‘ಆಜ್ ತಕ್’ ಮತ್ತು ‘ಇಂಡಿಯಾ ಟುಡೇ’ ಸೇರಿದಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳನ್ನು ಹೊಂದಿರುವ ಟಿವಿ ಟುಡೇ ನೆಟ್‌ವರ್ಕ್, 2026ರ ಆರ್ಥಿಕ ವರ್ಷದಲ್ಲಿ ಭಾರಿ ಲಾಭದ ಕುಸಿತ ದಾಖಲಿಸಿದೆ.
ಕಂಪನಿಯು 2026ರ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ತನ್ನ ವರದಿಯನ್ನು ಪ್ರಕಟಿಸಿದ್ದು, ವರ್ಷದ ಒಟ್ಟಾರೆ ನಿವ್ವಳ ಲಾಭ ಬರೋಬ್ಬರಿ ಶೇ. 75.5ರಷ್ಟು ಭಾರಿ ಕುಸಿತ ಕಂಡು ಕೇವಲ 20.24 ಕೋಟಿ ರೂಪಾಯಿಗೆ ಸೀಮಿತವಾಗಿದೆ. ಇದೇ ಅವಧಿಯಲ್ಲಿ ಕಾರ್ಯಾಚರಣೆಯ ಆದಾಯ ಶೇ. 18.5ರಷ್ಟು ಇಳಿಕೆಯಾಗಿ 808.70 ಕೋಟಿ ರೂಪಾಯಿಗೆ ತಲುಪಿದೆ. ಪ್ರಸಾರ ಮತ್ತು ಮಾಧ್ಯಮ ವಲಯದಲ್ಲಿನ ಒತ್ತಡದಿಂದಾಗಿ ಕಂಪನಿಯ ಮೂಲ ವ್ಯವಹಾರಕ್ಕೆ ಹಿನ್ನಡೆಯಾಗಿದೆ ಎಂದು ವರದಿ ತಿಳಿಸಿದೆ.
ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ (Q4 FY26), ಕಂಪನಿಯು 9.07 ಕೋಟಿ ರೂಪಾಯಿಗಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 6.45 ಕೋಟಿ ರೂಪಾಯಿ ಇತ್ತು. ಆದಾಗ್ಯೂ, ತ್ರೈಮಾಸಿಕದ ಕಾರ್ಯಾಚರಣೆಯ ಆದಾಯವು ಶೇ. 14.3ರಷ್ಟು ಕುಸಿದು 213.47 ಕೋಟಿ ರೂಪಾಯಿಗೆ ತಲುಪಿದೆ.
ಈ ನಡುವೆ, ಕಂಪನಿಯ ಆಡಳಿತ ಮಂಡಳಿಯು ತನ್ನ ಅಂಗಸಂಸ್ಥೆಯಾದ ‘ಮೇಲ್ ಟುಡೇ ನ್ಯೂಸ್‌ಪೇಪರ್ಸ್ ಪ್ರೈವೇಟ್ ಲಿಮಿಟೆಡ್’ನಲ್ಲಿ 50 ಲಕ್ಷ ರೂಪಾಯಿ ಹೂಡಿಕೆ ಮಾಡಲು ಅನುಮೋದನೆ ನೀಡಿದೆ. ಈ ಹೂಡಿಕೆಯ ಭಾಗವಾಗಿ ಕಂಪನಿಯು ತಲಾ 10 ರೂಪಾಯಿ ಮುಖಬೆಲೆಯ 5 ಲಕ್ಷ ಈಕ್ವಿಟಿ ಷೇರುಗಳನ್ನು ಖರೀದಿಸಲಿದೆ ಎಂದು ತಿಳಿಸಿದೆ.
