ವಲಸಿಗರು ನಗರದ ಸಮಸ್ಯೆಯಲ್ಲ; ನಗರದ ಶಕ್ತಿಯಾಗಿದ್ದಾರೆ. ಜನನ ಪ್ರಮಾಣ ಕುಸಿಯುತ್ತಿರುವ ಸಂದರ್ಭದಲ್ಲಿ ಅವರೇ ಯುವ ಕಾರ್ಮಿಕ ಬಲವನ್ನು ಉಳಿಸುತ್ತಿದ್ದಾರೆ. ಆದ್ದರಿಂದ ವಲಸೆಯನ್ನು ತಡೆಯುವುದು ಪರಿಹಾರವಲ್ಲ; ಅದನ್ನು ಯೋಜಿತವಾಗಿ ನಿರ್ವಹಿಸುವುದೇ ಪರಿಹಾರ.
ಬೆಂಗಳೂರು ಇಂದು ದೇಶದ ಆರ್ಥಿಕ ಬೆಳವಣಿಗೆಯ ಎಂಜಿನ್. ಐಟಿ, ಶಿಕ್ಷಣ, ಸಂಶೋಧನೆ, ಉದ್ಯಮ ಹಾಗೂ ಉದ್ಯೋಗದಲ್ಲಿ ದೇಶಕ್ಕೆ ಹೆಮ್ಮೆ ತಂದಿರುವ ಈ ನಗರ ಇಂದು ಟ್ರಾಫಿಕ್, ಪ್ರವಾಹ, ಕೆರೆಗಳ ನಾಶ, ರಾಜಕಾಲುವೆಗಳ ಒತ್ತುವರಿ, ಕೊಳಚೆ ಪ್ರದೇಶಗಳ ವಿಸ್ತರಣೆ, ಹಸಿರು ಪ್ರದೇಶಗಳ ಕ್ಷೀಣತೆ ಹಾಗೂ ಮೂಲಸೌಕರ್ಯಗಳ ಮೇಲಿನ ಅತಿಯಾದ ಒತ್ತಡದಿಂದ ಬಳಲುತ್ತಿದೆ. ಪ್ರತಿಯೊಂದು ಸಮಸ್ಯೆಗೂ ಪ್ರತ್ಯೇಕ ಯೋಜನೆಗಳನ್ನು ರೂಪಿಸುತ್ತಲೇ ಇದ್ದೇವೆ. ರಸ್ತೆ ಅಗಲ ಮಾಡುವುದು, ಫ್ಲೈಓವರ್ ಕಟ್ಟುವುದು, ಅಂಡರ್‌ಪಾಸ್ ನಿರ್ಮಿಸುವುದು, ಮೆಟ್ರೋ ವಿಸ್ತರಿಸುವುದು – ಇವೆಲ್ಲ ಅಗತ್ಯವೇ. ಆದರೆ, ಇವು ಶಾಶ್ವತ ಪರಿಹಾರವಲ್ಲ. ಬೆಂಗಳೂರಿಗೆ ಈಗ ಬೇಕಾಗಿರುವುದು ಸಮಗ್ರ ನಗರ ಮತ್ತು ಪ್ರಾದೇಶಿಕ ಪುನರ್‌ಅಭಿವೃದ್ಧಿ.
