ಕೇಂದ್ರ ಸರ್ಕಾರವು ಏಪ್ರಿಲ್ 1 ರಿಂದ ಪ್ರಮಾಣೀಕರಿಸದ (Non-certified) ಮತ್ತು ಇಂಟರ್ನೆಟ್ ಸಂಪರ್ಕ ಹೊಂದಿರುವ ಚೀನಾ ಮೂಲದ ಸಿಸಿಟಿವಿ ಕ್ಯಾಮೆರಾಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಿದೆ. ಇದರೊಂದಿಗೆ ಕಣ್ಗಾವಲು (surveillance) ಉದ್ಯಮಕ್ಕೆ ನೀಡಲಾಗಿದ್ದ ಎರಡು ವರ್ಷಗಳ ಪರಿವರ್ತನಾ ಅವಧಿ(transition period) ಅಂತ್ಯಗೊಳ್ಳಲಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಚೀನಾದ ಚಿಪ್‌ಸೆಟ್‌ಗಳು ಅಥವಾ ಫರ್ಮ್‌ವೇರ್‌ಗಳನ್ನು ಬಳಸುವ ಹಾರ್ಡ್‌ವೇರ್‌ಗಳನ್ನು ಪ್ರಮಾಣೀಕರಿಸಲು ಅಧಿಕಾರಿಗಳು ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವ ಭದ್ರತಾ ಮಾರುಕಟ್ಟೆಯಿಂದ ಜಾಗತಿಕ ದೈತ್ಯ ಕಂಪನಿಗಳು ಹೊರಗುಳಿಯುವಂತಾಗಿದೆ ಎಂದು ಉದ್ಯಮದ ಕಾರ್ಯನಿರ್ವಾಹಕರು ‘ಇಟಿ ಬ್ಯೂರೋ’ಗೆ ತಿಳಿಸಿದ್ದಾರೆ. ಈ ನಿಯಂತ್ರಣ ಕ್ರಮವು ಪೂರೈಕೆ ಸರಪಳಿಯಲ್ಲಿ ಬೃಹತ್ ಬದಲಾವಣೆಗೆ ಕಾರಣವಾಗಿದ್ದು, 2026ರ ಫೆಬ್ರವರಿ ವೇಳೆಗೆ ದೇಶೀಯ ಮಾರಾಟಗಾರರು ಶೇ 80ರಷ್ಟು ಮಾರುಕಟ್ಟೆ ಪಾಲನ್ನು ತಮ್ಮದಾಗಿಸಿಕೊಂಡಿದ್ದಾರೆ. ಮತ್ತೊಂದೆಡೆ, ಚೀನಾದ ಪ್ರಸಿದ್ಧ ಬ್ರ್ಯಾಂಡ್‌ಗಳು ಅಸ್ತಿತ್ವ ಉಳಿಸಿಕೊಳ್ಳಲು ಜಂಟಿ ಉದ್ಯಮಗಳ ಮೊರೆ ಹೋಗುತ್ತಿವೆ ಅಥವಾ ಮಾರುಕಟ್ಟೆಯಿಂದ ನಿರ್ಗಮಿಸುತ್ತಿವೆ.
ಈ ಹೊಸ ಪ್ರಮಾಣೀಕರಣ ನಿಯಮಗಳ ಪ್ರಮುಖ ಗುರಿ ಜಾಗತಿಕ ಕಣ್ಗಾವಲು ದೈತ್ಯ ಕಂಪನಿಗಳಾದ ‘ಹಿಕ್ವಿಷನ್’ (Hikvision) ಮತ್ತು ‘ದಹುವಾ’ (Dahua). 2024ರವರೆಗೆ ಈ ಎರಡು ಕಂಪನಿಗಳು ಭಾರತೀಯ ಮಾರುಕಟ್ಟೆಯ ಮೂರನೇ ಒಂದು ಭಾಗವನ್ನು ಹೊಂದಿದ್ದವು.
