‘ವಂದೇ ಮಾತರಂ’ನ ಹಾಡುವುದು ಕಡ್ಡಾಯವಲ್ಲ. ಹಾಡದಿದ್ದ ಕಾರಣಕ್ಕೆ ಶಿಕ್ಷೆ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ (ತಿದ್ದುಪಡಿ) ಕಾಯ್ದೆ-2026’ ಮತ್ತು ಗೃಹ ಸಚಿವಾಲಯದ ಸೂಚನೆಗಳನ್ನು ಪ್ರಶ್ನಿಸಿ ‘ಕರ್ನಾಟಕ ಸಂಗೀತ’ ಗಾಯಕ ಟಿ. ಎಂ. ಕೃಷ್ಣ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠವು ನಡೆಸಿದೆ. “ಧಾರ್ಮಿಕ ಅಥವಾ ನಂಬಿಕೆಯ ಆಧಾರದ ಮೇಲೆ ‘ವಂದೇ ಮಾತರಂ’ ಗೀತೆಯನ್ನು ಹಾಡಲು ನಿರಾಕರಿಸುವ ವ್ಯಕ್ತಿಯ ವಿರುದ್ಧ ಯಾವುದೇ ಕ್ರಿಮಿನಲ್ ಅಥವಾ ಅಪರಾಧ ಕ್ರಮಗಳನ್ನು ಜರುಗಿಸಲಾಗುವುದಿಲ್ಲ ಎಂಬುದೇ ನ್ಯಾಯಾಲಯದ ನಿಲುವು. ಈ ಸಿದ್ಧಾಂತವೇ ಮುಂದೆಯೂ ಮುಂದುವರಿಯಲಿದೆ” ಎಂದು ಹೇಳಿದೆ.
2026ರ ಆರಂಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಹೊರಡಿಸಿದ ಸುತ್ತೋಲೆಯ ಪ್ರಕಾರ, ಸರ್ಕಾರಿ ಮತ್ತು ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ ಆರೂ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಅಲ್ಲದೆ, ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ-1971’ಗೆ ತಿದ್ದುಪಡಿ ತಂದು, ರಾಷ್ಟ್ರಗೀತೆ ಅಥವಾ ರಾಷ್ಟ್ರೀಯ ಗೀತೆಯನ್ನು ಹಾಡುವುದನ್ನು ತಡೆದರೆ ಅಥವಾ ಅಡ್ಡಿಪಡಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿತ್ತು.
ಇದನ್ನು ಪ್ರಶ್ನಿಸಿರುವ ಟಿ. ಎಂ. ಕೃಷ್ಣ ಅವರು, “ವಂದೇ ಮಾತರಂ ಗೀತೆಯ ಕೊನೆಯ ನಾಲ್ಕು ಚರಣಗಳಲ್ಲಿ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವತೆಗಳ ಉಲ್ಲೇಖಗಳಿವೆ. ಇದನ್ನು ಕಡ್ಡಾಯವಾಗಿ ಹಾಡುವಂತೆ ಪೀಡಿಸುವುದು ಜಾತ್ಯತೀತ ತತ್ವಕ್ಕೆ ಮತ್ತು ಸಂವಿಧಾನದ ವಿಧಿ 25 (ಧಾರ್ಮಿಕ ಸ್ವಾತಂತ್ರ್ಯ) ಹಾಗೂ ವಿಧಿ 19(1)(ಎ) (ಅಭಿವ್ಯಕ್ತಿ ಸ್ವಾತಂತ್ರ್ಯ) ನೀಡುವ ಹಕ್ಕುಗಳಿಗೆ ಧಕ್ಕೆ ತರುತ್ತದೆ” ಎಂದು ವಾದಿಸಿದ್ದಾರೆ.