ಈ ಪುನರ್‌ಅಭಿವೃದ್ಧಿಯ ಮೊದಲ ಹೆಜ್ಜೆ ನಗರದ ಕೊಳಚೆ ಪ್ರದೇಶಗಳಿಂದಲೇ ಆರಂಭವಾಗಬೇಕು. ಸಾಧ್ಯವಾದಷ್ಟು ಅಲ್ಲಿಯೇ ಬಹುಮಹಡಿ ವಸತಿಗಳನ್ನು ನಿರ್ಮಿಸಿ ನಿವಾಸಿಗಳನ್ನು ಪುನರ್ವಸತಿ ಮಾಡಬೇಕು. ಉದಾಹರಣೆಗೆ, ಒಂದು ಎಕರೆ ವ್ಯಾಪ್ತಿಯಲ್ಲಿರುವ ಕೊಳಚೆ ಪ್ರದೇಶದಲ್ಲಿ ಸುಮಾರು 30% ಭೂಮಿಯನ್ನು ಬಹುಮಹಡಿ ವಸತಿ ಕಟ್ಟಡಗಳಿಗೆ ಬಳಸಿದರೆ, ಉಳಿದ ಸುಮಾರು 70% ಭೂಮಿಯನ್ನು ರಸ್ತೆ, ಉದ್ಯಾನ, ಶಾಲೆ, ಆಸ್ಪತ್ರೆ, ಪಾರ್ಕಿಂಗ್ ಹಾಗೂ ಇತರ ಸಾರ್ವಜನಿಕ ಸೌಲಭ್ಯಗಳಿಗೆ ಮತ್ತು ಯೋಜಿತ ವಾಣಿಜ್ಯ ಅಭಿವೃದ್ಧಿಗೆ ಬಳಸಬಹುದು. ನಗರದ ಹೃದಯಭಾಗದಲ್ಲಿರುವ ಇಂತಹ ಪ್ರದೇಶಗಳ ಭೂಮಿಯ ಮೌಲ್ಯ ಅತ್ಯಂತ ಹೆಚ್ಚಿರುವುದರಿಂದ, ವಾಣಿಜ್ಯ ಅಭಿವೃದ್ಧಿಯಿಂದ ಬರುವ ಆದಾಯವೇ ಪುನರ್ವಸತಿ ಮತ್ತು ಮೂಲಸೌಕರ್ಯ ನಿರ್ಮಾಣದ ವೆಚ್ಚದ ಬಹುಪಾಲನ್ನು ಭರಿಸುವ ಸಾಮರ್ಥ್ಯ ಹೊಂದಿರುತ್ತದೆ. ಹೀಗಾಗಿ ಭೂಮಿಯ ಮೌಲ್ಯವನ್ನೇ ಅಭಿವೃದ್ಧಿಯ ಬಂಡವಾಳವನ್ನಾಗಿ ಪರಿವರ್ತಿಸುವ ಈ ಸ್ವಾವಲಂಬಿ ಹಣಕಾಸಿನ ಮಾದರಿ ಸರ್ಕಾರದ ಮೇಲಿನ ಹಣಕಾಸಿನ ಹೊರೆ ಕಡಿಮೆ ಮಾಡುವುದರ ಜೊತೆಗೆ ಯೋಜನೆಯ ಅನುಷ್ಠಾನಕ್ಕೂ ವೇಗ ನೀಡುತ್ತದೆ.
ಈ ಪ್ರಕ್ರಿಯೆಯನ್ನು ಹಂತ ಹಂತವಾಗಿ ಜಾರಿಗೊಳಿಸಬೇಕು. ಮೊದಲಿಗೆ ನಗರದ ಕೋರ್ ಪ್ರದೇಶಗಳಲ್ಲಿರುವ ಕೊಳಚೆ ಪ್ರದೇಶಗಳನ್ನು, ನಂತರ ಮಧ್ಯಂತರ ಪ್ರದೇಶಗಳಲ್ಲಿರುವ ಕೊಳಚೆ ಪ್ರದೇಶಗಳನ್ನು ಹಾಗೂ ಕೊನೆಗೆ ಹೊರವಲಯದ ಕೊಳಚೆ ಪ್ರದೇಶಗಳನ್ನು ಪುನರ್‌ಅಭಿವೃದ್ಧಿಪಡಿಸಬೇಕು. ಈ ಹಂತ ಪೂರ್ಣಗೊಂಡ ಬಳಿಕ ಹಳೆಯದಾಗಿ ಶಿಥಿಲಗೊಂಡು ನಗರ ಸೌಂದರ್ಯ ಮತ್ತು ಕಾರ್ಯಕ್ಷಮತೆಯನ್ನು ಕಳೆದುಕೊಂಡಿರುವ ‘ಬ್ಲೈಟ್’ (ಸ್ಲಂಗಳಲ್ಲದಿದ್ದರೂ, ರಾಜಕಾಲುವೆಗಳು, ದೊಡ್ಡ ಚರಂಡಿಗಳು, ಕೊಳಚೆ ಪ್ರದೇಶ, ಕಸ ಸಂಗ್ರಹಾರ.. ಇತ್ಯಾದಿಗಳ ಪಕ್ಕದಲ್ಲಿ ಗಾಳಿ, ಬೆಳಕು, ರಸ್ತೆ, ಒಳಚರಂಡಿ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದ ವಾಸಯೋಗ್ಯತೆಯನ್ನು ಕಳೆದುಕೊಂಡಿರುವ ಮತ್ತು ಎ ಖಾತ, ಬಿ ಖಾತಗಳನ್ನೂ ಸಹ ಹೆಚ್ಚು ಹೊಂದಿರುವ ಪಕ್ಕಾ ಕಟ್ಟಡಗಳ ಪ್ರದೇಶಗಳು) ಪ್ರದೇಶಗಳ ಪುನರ್‌ಅಭಿವೃದ್ಧಿಯನ್ನು ಇದೇ ಮಾದರಿಯಲ್ಲಿ ಕೈಗೊಳ್ಳಬೇಕು. ಇದರಿಂದ ನಗರವು ಯೋಜಿತವಾಗಿ ಪುನರುಜ್ಜೀವನಗೊಂಡು, ವಸತಿ, ಮೂಲಸೌಕರ್ಯ ಮತ್ತು ಸಾರ್ವಜನಿಕ ಸ್ಥಳಗಳ ಗುಣಮಟ್ಟವೂ ಗಣನೀಯವಾಗಿ ಸುಧಾರಿಸುತ್ತದೆ.
ಬೆಂಗಳೂರು ಪ್ರವಾಹದಿಂದ ಮುಕ್ತವಾಗಬೇಕಾದರೆ ಕೆರೆಗಳು, ರಾಜಕಾಲುವೆಗಳು ಮತ್ತು ಜೌಗು ಪ್ರದೇಶಗಳನ್ನು ಉಳಿಸುವುದೇ ಮೊದಲ ಷರತ್ತು. ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿದ ನಂತರ ಅವುಗಳನ್ನು ಕಾಂಕ್ರೀಟ್ ಹೊಳೆಗಳನ್ನಾಗಿ ಮಾಡಬಾರದು. ಅವುಗಳನ್ನು ನೈಸರ್ಗಿಕ ಹಳ್ಳಗಳಂತೆ ಪುನಃಸ್ಥಾಪಿಸಿ, ಮಳೆನೀರು ಯಾವುದೇ ಅಡೆತಡೆಯಿಲ್ಲದೆ ಹರಿಯುವ ವ್ಯವಸ್ಥೆ ಮಾಡಬೇಕು. ಸ್ಮಾರ್ಟ್ ಸಿಟಿ ಎಂದರೆ ಅಲಂಕಾರಿಕ ಫುಟ್‌ಪಾತ್, ಟೈಲ್ಸ್ ಅಥವಾ ಬಣ್ಣದ ದೀಪಗಳಲ್ಲ; ಮಳೆನೀರಿನ ಹಳ್ಳಗಳಿಗೆ ಎಲ್ಲಿಯೂ ಕೊಳಚೆ ನೀರು ಸೇರದ ನಗರವೇ ನಿಜವಾದ ಸ್ಮಾರ್ಟ್ ಸಿಟಿ. ರಾಜಕಾಲುವೆಗಳ ಎರಡೂ ಬದಿಗಳಲ್ಲಿ ಉಷ್ಣವಲಯದ ವಿವಿಧ ದೇಶಗಳ ಮರಗಳು ಮತ್ತು ಸಸ್ಯಗಳನ್ನು ಬೆಳೆಸಿದರೆ ಬೆಂಗಳೂರು ವಿಶ್ವದ ಅಪರೂಪದ ಹಸಿರು ನಗರವಾಗಬಹುದು. ಜುಳುಜುಳು ಹರಿಯುವ ನೀರಿನ ನಾದ ಮತ್ತು ಹಸಿರಿನ ತಂಪು ಬೆಂಗಳೂರಿನ ಹವಾಮಾನಕ್ಕೆ ಹೊಸ ಮೆರಗು ನೀಡುತ್ತದೆ.
