ಅಯೋಧ್ಯೆ ರಾಮಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ಸದ್ಯ ನಡೆಯುತ್ತಿದೆ. ಈಗಾಗಲೇ RSS ತಿಮಿಂಗಲಗಳನ್ನು ಪ್ರಕರಣದಿಂದ ರಕ್ಷಿಸಲಾಗುತ್ತಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಇವೆಲ್ಲವುದರ ನಡುವೆ ಈ ದೇಣಿಗೆ ಲೂಟಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ, ಹಿರಿಯ ಐಎಎಸ್ ಅಧಿಕಾರಿ ವಿಜಯ್ ವಿಶ್ವಾಸ್ ಪಂತ್ ಮೇಲಿರುವ ‘ಫೋರ್ಜರಿ’ ಕೇಸ್ ಮುನ್ನೆಲೆಗೆ ಬಂದಿದೆ.
ಸದ್ಯ ರಾಮಮಂದಿರದಲ್ಲಿ ದೇಣಿಗೆ ದರೋಡೆ, ನಕಲಿ ರಶೀದಿ ಸೃಷ್ಟಿಸಿ ಭಕ್ತರ ದೇಣಿಗೆಗಳನ್ನು ಲೂಟಿ ಮಾಡಿರುವ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿ ವಿಜಯ್ ವಿಶ್ವಾಸ್ ಪಂತ್ ಅವರೇ ಫೋರ್ಜರಿ (ನಕಲಿ ದಾಖಲೆ ಸೃಷ್ಟಿ) ಪ್ರಕರಣದ ಆರೋಪಿ ಎಂಬುದು ಬಯಲಾಗಿದೆ! ನಕಲಿ ದಾಖಲೆ ಸೃಷ್ಟಿಸಿದ ಆರೋಪ ಹೊತ್ತಿರುವ ವ್ಯಕ್ತಿಯಿಂದ ಪಾರದರ್ಶಕ ತನಿಖೆಯನ್ನು ನಿರೀಕ್ಷಿಸುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ: ರಾಮಮಂದಿರ ಲೂಟಿ | ತನಿಖೆ-ಬಂಧನದಿಂದ RSSನ ತಿಮಿಂಗಿಲಗಳು ಪಾರು!
ವಿವಾದಕ್ಕೆ ಕಾರಣವಾದ 2019ರ ಮೀರತ್ ಎಫ್‌ಐಆರ್ (Case No. 0092)
ಮಾಧ್ಯಮಗಳು ಮತ್ತು ಪೊಲೀಸ್ ದಾಖಲೆಗಳ ಮೂಲಗಳ ಪ್ರಕಾರ, ವಿಜಯ್ ವಿಶ್ವಾಸ್ ಪಂತ್ ಅವರು ಈ ಹಿಂದೆ ಮೀರತ್ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಮೀರತ್‌ನ ಪರೀಕ್ಷಿತ್‌ಗಢ್ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ದಾಖಲಾದ ಪ್ರಕರಣ ಸಂಖ್ಯೆ 0092 ರ ಎಫ್‌ಐಆರ್‌ನಲ್ಲಿ ವಿಜಯ್ ವಿಶ್ವಾಸ್ ಪಂತ್ ಅವರ ಹೆಸರಿದೆ.
ಈ ವಂಚನೆ ಜಾಲದ ಎಫ್‌ಐಆರ್‌ನಲ್ಲಿ ಅವರನ್ನು ಆರೋಪಿ ಸಂಖ್ಯೆ 14 ಎಂದು ಹೆಸರಿಸಲಾಗಿದೆ. ಪಂತ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 420 (ವಂಚನೆ) ಮತ್ತು ಸೆಕ್ಷನ್ 465 (ನಕಲಿ ದಾಖಲೆ ಸೃಷ್ಟಿ) ಸೇರಿದಂತೆ ಹಲವು ಗಂಭೀರ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಅಷ್ಟು ಮಾತ್ರವಲ್ಲದೆ ಈ ಪ್ರಕರಣವು ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದಿದೆ.
