ಪಶ್ಚಿಮ ಏಷ್ಯಾ ಬಿಕ್ಕಟ್ಟನ್ನು ನಿಭಾಯಿಸಲು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮಿತವಾಗಿ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ನೀಡಿರುವ ಕರೆಗೆ ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಚುನಾವಣೆಗಳು ಮುಗಿದ ಬಳಿಕವಷ್ಟೇ ಪ್ರಧಾನಿ ದೇಶಕ್ಕೆ ಉಪದೇಶ ನೀಡುತ್ತಿದ್ದಾರೆ. ಈ ‘ರಾಜಿ ಮಾಡಿಕೊಂಡ ಪ್ರಧಾನಿ’ಗೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಉಳಿದಿಲ್ಲ” ಎಂದು ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ಸೋಮವಾರ ತೀವ್ರ ವಾಗ್ದಾಳಿ ನಡೆಸಿವೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿಯವರ ಈ ಹೇಳಿಕೆಗಳನ್ನು ‘ಅವರ ವೈಫಲ್ಯದ ಸಾಕ್ಷ್ಯಗಳು’ ಎಂದು ಟೀಕಿಸಿದ್ದಾರೆ. “ಚಿನ್ನ ಖರೀದಿಸಬೇಡಿ, ವಿದೇಶಕ್ಕೆ ಹೋಗಬೇಡಿ, ಪೆಟ್ರೋಲ್ ಬಳಕೆ ತಗ್ಗಿಸಿ, ರಸಗೊಬ್ಬರ ಮತ್ತು ಅಡುಗೆ ಎಣ್ಣೆ ಬಳಕೆಯನ್ನು ಕಡಿತಗೊಳಿಸಿ, ಮೆಟ್ರೋದಲ್ಲಿ ಪ್ರಯಾಣಿಸಿ, ಮನೆಯಿಂದಲೇ ಕೆಲಸ ಮಾಡಿ ಎಂದು ಜನರಿಂದ ತ್ಯಾಗವನ್ನು ನಿರೀಕ್ಷಿಸುತ್ತಿರುವ ಮೋದಿಯವರ ಮಾತುಗಳು ಉಪದೇಶವಲ್ಲ, ಬದಲಾಗಿ ಅವರ ವೈಫಲ್ಯದ ನೈಜ ಪ್ರತಿಬಿಂಬ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
12 ವರ್ಷಗಳ ಆಡಳಿತದಲ್ಲಿ ಅವರು ದೇಶವನ್ನು ಎಂತಹ ದುಸ್ಥಿತಿಗೆ ತಂದಿದ್ದಾರೆಂದರೆ, ಜನರು ಏನು ಖರೀದಿಸಬೇಕು, ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು ಎಂಬುದನ್ನೂ ಸರ್ಕಾರವೇ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ರಾಹುಲ್ ‘ಎಕ್ಸ್’ ನಲ್ಲಿ ಕಿಡಿಕಾರಿದ್ದಾರೆ. ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮೋದಿ ನೀಡಿದ ಕರೆಗೆ ಪ್ರತಿಕ್ರಿಯಿಸಿರುವ ಅವರು, “ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅವರು ಪ್ರತಿ ಬಾರಿಯೂ ಜವಾಬ್ದಾರಿಯನ್ನು ಜನರ ಮೇಲೆ ಹೊರಿಸುತ್ತಾರೆ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ “ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದಾಗಲೇ ಅರ್ಥವ್ಯವಸ್ಥೆಯ ಕುಸಿತ, ರೂಪಾಯಿ ಮೌಲ್ಯದ ನಿರಂತರ ಪತನ, ಇಂಧನ, ಎಲ್‌ಪಿಜಿ ಮತ್ತು ರಸಗೊಬ್ಬರಗಳ ಕೊರತೆ, ಆಹಾರ ಭದ್ರತೆಗೆ ಎದುರಾಗಿರುವ ಆತಂಕ ಹಾಗೂ ಎಂಎಸ್‌ಎಂಇ ವಲಯದ ಬಿಕ್ಕಟ್ಟಿನ ಬಗ್ಗೆ ಕಾಂಗ್ರೆಸ್ ಎಚ್ಚರಿಸಿತ್ತು. ಆದರೆ ಆ ಸಮಯದಲ್ಲಿ ಪ್ರಧಾನಿಯವರು ಚುನಾವಣಾ ಪ್ರಚಾರದಲ್ಲಿ, ರೋಡ್ ಶೋಗಳಲ್ಲಿ ಮಗ್ನರಾಗಿದ್ದರು. ‘ಎಲ್ಲವೂ ಚೆನ್ನಾಗಿದೆ’ (ಸಬ್ ಚಂಗಾ ಸಿ) ಎನ್ನುತ್ತಿದ್ದರು. ಇದೀಗ ಚುನಾವಣೆ ಮುಗಿದ ಬಳಿಕ ದೇಶಕ್ಕೆ ಪಾಠ ಮಾಡುತ್ತಿದ್ದಾರೆ. ಮೋದೀಜಿ, ನಿಮ್ಮ 12 ವರ್ಷಗಳ ವೈಫಲ್ಯದ ಗೂಬೆಯನ್ನು ಜನರ ಮೇಲೆ ಕೂರಿಸಬೇಡಿ” ಎಂದು ಹರಿಹಾಯ್ದಿದ್ದಾರೆ.
ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!
ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಮಾತನಾಡಿ, “ಚುನಾವಣೆ ಮುಗಿದ ತಕ್ಷಣವೇ ಬಿಜೆಪಿಗೆ ಬಿಕ್ಕಟ್ಟು ಅರಿವಿಗೆ ಬಂದಿದೆ. ಆದರೆ ದೇಶಕ್ಕೆ ಇರುವ ಏಕೈಕ ‘ಬಿಕ್ಕಟ್ಟು’ ಎಂದರೆ ಅದು ಬಿಜೆಪಿ ಮಾತ್ರ. ಇಷ್ಟೆಲ್ಲಾ ನಿರ್ಬಂಧಗಳನ್ನು ವಿಧಿಸುವುದಾದರೆ, ‘5 ಟ್ರಿಲಿಯನ್ ಡಾಲರ್ ಆರ್ಥಿಕತೆ’ ಎಂಬ ಜುಮ್ಲಾ (ಸುಳ್ಳು ಭರವಸೆ) ಈಡೇರುವುದು ಹೇಗೆ? ಆಡಳಿತದ ಲಗಾಮು ಬಿಜೆಪಿಯ ಕೈತಪ್ಪಿರುವುದು ಸ್ಪಷ್ಟವಾಗಿದೆ. ಚುನಾವಣಾ ಸಮಯದಲ್ಲಿ ಬಿಜೆಪಿ ನಾಯಕರು ಬಳಸಿದ ಸಾವಿರಾರು ಚಾರ್ಟರ್ಡ್ ವಿಮಾನಗಳು ನೀರಿನಿಂದ ಹಾರುತ್ತಿದ್ದವೇ? ಅವರು ಹೋಟೆಲ್‌ಗಳಲ್ಲಿ ಉಳಿದುಕೊಂಡಿರಲಿಲ್ಲವೇ? ಬಿಜೆಪಿ ತನ್ನ ಪ್ರಚಾರವನ್ನು ಕೇವಲ ವಿಡಿಯೋ ಕಾನ್ಫರೆನ್ಸ್ ಮೂಲಕವಷ್ಟೇ ಏಕೆ ಮಾಡಲಿಲ್ಲ? ಈ ನಿರ್ಬಂಧಗಳೆಲ್ಲವೂ ಕೇವಲ ಜನಸಾಮಾನ್ಯರಿಗೆ ಮಾತ್ರವೇ?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಪ್ರತಿಕ್ರಿಯಿಸಿ, “ದೇಶಭಕ್ತಿಯ ಹೆಸರಿನಲ್ಲಿ ಜನಸಾಮಾನ್ಯರು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಚಿನ್ನ, ಕೊನೆಗೆ ಅಡುಗೆ ಎಣ್ಣೆ ಬಳಸುವುದನ್ನೂ ನಿಲ್ಲಿಸಬೇಕಂತೆ! ಆದರೆ ಮೋದಿಯವರು ಮಾತ್ರ ತಮ್ಮ ರ್ಯಾಲಿಗಳಿಗೆ ಲಕ್ಷಾಂತರ ಜನರನ್ನು ಗುಂಪುಗುಂಪಾಗಿ ಕರೆತರುತ್ತಾರೆ, ವಿದೇಶಿ ಪ್ರವಾಸಗಳನ್ನು ಮಾಡುತ್ತಾರೆ, ಯಥೇಚ್ಛವಾಗಿ ಇಂಧನವನ್ನು ಸುಡುತ್ತಾರೆ. ಅವರ ಬೆಂಬಲಿಗರು ಕೇವಲ ಚಿನ್ನವನ್ನಷ್ಟೇ ಅಲ್ಲ, ಇಡೀ ದೇಶದ ಸಂಪತ್ತನ್ನೇ ಕಬಳಿಸುತ್ತಾರೆ. ಆದರೆ ನೀವು (ಜನರು) ಮಾತ್ರ ಮೂರ್ಖರಾಗುತ್ತಲೇ ಇರಿ” ಎಂದು ವ್ಯಂಗ್ಯವಾಡಿದ್ದಾರೆ.