ಅಭಿವೃದ್ಧಿಯ ಹೆಸರಿನಲ್ಲಿ ಯಾರೂ ಬಲಿಪಶುಗಳಾಗಬಾರದು. ಭೂಮಿ, ಮನೆ ಅಥವಾ ಜೀವನೋಪಾಯ ಕಳೆದುಕೊಳ್ಳುವವರಿಗೆ ನ್ಯಾಯಯುತ ಪರಿಹಾರ, ಘನತೆಯುತ ಪುನರ್ವಸತಿ ಮತ್ತು ನಿಗದಿತ ಅವಧಿಯಲ್ಲಿ ನ್ಯಾಯ ದೊರೆಯಬೇಕು.
ಸಿಂಗಾಪುರ ನಿರ್ಮಾತೃ ಲೀ ಕ್ವಾನ್ ಯೂ ತಮ್ಮ ದೇಶದ ಪುನರ್‌ನಿರ್ಮಾಣದ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ ಭೂಮಿಯನ್ನು ದೂರದೃಷ್ಟಿಯಿಂದ ಬಳಸಿದರು. ಜೊತೆಗೆ ಪ್ರತಿಯೊಂದು ಕುಟುಂಬಕ್ಕೂ ಕೈಗೆಟಕುವ ದರದಲ್ಲಿ ಸ್ವಂತ ಮನೆ ದೊರೆಯುವಂತೆ ಯೋಜಿಸಿದರು. ಇಂದು ಸಿಂಗಾಪುರದಲ್ಲಿ ಬಹುಪಾಲು ಜನರು ಸರ್ಕಾರ ನಿರ್ಮಿಸಿದ ಗುಣಮಟ್ಟದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮನೆ ಎಂಬುದು ಕೇವಲ ಕಟ್ಟಡವಲ್ಲ; ಅದು ನಾಗರಿಕನಿಗೆ ದೇಶದಲ್ಲಿ ತನ್ನದೇ ಆದ ಪಾಲಿದೆ ಎಂಬ ಭಾವನೆ ಮೂಡಿಸುತ್ತದೆ. ಬೆಂಗಳೂರಿನ ಪುನರ್‌ಅಭಿವೃದ್ಧಿಯಲ್ಲಿಯೂ ಕೈಗೆಟಕುವ ವಸತಿಗೆ ಮೊದಲ ಆದ್ಯತೆ ಸಿಗಬೇಕು.
ಬೆಂಗಳೂರು ಸುತ್ತಮುತ್ತ ಬಿಡದಿ ಮಾತ್ರವಲ್ಲ, ಇನ್ನೂ ಹಲವು ಯೋಜಿತ ಕೌಂಟರ್-ಮ್ಯಾಗ್ನೆಟ್ ಪಟ್ಟಣಗಳನ್ನು ಅಭಿವೃದ್ಧಿಪಡಿಸಬೇಕು. ಕೈಗಾರಿಕೆ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಈ ಪಟ್ಟಣಗಳ ಬೆನ್ನೆಲುಬಾಗಬೇಕು. ಪುನರ್‌ಅಭಿವೃದ್ಧಿಯಿಂದ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ಗೌರವಯುತ ಪುನರ್ವಸತಿ ಕಲ್ಪಿಸಲು ಇವು ನೆರವಾಗುತ್ತವೆ. ಹೊಸ ಪಟ್ಟಣಗಳಿಗೆ ಭೂಮಿ ಆಯ್ಕೆ ಮಾಡುವಾಗ ಫಲವತ್ತಾದ ಗದ್ದೆಗಳು, ತೋಟಗಳು ಮತ್ತು ಕೃಷಿಭೂಮಿಗಿಂತ ಬಂಜರು ಅಥವಾ ಕಡಿಮೆ ಕೃಷಿ ಸಾಮರ್ಥ್ಯವಿರುವ ಎತ್ತರದ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಇದರಿಂದ ಮಳೆನೀರು ಸುಲಭವಾಗಿ ಹರಿದು ಹೋಗುತ್ತದೆ; ಫಲವತ್ತಾದ ಕೃಷಿಭೂಮಿ ಮತ್ತು ರೈತರ ಜೀವನೋಪಾಯವೂ ಉಳಿಯುತ್ತದೆ.
