ಕಳೆದ 50 ವರ್ಷಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ನಡುವೆ ಮಾತ್ರ ಸುತ್ತುತ್ತಿದ್ದ ತಮಿಳುನಾಡು ರಾಜಕೀಯ ಚಕ್ರವನ್ನು, ವಿಜಯ್ ತಮ್ಮ ಮೊದಲ ಪ್ರಯತ್ನದಲ್ಲಿಯೇ ಮುರಿದು ಹಾಕಿದ್ದಾರೆ. ಅಷ್ಟೇ ಅಲ್ಲದೆ, ದಳಪತಿ ವಿಜಯ್ ಅವರ ಪಕ್ಷ ಕಣಕ್ಕಿಳಿದ ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಕಳೆದ ಹಲವು ವರ್ಷಗಳಿಂದ ತಮಿಳುನಾಡು ರಾಜಕೀಯ ಕ್ಷೇತ್ರದಲ್ಲಿ ಪ್ರಬಲ ಮೂರನೇ ಶಕ್ತಿಯ ಕೊರತೆಯಿತ್ತು, ಆ ಕೊರತೆಯನ್ನು ಇದೀಗ ಟಿವಿಕೆ ನೀಗಿಸಿ ಹೊಸ ರಾಜಕಾರಣದ ನಾಂದಿ ಹಾಡಿದೆಯೇ? ಕಾಲವೇ ಉತ್ತರಿಸಬೇಕಿರುವ ಪ್ರಶ್ನೆಯಿದು.
ತಮಿಳುನಾಡು ರಾಜಕೀಯದಲ್ಲಿ ಇಲ್ಲಿಯವರೆಗೆ ಸಿನಿಮಾ ಅಭಿಮಾನಿಗಳಿಂದ ‘ದಳಪತಿ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಜೋಸೆಫ್ ಸಿ. ವಿಜಯ್, ಇದೀಗ ನಿಜವಾದ ಅರ್ಥದಲ್ಲಿ ‘ಜನನಾಯಕ’ನಾಗಿ ರೂಪುಗೊಂಡಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರ ಹೊಸ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಅಭೂತಪೂರ್ವ ಸಾಧನೆ ಮಾಡಿದೆ. ಬಾಕ್ಸಾಫೀಸ್ ನಲ್ಲಿ ದಶಕಗಳಿಂದ ದಾಖಲೆ ಬರೆಯುತ್ತಿದ್ದ ನಟನೊಬ್ಬ, ಇದೀಗ ಬ್ಯಾಲಟ್ ಬಾಕ್ಸ್ ನಲ್ಲೂ ‘ಸೂಪರ್ ಡ್ಯೂಪರ್ ಹಿಟ್’ ಆಗುವ ಮೂಲಕ ತಮಿಳುನಾಡಿನ ಏಕೈಕ ಪರ್ಯಾಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇದು ಕೇವಲ ಒಂದು ಚುನಾವಣಾ ಗೆಲುವಲ್ಲ, ದ್ರಾವಿಡ ರಾಜಕೀಯ ದಿಕ್ಕನ್ನೇ ಬದಲಿಸಿದ ಐತಿಹಾಸಿಕ ಘಳಿಗೆಯಾಗಿದೆ.
