ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಟ್ಟಡಗಳು ಕುಸಿದು ಬೀಳುವುದು ಸರ್ವೇಸಾಮಾನ್ಯವೆಂಬ ಪರಿಸ್ಥಿತಿ ಎದುರಾಗಿದೆ. ನಗರದ ಮೂಲೆ ಮೂಲೆಯಲ್ಲಿ ಆತಂಕ ಸೃಷ್ಟಿಸುತ್ತಿರುವ ಈ ದುರಂತಗಳು ನಡೆಯುತ್ತಲೇ ಇವೆ. ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 1,100ಕ್ಕೂ ಹೆಚ್ಚು ಕಟ್ಟಡ ಕುಸಿತ ಪ್ರಕರಣಗಳು ದಾಖಲಾಗಿವೆ. ಈ ಸಾಲಿಗೆ, ದಕ್ಷಿಣ ದೆಹಲಿಯ ಸತ್ಯ ನಿಕೇತನ ಪ್ರದೇಶ ‘ಪಿಜಿ’ ಕಟ್ಟಡ ಕುಸಿತ ಸೇರ್ಪಡೆಯಾಗಿದೆ. 7 ಜೀವಗಳನ್ನು ಬಲಿ ಪಡೆದ ಈ ದುರಂತದ ಬಳಿಕವಾದರೂ ದೆಹಲಿಯ ಆಡಳಿತ ಎಚ್ಚೆತ್ತುಕೊಳ್ಳುವುದೇ? ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದೇ ಎಂಬ ಪ್ರಶ್ನೆ ದೆಹಲಿವಾಸಿಗಳಲ್ಲಿದೆ.
ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಕೇವಲ 55 ಚದರ ಗಜದ ಅತ್ಯಂತ ಕಿರಿದಾದ ಜಾಗದಲ್ಲಿ ನಿಯಮಬಾಹಿರವಾಗಿ ನಿರ್ಮಿಸಲಾಗಿದ್ದ ಐದು ಮಹಡಿಯ ಕಟ್ಟಡ ಭಾನುವಾರ ಸಂಜೆ ಕ್ಷಣಾರ್ಧದಲ್ಲಿ ಕುಸಿದು ಬಿದ್ದಿದೆ. ದುರಂತದಲ್ಲಿ, ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. 12 ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಘಟನೆಯು ದೆಹಲಿ ಮಹಾನಗರ ಪಾಲಿಕೆಯ (MCD) ಅಂಧ ಆಡಳಿತ ಮತ್ತು ಅಕ್ರಮ ನಿರ್ಮಾಣಗಳ ಜಾಲವನ್ನು ಮತ್ತೊಮ್ಮೆ ಬೆತ್ತಲೆ ಮಾಡಿದೆ.
ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ಗೆ ತೀರಾ ಸಮೀಪದಲ್ಲಿರುವ ಸತ್ಯ ನಿಕೇತನ ಪ್ರದೇಶವು ಹೊರರಾಜ್ಯಗಳಿಂದ ಬರುವ ಅಪಾರ ಸಂಖ್ಯೆಯ ವಿದ್ಯಾರ್ಥಿಗಳ ಪ್ರಮುಖ ವಸತಿ ಕೇಂದ್ರವಾಗಿದೆ. ವಿಶ್ವವಿದ್ಯಾಲಯದಲ್ಲಿ 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೂ, ಅಧಿಕೃತ ಹಾಸ್ಟೆಲ್ಗಳಲ್ಲಿ ಕೇವಲ 9,000 ಹಾಸಿಗೆಗಳು ಮಾತ್ರ ಲಭ್ಯವಿವೆ. ಈ ತೀವ್ರ ವಸತಿ ಅಭಾವವನ್ನು ಬಂಡವಾಳ ಮಾಡಿಕೊಂಡಿರುವ ಸ್ಥಳೀಯರು, ಅರ್ಧ ಶತಮಾನಕ್ಕೂ ಹಳೆಯದಾದ ಪುಟ್ಟ ಮನೆಗಳಿಗೆ ಯಾವುದೇ ಸುರಕ್ಷತಾ ಮಾನದಂಡಗಳಿಲ್ಲದೆ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿ, ಪೇಯಿಂಗ್ ಗೆಸ್ಟ್ (PG) ಮತ್ತು ಖಾಸಗಿ ಹಾಸ್ಟೆಲ್ಗಳನ್ನಾಗಿ ಪರಿವರ್ತಿಸುತ್ತಿದ್ದಾರೆ.