ಭಾರತೀಯ ಮಾಧ್ಯಮ ಲೋಕದ ದಿಗ್ಗಜ ಎಂದೇ ಗುರುತಿಸಿಕೊಂಡಿದ್ದ ‘ಟಿವಿ ಟುಡೇ ನೆಟ್‌ವರ್ಕ್’ ಇದೀಗ ಅಭೂತಪೂರ್ವ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಕುಸಿತ ದಶಕಗಳಿಂದ ನಡೆದುಕೊಂಡು ಬಂದಿರುವ ಮಾಧ್ಯಮದ ನೈತಿಕತೆಯ ಪತನದ ಪ್ರತಿಬಿಂಬವಾಗಿದೆ ಎಂದು ಹಲವರು ವಿಶ್ಲೇಷಿಸುತ್ತಿದ್ದಾರೆ.
ಈ ಸಂಸ್ಥೆಯು ಹೊಂದಿರುವ ‘ಆಜ್ ತಕ್’ ಮತ್ತು ‘ಇಂಡಿಯಾ ಟುಡೇ’ ಚಾನೆಲ್‌ಗಳು ಒಂದು ಕಾಲದಲ್ಲಿ ದೇಶದ ಪ್ರಭಾವಶಾಲಿ ಮಾಧ್ಯಮಗಳಾಗಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆಗಳು ನಡೆಸುತ್ತಿರುವ ಏಕಮುಖಿ ವರದಿಗಾರಿಕೆ, ಸರ್ಕಾರದ ಪರವಾಗಿ ನಿರಂತರವಾಗಿ ನಡೆಸುವ ಪ್ರಚಾರ ಮತ್ತು ಆಧಾರವಿಲ್ಲದ ವಿವಾದಾತ್ಮಕ ಚರ್ಚೆಗಳು ‘ಗೋದಿ ಮೀಡಿಯಾ’ ಎಂಬ ಹಣೆಪಟ್ಟಿ ಕಟ್ಟಿಸಿಕೊಳ್ಳಲು ತಾವೇ ಹಣೆ ನೀಡಿದವು. ವಸ್ತುನಿಷ್ಠ ಸುದ್ದಿಗಿಂತ ಹೆಚ್ಚಾಗಿ ಪ್ರೇಕ್ಷಕರ ಭಾವನೆಗಳನ್ನು ಕೆರಳಿಸುವ ಮತ್ತು ವಿಷಯಾಂತರ ಮಾಡುವ ಶೈಲಿಯು ಜನರಲ್ಲಿ ತೀವ್ರ ಅಸಮಾಧಾನವನ್ನು ಮೂಡಿಸಿದೆ. ಪ್ರಜ್ಞಾವಂತ ಪ್ರೇಕ್ಷಕರು ಇಂತಹ ಪ್ರಚಾರದ ಮಾಧ್ಯಮಗಳನ್ನು ತಿರಸ್ಕರಿಸುತ್ತಿರುವುದು ಈ ಆರ್ಥಿಕ ಕುಸಿತದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.
ಇದನ್ನೂ ಓದಿ: ಪೂಜೆಗೂ ನಿಲ್ಲದ ಸರಣಿ ಸಾವು: ಒಂದೇ ಗ್ರಾಮದ 8 ಮಂದಿಯ ಸಾವಿನ ಹಿಂದಿತ್ತು ಅಸಲಿ ದೆವ್ವದ ರೋಚಕ ಕತೆ!