ಈ ಬಾರಿಯ ಚುನಾವಣಾ ಫಲಿತಾಂಶದ ಅಂಕಿ-ಅಂಶಗಳನ್ನು ಗಮನಿಸಿದರೆ, ವಿಜಯ್ ಅವರ ಟಿವಿಕೆ ಪಕ್ಷವು ಅತ್ಯುತ್ತಮ ಸಾಧನೆ ತೋರಿ, ದ್ರಾವಿಡ ಪಕ್ಷಗಳ ಭದ್ರಕೋಟೆಗೆ ಲಗ್ಗೆಯಿಟ್ಟಿದೆ. ಕಳೆದ 50 ವರ್ಷಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ನಡುವೆ ಮಾತ್ರ ಸುತ್ತುತ್ತಿದ್ದ ರಾಜಕೀಯ ಚಕ್ರವನ್ನು, ವಿಜಯ್ ತಮ್ಮ ಮೊದಲ ಪ್ರಯತ್ನದಲ್ಲಿಯೇ ಮುರಿದು ಹಾಕಿದ್ದಾರೆ. ಅಷ್ಟೇ ಅಲ್ಲದೆ, ವಿಜಯ್ ಅವರು ಕಣಕ್ಕಿಳಿದ ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ ಸಾಧಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ತಮಿಳುನಾಡು ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಪ್ರಬಲ ಮೂರನೇ ಶಕ್ತಿಯ ಕೊರತೆಯಿತ್ತು, ಆ ಕೊರತೆಯನ್ನು ಇದೀಗ ಟಿವಿಕೆ ಸಂಪೂರ್ಣವಾಗಿ ನೀಗಿಸಿ ಹೊಸ ಆಶಾಕಿರಣವಾಗಿದೆ.
ಮೋದಿ-ಶಾ ಅವರ ಬಿಜೆಪಿ ತಮಿಳುನಾಡಿನಲ್ಲಿ ಹೊಸ ‘ನಿತೀಶ್ ಕುಮಾರ್’ ಹುಡುಕಾಟದಲ್ಲಿತ್ತು. ಕಾಲಾನುಕ್ರಮದಲ್ಲಿ ಬಿಜೆಪಿಗೆ ಅಧಿಕಾರ ಗದ್ದುಗೆ ಖಾಲಿ ಮಾಡಿ ಕೊಡಬಲ್ಲ ‘ನಿತೀಶ್ ಕುಮಾರ್’, ವಿಜಯ್ ರೂಪದಲ್ಲಿ ಸಿಕ್ಕಿದ್ದಾರೆಯೇ ಎಂಬ ಪ್ರಶ್ನೆಗೂ ರಾಜಕೀಯ ವಿಶ್ಲೇಷಕರು ಉತ್ತರ ಹುಡುಕಲಿದ್ದಾರೆ.
This video cannot be played in your browser. Open the video directly
ತಮಿಳುನಾಡು ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ್ದು ತುಂಬಾ ಹಳೆಯ ಮತ್ತು ಅವಿನಾಭಾವ ಸಂಬಂಧ. ದ್ರಾವಿಡ ಚಳುವಳಿಯ ಉಗ್ರರೂಪ ಸೌಮ್ಯವಾದ ನಂತರ ಕೂಡ, ತಮಿಳುನಾಡು ಜನತೆ ಸಿನಿಮಾ ಮಂದಿಯನ್ನು ಬಿಟ್ಟುಕೊಡದೆ ಬೆಂಬಲಿಸುತ್ತಲೇ ಬಂದಿದ್ದಾರೆ. ತಮಿಳುನಾಡಿನಲ್ಲಿ ಸಿನಿಮಾ ಎಂಬುದು ಕೇವಲ ಮನರಂಜನೆಯಾಗಿ ಉಳಿದಿಲ್ಲ, ಅದೊಂದು ಸಾಮಾಜಿಕ ಸಂದೇಶ ಸಾರುವ ಮತ್ತು ಜನರನ್ನು ನೇರವಾಗಿ ತಲುಪುವ ಪ್ರಬಲ ಮಾಧ್ಯಮ. 1967ರಲ್ಲಿ ಡಿಎಂಕೆಯಿಂದ ಮೊದಲ ಸಿಎಂ ಸಿ.ಎನ್. ಅಣ್ಣಾದೊರೈ ಅವರಿಂದ ಶುರುವಾದ ಈ ನಂಟು, ಇಂದಿಗೂ ಗಟ್ಟಿ ಅಂಟಾಗಿ ಉಳಿದಿದೆ. ವಿಜಯ್ ಗೆಲುವೇ ಈ ಮಾತಿಗೆ ಜ್ವಲಂತ ಸಾಕ್ಷಿ.

