ಚುನಾವಣಾ ಆಯೋಗ ಹಮ್ಮಿಕೊಂಡಿರುವ ಈ ಎಸ್ಐಆರ್-ಪ್ರಕ್ರಿಯೆಯಿಂದಾಗಿ ಕ್ಷೇತ್ರದ ಯಾವೊಬ್ಬ ಮತದಾರನೂ ಹೊರಗುಳಿಯಬಾರದು. ಹಾಗೂ ಈ ಎಸ್ಐಆರ್-ಪ್ರಕ್ರಿಯೆಗೆ ಒಳಗಾಗುವ ಜನ-ಸಾಮಾನ್ಯರಿಗೆ ಅನಾನುಕೂಲ ಆಗದಂತೆ ದಾಖಲಾತಿಗಳ-ಲಭ್ಯತೆಯ ಕುರಿತು ಜಾಗೃತಿ ಮೂಡಿಸಲಾಗುವು ಎಂದು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ. ಬಿ. ಶಶಿಧರ್ (ಟೂಡಾ) ತಿಳಿಸಿದರು
ತಿಪಟೂರು ನಗರದ ರೋಟರಿ ಭವನದಲ್ಲಿ ಜನಸ್ಪಂದನ ಟ್ರಸ್ಟ್ ಮತ್ತು ಜನಪರ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಮಧ್ಯಾಹ್ನ ಎಸ್ಐಆರ್ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಕ್ಷರವಂಚಿತರು, ಅಲೆಮಾರಿ-ಆದಿವಾಸಿಗಳು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಎಸ್ಐಆರ್ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಮುಖ್ಯವಾಗಿ, ಮತದಾರರ ಮತ-ಅಧಿಕಾರ ಹಕ್ಕನ್ನು ಸಂರಕ್ಷಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದರು.

ಅಕ್ರಮ ವಲಸಿಗರು, ಬಾಂಗ್ಲಾ ನುಸುಳುಕೋರರನ್ನು ಪತ್ತೆ ಹಚ್ಚುವ ಕೆಲಸಕ್ಕಾಗಿ ಎಸ್ಐಆರ್-ಪ್ರಕ್ರಿಯೆಯನ್ನು ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಇದುವರೆಗೂ ಎಸ್ಐಆರ್-ಪ್ರಕ್ರಿಯೆ ಪೂರ್ಣಗೊಳಿಸಿರುವ ರಾಜ್ಯಗಳಲ್ಲಿ ಎಷ್ಟು-ಮಂದಿ ಅಕ್ರಮ ವಲಸಿಗರನ್ನು ಅಥವಾ ನುಸುಳುಕೋರರನ್ನು ಗುರ್ತಿಸಲಾಗಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಈ ಬಗ್ಗೆ ಯಾವುದೇ ಸ್ಪಷ್ಟ ವಿವರವನ್ನು ದೇಶದ ನಾಗರಿಕರ ಮುಂದೆ ಪ್ರಸ್ತುತಪಡಿಸದೆ (ಗಡಿ ರಾಜ್ಯಗಳನ್ನು ಹೊರತುಪಡಿಸಿ) ದೇಶದ ಉದ್ದಗಲಕ್ಕೂ ಈ ಎಸ್ಐಆರ್-ಜಾರಿ ಮಾಡಿರುವುದು ಎಷ್ಟು ಪ್ರಯೋಜನಕಾರಿ ಎಂಬುದರ ಬಗ್ಗೆ ಅನುಮಾನಗಳು ಮೂಡಿವೆ ಎಂದರು

ಜಾಗೃತ ಕರ್ನಾಟಕದ ಆದಂ ಖಾನ್ ಎಸ್ಐಆರ್-ಪ್ರಕ್ರಿಯೆಯಲ್ಲಿ ಮತದಾರರು ವಹಿಸಬೇಕಾದ ಜಾಗ್ರತೆ ಮತ್ತು ಪಾಲಿಸಬೇಕಾದ ಕ್ರಮಗಳನ್ನು ಹಂತಹಂತವಾಗಿ ಪಿಪಿಟಿ-ಪ್ರಸೆಂಟೇಷನ್ ಜೊತೆ ವಾಲೆಂಟೀರ್ಸ್’ಗಳಿಗೆ ವಿವರಿಸಿದರು.
ಕಾರ್ಯಾಗಾರದಲ್ಲಿ, ಎಸ್ಐಆರ್-ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಆಸಕ್ತರಿದ್ದ ನೂರಾರು ಮಂದಿ ನಾಗರಿಕರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ನೂರಾರು ಮಂದಿ ವಾಲೆಂಟೀರ್ಸ್’ಗಳ ಜೊತೆ ಜನಸ್ಪಂದನ ಟ್ರಸ್ಟ್ ಹಾಗೂ ಇತರೇ ಜನಪರ ಸಂಘಟನೆಗಳ ಶ್ರೀಕಾಂತ್ ಕೆಳಹಟ್ಟಿ, ತಾಸೀನ್ ಮೈಸೂರಿ, ಅಲ್ಲಾಬಕಾಶ್, ಸೈಯದ್ ಸಾದತ್, ಇಂದ್ರಮ್ಮ,ರಾಮಕೃಷೃಪ್ಪ, ರಾಜಮ್ಮ, ಮುಖಂಡ ನವೀನ್ ಸಾರ್ಥವಳ್ಳಿ, ಸಮೀ ಉಲ್ಲಾ,
ಮಾಜಿ ಗ್ರಾಪಂ ಅಧ್ಯಕ್ಷ ಉಮಾಮಹೇಶ್, ಶಫಿ ಉಲ್ಲಾ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.




