ಲ. ಅಂತಹ ಬದಲಾವಣೆ ತರಲು ಮಹತ್ತರವಾದ ಕೆಲಸಗಳಾಗಬೇಕು.
ಭಾರತದ ರಾಜಕಾರಣದಲ್ಲಿ ನಾಯಕರ ಮತ್ತು ಭಾಷಣಕಾರರ ಕೊರತೆಯಿಲ್ಲ. ಆದರೆ, ಹಳ್ಳಿಗಳು, ವಾರ್ಡ್ಗಳು, ಬಡಾವಣೆಗಳು ಹಾಗೂ ಮತಗಟ್ಟೆಗಳ ಮಟ್ಟದಲ್ಲಿ ಜನರೊಂದಿಗೆ ನಿರಂತರವಾಗಿ ಕೆಲಸ ಮಾಡುವ ವ್ಯವಸ್ಥಿತ ಸಂಘಟನೆಯ ಕೊರತೆ ವಿಪಕ್ಷಗಳನ್ನು ಕಾಡುತ್ತಿದೆ. ರಾಜಕಾರಣದಲ್ಲಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮತದಾರರನ್ನು ನೆನಪಿಸಿಕೊಳ್ಳುವ ಸಂಸ್ಕೃತಿ ಬದಲಾಗಬೇಕಾದರೆ, ಕೇವಲ ದೆಹಲಿಯ ವೇದಿಕೆಗಳ ಬಲಪ್ರದರ್ಶನ ಸಾಲದು; ಬದಲಿಗೆ ಪ್ರತಿ ಹಳ್ಳಿಯ ಪ್ರತಿ ಮನೆಯವರೆಗೂ ತಲುಪುವ ಬದ್ಧತೆ ಬೇಕು. ಜನರ ದೈನಂದಿನ ಸಮಸ್ಯೆಗಳಿಗೆ ಸ್ಪಂದಿಸಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಅಗತ್ಯವಾದ ರಾಜಕೀಯ ಜವಾಬ್ದಾರಿ. ಇದನ್ನು ವಿಪಕ್ಷಗಳು ಅರಿಯಬೇಕಾದ್ದು ಅತ್ಯಗತ್ಯ.
ವಿಶೇಷವಾಗಿ, ಮೋದಿ-ಶಾ ಕುಮ್ಮಕ್ಕಿನೊಂದಿಗೆ ಎಸ್ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ನೈಜ ಮತದಾರರ ಹೆಸರುಗಳನ್ನು ಚುನಾವಣಾ ಆಯೋಗ ಅಳಿಸಿಹಾಕಿದೆ. ಲಕ್ಷಾಂತರ ಮತದಾರರು ಮತದ ಹಕ್ಕು ಕಳೆದುಕೊಂಡಿದ್ದಾರೆ. ಇಂತಹ ಗಂಭೀರ ಬಿಕ್ಕಟ್ಟಿನ ಸಮಯದಲ್ಲಿ, ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾಡಲಾದ ಶಕ್ತಿ ಪ್ರದರ್ಶನ ಮತ್ತು ಭಾಷಣಗಳು ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಬದಲಾಗಿ, ಮತಪಟ್ಟಿಯಿಂದ ಅಳಿಸಿಹೋಗಿರುವ ಮತದಾರರ ಮನೆಗೆ ತೆರಳಿ, ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಚುನಾವಣಾ ಅಧಿಕಾರಿಯನ್ನು ಸಂಪರ್ಕಿಸಿ, ಅರ್ಹರ ಹಕ್ಕನ್ನು ಮರುಸ್ಥಾಪಿಸುವವರೆಗೆ ಜೊತೆ ನಿಲ್ಲುವ ಸ್ಥಳೀಯ ಸಂಘಟನಾ ವ್ಯವಸ್ಥೆಯೂ ಬೇಕು. ಕರ್ನಾಟಕ, ಬಿಹಾರ, ಉತ್ತರ ಪ್ರದೇಶದಿಂದ ಹಿಡಿದು ಪಶ್ಚಿಮ ಬಂಗಾಳದವರೆಗಿನ ಪ್ರತಿಯೊಂದು ರಾಜ್ಯದಲ್ಲೂ ಜನಪರ ಮತ್ತು ಕ್ರಿಯಾಶೀಲ ಕಾರ್ಯಪಡೆಯನ್ನು ಕಟ್ಟಬೇಕು. ಆಗ ಮಾತ್ರ ವಿಪಕ್ಷಗಳ ಈ ಬೃಹತ್ ಹೋರಾಟಕ್ಕೆ ನಿಜವಾದ ಅರ್ಥ ಬರುತ್ತದೆ.
ಅಂತೆಯೇ, ಮತದಾರರ ದೂರುಗಳನ್ನು ಸ್ವೀಕರಿಸಿ, ಕಾನೂನುಬದ್ಧವಾಗಿ ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡುವ ಮತ್ತು ಆಯೋಗದಿಂದ ಕಾಲಮಿತಿಯೊಳಗೆ ಉತ್ತರ ಪಡೆಯುವ ಪಾರದರ್ಶಕ ವ್ಯವಸ್ಥೆಯನ್ನು ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ರೂಪಿಸಬೇಕು.
