ಮಂಗಳವಾರ ಸುಪ್ರೀಮ್ ಕೋರ್ಟಿನಲ್ಲಿ ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಖ್ಯಾತ ಗಾಯಕ ಟಿ.ಎಂ.ಕೃಷ್ಣ ಅವರನ್ನು ನಕ್ಸಲೈಟ್ ಎಂದು ಕರೆದು ಮಾತಿನ ತೀವ್ರ ಚಕಮಕಿಗೆ ಕಾರಣರಾದರು.
ಈ ಪದವನ್ನು ಹಿಂದಕ್ಕೆ ಪಡೆಯಬೇಕೆಂಬ ಆಗ್ರಹವನ್ನು ಮೆಹ್ತಾ ತಿರಸ್ಕರಿಸಿದರು.
“ಕಾನೂನು ರಚನೆ ನಕ್ಸಲೈಟ್‌ಗಳ ಕಲ್ಪನೆಯ ಪ್ರಕಾರ ನಡೆಯಲು ಸಾಧ್ಯವಿಲ್ಲ” ಎಂಬುದು ಒಂದು ಹಂತದಲ್ಲಿ ಮೆಹ್ತಾ ಪ್ರತಿಕ್ರಿಯೆ ಆಗಿತ್ತು.
‘ವಂದೇ ಮಾತರಂ’ ನ ಆರೂ ಚರಣಗಳ ಹಾಡುವಿಕೆಯ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಖ್ಯಾತ ಗಾಯಕ ಟಿ.ಎಂ. ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭ. ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಎಸ್. ಮುರಳೀಧರ್ ನಡುವೆ ಕಟು ಮಾತುಗಳ ವಿನಿಮಯ ನಡೆಯಿತು.
ಎಲ್ಲ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಿಸುವುದು ಸಂವಿಧಾನದ ಧರ್ಮನಿರಪೇಕ್ಷ ಸ್ವಭಾವಕ್ಕೆ ವಿರುದ್ಧವಾಗಿದೆ ಎಂದು ಕೃಷ್ಣ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಅರ್ಜಿದಾರರ ಅಭಿಪ್ರಾಯಗಳನ್ನು ಉಲ್ಲೇಖಿಸುವಾಗ ತುಷಾರ್ ಮೆಹ್ತಾ “ನಕ್ಸಲೈಟ್” ಎಂಬ ಪದ ಬಳಸಿದ್ದಕ್ಕೆ ಮುರಳೀಧರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆ ಪದವನ್ನು ಹಿಂಪಡೆಯುವಂತೆ ಅವರು ಆಗ್ರಹಿಸಿದರು. ಆಗ್ರಹವನ್ನು ತಳ್ಳಿ ಹಾಕಿದ ಮೆಹ್ತಾ, “ನಾನು ಹೇಳಿದ್ದು ಅದೇ ಸಂವಿಧಾನಬದ್ಧ ಮಾರ್ಗ, ನಕ್ಸಲೈಟ್ ಬಯಸುವ ಮಾರ್ಗವಲ್ಲ ಎಂದು. ಅದಕ್ಕಾಗಿ ನನಗೆ ವಿಷಾದವಿಲ್ಲ” ಎಂದು ಹೇಳಿದರು.
“ರಾಷ್ಟ್ರೀಯ ಹಾಡು” ಯಾವುದು ಎಂದು ತೀರ್ಮಾನಿಸುವುದು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿತು. ಆದರೆ Bijoe Emmanuel ತೀರ್ಪಿನಲ್ಲಿ ಮಾನ್ಯತೆ ಪಡೆದಿರುವಂತೆ, ಆತ್ಮಸಾಕ್ಷಿಯ ಪ್ರಕಾರ ಹಾಡಲು ನಿರಾಕರಿಸುವ ವ್ಯಕ್ತಿಯ ಹಕ್ಕಿಗೆ ರಕ್ಷಣೆ ಇದೆಯೇ ಎಂಬುದನ್ನು ಪರಿಶೀಲಿಸಲು ಒಪ್ಪಿತು.
ನ್ಯಾಯಮೂರ್ತಿ ಬಾಗ್ಚಿ, ಅಮೆರಿಕದ ಉದಾಹರಣೆಯನ್ನು ಉಲ್ಲೇಖಿಸಿ, ಧರ್ಮನಿರಪೇಕ್ಷತೆಯ ಮಾದರಿ ಎಂದು ಪರಿಗಣಿಸಲ್ಪಡುವ ಅಮೆರಿಕದಲ್ಲಿಯೂ “In God We Trust” ಎಂಬ ಪದಗಳನ್ನು ಬಳಸಲಾಗುತ್ತದೆ ಎಂದು ಹೇಳಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್, ‘ವಂದೇ ಮಾತರಂ’ ಗೀತೆಯ ಒಂದೇ ಚರಣವಾಗಲಿ ಅಥವಾ ಎಲ್ಲಾ ಚರಣಗಳಾಗಲಿ ಹಾಡಲು ಆಕ್ಷೇಪಿಸುವ ವ್ಯಕ್ತಿಯನ್ನು ಸರ್ಕಾರವು “ಕ್ರಿಮಿನಲ್ ಸಾಧಕಬಾಧಕಗಳಿಗೆ” ಗುರಿಪಡಿಸಬಾರದು ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.
