ವಿರಾಟ್ ಕೊಹ್ಲಿಯ ಬದ್ಧತೆ ಮತ್ತು ಆರ್‌ಸಿಬಿ ಮೇಲಿನ ಪ್ರೀತಿ, ಅಭಿಮಾನಿಗಳನ್ನು ತಂಡದೊಂದಿಗೆ ಭಾವನಾತ್ಮಕವಾಗಿ ಬೆಸೆದಿದೆ. ಕೊಹ್ಲಿ ಜೊತೆ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸೇರಿದಂತೆ ವಿಶ್ವದ ಹಲವು ದಿಗ್ಗಜ ಆಟಗಾರರು ಆರ್‌ಸಿಬಿ ಪರವಾಗಿ ಕೇವಲ ಪಂದ್ಯಗಳನ್ನು ಆಡಲಿಲ್ಲ, ಬದಲಾಗಿ ಪ್ರತಿ ಪಂದ್ಯವನ್ನೂ ಒಂದು ‘ಬಾಕ್ಸ್ ಆಫೀಸ್ ಶೋ’ ಆಗಿ ಪರಿವರ್ತಿಸಿದರು. ಸೋಲು-ಗೆಲುವಿನ ಲೆಕ್ಕಾಚಾರವನ್ನು ಬದಿಗೊತ್ತಿ, ಕೇವಲ ಇವರ ಆಟವನ್ನು ನೋಡಲು ಬರುವ ನಿಷ್ಠಾವಂತ ಅಭಿಮಾನಿ ಬಳಗ ಸೃಷ್ಟಿಯಾಯಿತು. ಇದು ಪ್ರಾಯೋಜಕರ ಪಾಲಿಗೆ ಹೇಳಿ ಮಾಡಿಸಿದ ಮಾರುಕಟ್ಟೆಯಾಗಿತ್ತು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪಯಣ ಕ್ರೀಡಾ ಮಾರುಕಟ್ಟೆಯ ಒಂದು ವಿಶಿಷ್ಟ ಅಧ್ಯಾಯ. ಕಳೆದ 17 ವರ್ಷಗಳಲ್ಲಿ ಪುರುಷರ ತಂಡ ಒಮ್ಮೆಯೂ ಐಪಿಎಲ್ ಟ್ರೋಫಿ ಎತ್ತಿ ಹಿಡಿಯದಿದ್ದರೂ, ಆರ್‌ಸಿಬಿ ಈ ಟೂರ್ನಿಯ ಅತ್ಯಂತ ಪ್ರಭಾವಶಾಲಿ ಹಾಗೂ ದೊಡ್ಡ ‘ಬ್ರ್ಯಾಂಡ್’ ಆಗಿ ಬೆಳೆದು ನಿಂತಿರುವುದು ಜಾಗತಿಕ ಕ್ರೀಡಾ ಜಗತ್ತಿನ ಅಚ್ಚರಿಗಳಲ್ಲಿ ಒಂದು. ಕೇವಲ ಗೆಲುವು-ಸೋಲುಗಳಾಚೆಗೆ ಒಂದು ಫ್ರಾಂಚೈಸಿ ಇಷ್ಟೊಂದು ಜನಪ್ರಿಯತೆ ಗಳಿಸಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ, ಸಿಗುವುದು ಬೆಟ್ಟದಷ್ಟಿರುವ ಅಭಿಮಾನಿಗಳ ಅಲ್ಲಾಡದ ತಳಪಾಯ ಮತ್ತು ತಂಡದ ವ್ಯವಸ್ಥಿತ ಮಾರುಕಟ್ಟೆ ತಂತ್ರ.