ವಲಸಿಗರು ನಗರದ ಸಮಸ್ಯೆಯಲ್ಲ; ನಗರದ ಶಕ್ತಿಯಾಗಿದ್ದಾರೆ. ಜನನ ಪ್ರಮಾಣ ಕುಸಿಯುತ್ತಿರುವ ಸಂದರ್ಭದಲ್ಲಿ ಅವರೇ ಯುವ ಕಾರ್ಮಿಕ ಬಲವನ್ನು ಉಳಿಸುತ್ತಿದ್ದಾರೆ. ಆದ್ದರಿಂದ ವಲಸೆಯನ್ನು ತಡೆಯುವುದು ಪರಿಹಾರವಲ್ಲ; ಅದನ್ನು ಯೋಜಿತವಾಗಿ ನಿರ್ವಹಿಸುವುದೇ ಪರಿಹಾರ.
ಈ ಲೇಖನ ಓದಿದ್ದೀರಾ?: ಪ್ಯಾಲೆಸ್ತೀನ್ ಮಕ್ಕಳ ನರಮೇಧ: ಇಸ್ರೇಲ್ ಕುತಂತ್ರ ಬೆತ್ತಲೆ ಮಾಡಿದ ನ್ಯಾ. ಎಸ್ ಮುರಳೀಧರ್ ಯಾರು?
ಪ್ರತಿಯೊಂದು ಜಲಾಶಯಕ್ಕೂ ನೀರು ಸಂಗ್ರಹಿಸಿಕೊಳ್ಳುವ ಮಿತಿ ಇರುತ್ತದೆ. ಆ ಮಿತಿ ದಾಟಿದಾಗ ಹೆಚ್ಚುವರಿ ನೀರು ಹೊರಹರಿಯುತ್ತದೆ. ಬೆಂಗಳೂರಿನ ಬೆಳವಣಿಗೆಯೂ ಇದೇ ತತ್ವದ ಮೇಲೆ ಸಾಗಬೇಕು. ನಗರ ತನ್ನ ಯೋಜಿತ ಜನಸಂಖ್ಯೆಯ ಮಿತಿಯನ್ನು ತಲುಪಿದ ನಂತರ ಹೆಚ್ಚುವರಿ ಬೆಳವಣಿಗೆಯನ್ನು ಕೌಂಟರ್-ಮ್ಯಾಗ್ನೆಟ್ ಪಟ್ಟಣಗಳು ಹೀರಿಕೊಳ್ಳಬೇಕು. ಹೇಗೆ ಜಲಾಶಯಕ್ಕೆ ಜಲಾನಯನ ಪ್ರದೇಶವಿದೆಯೋ, ಹಾಗೆಯೇ ಬೆಂಗಳೂರಿಗೂ ವಿಶಾಲ ಪ್ರಾದೇಶಿಕ ವ್ಯಾಪ್ತಿ ಇದೆ. ಆದ್ದರಿಂದ ನಗರದ ಯೋಜನೆ ಬಿಬಿಎಂಪಿ ಗಡಿಗೆ ಸೀಮಿತವಾಗದೆ ಇಡೀ ಬೆಂಗಳೂರು ಮಹಾನಗರ ಪ್ರದೇಶವನ್ನು ಒಳಗೊಂಡಿರಬೇಕು.
