ಒಡಿಶಾದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ, ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಇಸಿಒ) ಹಾಗೂ 2001ರ ಬ್ಯಾಚ್‌ನ ಐಎಎಸ್ ಅಧಿಕಾರಿ ಆರ್ ಎಸ್ ಗೋಪಾಲನ್ ಅವರು ಸೇವಾ ಅವಧಿ ಮುಗಿಯುವ ಮುನ್ನವೇ ಸ್ವಯಂ ನಿವೃತ್ತಿಗೆ (VRS) ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ನಡೆದ SIR ಪ್ರಕ್ರಿಯೆಯ ಸುತ್ತ ಹಲವು ರಾಜಕೀಯ ವಿವಾದಗಳು ಮತ್ತು ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ, ಅವರ ಈ ದಿಢೀರ್ ನಿರ್ಧಾರವು ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: EC ವಿವಾದ | ದಶಕಗಳ ವೈರತ್ವ ಮರೆತು ಒಂದಾದ TMC-CPIM
ಇತ್ತೀಚೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ, ಪ್ರತಿಪಕ್ಷ ಬಿಜು ಜನತಾ ದಳ (ಬಿಜೆಡಿ) ಮತ್ತು ಕಾಂಗ್ರೆಸ್ SIR ಪ್ರಕ್ರಿಯೆಯಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಸರಣಿ ಪ್ರತಿಭಟನೆ ಹಾಗೂ ಮನವಿಗಳನ್ನು ಸಲ್ಲಿಸಿದ್ದವು. ಎಸ್‌ಐಆರ್ ಕಾರ್ಯಕ್ಕೆ ನಿಕಟವಾಗಿದ್ದ ಹಿರಿಯ ಅಧಿಕಾರಿಯೊಬ್ಬರು ಪ್ರಕ್ರಿಯೆ ಮುಗಿದ ತಕ್ಷಣವೇ ದಿಢೀರ್ ನಿವೃತ್ತಿ ಕೋರಿರುವುದು ಸಾರ್ವಜನಿಕರಲ್ಲಿ ಮತ್ತು ರಾಜಕೀಯ ವಲಯದಲ್ಲಿ ಹಲವು ಸಂಶಯಗಳಿಗೆ ಕಾರಣವಾಗಿದೆ.
ಆದರೆ ತಮ್ಮ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಗೋಪಾಲನ್, “ನಾನು 25 ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪಿಂಚಣಿಗೆ ಅರ್ಹನಾಗಿದ್ದೇನೆ. ನನಗೆ ಇನ್ನು ಕೇವಲ ಎರಡು ವರ್ಷಗಳ ಸೇವಾ ಅವಧಿ ಉಳಿದಿತ್ತು. ಒಡಿಶಾ ಆಡಳಿತವು ನನ್ನನ್ನು ಅತ್ಯುತ್ತಮವಾಗಿ ನೋಡಿಕೊಂಡಿದೆ. ನನ್ನ ಈ ನಿರ್ಧಾರ ಸಂಪೂರ್ಣವಾಗಿ ವೈಯಕ್ತಿಕ ಕಾರಣಗಳಿಂದ ಕೂಡಿದ್ದಾಗಿದೆ. ಭವಿಷ್ಯದಲ್ಲಿ ವೃತ್ತಿಪರ ಕ್ಷೇತ್ರದಲ್ಲಿ ಬೇರೆ ಅವಕಾಶಗಳನ್ನು ಅನ್ವೇಷಿಸಲು ಇದು ಸೂಕ್ತ ಸಮಯ ಎಂದು ಭಾವಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳನ್ನು ತಳ್ಳಿಹಾಕಿದ ಅವರು, “ಎಸ್ಐಆರ್ ಪ್ರಕ್ರಿಯೆ ರಾಜ್ಯದಲ್ಲಿ ಅತ್ಯಂತ ಸುಲಲಿತವಾಗಿ ಮುಗಿದಿದೆ. ನನ್ನ ನಿರ್ಧಾರಕ್ಕೂ ಎಸ್‌ಐಆರ್ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ನಿರ್ಧಾರದಿಂದ ಯಾರಾದರೂ ಸಂತೋಷಪಡಲು ಬಯಸಿದರೆ, ಅವರು ಸಂತೋಷವಾಗಿರಲಿ. ಅದರಲ್ಲಿ ತಪ್ಪೇನೂ ಇಲ್ಲ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.