ವಿಜಯ್ ಅವರ ಈ ಅಸಾಧಾರಣ ಗೆಲುವನ್ನು ಅರ್ಥಮಾಡಿಕೊಳ್ಳಲು 1977ರ ಕಾಲಘಟ್ಟಕ್ಕೆ ಹಿಂದಿರುಗಿ ನೋಡಬೇಕು. ಸಿನಿಮಾ ಕ್ಷೇತ್ರದ ಅನಭಿಷಿಕ್ತ ದೊರೆಯಾಗಿದ್ದ, ತಮಿಳರ ಪಾಲಿನ ದೇವರಂತಿದ್ದ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ಡಿಎಂಕೆಯಿಂದ ಹೊರಬಂದು 1972ರಲ್ಲಿ ‘ಎಐಎಡಿಎಂಕೆ’ ಎಂಬ ಹೊಸ ಪಕ್ಷ ಕಟ್ಟಿದರು. ನಂತರದ ಐದೇ ವರ್ಷಗಳಲ್ಲಿ 1977ರ ವಿಧಾನಸಭೆ ಚುನಾವಣೆಗಳು ಎದುುರಾಗಿದ್ದವು. ಮೊದಲ ಅಗ್ನಿಪರೀಕ್ಷೆಯಲ್ಲೇ ಎಂಜಿಆರ್ ಅಭೂತಪೂರ್ವ ಗೆಲುವು ಗಳಿಸಿ ಮುಖ್ಯಮಂತ್ರಿಯಾದರು. ಅಂದಿನ ಐತಿಹಾಸಿಕ ಗೆಲುವಿನ ನಂತರ, ಮತ್ತೆ ಅಂತಹದ್ದೇ ಒಂದು ಚಮತ್ಕಾರ ಹಾಗೂ ಸಂಚಲನವನ್ನು ಇದೀಗ ದಳಪತಿ ವಿಜಯ್ ಸೃಷ್ಟಿಸಿದ್ದಾರೆಂಬುದು ರಾಜಕೀಯ ವಿಶ್ಲೇಷಕರ ಸ್ಪಷ್ಟ ಅಭಿಪ್ರಾಯ.
ಎಂಜಿಆರ್ ಅವರ ಹಾಗೆಯೇ ತಮಿಳುನಾಡು ರಾಜಕೀಯ ರಂಗ ಕಂಡಂತಹ ಇನ್ನಿಬ್ಬರು ಸಿನೆಮಾ-ರಾಜಕಾರಣ ದಿಗ್ಗಜರು ಎಂ. ಕರುಣಾನಿಧಿ ಮತ್ತು ಜೆ. ಜಯಲಲಿತಾ. ಕರುಣಾನಿಧಿ ತಮ್ಮ ಖಡಕ್ ಸಂಭಾಷಣೆ ಮತ್ತು ಸಶಕ್ತ ಕಥೆಗಳ ಮೂಲಕ ದ್ರಾವಿಡ ಚಿಂತನೆ ಬಿತ್ತಿದರೆ, ಜಯಲಲಿತಾ ಅತ್ಯಂತ ಜನಪ್ರಿಯ ನಾಯಕಿ ನಟಿಯಾಗಿ ಎಂಜಿಆರ್ ನಂತರ ಎಐಎಡಿಎಂಕೆ ಪಕ್ಷವನ್ನು ಮುನ್ನಡೆಸಿದರು. ಈ ಇಬ್ಬರೂ ನಾಯಕರು ಸಿನಿಮಾ ಹಿನ್ನೆಲೆಯಿಂದಲೇ ಬಂದು, ಹತ್ತು ಹಲವು ವರ್ಷಗಳ ಕಾಲ ತಮಿಳುನಾಡು ರಾಜಕೀಯವನ್ನು ಆಳಿದರು. ತಾರಾಜಗತ್ತಿನಿಂದ ಬಂದರೂ ಅವರ ಆಡಳಿತಕ್ಷಮತೆಯನ್ನು ಜನತೆ ಮೆಚ್ಚಿತ್ತು, ದಶಕಗಳ ಕಾಲ ಬೆಂಬಲಿಸಿತ್ತು.