ಹೀಗೆ ನಿರ್ಮಾಣವಾಗಿದ್ದ 50 ವರ್ಷ ಹಳೆಯ ಕಟ್ಟಡದ ಬೇಸ್ಮೆಂಟ್ನಲ್ಲಿ ಅಕ್ರಮವಾಗಿ ದುರಸ್ತಿ ಕಾಮಗಾರಿ ನಡೆಸುತ್ತಿದ್ದಾಗ, ಇಡೀ ಕಟ್ಟಡ ದುರ್ಬಲಗೊಂಡು ಏಕಾಏಕಿ ನೆಲಸಮಗೊಂಡಿದೆ. ಈ ಕಟ್ಟಡಕ್ಕೆ ಪಾಲಿಕೆಯಿಂದ ಅನುಮೋದಿತ ನಕ್ಷೆಯಾಗಲಿ, ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ ಪತ್ರವಾಗಲಿ (NOC) ಇರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಖಚಿತವಾಗಿದೆ.
ವಿಪರ್ಯಾಸವೆಂದರೆ, ಇದೇ ಸತ್ಯ ನಿಕೇತನ ಪ್ರದೇಶದಲ್ಲಿ ಕೇವಲ ನಾಲ್ಕು ವರ್ಷಗಳ ಹಿಂದೆ ಇದೇ ಮಾದರಿಯ ದುರಂತ ಸಂಭವಿಸಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು. ಅಂದು ಪಾಲಿಕೆಯು ಆ ಕಟ್ಟಡವನ್ನು ‘ಅಪಾಯಕಾರಿ’ ಎಂದು ಗುರುತಿಸಿದ್ದರೂ, ಕ್ರಮ ಕೈಗೊಳ್ಳುವ ಮುನ್ನವೇ ದುರಂತ ನಡೆದುಹೋಗಿತ್ತು. ಇಷ್ಟೆಲ್ಲಾ ಅನುಭವಗಳಿದ್ದರೂ ಆಡಳಿತ ವ್ಯವಸ್ಥೆ ಯಾವುದೇ ಪಾಠ ಕಲಿತಿಲ್ಲ ಎಂಬುದಕ್ಕೆ ಭಾನುವಾರದ ಘಟನೆ ಸ್ಪಷ್ಟ ನಿದರ್ಶನವಾಗಿದೆ.
ದೆಹಲಿ ಅಗ್ನಿಶಾಮಕ ಇಲಾಖೆಯ ದಾಖಲೆಗಳ ಪ್ರಕಾರ, ದೆಹಲಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 1,100ಕ್ಕೂ ಹೆಚ್ಚು ಕಟ್ಟಡಗಳು ಕುಸಿದುಬಿದ್ದಿವೆ. ಈ ಪೈಕಿ, 2022-23ರಲ್ಲಿ 349, 2023-24ರಲ್ಲಿ 371 ಹಾಗೂ 2024ರಿಂದ 2025ರ ಜನವರಿ ಅವಧಿಯಲ್ಲೇ 413 ಕಟ್ಟಡ ಕುಸಿತದ ಘಟನೆಗಳು ಸಂಭವಿಸಿವೆ. ಪ್ರಸಕ್ತ ವರ್ಷದ ಮೇ ತಿಂಗಳಿನಲ್ಲೂ ಸೈದುಲಾಜಾಬ್ ಪ್ರದೇಶದಲ್ಲಿ ಅಕ್ರಮ ಕಟ್ಟಡ ಕುಸಿದು ಆರು ಮಂದಿ ಬಲಿಯಾಗಿದ್ದರು. ಆ ವೇಳೆ ಪೊಲೀಸ್ ಇಲಾಖೆಯು ಅಕ್ರಮ ನಿರ್ಮಾಣದ ಬಗ್ಗೆ ಮುಂಚಿತವಾಗಿಯೇ ನೋಟಿಸ್ ನೀಡಿದ್ದರೂ, ಪಾಲಿಕೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಮಾತ್ರವಲ್ಲದೆ, ತನಿಖೆ ತಡೆಯಲು ಹಿಂದಿನ ದಿನಾಂಕದ ನಕಲಿ ದಾಖಲೆ ಸೃಷ್ಟಿಸಿದ್ದರೆಂಬ ಗಂಭೀರ ಆರೋಪಗಳೂ ಕೇಳಿಬಂದಿದ್ದವು.
