ಮಗನ ಹುಟ್ಟುಹಬ್ಬದ ಪ್ರಯುಕ್ತ ಮದ್ಯ ಕೊಡಿಸದ ಕಾರಣಕ್ಕೆ ದಲಿತ ಯುವಕನನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಜಿಲ್ಲೆಯ ಫರಿದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸಚಿನ್(25) ಮೃತರು. ಜುಲೈ 11 ರಂದು ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಬುಧವಾರ(ಆಗಸ್ಟ್ 2) ಕೊನೆಯುಸಿರೆಳೆದಿದ್ದಾರೆ.
ಜುಲೈ 11ರಂದು ವಿಶಾಲ್ ಹಾಗೂ ಆತನ ಸ್ನೇಹಿತರು ಕಬ್ಬಿಣದ ರಾಡ್‌ಗಳನ್ನು ಹಿಡಿದು ಸಚಿನ್ ಅವರ ಮನೆಗೆ ನುಗ್ಗಿದ್ದರು. ಮಗನ ಹುಟ್ಟು ಹಬ್ಬದ ಪ್ರಯುಕ್ತ ಮದ್ಯದ ಪಾರ್ಟಿ ಕೊಡಿಸಬೇಕು ಎಂದು ವಿಶಾಲ್ ಹಠ ಹಿಡಿದಿದ್ದ.
ಈ ಸುದ್ದಿ ಓದಿದ್ದೀರಾ? ಅಹಂಕಾರ, ಅತಿರೇಕ ಹೆಚ್ಚಾದಾಗ ವಿಜ್ಞಾನ, ಪಾರದರ್ಶಕತೆಗೆ ಹಿನ್ನಡೆ: ಪ್ರಧಾನಿ ವಿರುದ್ಧ ಜೈರಾಮ್ ರಮೇಶ್ ಕಿಡಿ
ಹಣಕಾಸಿನ ಸಮಸ್ಯೆಯಿಂದ ಸಚಿನ್ ಮದ್ಯದ ಪಾರ್ಟಿ ಕೊಡಿಸಲು ನಿರಾಕರಿಸಿದ್ದರು. ಆದರೆ ವಿಶಾಲ್ ಮತ್ತು ಆತನ ಸ್ನೇಹಿತರು ಮದ್ಯ ಕೊಡಿಸಲೇಬೇಕು ಎಂದು ಬೆದರಿಸಿದ್ದರು. ಅದನ್ನು ನಿರಾಕರಿಸಿದಾಗ, ಸಚಿನ್ ಅವರನ್ನು ಮನೆಯಿಂದ ಹೊರಗೆ ಕರೆತಂದು ಕಂಬಕ್ಕೆ ಕಟ್ಟಿ ರಾಡ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸಚಿನ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಚಿನ್ ಆಗಸ್ಟ್ 2 ರಂದು ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಸಚಿನ್ ಅವರ ತಾಯಿ ನೀಡಿದ ದೂರಿನ ಅನ್ವಯ ಅದೇ ಊರಿನ ವಿಶಾಲ್, ಅಕ್ಕು, ಆಕಾಶ್, ಕಲ್ಲು ಎಂಬವರ ಮೇಲೆ ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ. ಸದ್ಯ ಮೂವರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ವಿಶಾಲ್ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.