ಆದರೆ, ಎಂಜಿಆರ್ ಅಥವಾ ಜಯಲಲಿತಾ ಅವರ ನಂತರ ರಾಜಕೀಯ ಪ್ರವೇಶಿಸಿದ ಎಲ್ಲಾ ಸಿನಿಮಾ ತಾರೆಗಳಿಗೂ ಈ ಗೆಲುವು ಅಷ್ಟು ಸುಲಭವಾಗಿ ಒಲಿಯಲಿಲ್ಲ. ಉದಾಹರಣೆಗೆ, ‘ಉಲಗನಾಯಗನ್’ ಕಮಲ್ ಹಾಸನ್ ಅವರು 2018ರಲ್ಲಿ ‘ಮಕ್ಕಳ್ ನೀಧಿ ಮೈಯಂ’ (ಎಂಎನ್‌ಎಂ) ಎಂಬ ಹೊಸ ಪಕ್ಷ ಕಟ್ಟಿದರು. ಜನತೆಯಲ್ಲಿ ಅವರ ಕುರಿತು ಇದ್ದ ಅಪಾರ ಗೌರವ, ಮತಗಳ ರೂಪದಲ್ಲಿ ಬದಲಾಗಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಎಂಎನ್‌ಎಂ ಪಕ್ಷ ಹೀನಾಯವಾಗಿ ಸೋತಿತು. ಕೊನೆಗೆ ಕಮಲ್ ಹಾಸನ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು, ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದ್ದು ವಿಪರ್ಯಾಸ.

ಇನ್ನೊಬ್ಬ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಗ್ಗೆ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಚರ್ಚೆ ನಡೆದಿತ್ತು. ‘ನಾನು ರಾಜಕೀಯಕ್ಕೆ ಬರುವುದು ಖಚಿತ’ ಎಂದು ಘೋಷಣೆ ಮಾಡಿ ಅಭಿಮಾನಿಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದರು. ಆದರೆ, ರಾಜಕೀಯ ಪಕ್ಷ ಸ್ಥಾಪನೆಗೆ ಸರಿಯಾದ ಸಮಯ ಬಂದಾಗ, ತಮ್ಮ ಅನಾರೋಗ್ಯದ ಕಾರಣವನ್ನು ಮುಂದಿಟ್ಟು ಹಿಂದೇಟು ಹಾಕಿದರು. ಇದು ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿತು. 2006ರಲ್ಲಿ ನಟ ವಿಜಯ್‌ಕಾಂತ್ ಕೂಡ ತಮಿಳು ಅಸ್ಮಿತೆಯ ಮೇಲೆ ಡಿಎಂಡಿಕೆ ಪಕ್ಷ ಸ್ಥಾಪಿಸಿ ತರಂಗಗಳನ್ನು ಎಬ್ಬಿಸಿದರು. ಆದರೆ ಪಕ್ಷವನ್ನು ಅಧಿಕಾರದತ್ತ ಮುನ್ನಡೆಸಲು ಅವರಿಗೆ ಸಾಧ್ಯವಾಗಲಿಲ್ಲ.
