ದೇಶದ ರಾಜಧಾನಿ ದೆಹಲಿ, ಸುತ್ತಮುತ್ತಲಿನ ಉತ್ತರ ಭಾರತ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಗಂಭೀರ ಮಟ್ಟಕ್ಕೆ ತಲುಪಿದೆ. ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ‘ಸೋ-ಕಾಲ್ಡ್ PM 3.0 ಸರ್ಕಾರ PM 2.5 ಬಗ್ಗೆ ಗಮನ ಹರಿಸಲಿ’ ಎಂದು ಕಾಂಗ್ರೆಸ್ ಮೋದಿ ಸರ್ಕಾರಕ್ಕೆ ತಿಳಿಸಿದೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಜೈರಾಮ್ ರಮೇಶ್ ಅವರು ಟ್ವಿಟರ್ (X) ಮೂಲಕ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. “PM 2.5 ಕಣಗಳು ದೇಶದ ರಾಜಧಾನಿ ಮತ್ತು ವಿಶೇಷವಾಗಿ ಉತ್ತರ ಭಾರತದ ಇತರ ಭಾಗಗಳಲ್ಲಿ ಉಸಿರುಗಟ್ಟುವಂತಹ ಪರಿಸ್ಥಿತಿಯನ್ನು ಉಂಟುಮಾಡುತ್ತಿವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ | ʼವಿಂಟರ್ ಆಕ್ಷನ್ ಪ್ಲಾನ್ʼ ಮೊದಲ ದಿನವೇ 68.4 ಲಕ್ಷ ರೂ. ದಂಡ ವಸೂಲು!
“2.5 ಮೈಕ್ರೋಮೀಟರ್ ಅಥವಾ ಅದಕ್ಕಿಂತ ಕಡಿಮೆ ವ್ಯಾಸವನ್ನು ಹೊಂದಿರುವ ಕಣಗಳಿಗೆ (PM 2.5) ಸಂಬಂಧಿಸಿದ ಸುರಕ್ಷತಾ ಮಾನದಂಡಗಳು, ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ಸುರಕ್ಷತಾ ಮಿತಿಗಳಿಗಿಂತ ನಾಲ್ಕು ಪಟ್ಟು (24 ಗಂಟೆಗಳ ಸರಾಸರಿ) ಮತ್ತು ವಾರ್ಷಿಕ ಸರಾಸರಿಯ ಲೆಕ್ಕದಲ್ಲಿ ಎಂಟು ಪಟ್ಟು ಹೆಚ್ಚಿವೆ ಎಂಬುದು ಬಹಳ ಹಿಂದೆಯೇ ಸ್ಪಷ್ಟವಾಗಿದೆ” ಎಂದು ತಿಳಿಸಿದ್ದಾರೆ.
“ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮವು ಹೆಚ್ಚಾಗಿ PM10 ಕಣಗಳ ಮೇಲೆ ಗಮನಹರಿಸುತ್ತದೆ. ಆದರೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಅತ್ಯಂತ ಸೂಕ್ಷ್ಮವಾದ PM 2.5 ಕಣಗಳೇ ನಿಜವಾದ ಅಪಾಯಕಾರಿಯಾಗಿವೆ. ಆದ್ದರಿಂದ, PM 2.5 ಮಾನದಂಡಗಳನ್ನು ತುರ್ತಾಗಿ ಪರಿಷ್ಕರಿಸುವ ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿದೆ. ಸದ್ಯ ತೀವ್ರ ಸಂಕಷ್ಟದಲ್ಲಿರುವ ಸೋ ಕಾಲ್ಡ್ ‘PM 3.0 ಸರ್ಕಾರ’ ಈ ವಿಷಯವನ್ನು ಇದುವರೆಗೂ ಪರಿಗಣಿಸಿದ್ದಕ್ಕಿಂತ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ” ಎಂದು ಹೇಳಿದ್ದಾರೆ.