ಆರ್‌ಸಿಬಿಯ ಆರ್ಥಿಕ ಬೆಳವಣಿಗೆ ಕ್ರೀಡಾ ರಂಗದಲ್ಲಿ ನಿಜಕ್ಕೂ ಒಂದು ವಿಸ್ಮಯ. 2008ರಲ್ಲಿ ಕೇವಲ 450 ಕೋಟಿ ರೂ.ಗಳಿಗೆ ಮಾರಾಟವಾಗಿದ್ದ ಫ್ರಾಂಚೈಸಿ, ಇಂದು ಆದಿತ್ಯ ಬಿರ್ಲಾ, ಟೈಮ್ಸ್ ಆಫ್ ಇಂಡಿಯಾ, ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್‌ಸ್ಟೋನ್ ಒಳಗೊಂಡ ಕನ್ಸೋರ್ಟಿಯಂಗೆ ಬರೋಬ್ಬರಿ 16,660 ಕೋಟಿ ರೂ. (ಸುಮಾರು 1.78 ಬಿಲಿಯನ್ ಡಾಲರ್) ಗಳಿಗೆ ಮಾರಾಟವಾಗಿದೆ. ಅಂದರೆ, ಕಳೆದ 18 ವರ್ಷಗಳಲ್ಲಿ ಬಂಡವಾಳದ ಮೇಲಿನ ಪ್ರತಿಫಲ ಸುಮಾರು 37 ಪಟ್ಟು ಹೆಚ್ಚಾಗಿದೆ. ಕಪ್ ಗೆಲ್ಲದಿದ್ದರೂ ಬ್ರ್ಯಾಂಡ್ ಲಾಯಲ್ಟಿ ಮತ್ತು ನಿರಂತರ ಮಾರುಕಟ್ಟೆ ತಂತ್ರಗಳಿಂದ ಇಷ್ಟು ದೊಡ್ಡ ಮೊತ್ತದ ಮೌಲ್ಯವರ್ಧನೆ ಮಾಡಲು ಸಾಧ್ಯ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ.
‘ಈ ಸಲ ಕಪ್ ನಮ್ದೇ’ – ಇದು ಕೇವಲ ಒಂದು ಘೋಷವಾಕ್ಯವಲ್ಲ, ಬದಲಾಗಿ ಕೋಟ್ಯಂತರ ಕನ್ನಡಿಗರ ಹಾಗೂ ಆರ್‌ಸಿಬಿ ಅಭಿಮಾನಿಗಳ ಜೀವನಾಡಿ. ಪ್ರತಿ ವರ್ಷವೂ ಐಪಿಎಲ್ ಆರಂಭಕ್ಕೂ ಮುನ್ನ ಇದೇ ಉತ್ಸಾಹ, ಸೋತಾಗಲೂ ‘ಮುಂದಿನ ವರ್ಷ ಗೆಲ್ಲುತ್ತೇವೆ’ ಎಂಬ ಅದೇ ಭರವಸೆ. ಆರ್‌ಸಿಬಿಯ ಅತಿ ದೊಡ್ಡ ಶಕ್ತಿಯೇ ಈ ’12th Man Army’ (12ನೇ ಆಟಗಾರರ ಪಡೆ). ವಿಶ್ವದ ಯಾವುದೇ ಮೂಲೆಯಲ್ಲಿ ಪಂದ್ಯ ನಡೆದರೂ, ಕ್ರೀಡಾಂಗಣದಲ್ಲಿ ಕೆಂಪು-ಚಿನ್ನದ ಬಣ್ಣದ ಜೆರ್ಸಿ ತೊಟ್ಟ ಅಭಿಮಾನಿಗಳು ರಾರಾಜಿಸುತ್ತಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಈ ನಿಷ್ಠೆಯೇ ಆರ್‌ಸಿಬಿ ಬ್ರ್ಯಾಂಡ್ ಮೌಲ್ಯವನ್ನು ಸದಾ ಉತ್ತುಂಗದಲ್ಲಿಟ್ಟಿದೆ.