ಡಿಜಿಟಲ್ ಯುಗದಲ್ಲಿ ಸಾರವಜನಿಕರಿಗೆ ಸತ್ಯದ ಅರಿವು ಹೆಚ್ಚಾಗಿದೆ. ತಮಗೆ ಬೇಕಾದ ಮಾಹಿತಿ ಎಲ್ಲಿ ಸಿಗುತ್ತದೆ ಮತ್ತು ಎಲ್ಲಿ ಸಿಗುವುದಿಲ್ಲ ಎಂಬ ವಿವೇಚನೆ ಪ್ರೇಕ್ಷಕರಲ್ಲಿ ಬಂದಿದೆ. ಟಿವಿಯಲ್ಲಿ ಬರುವ ಪ್ರೈಮ್ ಟೈಮ್ ಶೋಗಳಿಗಿಂತ ಸ್ವತಂತ್ರ ಯೂಟ್ಯೂಬ್ ಚಾನೆಲ್‌ಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಸಿಗುವ ನಿಷ್ಪಕ್ಷಪಾತ ವಿಚಾರಗಳಿಗೆ ಜನ ಕಿವಿಗೊಡುತ್ತಿದ್ದಾರೆ. ಇದರಿಂದಾಗಿ ಸಾಂಪ್ರದಾಯಿಕ ಮಾಧ್ಯಮಗಳ ಟಿಆರ್‌ಪಿ ರೇಟಿಂಗ್ ಕುಸಿಯುತ್ತಿದ್ದು, ಜಾಹೀರಾತುದಾರರೂ ಕೂಡ ಅಂತಹ ಸಂಸ್ಥೆಗಳಿಂದ ದೂರ ಸರಿಯುತ್ತಿದ್ದಾರೆ. ಇದು ಮಾಧ್ಯಮ ಸಂಸ್ಥೆಗಳ ಆದಾಯ ಮೂಲದ ಮೇಲೆ ನೇರ ಪರಿಣಾಮ ಬೀರಿದೆ.
ಸಂಸ್ಥೆಯ ಆಡಳಿತ ಮಂಡಳಿಯು ತನ್ನ ಅಂಗಸಂಸ್ಥೆಯಾದ ‘ಮೇಲ್ ಟುಡೇ’ನಲ್ಲಿ 50 ಲಕ್ಷ ರೂಪಾಯಿ ಹೂಡಿಕೆ ಮಾಡುವ ಮೂಲಕ ಮರುಚೇತರಿಕೆಗೆ ಹವಣಿಸುತ್ತಿದೆ. ಇದು ಈಗಾಗಲೇ ಆಳವಾಗಿ ಬೇರೂರಿರುವ ವಿಶ್ವಾಸಾರ್ಹತೆಯ ಕೊರತೆಯನ್ನು ನೀಗಿಸಲು ಸಾಕಾಗುವುದಿಲ್ಲ. ಪ್ರೇಕ್ಷಕರ ವಿಶ್ವಾಸವನ್ನು ಕಳೆದುಕೊಂಡ ಸಂಸ್ಥೆಗಳು ಕೇವಲ ಬಂಡವಾಳ ಹೂಡಿಕೆಯಿಂದ ಹಳೆಯ ನಂಬಿಕೆಯನ್ನು ಮರಳಿ ಪಡೆಯುವುದು ಅಸಾಧ್ಯ. ಮಾಧ್ಯಮದ ಕಡ್ಡಾಯ ಮೌಲ್ಯಗಳನ್ನು ಕಡೆಗಣಿಸಿ, ನಿರ್ದಿಷ್ಟ ಸಿದ್ಧಾಂತದ ಭಜನೆಗೆ ಇಳಿದ ಮಾಧ್ಯಮಗಳಿಗೆ ಪ್ರೇಕ್ಷಕರ ತಿರಸ್ಕಾರವೇ ಅಂತಿಮ ಶಿಕ್ಷೆಯಾಗಿದೆ. ಟಿವಿ ಟುಡೇ ನೆಟ್‌ವರ್ಕ್‌ನ ಈ ಆರ್ಥಿಕ ಕುಸಿತ ಇತರೆ ಮಡಿಲು ಮಾಧ್ಯಮಗಳಿಗೆ ಒಂದು ಎಚ್ಚರಿಕೆಯ ಕರೆಗಂಟೆ. ಜನ ಸಾಮಾನ್ಯರ ಧ್ವನಿಯಾಗುವುದ ಬಿಟ್ಟು ಗೆದ್ದೆತ್ತಿನ ಬಾಲ ಹಿಡಿಯುವ ಬಾಲಂಗೋಚಿ ಮಾಧ್ಯಮಗಳಿಗೆ ಕಾಲಾನಂತರದಲ್ಲಿ ತಕ್ಕ ಶಾಸ್ತಿ ಕಾದಿದೆ ಎಂಬುದನ್ನು ಈ ವರದಿ ಮನದಟ್ಟು ಮಾಡಿದೆ.