ಈ ಲೇಖನ ಓದಿದ್ದೀರಾ?: ನೈಸ್ ಯೋಜನೆಗೆ ಕಾನೂನು ಚೌಕಟ್ಟಿನಲ್ಲೇ ಕ್ರಮ: ಸಿಎಂ ಡಿಕೆಶಿ
ಸಾಮಾನ್ಯವಾಗಿ ದೆಹಲಿಯಲ್ಲಿ ಇಂತಹ ದೊಡ್ದ ದುರಂತಗಳು ಸಂಭವಿಸಿದಾಗಲೆಲ್ಲ ಆಡಳಿತ ವ್ಯವಸ್ಥೆಯು ಒಂದೇ ರೀತಿಯ ‘ನಾಟಕೀಯ’ ಪ್ರತಿಕ್ರಿಯೆ ನೀಡುತ್ತಾ ಬಂದಿದೆ. ಘಟನೆ ನಡೆದ ತಕ್ಷಣ ಸ್ಥಳೀಯ ಸರ್ವೆ, ಅಕ್ರಮ ಕಟ್ಟಡಗಳಿಗೆ ನೋಟಿಸ್, ಕೆಲವು ಕಟ್ಟಡಗಳ ಸೀಲಿಂಗ್, ತನಿಖಾ ಸಮಿತಿ ರಚನೆ ಹಾಗೂ ಕೆಳಹಂತದ ಅಧಿಕಾರಿಗಳ ಅಮಾನತು—ಇವಿಷ್ಟೇ ಸರ್ಕಾರದ ತತ್ಕ್ಷಣದ ಕ್ರಮಗಳಾಗಿರುತ್ತವೆ.
ಸತ್ಯ ನಿಕೇತನ ಪ್ರಕರಣದಲ್ಲೂ ದಕ್ಷಿಣ ವಲಯದ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಸುತ್ತಮುತ್ತಲಿನ ಆರು ಅಪಾಯಕಾರಿ ಕಟ್ಟಡಗಳನ್ನು ಸೀಲ್ ಮಾಡಲಾಗಿದೆ ಹಾಗೂ ಹೈಕೋರ್ಟ್ನ ಚಾಟಿಯೇಟಿನ ಬಳಿಕ ಕಟ್ಟಡಗಳಿಗೆ ‘ಸ್ಟ್ರಕ್ಚರಲ್ ಆಡಿಟ್’ ಕಡ್ಡಾಯಗೊಳಿಸುವ ಭರವಸೆ ಸಿಕ್ಕಿದೆ. ಆದರೆ, ಸಾವುಗಳು ಸಂಭವಿಸಿದ ನಂತರವಷ್ಟೇ ಎಚ್ಚೆತ್ತುಕೊಂಡು ಕಣ್ಣು ಬಿಡುವ ನಗರಾಡಳಿತದ ಈ ಧೋರಣೆ ಎಂದಿಗೆ ಕೊನೆಗೊಳ್ಳಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