ಇದನ್ನು ಓದಿದ್ದೀರಾ? ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ
ಇದೀಗ ಈ ಎಲ್ಲಾ ಆಗುಹೋಗುಗಳನ್ನು, ರಾಜಕೀಯ ಇತಿಹಾಸವನ್ನು ದೃಷ್ಟಿಯಲ್ಲಿಟ್ಟು ನೋಡಿದಾಗ, ವಿಜಯ್ ಅವರು ಖಚಿತವಾಗಿ ಎಂಜಿಆರ್, ಜಯಲಲಿತಾ ಮತ್ತು ಕರುಣಾನಿಧಿ ಹಾದಿಯಲ್ಲಿ ಸಾಗಿದ್ದಾರೆ ಎನ್ನಬಹುದು. ಕಮಲ್ ಹಾಸನ್ ಅವರಂತೆ ಚುನಾವಣೆಯಲ್ಲಿ ದಿಕ್ಕುತಪ್ಪದೆ, ರಜನಿಕಾಂತ್ ಅವರಂತೆ ಅರ್ಧದಲ್ಲಿಯೇ ಹಿಂದೆ ಸರಿಯದೆ, ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ‘ವಿಜಯ್ ಮಕ್ಕಳ್ ಇಯಕ್ಕಂ’ ಎಂಬ ತಮ್ಮ ಅಭಿಮಾನಿ ಸಂಘವನ್ನು ಹಲವು ವರ್ಷಗಳ ಕಾಲವೇ ಸಾಮಾಜಿಕ ಕೆಲಸಗಳಿಗೆ ಬಳಸಿ, ತಳಮಟ್ಟದಲ್ಲಿ ಸಂಘಟನೆ ಕಟ್ಟಿ, ನಂತರ ಅದನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಿದ್ದರ ಫಲವಾಗಿ ಅವರು ಇಂತಹ ದೊಡ್ಡಮಟ್ಟದ ಫಲಿತಾಂಶ ನಿರೀಕ್ಷಿಸಲು ಸಾಧ್ಯವಾಯಿತು.
ವಿಜಯ್ ಅವರ ಈ ಐತಿಹಾಸಿಕ ಸಾಧನೆಗೆ ಮುಖ್ಯ ಕಾರಣಗಳು ಎರಡು. ಮೊದಲನೆಯದು, ಅಲ್ಲಿನ ‘ಜೆನ್ ಜೀ’ (Gen Z) ಮತ್ತು ಯುವ ಮತದಾರರು (ತಮಿಳುನಾಡಿನಲ್ಲಿ Gen Z ಮತದಾರರು ಶೇ. 40 ರಷ್ಟಿದ್ದಾರೆ). ಈ ಹೊಸ ತಲೆಮಾರು ಹಳೆಯ ದ್ರಾವಿಡ ರಾಜಕೀಯ ಸಿದ್ಧಾಂತಗಳಿಗೆ ಅಂಟಿಕೊಂಡು ಕೂತಿಲ್ಲ. ಅವರು ವಿಜಯ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವರು ಮತ್ತು ಅವರ ಸಾಮಾಜಿಕ ಕಾಳಜಿ, ಅನ್ನದಾನ, ಶಿಕ್ಷಣ ಪ್ರೋತ್ಸಾಹದಂತಹ ಕೆಲಸಗಳ ಬಗ್ಗೆ ಆಕರ್ಷಿತರಾದವರು. ಈ ಹೊಸ ತಲೆಮಾರು ಹಳೆಯ ಪಕ್ಷಗಳ ಭ್ರಷ್ಟಾಚಾರಕ್ಕೆ ಬೇಸತ್ತು ಬದಲಾವಣೆ ಬಯಸಿತು, ಅದಕ್ಕೆ ವಿಜಯ್ ಸರಿಯಾದ ಆಯ್ಕೆಯಾಗಿ ಕಂಡರು.

ಎರಡನೆಯದಾಗಿ, ಕರುಣಾನಿಧಿ ಮತ್ತು ಜಯಲಲಿತಾ ನಿಧನದ ನಂತರ ತಮಿಳುನಾಡಿನಲ್ಲಿ ಒಂದು ದೊಡ್ಡ ನಾಯಕತ್ವದ ಕೊರತೆ ಸೃಷ್ಟಿಯಾಗಿತ್ತು. ಜನತೆಗೆ ಒಂದು ಹೊಸ, ಬಲಿಷ್ಠ ನಾಯಕತ್ವ ಬೇಕಿತ್ತು. “ನಮ್ಮ ಭವಿಷ್ಯವನ್ನು ರೂಪಿಸುವ ಹೊಸ ನಾಯಕ ಬೇಕು, ಆಡಳಿತ ಪಕ್ಷವನ್ನು ಪ್ರಶ್ನಿಸುವ ಒಬ್ಬ ಪ್ರಬಲ ಪರ್ಯಾಯ ನಾಯಕ ಬೇಕು” ಎಂಬ ಜನರ ಅಭಿಲಾಷೆಗೆ ವಿಜಯ್ ಕರಾರುವಾಕ್ಕಾಗಿ ಒಗ್ಗಿಕೊಂಡರು.