“ರಾಷ್ಟ್ರೀಯ ಹಾಡು ಯಾವುದು, ಅದರ ಎರಡು ಚರಣಗಳನ್ನೇ ಹಾಡಬೇಕೇ ಅಥವಾ ನಾಲ್ಕು ಚರಣಗಳನ್ನೇ ಹಾಡಬೇಕೇ ಎಂಬುದನ್ನು ಜನತಾಂತ್ರಿಕ ಸರ್ಕಾರವೇ ನಿರ್ಧರಿಸಬೇಕು. ವಂದೇ ಮಾತರಂಗೆ ಸಂಬಂಧಿಸಿದ ರಾಷ್ಟ್ರೀಯ ಭಾವನೆ ಅಥವಾ ಆಶಯಗಳ ಬಗ್ಗೆ ನ್ಯಾಯಾಂಗ ಮರುಮೌಲ್ಯಮಾಪನ ನಮ್ಮ ವ್ಯಾಪ್ತಿಗೆ ಬರುವುದಿಲ್ಲ.”
“ಆದರೆ, ಸಂವಿಧಾನದ ಕಲಂ 25 ಅಥವಾ 26ರ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂದು ಭಾವಿಸುವ ವ್ಯಕ್ತಿಯಾಗಲಿ, ಆತ್ಮಸಾಕ್ಷಿಯ ಆಧಾರದ ಮೇಲೆ ಆಕ್ಷೇಪಿಸುವ ವ್ಯಕ್ತಿಯಾಗಲಿ, ಒಂದೇ ಚರಣ ಅಥವಾ ಎಲ್ಲಾ ಚರಣಗಳನ್ನು ಹಾಡುವುದನ್ನು ನಿರಾಕರಿಸಿದ ಕಾರಣಕ್ಕೆ ಅವರನ್ನು ಕ್ರಿಮಿನಲ್ ಪರಿಣಾಮಗಳಿಗೆ ಒಳಪಡಿಸಬಾರದು” ಎಂದು ನ್ಯಾಯಮೂರ್ತಿ ಜೊಯ್ಮಾಲಾ ಬಾಗ್ಚಿ ಎಂಬ ಮೌಖಿಕ ಅಭಿಪ್ರಾಯ ಪ್ರಕಟಿಸಿದ್ದಾಗಿ ಲೈವ್ ಲಾ ವರದಿ ಮಾಡಿದೆ.
ಈ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.
ಟಿ.ಎಂ.ಕೃಷ್ಣ ವಾದ ಏನು?
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು, ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971’ಕ್ಕೆ 2026ರಲ್ಲಿ ಮಾಡಲಾದ ತಿದ್ದುಪಡಿಯ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿತು..
ಈ ತಿದ್ದುಪಡಿಯ ಮೂಲಕ ಕೇಂದ್ರ ಸರ್ಕಾರವು ‘ವಂದೇ ಮಾತರಂ’ಗೆ ಅನಾದರ ತೋರುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಎಂದು ಸಾರಿದೆ. ಜೊತೆಗೆ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎಲ್ಲ ಆರು ಚರಣಗಳನ್ನು ಹಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ಹೊರಡಿಸಿದೆ.
ಈ ನಿರ್ದೇಶನಗಳನ್ನೂ ಟಿ.ಎಂ.ಕೃಷ್ಣ ಅವರ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಸಂವಿಧಾನದ ಕಲಂ 32ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಖ್ಯಾತ ಕರ್ನಾಟಕ ಸಂಗೀತಗಾರ ಟಿ.ಎಂ. ಕೃಷ್ಣ, ವಂದೇ ಮಾತರಂನ ಮೂರನೇಯಿಂದ ಆರನೇ ಚರಣಗಳವರೆಗೆ ಹಿಂದೂ ದೇವತೆಗಳ ಆರಾಧನೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆ ಭಾಗಗಳನ್ನು ಕಡ್ಡಾಯವಾಗಿ ಹಾಡಿಸುವುದು ದೇಶದ ಧರ್ಮನಿರಪೇಕ್ಷ ಸ್ವಭಾವಕ್ಕೆ ಧಕ್ಕೆ ತರುತ್ತದೆ ಎಂದು ವಾದಿಸಿದ್ದಾರೆ.