ಕ್ರೀಡಾ ಜಗತ್ತಿನಲ್ಲಿ ಸಾಮಾನ್ಯವಾಗಿ ತಂಡದ ಯಶಸ್ಸು ಅದರ ಗೆಲುವಿನ ಮೇಲೆ ನಿಂತಿರುತ್ತದೆ. ಆದರೆ, ಆರ್‌ಸಿಬಿ ಈ ನಿಯಮವನ್ನು ಮುರಿದು ‘ಸ್ಟಾರ್ ವರ್ಚಸ್ಸಿನ’ ಮೇಲೆ ಬ್ರ್ಯಾಂಡ್ ಕಟ್ಟಿತು. ಆರ್‌ಸಿಬಿ ಬ್ರ್ಯಾಂಡ್‌ನ ಅಸ್ತಿತ್ವವನ್ನು ವಿರಾಟ್ ಕೊಹ್ಲಿ ಅವರಿಲ್ಲದೆ ಕಲ್ಪಿಸಿಕೊಳ್ಳುವುದು ಅಸಾಧ್ಯ. 2008ರಿಂದಲೂ ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸಿಗೆ ಆಡುತ್ತಿರುವ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಕೊಹ್ಲಿಯದ್ದು. ವಿರಾಟ್ ಕೊಹ್ಲಿ ಕೇವಲ ಒಬ್ಬ ಕ್ರಿಕೆಟಿಗನಲ್ಲ, ಅವರು ವಿಶ್ವಮಟ್ಟದ ಅತಿದೊಡ್ಡ ಬ್ರ್ಯಾಂಡ್. ಅವರ ಆಕ್ರಮಣಕಾರಿ ಆಟ, ಮೈದಾನದಲ್ಲಿನ ಉತ್ಸಾಹ ಮತ್ತು ಜಾಗತಿಕ ಮಟ್ಟದ ಜನಪ್ರಿಯತೆ ನೇರವಾಗಿ ಆರ್‌ಸಿಬಿಗೆ ವರ್ಗಾವಣೆಯಾಗಿದೆ.
ಕೊಹ್ಲಿಯ ಬದ್ಧತೆ ಮತ್ತು ಆರ್‌ಸಿಬಿ ಮೇಲಿನ ಪ್ರೀತಿ, ಅಭಿಮಾನಿಗಳನ್ನು ತಂಡದೊಂದಿಗೆ ಭಾವನಾತ್ಮಕವಾಗಿ ಬೆಸೆದಿದೆ. ಕೊಹ್ಲಿ ಜೊತೆ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸೇರಿದಂತೆ ವಿಶ್ವದ ಹಲವು ದಿಗ್ಗಜ ಆಟಗಾರರು ಕೇವಲ ಪಂದ್ಯಗಳನ್ನು ಆಡಲಿಲ್ಲ, ಬದಲಾಗಿ ಪ್ರತಿ ಪಂದ್ಯವನ್ನೂ ಒಂದು ‘ಬಾಕ್ಸ್ ಆಫೀಸ್ ಶೋ’ ಆಗಿ ಪರಿವರ್ತಿಸಿದರು. ಸೋಲು-ಗೆಲುವಿನ ಲೆಕ್ಕಾಚಾರವನ್ನು ಬದಿಗೊತ್ತಿ, ಕೇವಲ ಇವರ ಆಟವನ್ನು ನೋಡಲು ಬರುವ ನಿಷ್ಠಾವಂತ ಅಭಿಮಾನಿ ಬಳಗ ಸೃಷ್ಟಿಯಾಯಿತು. ಇದು ಪ್ರಾಯೋಜಕರ ಪಾಲಿಗೆ ಹೇಳಿ ಮಾಡಿಸಿದ ಮಾರುಕಟ್ಟೆಯಾಗಿತ್ತು.
ಇದನ್ನು ಓದಿದ್ದೀರಾ? ಇಂದಿನಿಂದ IPL ಹಬ್ಬ ಶುರು; ತವರು ಮೈದಾನದಲ್ಲಿ ಕಪ್ ಉಳಿಸಿಕೊಳ್ಳಲು ಸಮರಕ್ಕಿಳಿಯಲಿದೆ RCB
ಐಪಿಎಲ್‌ನ ಆರಂಭಿಕ ವರ್ಷಗಳಿಂದಲೂ ಆರ್‌ಸಿಬಿ ಎಂದರೆ ‘ಗ್ಲಾಮರ್’ ಮತ್ತು ‘ಸ್ಟಾರ್ ಆಟಗಾರರ’ ತವರುಮನೆ. ಕ್ರಿಸ್ ಗೇಲ್ ಅವರ ದೈತ್ಯ ಸಿಕ್ಸರ್‌ಗಳು, ಎಬಿ ಡಿವಿಲಿಯರ್ಸ್ ಅವರ ‘360 ಡಿಗ್ರಿ’ ಮ್ಯಾಜಿಕ್ ತಂಡಕ್ಕೆ ಅಪಾರ ಮನರಂಜನಾ ಮೌಲ್ಯವನ್ನು ತಂದುಕೊಟ್ಟವು. ಟ್ರೋಫಿ ಗೆಲ್ಲದಿದ್ದರೂ, ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುವಲ್ಲಿ ಈ ಆಟಗಾರರು ಎಂದಿಗೂ ವಿಫಲರಾಗಲಿಲ್ಲ. ಪಂದ್ಯವೊಂದು ಸೋತರೂ ಪರವಾಗಿಲ್ಲ, ಅದ್ಭುತ ಆಟ ನೋಡಿದ ತೃಪ್ತಿ ಅಭಿಮಾನಿಗಳಿಗೆ ಸಿಗುತ್ತಿತ್ತು. ಈ ‘ಬಾಕ್ಸ್ ಆಫೀಸ್’ ಕ್ರಿಕೆಟ್ ಶೈಲಿಯೇ ಆರ್‌ಸಿಬಿಯನ್ನು ಪ್ರಾಯೋಜಕರ ನೆಚ್ಚಿನ ತಂಡವನ್ನಾಗಿ ಮಾಡಿತು.
ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿಯ ಪ್ರಭಾವ ಅಸಾಧಾರಣವಾದದ್ದು. ಇನ್ಸ್ಟಾಗ್ರಾಮ್ (2.3 ಕೋಟಿ ), ಎಕ್ಸ್ (73 ಲಕ್ಷ), ಫೇಸ್‌ಬುಕ್(1.12 ಕೋಟಿ) ಹಾಗೂ ಯೂಟ್ಯೂಬ್‌ಗಳಲ್ಲಿ(0.75 ಲಕ್ಷ) ತಂಡವು ಕೋಟ್ಯಂತರ ಹಿಂಬಾಲಕರನ್ನು ಹೊಂದಿದೆ. ಜಾಗತಿಕ ಅಂಕಿ-ಅಂಶಗಳ ಪ್ರಕಾರ, ಏಷ್ಯಾದಲ್ಲಿ ಅತಿ ಹೆಚ್ಚು ‘ಎಂಗೇಜ್‌ಮೆಂಟ್’ (ಪ್ರತಿಕ್ರಿಯೆ) ಪಡೆಯುವ ಕ್ರೀಡಾ ತಂಡಗಳಲ್ಲಿ ಆರ್‌ಸಿಬಿ ಮುಂಚೂಣಿಯಲ್ಲಿದೆ. ರಿಯಲ್ ಮ್ಯಾಡ್ರಿಡ್, ಮ್ಯಾಂಚೆಸ್ಟರ್ ಯುನೈಟೆಡ್ ನಂತಹ ಜಾಗತಿಕ ಫುಟ್ಬಾಲ್ ಕ್ಲಬ್‌ಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಆರ್‌ಸಿಬಿಯ ಡಿಜಿಟಲ್ ಹೆಜ್ಜೆಗುರುತು ಪ್ರಬಲವಾಗಿದೆ.
ಹೌಲಿಹಾನ್ ಲೋಕಿ (Houlihan Lokey) ಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಬಿಡುಗಡೆ ಮಾಡುವ ಐಪಿಎಲ್ ಬ್ರ್ಯಾಂಡ್ ಮೌಲ್ಯಮಾಪನ ವರದಿಗಳನ್ನು ಗಮನಿಸಿದರೆ, ಆರ್‌ಸಿಬಿ ಸದಾ ಟಾಪ್ 3 ಅಥವಾ 4ನೇ ಸ್ಥಾನದಲ್ಲಿರುತ್ತದೆ. ವರದಿಗಳ ಅಂದಾಜಿನಂತೆ ಆರ್‌ಸಿಬಿ ಫ್ರಾಂಚೈಸಿಯ ಬ್ರ್ಯಾಂಡ್ ಮೌಲ್ಯ ಸುಮಾರು 70 ಮಿಲಿಯನ್ ಡಾಲರ್ (ಸುಮಾರು 600 ಕೋಟಿ ರೂ.) ಗಡಿಯಲ್ಲಿದೆ. ಕಪ್ ಗೆಲ್ಲದಿದ್ದರೂ, ಶರ್ಟ್ ಮೇಲಿನ ಪ್ರಾಯೋಜಕತ್ವದಿಂದ, ಮರ್ಚಂಡೈಸ್ (ಜೆರ್ಸಿ ಮಾರಾಟ) ಹಾಗೂ ಟಿವಿ ಹಕ್ಕುಗಳಿಂದ ತಂಡವು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ಒಂದು ಕ್ರಿಕೆಟ್ ತಂಡವಾಗಿ ಉಳಿದಿಲ್ಲ, ಅದೊಂದು ‘ಲೈಫ್ ಸ್ಟೈಲ್ ಬ್ರ್ಯಾಂಡ್’ ಆಗಿ ವಿಕಸನಗೊಂಡಿದೆ. ‘ಆರ್‌ಸಿಬಿ ಬಾರ್ ಅಂಡ್ ಕೆಫೆ’, ಪ್ರತಿ ವರ್ಷವೂ ಕ್ರೀಡಾಂಗಣದಲ್ಲಿ ನಡೆಯುವ ‘ಆರ್‌ಸಿಬಿ ಅನ್‌ಬಾಕ್ಸ್’ ಈವೆಂಟ್‌ಗಳ ಮೂಲಕ ತಂಡವು ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಕ್ರಿಕೆಟ್ ಹೊರತಾಗಿಯೂ ಯುವಜನತೆಯನ್ನು ಆಕರ್ಷಿಸುವಂತಹ ಫಿಟ್ನೆಸ್, ಫ್ಯಾಷನ್ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವರ್ಷವಿಡೀ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ತಂತ್ರವನ್ನು ಫ್ರಾಂಚೈಸಿ ಅಳವಡಿಸಿಕೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆರ್‌ಸಿಬಿಯ ಅಜೇಯ ಕೋಟೆ. ಇಲ್ಲಿನ ವಾತಾವರಣವೇ ಟಿವಿ ಪ್ರಸಾರಕರಿಗೆ ದೊಡ್ಡ ಆಕರ್ಷಣೆ. ಕ್ರೀಡಾಂಗಣದಲ್ಲಿನ ಟಿಕೆಟ್ ಮಾರಾಟದಿಂದ ಬರುವ ಆದಾಯ ಹಾಗೂ ಆ ಪಂದ್ಯಗಳಿಗೆ ಸಿಗುವ ಟಿವಿ ವೀಕ್ಷಕರ ಸಂಖ್ಯೆ (TRP) ಐಪಿಎಲ್ ಮಾರುಕಟ್ಟೆಗೆ ಆಧಾರಸ್ತಂಭವಾಗಿದೆ. ತಂಡ ಸತತವಾಗಿ ಸೋಲುತ್ತಿದ್ದರೂ, ಮುಂದಿನ ಪಂದ್ಯಕ್ಕೆ ಕ್ರೀಡಾಂಗಣ ಕಿಕ್ಕಿರಿದು ತುಂಬಿರುವುದು, ಆರ್‌ಸಿಬಿ ಬ್ರ್ಯಾಂಡ್ ಮೇಲಿರುವ ವಿಶ್ವಾಸ ಮತ್ತು ಅಭಿಮಾನಿಗಳ ಅಚಲ ನಿಷ್ಠೆಯನ್ನು ಎತ್ತಿ ತೋರಿಸುತ್ತದೆ.
ವರ್ಷಗಳ ಕಪ್ ಬರವನ್ನು ಮೊದಲು ನೀಗಿಸಿದ್ದು ಮಾತ್ರ ಮಹಿಳಾ ತಂಡ! 2024ರಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಇಡೀ ಆರ್‌ಸಿಬಿ ಬ್ರ್ಯಾಂಡ್‌ಗೆ ಹೊಸ ಚೈತನ್ಯ ನೀಡಿತು. ‘ಈ ಸಲ ಕಪ್ ನಮ್ದೇ’ ಎಂಬ ಆಸೆ ‘ಈ ಸಲ ಕಪ್ ನಮ್ದು’ ಎಂದು ಸಾಕಾರಗೊಂಡಾಗ ಕೇವಲ ಅಭಿಮಾನಿಗಳಷ್ಟೇ ಅಲ್ಲ, ಮಾರುಕಟ್ಟೆಯೂ ಸಂಭ್ರಮಿಸಿತು. ಆನಂತರ 2025ರಲ್ಲಿ ಪುರುಷರ ಸಾಧನೆ ದೊಡ್ಡ ಮೈಲಿಗಲ್ಲಿ ಸೃಷ್ಟಿಸಿತು. ಈ ಐತಿಹಾಸಿಕ ಗೆಲುವುಗಳು ಆರ್‌ಸಿಬಿಯ ವಾಣಿಜ್ಯ ಮೌಲ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.
