ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿರುವ ಚುನಾವಣಾ ಆಯೋಗಕ್ಕೆ (ECI) ಕರಾರುವಕ್ಕಾದ ಮಾಹಿತಿ ನೀಡುವಂತೆ ಒತ್ತಡ ಹೇರಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಹೊಸ ತಂತ್ರ ರೂಪಿಸಿದ್ದಾರೆ. ಆಯೋಗಕ್ಕೆ 48 ‘ಇಂಟರಾಗೇಟರಿ’ (ಪ್ರಶ್ನಾವಳಿ) ಸಲ್ಲಿಸಲು ಅವಕಾಶ ಕೋರಿ ನವೆಂಬರ್ 16ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಪ್ರಶ್ನೆಗಳ ಸ್ವರೂಪ ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಆಯೋಗವು ನ್ಯಾಯಾಲಯಕ್ಕೆ ಜಾರಿಕೆ ಅಥವಾ ಹಾರಿಕೆಯ ಉತ್ತರಗಳನ್ನು ನೀಡದಂತೆ ತಡೆಯುವುದು ಈ ಇಂಟರಾಗೇಟರಿ ಅಸ್ತ್ರದ ಮುಖ್ಯ ಉದ್ದೇಶ. ಸಲ್ಲಿಸಲಾಗಿರುವ 48 ಪ್ರಶ್ನೆಗಳಿಗೂ ಆಯೋಗವು ಕೇವಲ ಬಾಯಿಮಾತಿನ ಅಥವಾ ಸಾಮಾನ್ಯ ಹೇಳಿಕೆಯ ಮೂಲಕ ಉತ್ತರಿಸುವಂತಿಲ್ಲ. ಬದಲಾಗಿ, ಸೂಕ್ತ ಸಾಕ್ಷ್ಯಾಧಾರಗಳ ಸಮೇತ ಪ್ರತಿಯೊಂದು ಪ್ರಶ್ನೆಗೂ ಪ್ರತ್ಯೇಕವಾಗಿ ಪ್ರಮಾಣಪತ್ರದ (ಅಫಿಡವಿಟ್) ಮೂಲಕವೇ ಉತ್ತರಿಸಬೇಕು ಎಂದು ಅರ್ಜಿದಾರರು ಪಟ್ಟು ಹಿಡಿದಿದ್ದಾರೆ.
ಹತ್ತು ವಿಭಾಗಗಳಲ್ಲಿ ಸಿದ್ಧಪಡಿಸಲಾಗಿರುವ ಈ ಪ್ರಶ್ನಾವಳಿಯಲ್ಲಿ ಆಯೋಗದ ಆಡಳಿತಾತ್ಮಕ ನಿರ್ಧಾರಗಳ ಪ್ರಕ್ರಿಯೆಯನ್ನು ಎಳೆಎಳೆಯಾಗಿ ಬಿಚ್ಚಿಡುವಂತೆ ಕೋರಲಾಗಿದೆ. ಆಯೋಗದ ತೀರ್ಮಾನಗಳು ಯಾವ ದಿನಾಂಕ, ಯಾವ ಸಮಯಕ್ಕೆ ಆಗಿವೆ? ಅದರ ಕಡತ ಸಂಖ್ಯೆ ಏನು? ಈ ನಿರ್ಧಾರಗಳನ್ನು ಸಭೆ ನಡೆಸಿ ಕೈಗೊಳ್ಳಲಾಗಿದೆಯೇ ಅಥವಾ ಕಡತ ಚಲಾವಣೆ (File circulation) ಮೂಲಕ ಒಪ್ಪಿಗೆ ಪಡೆಯಲಾಗಿದೆಯೇ? ಮೂವರು ಆಯುಕ್ತರು ನಿಖರವಾಗಿ ಯಾವ ಸಮಯದಲ್ಲಿ ತಮ್ಮ ಸಮ್ಮತಿ ಸೂಚಿಸಿ ಸಹಿ ಹಾಕಿದ್ದಾರೆ? ಎಂಬ ಮೂಲಭೂತ ಪ್ರಶ್ನೆಗಳನ್ನು ಕೇಳಲಾಗಿದೆ.
’ಸರ್ವಾನುಮತದ ನಿರ್ಧಾರ’ಗಳ ಹಿಂದಿನ ನೈಜತೆಯ ಬಗ್ಗೆಯೂ ಪ್ರಶ್ನಾವಳಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕಳೆದ 10 ತಿಂಗಳಲ್ಲಿ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರ ಕುರಿತು ಪ್ರಶ್ನಿಸಲಾಗಿದೆ. ನಿರ್ಧಾರಗಳು ಸರ್ವಾನುಮತದಿಂದ ಆಗಿದ್ದರೆ, ಅದಕ್ಕೆ ಸಂಬಂಧಿಸಿದ ಸಭಾ ನಡಾವಳಿಗಳು, ಕಡತ ಟಿಪ್ಪಣಿಗಳು (ಫೈಲ್ ನೋಟಿಂಗ್) ಎಲ್ಲೂ ಇಲ್ಲವೇಕೆ? ಆಯುಕ್ತರ ಭಾಗವಹಿಸುವಿಕೆಯನ್ನು ದೃಢಪಡಿಸುವ ಮೂಲ ದಾಖಲೆಗಳೆಲ್ಲಿ? ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ.