ಆದಿತ್ಯ ಇನ್ಫೋಟೆಕ್‌ನ ಕಾರ್ಯತಂತ್ರ ಮತ್ತು ಕಾರ್ಯಾಚರಣೆ ವಿಭಾಗದ ನಿರ್ದೇಶಕ ಅನೂಪ್ ನಾಯರ್ ಅವರ ಪ್ರಕಾರ, ತಿಂಗಳಿಗೆ 20 ಲಕ್ಷ ಹಿಕ್ವಿಷನ್ ಕ್ಯಾಮೆರಾಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದ ಬೃಹತ್ ಕಾರ್ಖಾನೆಗೆ ಚೀನಾ ಮೂಲದ ಉತ್ಪನ್ನಗಳ ತಯಾರಿಕೆಗಾಗಿ ಪ್ರಮಾಣಪತ್ರವನ್ನು ನಿರಾಕರಿಸಲಾಗಿದೆ.
ಇದನ್ನು ಓದಿದ್ದೀರಾ? IPL ಅಂಗಳದಲ್ಲಿ ‘ಆರ್‌ಸಿಬಿ’ ಅತಿದೊಡ್ಡ ಬ್ರ್ಯಾಂಡ್ ಆಗಿ ಬೆಳೆದದ್ದೇ ಒಂದು ವಿಸ್ಮಯ
ಹಿಕ್ವಿಷನ್ ಭಾರತೀಯ ಸಂಸ್ಥೆಯೊಂದಿಗಿನ ಜಂಟಿ ಉದ್ಯಮದ ಮೂಲಕ ಉಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ದಹುವಾದ ವಹಿವಾಟು ಶೇಕಡಾ 80 ರಷ್ಟು ಕುಸಿದಿದೆ. ಈ ಬ್ರ್ಯಾಂಡ್ ಇದೀಗ ಹಳೆಯ ತಂತ್ರಜ್ಞಾನದ ಅನಲಾಗ್ ಕ್ಯಾಮೆರಾಗಳನ್ನು ಮಾರಾಟ ಮಾಡುವುದಕ್ಕಷ್ಟೇ ಸೀಮಿತವಾಗಿದೆ.
ಇದಲ್ಲದೆ, ಶಿಯೋಮಿ (Xiaomi) ಮತ್ತು ರಿಯಲ್‌ಮಿ (Realme)ನಂತಹ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ‘ಎಸ್‌ಟಿಕ್ಯೂಸಿ’ (STQC) ನಿಯಮಗಳನ್ನು ಪೂರೈಸಲು ವಿಫಲವಾಗಿ, ಸ್ಮಾರ್ಟ್ ಹೋಮ್ ಕ್ಯಾಮೆರಾ ವಿಭಾಗದಿಂದ ಸಂಪೂರ್ಣವಾಗಿ ನಿರ್ಗಮಿಸಿವೆ.
ಈಗ ಬಳಸುತ್ತಿರುವ ಗ್ರಾಹಕರಿಗೆ ಏನಾಗುತ್ತದೆ?
ಈಗಾಗಲೇ ಈ ಬ್ರ್ಯಾಂಡ್‌ಗಳ ಇಂಟರ್ನೆಟ್ ಸಂಪರ್ಕಿತ ಕ್ಯಾಮೆರಾಗಳನ್ನು ಬಳಸುತ್ತಿರುವ ಗ್ರಾಹಕರು, ಸಾಫ್ಟ್‌ವೇರ್ ಅಪ್‌ಡೇಟ್ ಮತ್ತು ಸೈಬರ್ ಭದ್ರತೆಯ ವಿಚಾರದಲ್ಲಿ ಭವಿಷ್ಯದಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಬಹುದು. ‘ಮೀಟಿ’ (MeitY) ನಿಯಮಗಳು(ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜಾರಿಗೆ ತಂದಿರುವ ಸಿಸಿಟಿವಿ ಕ್ಯಾಮೆರಾಗಳಿಗೆ ಸಂಬಂಧಿಸಿದ ಭದ್ರತಾ ನಿಯಮಗಳು) ನಿರ್ದಿಷ್ಟವಾಗಿ ಅನಧಿಕೃತ ರಿಮೋಟ್ ಆಕ್ಸೆಸ್‌ಗೆ ಅವಕಾಶ ನೀಡುವ ದೋಷಗಳನ್ನು ಗುರಿಯಾಗಿಸಿವೆ.