ಇಂತಹ ಯೋಜನೆಗಳು ಒಂದೇ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳ್ಳುವುದಿಲ್ಲ. ಆದ್ದರಿಂದ ವಿಶೇಷ ಕಾನೂನಿನಡಿ ಸ್ವಾಯತ್ತ ಶಾಸನಬದ್ಧ ಪ್ರಾಧಿಕಾರವನ್ನು ಸ್ಥಾಪಿಸಿ, ಅದರ ಅಧೀನದಲ್ಲಿ ವಿವಿಧ ಪುನರ್‌ಅಭಿವೃದ್ಧಿ ಯೋಜನೆಗಳಿಗೆ ಮತ್ತು ಹೊಸ ಪಟ್ಟಣಗಳ ನಿರ್ಮಾಣಕ್ಕೆ ವಿಶೇಷ ಉದ್ದೇಶಿತ ಸಂಸ್ಥೆಗಳನ್ನು (SPV) ರಚಿಸಬೇಕು. ಸರ್ಕಾರ, ಹಣಕಾಸು ಸಂಸ್ಥೆಗಳು ಹಾಗೂ ಭೂಮಿ ನೀಡುವ ರೈತರು ಬಯಸಿದರೆ ಈ SPVಗಳಲ್ಲಿ ಪಾಲುದಾರರಾಗುವ ಅವಕಾಶ ಕಲ್ಪಿಸಬೇಕು. ಭೂಮಿಗೆ ಕೇವಲ ಪರಿಹಾರ ನೀಡಿ ಸಂಬಂಧ ಮುಗಿಸುವ ಬದಲು, ಅಭಿವೃದ್ಧಿಯಿಂದ ಬರುವ ಆದಾಯದಲ್ಲಿ ಅವರಿಗೆ ಲಾಭಾಂಶ ನೀಡುವ ವ್ಯವಸ್ಥೆ ರೂಪಿಸಿದರೆ ರೈತರು ಅಭಿವೃದ್ಧಿಯ ಪಾಲುದಾರರಾಗುತ್ತಾರೆ. ಇದರಿಂದ ಭೂಸ್ವಾಧೀನದ ವಿರೋಧ ಕಡಿಮೆಯಾಗುತ್ತದೆ, ಸರ್ಕಾರದ ಮೇಲಿನ ಹಣಕಾಸಿನ ಒತ್ತಡವೂ ತಗ್ಗುತ್ತದೆ ಮತ್ತು ಅಭಿವೃದ್ಧಿಗೆ ಸುಸ್ಥಿರ ಹಣಕಾಸಿನ ಮಾದರಿಯೂ ರೂಪುಗೊಳ್ಳುತ್ತದೆ.
ಬೆಂಗಳೂರು ಭವಿಷ್ಯವನ್ನು ಉಳಿಸಬೇಕಾದರೆ ಇನ್ನಷ್ಟು ಫ್ಲೈಓವರ್‌ಗಳಲ್ಲ, ಸಮಗ್ರ ಪುನರ್‌ಅಭಿವೃದ್ಧಿ ಬೇಕು. ಇಂದು ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳನ್ನು ನಾಳೆ ಭಾರತದ ಇತರ ಮಹಾನಗರಗಳೂ ಎದುರಿಸಲಿವೆ. ಆದ್ದರಿಂದ ಬೆಂಗಳೂರಿಗಾಗಿ ರೂಪಿಸುವ ಸಮಗ್ರ ಪುನರ್‌ಅಭಿವೃದ್ಧಿ ಮಾದರಿ ದೇಶದ ಇತರ ನಗರಗಳಿಗೂ ಮಾರ್ಗದರ್ಶಿಯಾಗಬಹುದು. ನಗರಗಳನ್ನು ಕಟ್ಟುವುದು ಸುಲಭ; ಆದರೆ ಮುಂದಿನ ನೂರು ವರ್ಷಗಳಿಗೂ ಬದುಕುವ ನಗರವನ್ನು ಕಟ್ಟಲು ದೂರದೃಷ್ಟಿ ಬೇಕು. ಆ ದೂರದೃಷ್ಟಿಯನ್ನು ತೋರಿಸುವ ಅವಕಾಶ ಇಂದು ಬೆಂಗಳೂರಿನ ಮುಂದಿದೆ.