ಮತದಾರರ ಖಾಸಗಿತನ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಗಂಭೀರ ಅಂಶಗಳೂ ಈ 48 ಪ್ರಶ್ನೆಗಳಲ್ಲಿ ಸೇರಿವೆ. ‘ಫಾರ್ಮ್ 6’ (Form 6) ಕುರಿತ ಆಯೋಗದ ಬದಲಾವಣೆಗಳು, ಹೆಸರು ಕೈಬಿಟ್ಟ ಮತದಾರರಿಂದ ಮರಳಿ ಫಾರ್ಮ್ 6 ಭರ್ತಿ ಮಾಡಿಸುವ ವಿವಾದ, ಗೋವಾದ ಮತದಾರರ ಹೊರಗುಳಿಯುವಿಕೆ ಮತ್ತು ಪಶ್ಚಿಮ ಬಂಗಾಳದ ಮೇಲ್ಮನವಿಗಳ ಕುರಿತು ನಿಖರ ಉತ್ತರ ಕೇಳಲಾಗಿದೆ. ಅತಿ ಮುಖ್ಯವಾಗಿ, ಕೋಟ್ಯಂತರ ಮತದಾರರ ಸೂಕ್ಷ್ಮ ದತ್ತಾಂಶವನ್ನು ನಿರ್ವಹಿಸಲು ಖಾಸಗಿ ಗುತ್ತಿಗೆದಾರರಿಗೆ ನೀಡಲಾದ ಪ್ರವೇಶದ (Access) ಬಗ್ಗೆಯೂ ವಿವರಣೆ ಕೋರಲಾಗಿದೆ.
ಈ ಪ್ರಶ್ನೆಗಳಿಗೆ ಉತ್ತರಿಸುವಾಗ ಆಯೋಗಕ್ಕೆ ಯಾವುದೇ ನುಣುಚಿಕೊಳ್ಳುವ ಅವಕಾಶವಿಲ್ಲದಂತೆ ಷರತ್ತುಗಳನ್ನು ವಿಧಿಸಲಾಗಿದೆ. ಆಯೋಗವು ದಾಖಲೆಗಳನ್ನು ಬಹಿರಂಗಪಡಿಸಲು ನಿರಾಕರಿಸಿದರೆ, ಪ್ರತಿಯೊಂದು ದಾಖಲೆಗೂ ಪ್ರತ್ಯೇಕವಾದ ಕಾರಣವನ್ನು ನೀಡಬೇಕು. ಒಂದು ವೇಳೆ ಯಾವುದಾದರೂ ಮಾಹಿತಿ ದಾಖಲಾಗಿಲ್ಲದಿದ್ದರೆ ಅಥವಾ ಆಯೋಗಕ್ಕೆ ಆ ಬಗ್ಗೆ ತಿಳಿದಿಲ್ಲದಿದ್ದರೆ, ಅದನ್ನು ನ್ಯಾಯಾಲಯದ ಮುಂದೆ ಮುಚ್ಚುಮರೆಯಿಲ್ಲದೆ ಸ್ಪಷ್ಟವಾಗಿ ಒಪ್ಪಿಕೊಳ್ಳಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ಈ ನಡುವೆ, ಚುನಾವಣಾ ಆಯೋಗವು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ (ಎಸ್ಐಆರ್) ಆದೇಶಗಳು ಸರ್ವಾನುಮತದಿಂದಲೇ ಹೊರಬಂದಿವೆ, ಆಯುಕ್ತರ ವೈಯಕ್ತಿಕ ಸಲಹೆ-ಆಕ್ಷೇಪಗಳು ಅಂತಿಮ ನಿರ್ಧಾರಗಳಲ್ಲ ಎಂದು ಅದು ಪ್ರತಿಪಾದಿಸಿದೆ. ಅಲ್ಲದೆ, ಫಾರ್ಮ್ 6ಕ್ಕೆ ತಿದ್ದುಪಡಿ ತಂದಿಲ್ಲ, ಹೆಚ್ಚುವರಿ ಘೋಷಣೆಯಷ್ಟೇ ಮಾಡಲಾಗಿದೆ ಎಂಬುದು ಆಯೋಗದ ಪ್ರತಿವಾದವಾಗಿದೆ.
ಪ್ರತಿಪಕ್ಷಗಳು 48 ಇಂಟರಾಗೇಟರಿ ಪ್ರಶ್ನೆಗಳನ್ನು ಕೇಳಲು ಅನುಮತಿ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ನವೆಂಬರ್ 17ರ ಸುಪ್ರೀಂ ಕೋರ್ಟ್‌ನ ವಿಚಾರಣಾ ಪಟ್ಟಿಯಲ್ಲಿ (W.P.(C) 1351/2026) ಈ ಪ್ರಕರಣ ಸೇರ್ಪಡೆಯಾಗಿದೆ. ಚುನಾವಣಾ ಆಯೋಗವನ್ನು ಇಕ್ಕಟ್ಟಿಗೆ ಸಿಲುಕಿಸುವ ಈ ಕರಾರುವಕ್ಕಾದ 48 ಪ್ರಶ್ನೆಗಳ ಸುರಿಮಳೆಗೆ ನ್ಯಾಯಾಲಯ ಹಸಿರು ನಿಶಾನೆ ತೋರಲಿದೆಯೇ ಎಂಬುದರ ಮೇಲೆ ಮುಂದಿನ ಕಾನೂನು ಹೋರಾಟದ ದಿಕ್ಕು ನಿರ್ಧಾರವಾಗಲಿದೆ.