ಪ್ರಸ್ತುತ ಬಳಕೆಯಲ್ಲಿರುವ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳುವುದಿಲ್ಲವಾದರೂ, ಸರ್ಕಾರವು ಈ ಮಾಡೆಲ್‌ಗಳಿಗೆ ಪ್ರಮಾಣಪತ್ರ ನಿರಾಕರಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಹೊಸ ಸ್ಟಾಕ್ ಲಭ್ಯವಿರುವುದಿಲ್ಲ. ಅಲ್ಲದೆ, ಕಂಪನಿಗಳು ಮಾರುಕಟ್ಟೆಯಿಂದ ನಿರ್ಗಮಿಸುತ್ತಿರುವುದರಿಂದ ಅಧಿಕೃತ ತಾಂತ್ರಿಕ ಬೆಂಬಲ (Technical support) ಕಡಿತಗೊಳ್ಳಬಹುದು. ಕೌಂಟರ್‌ಪಾಯಿಂಟ್ ರಿಸರ್ಚ್‌ನ ವಿಶ್ಲೇಷಕ ವರುಣ್ ಗುಪ್ತಾ ಅವರ ಪ್ರಕಾರ, ಪ್ರಮಾಣಪತ್ರ ಪಡೆಯಲು ವಿಫಲರಾದ ಸಣ್ಣ ವ್ಯಾಪಾರಿಗಳು ಈಗಾಗಲೇ ಮಾರುಕಟ್ಟೆಯಿಂದ ಕಣ್ಮರೆಯಾಗಿದ್ದಾರೆ. ಇದರಿಂದಾಗಿ ಅಸ್ತಿತ್ವದಲ್ಲಿರುವ ಸಾಧನಗಳ ದುರಸ್ತಿ ಅಥವಾ ವಾರಂಟಿ ಪಡೆಯಲು ಗ್ರಾಹಕರಿಗೆ ಸೀಮಿತ ಅವಕಾಶಗಳಷ್ಟೇ ಉಳಿದಿವೆ.
ಹೊಸ ಕ್ಯಾಮೆರಾಗಳ ಬೆಲೆ ಏರಿಕೆಯಾಗಲಿದೆಯೇ?
ಕಡಿಮೆ ಬೆಲೆಯ ಚೀನೀ ಬಿಡಿಭಾಗಗಳ ಬಳಕೆಯನ್ನು ನಿಲ್ಲಿಸಿರುವುದರಿಂದ, ತಯಾರಕರ ಕಚ್ಚಾವಸ್ತುಗಳ ವೆಚ್ಚ ಈಗಾಗಲೇ ಶೇ 15-20ರಷ್ಟು ಹೆಚ್ಚಾಗಿದೆ. ಚೀನಾ ಚಿಪ್‌ಸೆಟ್‌ಗಳು ಮತ್ತು ತೈವಾನ್ ಹಾಗೂ ಅಮೆರಿಕದ ಚಿಪ್‌ಸೆಟ್‌ಗಳ ಬೆಲೆಗಳ ನಡುವೆ ಭಾರಿ ವ್ಯತ್ಯಾಸವಿರುವುದರಿಂದ ಮಧ್ಯಮ ಮತ್ತು ಉನ್ನತ-ಮಟ್ಟದ ಸಿಸಿಟಿವಿ ಸಿಸ್ಟಮ್‌ಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ಉದ್ಯಮದ ತಜ್ಞರು ವಿವರಿಸಿದ್ದಾರೆ. ಪ್ರಮುಖ ದೇಶೀಯ ಕಂಪನಿಗಳು ಸಣ್ಣಪುಟ್ಟ ಬಿಡಿಭಾಗಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಮೂಲಕ ಆರಂಭಿಕ ಹಂತದ ಕ್ಯಾಮೆರಾಗಳ ಬೆಲೆಯನ್ನು ಸ್ಥಿರವಾಗಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಆದಾಗ್ಯೂ, ಜಾಗತಿಕ ಮಟ್ಟದಲ್ಲಿ ಮೆಮೊರಿ ಮತ್ತು ಪ್ರೊಸೆಸರ್‌ಗಳ ಕೊರತೆಯಿಂದಾಗಿ ಇಡೀ ಮಾರುಕಟ್ಟೆ ಹೆಚ್ಚುವರಿ ಒತ್ತಡದಲ್ಲಿದೆ.