ವಿಜಯ್ ಅವರ ಹಿನ್ನೆಲೆಯನ್ನು ಗಮನಿಸಿದರೆ, ಸಿನಿಮಾ ರಂಗ ಅವರಿಗೆ ಹೊಸತೇನಾಗಿರಲಿಲ್ಲ. ಅವರ ತಂದೆ ಎಸ್.ಎ. ಚಂದ್ರಶೇಖರ್ ಖ್ಯಾತ ನಿರ್ದೇಶಕರಾಗಿದ್ದರೆ, ತಾಯಿ ಶೋಭಾ ಚಂದ್ರಶೇಖರ್ ಜನಪ್ರಿಯ ಹಿನ್ನೆಲೆ ಗಾಯಕಿ. ಹೀಗೆ ತಂದೆ-ತಾಯಿ ಇಬ್ಬರೂ ದೃಢವಾದ ಸಿನಿಮಾ ಹಿನ್ನೆಲೆ ಹೊಂದಿದ್ದವರು. ನಟನಾ ಕ್ಷೇತ್ರದ ಮೇಲಿನ ಅಪಾರ ಒಲವಿನಿಂದಾಗಿ ಚೆನ್ನೈನ ಪ್ರತಿಷ್ಠಿತ ಲೋಯಲಾ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟ ವಿಜಯ್, ಸಂಪೂರ್ಣವಾಗಿ ಬಣ್ಣದ ಲೋಕದಲ್ಲಿ ತೊಡಗಿದರು.
ಆರಂಭದಲ್ಲಿ ತಂದೆಯವರ ನಿರ್ದೇಶನದ ಚಿತ್ರಗಳ ಮೂಲಕವೇ ಬೆಳ್ಳಿತೆರೆಗೆ ಕಾಲಿಟ್ಟರೂ, ನಂತರದ ದಿನಗಳಲ್ಲಿ ತಮ್ಮದೇ ವಿಶಿಷ್ಟ ನಟನಾ ಶೈಲಿ, ನೃತ್ಯ ಮತ್ತು ಆಕ್ಷನ್ ಮೂಲಕ ತಮಿಳು ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಂಡುಕೊಂಡರು. ತಮಿಳುನಾಡು ಕಂಡ ಸಾರ್ವಕಾಲಿಕ ಶ್ರೇಷ್ಠ ತಾರೆಗಳಾದ ಎಂ.ಜಿ.ಆರ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅವರ ನಂತರ, ರಾಜ್ಯದ ಮೂಲೆ ಮೂಲೆಯಲ್ಲೂ ಅಂತಹದ್ದೇ ಅತಿ ದೊಡ್ಡ ಹಾಗೂ ತೀವ್ರ ನಿಷ್ಠೆಯುಳ್ಳ ಅಭಿಮಾನಿ ವರ್ಗವನ್ನು ಕಟ್ಟಿಕೊಳ್ಳುವಲ್ಲಿ ವಿಜಯ್ ಸಂಪೂರ್ಣ ಯಶಸ್ವಿಯಾದರು. ದಶಕಗಳ ಕಾಲ ಅವರು ಪೋಷಿಸಿಕೊಂಡು ಬಂದ ಈ ಅಗಾಧ ಅಭಿಮಾನಿ ಬಳಗ ಮತ್ತು ಸ್ಟಾರ್ ಗಿರಿಯೇ, ಇಂದು ಅವರ ರಾಜಕೀಯದ ಬಹುದೊಡ್ಡ ಭದ್ರ ಬುನಾದಿಯಾಗಿದೆ.
