ತನಿಖಾ ಹಂತದಲ್ಲಿ ಅಪರಾಧಕ್ಕೆ ಸಂಬಂಧಿಸಿದ ಅಥವಾ ಅನುಮಾನಾಸ್ಪದ ಬ್ಯಾಂಕ್ ಖಾತೆಗಳನ್ನು ‘ಡೆಬಿಟ್ ಫ್ರೀಜ್’ (ಡೆಬಿಟ್ ತಡೆ) ಮಾಡಲು ಪೊಲೀಸರು ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಾಲಯದ ಪೂರ್ವ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಯ ಸೆಕ್ಷನ್ 106 ರ ಅಡಿಯಲ್ಲಿ ಅಪರಾಧದ ತನಿಖೆ ನಡೆಸುವಾಗ ಆಸ್ತಿ ಅಥವಾ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡುವ ಅಥವಾ ಫ್ರೀಜ್ ಮಾಡುವ ಪೂರ್ಣ ಅಧಿಕಾರ ತನಿಖಾಧಿಕಾರಿಗೆ ಇದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಟಿಎಂಸಿ ಬ್ಯಾಂಕ್ ಖಾತೆಗಳ ಫ್ರೀಜ್ ಮಾಡಲು ಇಷ್ಟೊಂದು ತರಾತುರಿ ಏನಿತ್ತು: ಕೋಲ್ಕತ್ತಾ ಹೈಕೋರ್ಟ್ ಪ್ರಶ್ನೆ
‘ಜಾರ್ ಗೋಲ್ಡ್ ರಿಟೇಲ್ ಪ್ರೈವೇಟ್ ಲಿಮಿಟೆಡ್’ (JAR Gold Retail Pvt. Ltd.) ಎಂಬ ಆನ್‌ಲೈನ್ ಚಿನ್ನದ ಹೂಡಿಕೆ ಸಂಸ್ಥೆಯ ವಿರುದ್ಧ ಅಕ್ರಮ ಠೇವಣಿ ಯೋಜನೆಗಳ ತಡೆ ಕಾಯ್ದೆ (BUDS Act) ಅಡಿಯಲ್ಲಿ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆಯ ಭಾಗವಾಗಿ ಪೊಲೀಸರು ಕಂಪನಿಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ, ಚಿನ್ನ ಮತ್ತು ಬೆಳ್ಳಿಯನ್ನು ಜಪ್ತಿ ಮಾಡಿದ್ದರು.
This video cannot be played in your browser. Open the video directly
ಇದನ್ನು ಪ್ರಶ್ನಿಸಿ ಕಂಪನಿಯು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಪೊಲೀಸರು ಬಿಎನ್‌ಎಸ್‌ಎಸ್ ಸೆಕ್ಷನ್ 107 ರಂತೆ ಮ್ಯಾಜಿಸ್ಟ್ರೇಟ್ ಅವರ ಪೂರ್ವ ಅನುಮತಿ ಪಡೆಯದೇ ಖಾತೆ ಫ್ರೀಜ್ ಮಾಡಿರುವುದು ಕಾನೂನುಬಾಹಿರ ಎಂದು ವಾದಿಸಿತ್ತು. ಈ ವಾದವನ್ನು ಆಲಿಸಿದ್ದ ಸೆಷನ್ಸ್ ಕೋರ್ಟ್, ಖಾತೆಗಳನ್ನು ಬಿಡುಗಡೆ ಮಾಡಲು (De-freeze) ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಪೊಲೀಸರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. ವಿಚಾರಣೆ ವೇಳೆ ನ್ಯಾಯಪೀಠವು ಬಿಎನ್‌ಎಸ್‌ಎಸ್ ಕಾಯ್ದೆಯ ಸೆಕ್ಷನ್ 106 ಮತ್ತು 107 ರ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ವಿವರಿಸಿತು.
ಸೆಕ್ಷನ್ 106 (ಹಳೆಯ CrPC 102) ತನಿಖೆಯ ವೇಳೆ ತಕ್ಷಣದ ಕ್ರಮವಾಗಿ ಆಸ್ತಿ ಅಥವಾ ಖಾತೆಯನ್ನು ಜಪ್ತಿ/ಫ್ರೀಜ್ ಮಾಡಲು ತನಿಖಾಧಿಕಾರಿಗೆ ಅಧಿಕಾರ ನೀಡುತ್ತದೆ. ಖಾತೆ ಫ್ರೀಜ್ ಮಾಡಿದ ತಕ್ಷಣವೇ ಮ್ಯಾಜಿಸ್ಟ್ರೇಟ್‌ಗೆ ಮಾಹಿತಿ ನೀಡಿದರೆ ಸಾಕಾಗುತ್ತದೆ. ಸೆಕ್ಷನ್ 107 ಆಸ್ತಿಯ ಅಂತಿಮ ಮುಟ್ಟುಗೋಲು (Attachment/Forfeiture) ಅಥವಾ ಹಸ್ತಾಂತರಕ್ಕೆ ಸಂಬಂಧಿಸಿದ್ದು, ಇದಕ್ಕೆ ನ್ಯಾಯಾಲಯದ ಸುದೀರ್ಘ ಪ್ರಕ್ರಿಯೆ ಮತ್ತು ಅನುಮತಿ ಅಗತ್ಯವಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
“ಸೆಕ್ಷನ್ 106 ಮತ್ತು 107 ಎರಡೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆಯೇ ಹೊರತು ಒಂದಕ್ಕೊಂದು ವಿರುದ್ಧವಲ್ಲ. ಸೆಕ್ಷನ್ 107 ಅನ್ನು ನೆಪವಾಗಿಟ್ಟುಕೊಂಡು ಪೊಲೀಸರ ಸೆಕ್ಷನ್ 106 ರ ತನಿಖಾ ಅಧಿಕಾರವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಕಾಲದಲ್ಲಿ, ಸೈಬರ್ ವಂಚಕರು ಸಾರ್ವಜನಿಕರ ಹಣವನ್ನು ಕ್ಷಣಾರ್ಧದಲ್ಲಿ ಹತ್ತಾರು ‘ಮೂಲ್ ಖಾತೆಗಳಿಗೆ’ (Mule Accounts) ವರ್ಗಾಯಿಸುತ್ತಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ಪ್ರತಿಯೊಂದು ಖಾತೆ ಫ್ರೀಜ್ ಮಾಡಲು ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಅನುಮತಿ ಪಡೆಯಲು ಕಾಯುತ್ತಾ ಕುಳಿತರೆ, ಹಣವೆಲ್ಲವೂ ಮಾಯವಾಗಿ ತನಿಖೆಯೇ ವಿಫಲವಾಗುತ್ತದೆ. ಇದರಿಂದ ಸಂತ್ರಸ್ತರಿಗೆ ಚೇತರಿಸಿಕೊಳ್ಳಲಾಗದ ನಷ್ಟವಾಗುತ್ತದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ತನಿಖೆಯ ವೇಗಕ್ಕಾಗಿ ಪೊಲೀಸರಿಗೆ ಈ ತಕ್ಷಣದ ಫ್ರೀಜಿಂಗ್ ಅಧಿಕಾರ ಇರುವುದು ಅಗತ್ಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.