“… ಗೀತೆಯ ಕೊನೆಯ ನಾಲ್ಕು ಚರಣಗಳು, ನಿಚ್ಚಳವಾಗಿ ದೇವತೆಗಳನ್ನು ಆಹ್ವಾನಿಸುತ್ತವೆ. ಇಂತಹ ಗೀತೆಯ ಎಲ್ಲ ಆರು ಚರಣಗಳನ್ನು ಶಿಕ್ಷೆಯ ಬೆದರಿಕೆಯೊಡ್ಡಿ ಹಾಡುವಂತೆ ಕಡ್ಡಾಯಗೊಳಿಸುವ ಮೂಲಕ, ಐತಿಹಾಸಿಕವಾಗಿ ವಿವಾದಿತವಾದ ಒಂದು ಸಂಕೇತವನ್ನು ಸರ್ಕಾರ ಕಡ್ಡಾಯ ಒಪ್ಪಿಗೆಯ ಸಿದ್ಧಾಂತವಾಗಿ ಪರಿವರ್ತಿಸುತ್ತಿದೆ” ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
2026ರ ತಿದ್ದುಪಡಿಯ ಮೂಲಕ 1971ರ ಕಾಯ್ದೆಯ ಸೆಕ್ಷನ್ 3 ಅನ್ನು ಬದಲಾಯಿಸಲಾಗಿದೆ. ಅದರ ಪ್ರಕಾರ, ರಾಷ್ಟ್ರೀಯ ಗೀತೆ ಅಥವಾ ರಾಷ್ಟ್ರೀಯ ಹಾಡಿನ ಗಾಯನವನ್ನು ಉದ್ದೇಶಪೂರ್ವಕವಾಗಿ ತಡೆಯುವವರು ಅಥವಾ ಅದನ್ನು ಹಾಡುತ್ತಿರುವ ಸಭೆಗೆ “ಅಡ್ಡಿ” ಉಂಟುಮಾಡುವವರು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡಕ್ಕೂ ಒಳಗಾಗಬಹುದು.
ಇದಲ್ಲದೆ, ‘ವಂದೇ ಮಾತರಂ’ ಮತ್ತು ‘ಜನ ಗಣ ಮನ’ ಎರಡನ್ನೂ ಹಾಡುವ ಅಥವಾ ವಾದ್ಯಗಳಲ್ಲಿ ನುಡಿಸುವ ಸಂದರ್ಭಗಳಲ್ಲಿ, ಮೊದಲು ರಾಷ್ಟ್ರೀಯ ಹಾಡಾದ ವಂದೇ ಮಾತರಂ ಮತ್ತು ನಂತರ ರಾಷ್ಟ್ರಗೀತೆಯಾದ ಜನ ಗಣ ಮನ ಹಾಡಬೇಕು ಎಂಬುದನ್ನೂ ತಿದ್ದುಪಡಿ ನಿಗದಿಪಡಿಸುತ್ತದೆ.
‘ವಂದೇ ಮಾತರಂ’ ನ್ನು ಸಂವಿಧಾನ ರಚನಾ ಸಭೆ ಎಂದಿಗೂ ಅಧಿಕೃತವಾಗಿ “ರಾಷ್ಟ್ರೀಯ ಹಾಡು” ಎಂದು ಅಂಗೀಕರಿಸಿಲ್ಲ. ಸಂವಿಧಾನದ ಕಲಂ 51A(a)ಯಲ್ಲಿಯೂ ಅದರ ಉಲ್ಲೇಖವಿಲ್ಲ. 1971ರ ಕಾಯ್ದೆಯಡಿ ಐದು ದಶಕಗಳಿಗೂ ಹೆಚ್ಚು ಕಾಲ ಇದಕ್ಕೆ ಯಾವುದೇ ‘ಕಾನೂನು ರಕ್ಷಣೆ’ ನೀಡಲಾಗಿರಲಿಲ್ಲ ಎಂಬುದನ್ನೂ ಕೃಷ್ಣ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ತಿದ್ದುಪಡಿ ಕಾಯ್ದೆಯ ಸೆಕ್ಷನ್ 3(b)ಯಲ್ಲಿ ಬಳಸಿರುವ “disturbance” ಅಥವಾ “ಅಡ್ಡಿ” ಎಂಬ ಪದಕ್ಕೆ ಸ್ಪಷ್ಟ ವ್ಯಾಖ್ಯಾನವಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಈ ತಿದ್ದುಪಡಿಯು ಧರ್ಮದ ಆಧಾರದ ಮೇಲೆ ಪರೋಕ್ಷ ಭೇದಭಾವಕ್ಕೆ ಕಾರಣವಾಗುತ್ತದೆ. ಸರ್ಕಾರದ ಕ್ರಮವನ್ನು “ಡಾಗ್-ವಿಸಲ್ ಕಾನೂನು (ಅಲ್ಪಸಂಖ್ಯಾತರ ಮೇಲೆ ಛೂ ಬಿಡುವ ಕಾನೂನು)” ಎಂದು ಅರ್ಜಿಯಲ್ಲಿ ಬಣ್ಣಿಸಲಾಗಿದೆ.