ರಾಮಮಂದಿರ ಟ್ರಸ್ಟ್‌ನ ದೇಣಿಗೆ ಕಳ್ಳತನ ಪ್ರಕರಣವು ಅತ್ಯಂತ ಸೂಕ್ಷ್ಮ ಹಾಗೂ ದೇಶಾದ್ಯಂತ ಕೋಟ್ಯಂತರ ಭಕ್ತರ ಭಾವನೆಗಳಿಗೆ ಸಂಬಂಧಿಸಿದ ಪ್ರಕರಣ. ಅಂತಹ ಪ್ರಕರಣದ ತನಿಖೆಯನ್ನು ಇಂತಹ ವಿವಾದಿತ ಅಧಿಕಾರಿಗೆ ಉತ್ತರ ಪ್ರದೇಶ ಸರ್ಕಾರ ವಹಿಸಿರುವುದು ಏಕೆ? ಇದರ ಹಿಂದೆ ಪ್ರಮುಖ ಆರೋಪಿಗಳನ್ನು ರಕ್ಷಿಸುವ ಷಡ್ಯಂತ್ರ ಅಡಗಿದೆಯೇ? ತನಿಖೆಯನ್ನು ಹಳ್ಳಹಿಡಿಸಲು ಈ ರೀತಿ ಮಾಡಲಾಗಿದೆಯೇ? – ಹೀಗೆ ಹಲವು ಗುಮಾನಿಗಳು ಎದ್ದಿವೆ.
ಇದನ್ನೂ ಓದಿ: ರಾಮಮಂದಿರ, ಬದರಿನಾಥದ ನಂತರ ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲೂ ದೇಣಿಗೆ ಲೂಟಿ ಬಯಲು!
ಅಷ್ಟಕ್ಕೂ ತಮ್ಮದೇ ತಲೆಯ ಮೇಲೆ ಫೋರ್ಜರಿ ಮತ್ತು ವಂಚನೆಯ ಆರೋಪದ ತೂಗುಗತ್ತಿ ಇಟ್ಟುಕೊಂಡಿರುವ ಅಧಿಕಾರಿಯೊಬ್ಬರು ರಾಮಮಂದಿರದ ರಶೀದಿ ಫೋರ್ಜರಿ ಮತ್ತು ಹಣದ ದುರುಪಯೋಗ ಪ್ರಕರಣದ ನಿಷ್ಪಕ್ಷಪಾತ ತನಿಖೆ ಮಾಡಲು ಹೇಗೆ ಸಾಧ್ಯ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಇತ್ತೀಚೆಗಷ್ಟೇ ವಿಜಯ್ ವಿಶ್ವಾಸ್ ಪಂತ್ ನೇತೃತ್ವದ ಮೂವರು ಸದಸ್ಯರ ಎಸ್‌ಐಟಿ ತಂಡವು ರಾಮಮಂದಿರದ ಪ್ರಾಥಮಿಕ ತನಿಖಾ ವರದಿಯನ್ನು ರಾಜ್ಯ ಗೃಹ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರಿಗೆ ಸಲ್ಲಿಸಿದೆ. ಈ ವರದಿಯಲ್ಲಿ ಬ್ಯಾಂಕ್ ಸಿಬ್ಬಂದಿ ಹಾಗೂ ಕ್ಲರ್ಕ್‌ಗಳ ಭಾರಿ ಭ್ರಷ್ಟಾಚಾರವನ್ನು ಎತ್ತಿಹಿಡಿಯಲಾಗಿದೆ. ಆದರೆ ಈಗ ಸ್ವತಃ ತನಿಖಾಧಿಕಾರಿಯದ್ದೇ ಹಳೆಯ ‘ಫೋರ್ಜರಿ’ ಕೇಸ್ ಮುನ್ನೆಲೆಗೆ ಬಂದಿರುವುದರಿಂದ, ಈ ಎಸ್‌ಐಟಿ ನೀಡುವ ಅಂತಿಮ ವರದಿಯನ್ನು ನಂಬುವುದು ಹೇಗೆ?