ಇದೆಲ್ಲದರ ಜೊತೆಗೆ, ಜನರ ಬದುಕಿನ ಪ್ರಶ್ನೆಗಳು ಕೇವಲ ಮತದಾನದ ಹಕ್ಕಿಗಷ್ಟೇ ಸೀಮಿತವಾಗಿಲ್ಲ ಎಂಬ ವಾಸ್ತವವನ್ನು ವಿಪಕ್ಷಗಳು ಗಂಭೀರವಾಗಿ ಪರಿಗಣಿಸಬೇಕು. ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಬಿಕ್ಕಟ್ಟು, ಮಹಿಳೆಯರ ಸುರಕ್ಷತೆ ಹಾಗೂ ಜೀವನೋಪಾಯದ ಬಿಕ್ಕಟ್ಟು ಎದುರಿಸುತ್ತಿರುವ ಜನರ ದಿನನಿತ್ಯದ ಬದುಕಿನ ಸಂಕಷ್ಟಗಳಿಗೂ ಸ್ಪಂದಿಸಬೇಕು. ರೈತರಿಗೆ ನ್ಯಾಯಯುತ ಬೆಲೆ, ಯುವಕರಿಗೆ ಉದ್ಯೋಗಾವಕಾಶಗಳು ಹಾಗೂ ಬಡವರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ನಿರಂತರವಾಗಿ ಧ್ವನಿ ಎತ್ತಬೇಕು.
ಈ ಲೇಖನ ಓದಿದ್ದೀರಾ?: ರಕ್ತಪಾತಕ್ಕೆ ಬೇಕಿದೆ ಪೂರ್ಣವಿರಾಮ: ಇಸ್ರೇಲ್ ಚುನಾವಣೆಯಲ್ಲಿ ಮೊಳಗಲಿದೆಯೇ ಶಾಂತಿಯ ಮಂತ್ರ?
ಅಧಿಕಾರದಲ್ಲಿರುವವರನ್ನು ಟೀಕಿಸುವುದಷ್ಟೇ ಅಲ್ಲದೆ, ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಆಡಳಿತಾತ್ಮಕ ಪಾರದರ್ಶಕತೆ ಮತ್ತು ಜನಪರ ಕಾಳಜಿಯನ್ನು ಪ್ರದರ್ಶಿಸಬೇಕು. ಆದ್ದರಿಂದ, ಎಸ್ಐಆರ್ ವಿರೋಧಿ ಹೋರಾಟವನ್ನು ಕೇವಲ ಸಾಂವಿಧಾನಿಕ ಚರ್ಚೆಯ ಮಟ್ಟಕಷ್ಟೇ ಇರಿಸಿಕೊಳ್ಳದೆ, ಅದನ್ನು ಜನಸಾಮಾನ್ಯರ ಬದುಕಿನ ಹಕ್ಕುಗಳ ಹೋರಾಟದೊಂದಿಗೆ ಬೆಸೆಯಬೇಕು.
ಇದೇ ಹೊತ್ತಿನಲ್ಲಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಧ್ವನಿ ಎತ್ತುವ ವಿರೋಧ ಪಕ್ಷಗಳು ತಮ್ಮದೇ ಪಕ್ಷಗಳ ಆಂತರಿಕ ಸಂಘಟನೆಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿವೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ಥಳೀಯ ಘಟಕಗಳಲ್ಲಿ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ, ಯುವಜನರು, ಮಹಿಳೆಯರು ಹಾಗೂ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ನಾಯಕತ್ವದಲ್ಲಿ ಹೆಚ್ಚಿನ ಅವಕಾಶ ನೀಡುವುದನ್ನೂ ರೂಢಿಸಿಕೊಳ್ಳಬೇಕು.
ಜನರ ವಿಶ್ವಾಸವನ್ನು ಗಳಿಸುವುದೇ ರಾಜಕೀಯ ಪಕ್ಷಗಳ ಅತಿ ದೊಡ್ಡ ಬಲ. ಆ ಬಲವನ್ನು ಗಟ್ಟಿಗೊಳಿಸಲು ನಾಯಕರು ದೆಹಲಿಯ ಚೌಕಟ್ಟುಗಳನ್ನು ಮೀರಿ ಹಳ್ಳಿಗಳತ್ತ ಹೆಜ್ಜೆಹಾಕಬೇಕು. ಅದಕ್ಕಾಗಿ, ವಿವಿಧ ರಾಜ್ಯಗಳಲ್ಲಿ ವಿಪಕ್ಷಗಳ ನಡುವೆ ಇರುವ ರಾಜಕೀಯ ಪೈಪೋಟಿ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ನಿರಂತರ ಸಮನ್ವಯವನ್ನು ಸಾಧಿಸಬೇಕು. ದೆಹಲಿಯ ವೇದಿಕೆಯಲ್ಲಿ ಮೊಳಗಿದ ಘೋಷವು ಪ್ರತಿಯೊಂದು ಗ್ರಾಮದ ಮತಗಟ್ಟೆಗಳಲ್ಲಿ ಪ್ರತಿಧ್ವನಿಸಬೇಕು.