This video cannot be played in your browser. Open the video directly
ಅವರ ವಾದವನ್ನು ಆಲಿಸಿದ ಕೋರ್ಟ್, “ಯಾವ ಗೀತೆಯು ‘ರಾಷ್ಟ್ರೀಯ ಗೀತೆ’ ಎಂಬುದನ್ನು ನಿರ್ಧರಿಸುವುದು ಕೋರ್ಟ್‌ನ ಕೆಲಸವಲ್ಲ. ಅದು ಪ್ರಜಾಪ್ರಭುತ್ವ ಸರ್ಕಾರದ ಹಕ್ಕು. ಆದರೆ, ಧಾರ್ಮಿಕ ಕಾರಣಗಳಿಂದಾಗಿ ಹಾಡಲು ಇಷ್ಟವಿಲ್ಲದ ವ್ಯಕ್ತಿಗೆ ಹಾಡುವಂತೆ ಒತ್ತಾಯಿಸುವುದು, ಶಿಕ್ಷೆ ವಿಧಿಸುವುದನ್ನು ಒಪ್ಪಲಾಗದು. ಪ್ರತಿಯೊಬ್ಬರ ಮೂಲಭೂತ ಹಕ್ಕುಗಳ ರಕ್ಷಣೆ ಮುಖ್ಯ” ಎಂದು ಹೇಳಿದೆ.
ವಿಚಾರಣೆ ವೇಳೆ ಮಾತನಾಡಿದ ನ್ಯಾಯಮೂರ್ತಿ ಬಾಗ್ಚಿ ಅವರು 1986ರ ಪ್ರಸಿದ್ಧ ‘ಬಿಜೋಯ್ ಇಮ್ಯಾನುವೆಲ್ vs ಕೇರಳ ರಾಜ್ಯ’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದರು. “ರಾಷ್ಟ್ರಗೀತೆ ಹಾಡುವಾಗ ಗೌರವದಿಂದ ಎದ್ದು ನಿಂತು, ಆದರೆ ತಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ಅದನ್ನು ಹಾಡದಿದ್ದ ಶಾಲೆ ಮಕ್ಕಳ ಪರವಾಗಿ ಅಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅದೇ ತೀರ್ಪಿನ ನಿಯಮಗಳು ಈ ಕಾಯ್ದೆಗೂ ಅನ್ವಯವಾಗಲಿವೆ. ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ಹಾಡದವರ ವಿರುದ್ಧ ಯಾವುದೇ ಕ್ರಿಮಿನಲ್ ಕ್ರಮ ಜರುಗಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಅರ್ಜಿದಾರರ ಪರ ವಾದಮಂಡಿಸಿದ ಹಿರಿಯ ವಕೀಲ ಡಾ. ಎಸ್. ಮುರಳೀಧರ್, “ರಾಷ್ಟ್ರೀಯ ಗೀತೆ ಎಂದರೆ ಏನು ಎಂಬುದನ್ನು ತಿದ್ದುಪಡಿ ಕಾಯ್ದೆಯಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ. ಐತಿಹಾಸಿಕವಾಗಿ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಬಳಸಲಾಗುತ್ತಿತ್ತು. ಈಗ ದಿಢೀರನೆ ಆರೂ ಚರಣಗಳನ್ನು ಕಡ್ಡಾಯಗೊಳಿಸಿರುವುದು ದುರುಪಯೋಗಕ್ಕೆ ದಾರಿ ಮಾಡಿಕೊಡುತ್ತದೆ” ಎಂದು ವಾದಿಸಿದರು.
ಈ ಲೇಖನ ಓದಿದ್ದೀರಾ?: ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ ನಿರೂಪಣೆ
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಅಮೆರಿಕದ ರಾಷ್ಟ್ರಗೀತೆಯಲ್ಲೂ ‘In God We Trust’ ಎಂಬ ಪದಗಳಿವೆ. ಜಾತ್ಯತೀತತೆ ಎಂದರೆ ಇಷ್ಟೊಂದು ಕಿರಿದಾದ ಆಲೋಚನೆಯಲ್ಲ. ಅಲ್ಲದೆ, ಶಾಸನ ರೂಪಿಸುವ ಪ್ರಕ್ರಿಯೆಯು ನಕ್ಸಲೈಟ್‌ಗಳ ಕಲ್ಪನೆಗೆ ತಕ್ಕಂತೆ ನಡೆಯಲು ಸಾಧ್ಯವಿಲ್ಲ” ಎಂದು ಹೇಳಿದರು.
ಸಾಲಿಸಿಟರ್ ಜನರಲ್ ಅವರ ‘ನಕ್ಸಲೈಟ್’ ಪದ ಬಳಕೆಗೆ ವಕೀಲ ಮುರಳೀಧರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮಾತನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಆದರೆ, ತುಷಾರ್ ಮೆಹ್ತಾ ತಮ್ಮ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು, ವಿವಾದಕ್ಕೆ ಸಂಬಂಧಿಸಿದಂತೆ ಲಿಖಿತ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.




