ಒಂದೆಡೆ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ನೆಪವೊಡ್ಡಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏಕಾಏಕಿ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಜನಸಾಮಾನ್ಯರ ಬಜೆಟ್ ಬುಡಮೇಲಾಗಿದೆ. ಈ ಏರಿಕೆಯೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಧನ ದರವು ಪ್ರತಿ ಲೀಟರ್‌ಗೆ 100 ರೂ. ಸನಿಹಕ್ಕೆ ಬಂದು ನಿಂತಿದೆ.
ಇಂದು (ಮೇ.15) ಬೆಳಿಗ್ಗೆಯಿಂದಲೇ ಜಾರಿಗೆ ಬಂದಿರುವ ಈ ದರ ಏರಿಕೆಯು ಸಾರಿಗೆ ವೆಚ್ಚದ ಮೇಲೆ ನೇರ ಪರಿಣಾಮ ಬೀರಲಿದೆ. ತೈಲ ಕಂಪನಿಗಳು ಲೀಟರ್‌ಗೆ 3 ರೂ. ರಷ್ಟು ದರ ಏರಿಸಿರುವುದು ದಿನಬಳಕೆಯ ವಸ್ತುಗಳ ಬೆಲೆ ಏರಿಕೆಗೂ ದಾರಿ ಮಾಡಿಕೊಡಲಿದೆ. ಈಗಾಗಲೇ ತರಕಾರಿ, ಬೇಳೆಕಾಳುಗಳ ಬೆಲೆಯಿಂದ ಹೈರಾಣಾಗಿರುವ ಜನರಿಗೆ, ಇಂಧನ ದರ ಏರಿಕೆಯು ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನು ಓದಿದ್ದೀರಾ? ಕೇರಳಂ ‘ಕೈ’ ಹಿಡಿದ ‘ಪುಸ್ತಕ ಪ್ರೇಮಿ’ ಸಜ್ಜನ ಸತೀಶನ್ ಬಗ್ಗೆ ನಿಮಗೆಷ್ಟು ಗೊತ್ತು?
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 3.25 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 106.21 ರೂಪಾಯಿ ತಲುಪಿದೆ.
ಸಿಎನ್‌ಜಿ ಬೆಲೆಯಲ್ಲೂ ಏರಿಕೆ
ಇಂಧನ ದರ ಏರಿಕೆಯ ಬೆನ್ನಲ್ಲೇ ದೆಹಲಿಯಲ್ಲಿ ಸಿಎನ್‌ಜಿ ಬೆಲೆಯಲ್ಲಿ 2 ರೂ. ಏರಿಕೆ ಮಾಡಲಾಗಿದೆ. ಸಿಎನ್‌ಜಿ ದರ ಏರಿಕೆಯಿಂದಾಗಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದ್ದು, ನಗರ ಪ್ರದೇಶಗಳಲ್ಲಿ ಆಟೋ ಮತ್ತು ಕ್ಯಾಬ್ ದರಗಳು ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆಯಿದೆ.