ವಿಜಯ್ ಪ್ರಚಾರ ಶೈಲಿ ಕೂಡ ಇತರರಿಗಿಂತ ವಿಭಿನ್ನ. ಅವರು ರಾಜಕೀಯ ವೇದಿಕೆಗಳಲ್ಲಿ ಸಿನಿಮಾ ಡೈಲಾಗ್‌ಗಳನ್ನು ಹೇಳಲಿಲ್ಲ. ಬದಲಿಗೆ ಭ್ರಷ್ಟಾಚಾರಮುಕ್ತ ಸಮಾನತೆಯ ಬದಲಾವಣೆಯನ್ನು ಮುಂದಿಟ್ಟರು. ವಿಶೇಷವಾಗಿ ಮಹಿಳೆಯರು ಮತ್ತು ಯುವಜನತೆ ಅವರನ್ನು ತಮ್ಮ ಮನೆಯ ಮಗನಂತೆ ಕಂಡಿದ್ದಾರೆ. ವಿಜಯ್ ಹೋರಾಟ ಹಲವು ಸಾಮಾಜಿಕ ವರ್ಗಗಳನ್ನು ಒಗ್ಗೂಡಿಸಿದೆ. ತಮಿಳುನಾಡಿನ ಪ್ರತಿಯೊಂದು ಹಳ್ಳಿಗೂ ಅವರ ಪಕ್ಷದ ಸಿದ್ಧಾಂತ ತಲುಪಿದ್ದರೆ, ಅದಕ್ಕೆ ಅವರ ಸರಳತೆ ಮತ್ತು ನೇರ ನುಡಿಗಳು ಪ್ರಮುಖ ಪಾತ್ರ ವಹಿಸಿವೆ.

ವಿಜಯ್ ರಾಜಕೀಯ ಪ್ರವೇಶ ಕೇವಲ ಒಂದು ಗಾಳಿಯಲ್ಲಿ ಹಾರಿ ಮರೆಯಾಗುವ ಗುಬ್ಬಿಯದಲ್ಲ. ಇದು ಹಲವು ವರ್ಷಗಳ ವ್ಯವಸ್ಥಿತ ಯೋಜನೆ, ಅಭಿಮಾನಿಗಳ ಶ್ರಮ ಮತ್ತು ರಾಜಕೀಯ ನಿರ್ವಾತದ ಸದ್ಬಳಕೆ. ಸಿನಿಮಾ ರಂಗದಲ್ಲಿ ‘ದಳಪತಿ’ಯಾಗಿ ಕೋಟಿ ಕೋಟಿ ಹೃದಯ ಗೆದ್ದಿದ್ದವರು, ಇದೀಗ ‘ಜನನಾಯಕ’ನಾಗಿ ತಮಿಳು ಜನರ ಬದುಕುಗಳನ್ನು ಹಸನು ಮಾಡಬಹುದಾದ ಅವಕಾಶ ಪಡೆದಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ದಾಖಲೆ ಮಾಡುತ್ತಿದ್ದ ನಾಯಕ, ಇದೀಗ ಬ್ಯಾಲಟ್ ಬಾಕ್ಸ್‌ನಲ್ಲೂ ಮತಗಳನ್ನು ಬಾಚಿ ದಾಖಲೆ ಮಾಡಿದ್ದಾರೆ. ಈ ಸೂಪರ್ ಡ್ಯೂಪರ್ ಹಿಟ್ ಗೆಲುವು, ಮುಂದಿನ ದಿನಗಳಲ್ಲಿ ತಮಿಳುನಾಡಿನ ರಾಜಕೀಯ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಅವರು ಎಷ್ಟರಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂಬುದನ್ನು ಆಧರಿಸಿರುತ್ತದೆ.





