ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದಾಗಿದ್ದ ‘ನೀಟ್-ಯುಜಿ’ ಮರುಪರೀಕ್ಷೆಯು ಜೂನ್ 21ರಂದು ನಡೆಯಲಿದ್ದು, ಪರೀಕ್ಷೆಯನ್ನು ಸುಗಮ, ಸುರಕ್ಷಿತ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೂನ್ 20ರಂದು ದೇಶಾದ್ಯಂತ ಬೃಹತ್ ‘ಅಣಕು ಕಾರ್ಯಾಚರಣೆ’ ಹಮ್ಮಿಕೊಂಡಿದೆ.
ಮೇ 3ರಂದು ನಡೆದಿದ್ದ ಮೂಲ ಪರೀಕ್ಷೆಯನ್ನು ಅಕ್ರಮದ ಆರೋಪಗಳ ಕಾರಣ ರದ್ದುಗೊಳಿಸಲಾಗಿತ್ತು (ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ). ಇದೀಗ ಜೂನ್ 21ರಂದು ಮರುಪರೀಕ್ಷೆ ನಿಗದಿಯಾಗಿದೆ. ದೇಶದ 551 ಹಾಗೂ ವಿದೇಶದ 14 ನಗರಗಳು ಸೇರಿದಂತೆ ಒಟ್ಟು 5,000ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 22.79 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಧ್ಯಾಹ್ನ 2:00 ಗಂಟೆಯಿಂದ ಸಂಜೆ 5:15ರವರೆಗೆ ‘ಪೆನ್ ಮತ್ತು ಪೇಪರ್’ ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು, ವಿಕಲಚೇತನ ವಿದ್ಯಾರ್ಥಿಗಳಿಗೆ ಸಂಜೆ 6:20ರವರೆಗೆ ಹೆಚ್ಚುವರಿ ಸಮಯಾವಕಾಶ ನೀಡಲಾಗಿದೆ.
ಪರೀಕ್ಷಾ ಸಿದ್ಧತೆಯನ್ನು ಪರಿಶೀಲಿಸಲು ಜೂನ್ 20ರಂದು ಬೆಳಿಗ್ಗೆ 9 ಗಂಟೆಯಿಂದಲೇ ಅಣಕು ಕಾರ್ಯಾಚರಣೆ ಶುರುವಾಗಲಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ಸೇರಿದಂತೆ ತ್ರಿ-ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಈ ಬೃಹತ್ ಪ್ರಕ್ರಿಯೆಗಾಗಿ 2 ಲಕ್ಷಕ್ಕೂ ಹೆಚ್ಚು ಆಡಳಿತ ಸಿಬ್ಬಂದಿ ಹಾಗೂ 2.5 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ 674 ‘ಸಿಟಿ ಕೋ-ಆರ್ಡಿನೇಟರ್’ಗಳು ಮತ್ತು 6,669 ವೀಕ್ಷಕರನ್ನು ನೇಮಿಸಲಾಗಿದೆ. ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳ ಸಾಗಣೆ ಹಾಗೂ ಭದ್ರತೆಯ ಹೊಣೆಯನ್ನು ಅರೆಸೇನಾ ಪಡೆಗಳಿಗೆ ವಹಿಸಲಾಗಿದೆ.
ಇದನ್ನು ಓದಿದ್ದೀರಾ? ಮೈದಾನದಲ್ಲಿ ಮಾಸದ ಮೋಡಿ: 39ರ ವಯಸ್ಸಿನಲ್ಲೂ ಮಿಂಚುತ್ತಿರುವ ಮೆಸ್ಸಿ; ಫುಟ್‌ಬಾಲ್ ದಿಗ್ಗಜರ ಸ್ವಾರಸ್ಯಗಳು
ಪರೀಕ್ಷಾ ಕೇಂದ್ರಗಳು ಮತ್ತು ರೋಲ್ ನಂಬರ್‌ಗಳು ಬದಲಾಗಿರುವ ಸಾಧ್ಯತೆ ಇರುವುದರಿಂದ, ವಿದ್ಯಾರ್ಥಿಗಳು ಕಡ್ಡಾಯವಾಗಿ ಹೊಸ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಎನ್‌ಟಿಎ ಸೂಚಿಸಿದೆ. ಇದಕ್ಕಾಗಿ ಎಸ್ಎಂಎಸ್, ಇ-ಮೇಲ್ ಹಾಗೂ ವಾಟ್ಸ್‌ಆ್ಯಪ್ ಮೂಲಕ ಅಭ್ಯರ್ಥಿಗಳಿಗೆ ಜ್ಞಾಪನೆ ಕಳುಹಿಸಲಾಗುತ್ತಿದೆ. ಮೇ 3ರ ಪರೀಕ್ಷೆಯ ಪ್ರವೇಶ ಪತ್ರವು ಈ ಮರುಪರೀಕ್ಷೆಗೆ ಮಾನ್ಯವಾಗಿರುವುದಿಲ್ಲ.
ಪ್ರಶ್ನೆಪತ್ರಿಕೆ ಸೋರಿಕೆ, ಹಣದ ಬೇಡಿಕೆಯಂತಹ ನಕಲಿ ಸಂದೇಶಗಳು ಅಥವಾ ಟೆಲಿಗ್ರಾಂ ವದಂತಿಗಳಿಗೆ ಕಿವಿಗೊಡಬಾರದು ಎಂದು ಎಚ್ಚರಿಸಲಾಗಿದೆ. ಎನ್‌ಟಿಎ ಎಂದಿಗೂ ಅಭ್ಯರ್ಥಿಗಳಿಂದ ಹಣದ ಬೇಡಿಕೆ ಇಡುವುದಿಲ್ಲ ಅಥವಾ ಅನಧಿಕೃತ ಲಿಂಕ್‌ಗಳ ಮೂಲಕ ಅಡ್ಮಿಟ್ ಕಾರ್ಡ್ ಹಂಚಿಕೊಳ್ಳುವುದಿಲ್ಲ. ಯಾವುದೇ ಪರೀಕ್ಷಾ ವಿವರಗಳು ಮತ್ತು ಅಧಿಕೃತ ಮಾಹಿತಿಗಾಗಿ ಕೇವಲ ಎನ್‌ಟಿಎಯ ಅಧಿಕೃತ ವೆಬ್‌ಸೈಟ್ (neet.nta.nic.in) ಅನ್ನು ಮಾತ್ರ ಅವಲಂಬಿಸುವಂತೆ ಕಟ್ಟುನಿಟ್ಟಿನ ಸಲಹೆ ನೀಡಲಾಗಿದೆ.