ಆರ್‌ಸಿಬಿ ಕ್ರೀಡೆಯಲ್ಲಿ ಗೆಲುವು, ಚಾಂಪಿಯನ್ ಪಟ್ಟ ಎಂಬ ಮಾತುಗಳನ್ನು ಸುಳ್ಳು ಮಾಡಿ, ಕೇವಲ ಭಾವನೆಗಳು, ಸ್ಟಾರ್ ಆಟಗಾರರ ವರ್ಚಸ್ಸು ಮತ್ತು ನಿಷ್ಠಾವಂತ ಅಭಿಮಾನಿಗಳ ಪಡೆಯಿಂದಲೇ ಒಂದು ಬೃಹತ್ ವಾಣಿಜ್ಯ ಸಾಮ್ರಾಜ್ಯವನ್ನು ಕಟ್ಟಬಹುದು ಎಂಬುದನ್ನು ಆರ್‌ಸಿಬಿ ಸಾಬೀತುಪಡಿಸಿದೆ. ಟ್ರೋಫಿ ಗೆಲ್ಲದಿರುವುದು ಒಂದು ಸಣ್ಣ ಕೊರತೆಯಾಗಿದ್ದರೂ, ಆರ್‌ಸಿಬಿ ಎಂಬ ಉತ್ಪನ್ನ ಮಾತ್ರ ಎಂದೆಂದಿಗೂ ಕ್ರಿಕೆಟ್ ಜಗತ್ತಿನ ಮುಕುಟಮಣಿಯಾಗಿ ಬೆಳಗುತ್ತಿದೆ.
ಇದೆಲ್ಲದರ ಜೊತೆ ಆರ್‌ಸಿಬಿ ಮೇಲಿನ ಪ್ರೀತಿ ಮತ್ತು ಅಭಿಮಾನ ಇಂದು ಮಿತಿಮೀರಿ ‘ಉನ್ಮಾದ’ವಾಗಿ ಬದಲಾಗಿರುವುದು ಅತ್ಯಂತ ಆತಂಕಕಾರಿ. ಕಳೆದ ವರ್ಷ (2025) ತಂಡವು ಚೊಚ್ಚಲ ಕಪ್ ಗೆದ್ದಾಗ ಜಗಜ್ಜಾಹೀರಾದ ಈ ಅಂಧಾಭಿಮಾನದ ದುರಂತ ಮುಖ, ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರನ್ನು ಬಲಿಪಡೆದದ್ದು ಕ್ರೀಡಾ ಇತಿಹಾಸದಲ್ಲಿಯೇ ಅಳಿಸಲಾಗದ ಕಪ್ಪುಚುಕ್ಕೆಯಾಗಿದೆ. ಕ್ರೀಡೆ ಮತ್ತು ತಂಡದ ಮೇಲೆ ಕೇವಲ ‘ಪ್ರೀತಿ ಹಾಗೂ ಅಭಿಮಾನ’ ಇರಬೇಕೇ ಹೊರತು, ಅಮಾಯಕರ ಜೀವವನ್ನೇ ಕಸಿದುಕೊಳ್ಳುವಂತಹ ‘ಉನ್ಮಾದ’ ಖಂಡಿತಾ ಬೇಡ ಎಂಬುದನ್ನೇ ಈ ಘಟನೆ ನಮಗೆ ಕಲಿಸುವ ಕಟು ವಾಸ್ತವದ ಪಾಠವಾಗಿದೆ.
ತಂಡದ ಯಶಸ್ಸನ್ನು ನಾವು ಸಂಭ್ರಮಿಸೋಣ, ಆದರೆ ಆ ಸಂಭ್ರಮವು ಮನುಷ್ಯತ್ವ ಮತ್ತು ಶಿಸ್ತಿನ ಎಲ್ಲೆ ಮೀರದಿರಲಿ.




