ಗೋವಾದ ಪಣಜಿಯ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದ ಗೋವಾ ಪೊಲೀಸರ ಕ್ರಮಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿದ್ದು, ಬಂಧಿತ ಎಲ್ಲ ಕಾರ್ಯಕರ್ತರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಪ್ರತಿಭಟನಾನಿರತರನ್ನು ಪೊಲೀಸರು ಕಾನೂನುಬಾಹಿರವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಶೇಷ ಪೀಠವು ಭಾನುವಾರ ತಡರಾತ್ರಿ ಈ ಆದೇಶವನ್ನು ಹೊರಡಿಸಿದೆ.
ಇದನ್ನೂ ಓದಿ: ಪ್ರತಿಭಟನೆ ತಡೆಯಲು ಸಾಮಾಜಿಕ ಕಾರ್ಯಕರ್ತನ ಗೃಹಬಂಧನ: ದೆಹಲಿ ಪೊಲೀಸರಿಗೆ ಹೈಕೋರ್ಟ್ ತರಾಟೆ
ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಆಜಾದ್ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿದ್ದ ಉದ್ಯಮಿ ಜಾಕ್ ಸುಖಿಜಾ, ಆಕ್ಟಿವಿಸ್ಟ್‌ಗಳಾದ ಅಮ್ರೀನ್ ಶೇಕ್, ಆದಿತ್ಯ ಪರುಲೇಕರ್, ಭೂಪೇಶ್ ಬಿನ್ ಸೇರಿದಂತೆ ಪ್ರಮುಖ ಕಾರ್ಯಕರ್ತರನ್ನು ಪಣಜಿ ಪೊಲೀಸರು ವಶಕ್ಕೆ ಪಡೆದಿದ್ದರು. ಕಾರ್ಯಕರ್ತರನ್ನು ವಶಕ್ಕೆ ಪಡೆದ ನಂತರ ಪೇರ್ನೆಮ್ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿತ್ತು. ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿತ್ತು.
ವಿಚಾರಣೆ ವೇಳೆ ಪೀಠವು, “ಆಜಾದ್ ಮೈದಾನ ಪ್ರವೇಶಿಸುವುದು ಮತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಅಪರಾಧವಲ್ಲ. ಅಲ್ಲದೆ ನಿಷೇಧಾಜ್ಞೆ ಜಾರಿಯಲ್ಲದಿದ್ದರೂ ವಶಕ್ಕೆ ಪಡೆದಿರುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದೆ.
ಪೊಲೀಸರ ವಶದಲ್ಲಿದ್ದ ಎಲ್ಲ ಕಾರ್ಯಕರ್ತರನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಬಿಡುಗಡೆ ಮಾಡಲು ಆದೇಶಿಸಿದೆ. ವಶದಲ್ಲಿದ್ದಾಗ ಗಾಯಗೊಂಡಿದ್ದಾರೆ ಎನ್ನಲಾದ ಕಾರ್ಯಕರ್ತರಿಗೆ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಲು ಸಹ ಕೋರ್ಟ್ ಅವಕಾಶ ನೀಡಿದೆ.





