ತಮ್ಮ ಸ್ವ-ಕ್ಷೇತ್ರ ಕೃಷ್ಣನಗರದಲ್ಲಿ ತಮಗೆ ಹಂಚಿಕೆಯಾಗಿದ್ದ ಸರ್ಕಾರಿ ಅತಿಥಿಗೃಹದ (ಸರ್ಕ್ಯೂಟ್ ಹೌಸ್) ಕೊಠಡಿಯನ್ನು ಖಾಲಿ ಮಾಡುವಂತೆ ಜಿಲ್ಲಾಡಳಿತ ಒತ್ತಾಯಿಸಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ಅರೋಪಿಸಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮೊಯಿತ್ರಾ ಅವರು ಪತ್ರ ಬರೆದಿದ್ದಾರೆ. ಮಹಿಳಾ ಜನಪ್ರತಿನಿಧಿಗಳ ಗೌರವ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳಲು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲಾಡಳಿತವು ಶುಕ್ರವಾರ ತಡರಾತ್ರಿ ಸರ್ಕಾರಿ ಅತಿಥಿಗೃಹವನ್ನು ಖಾಲಿ ಮಾಡುವಂತೆ ಆದೇಶಿಸಿದೆ. ತಾವು ಕೊಠಡಿ ಖಾಲಿ ಮಾಡಲು ನಿರಾಕರಿಸಿದಾಗ, ಸರ್ಕ್ಯೂಟ್ ಹೌಸ್ ಹೊರಗಡೆ ಗುಂಪೊಂದು ಸೇರಿ ‘ಜೈ ಶ್ರೀ ರಾಮ್’ ಸೇರಿದಂತೆ ಹಲವು ಘೋಷಣೆಗಳನ್ನು ಕೂಗಿದೆ” ಎಂದು ಆರೋಪಿಸಿದ್ದಾರೆ.
ಮೊಯಿತ್ರಾ ಅವರ ವಿವರಣೆಯ ಪ್ರಕಾರ, ಅವರು ಸಂಜೆ ಸುಮಾರು 6.15ಕ್ಕೆ ಸರ್ಕ್ಯೂಟ್ ಹೌಸ್ ತಲುಪಿದ್ದರು. ರಾತ್ರಿ 9.47ಕ್ಕೆ ನಾಡಿಯಾದ ಹೆಚ್ಚುವರಿ ಜಿಲ್ಲಾಧಿಕಾರಿ ಕರೆ ಮಾಡಿ ಕೊಠಡಿ ಖಾಲಿ ಮಾಡುವಂತೆ ತಿಳಿಸಿದರು. ನಂತರ ರಾತ್ರಿ 10.52ಕ್ಕೆ ವಾಟ್ಸ್‌ಆ್ಯಪ್ ಸಂದೇಶವೊಂದು ಬಂದಿದ್ದು, ‘ವಾರ್ಷಿಕ ಸ್ವಚ್ಛತಾ ಕಾರ್ಯ’ ಕಾರಣಕ್ಕಾಗಿ ಬುಕಿಂಗ್ ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು.
ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ, “ಒಂಟಿಯಾಗಿ ತಂಗಿರುವ ಮಹಿಳಾ ಸಂಸದೆಗೆ ತಡರಾತ್ರಿ ಕೊಠಡಿ ಖಾಲಿ ಮಾಡಲು ಹೇಳುವುದು ಅವರ ಹಕ್ಕುಗಳು ಮತ್ತು ಭದ್ರತೆಯ ಬಗ್ಗೆ ತೀವ್ರ ಕಳವಳವನ್ನುಂಟು ಮಾಡುತ್ತದೆ. ಮಹಿಳಾ ಸಂಸದರಿಗೆ ಸೂಕ್ತ ರಕ್ಷಣೆ ನೀಡದಿದ್ದರೆ, ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಪ್ರಯತ್ನಗಳು ಅರ್ಥಹೀನವಾಗುತ್ತವೆ. ಈ ವಿಷಯವನ್ನು ತಕ್ಷಣವೇ ಪರಿಶೀಲಿಸಿ ಮಹಿಳಾ ಸಂಸದರ ಗೌರವವನ್ನು ಎತ್ತಿಹಿಡಿಯಲು ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ಇದಲ್ಲದೆ, ಮೊಯಿತ್ರಾ ಅವರು ಈ ಘಟನೆಯನ್ನು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬೆದರಿಕೆ ಎಂದು ಬಣ್ಣಿಸಿ, Inter-Parliamentary Unionಗೆ (IPU) ದೂರು ನೀಡಿದ್ದಾರೆ.
ಹಲವು ವಿರೋಧ ಪಕ್ಷದ ನಾಯಕರು ಮೊಯಿತ್ರಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಟಿಎಂಸಿಯ ರಾಜ್ಯಸಭಾ ನಾಯಕ ಡೆರೆಕ್ ಒಬ್ರೇನ್ ಪಶ್ಚಿಮ ಬಂಗಾಳದ ಬೆಳವಣಿಗೆಗಳನ್ನು ಪ್ರಶ್ನಿಸಿದರೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ಘಟನೆಯು ಸಂಸದೀಯ ಹಕ್ಕುಚ್ಯುತಿಗೆ ಸಮನಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಕೂಡ ಈ ಘಟನೆಯನ್ನು ಖಂಡಿಸಿದ್ದು, ತಡರಾತ್ರಿ ಖಾಲಿ ಮಾಡುವ ಆದೇಶ ಖಂಡನಾರ್ಹ. ಇಂತಹ ಪ್ರಕರಣಗಳಲ್ಲಿ ಸ್ಪೀಕರ್ ಮಧ್ಯಪ್ರವೇಶ ಮಾಡಬೇಕು ಒತ್ತಾಯಿಸಿದ್ದಾರೆ.
ಕೃಷ್ಣನಗರದ ಟಿಎಂಸಿ ಸಂಸದೆಯಾಗಿರುವ ಮೊಯಿತ್ರಾ ಅವರು ನಾಡಿಯಾದಲ್ಲಿ ಹಲವು ಪ್ರತಿಭಟನೆ ಮತ್ತು ಸಂಘರ್ಷಗಳನ್ನು ಎದುರಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಜಿಲ್ಲಾ ನ್ಯಾಯಾಲಯ ಮತ್ತು ಟಿಎಂಸಿ ಕಚೇರಿ ಹೊರಗಿನ ಪ್ರತಿಭಟನೆಗಳ ವೇಳೆ ಬಿಜೆಪಿ ಕಾರ್ಯಕರ್ತರು ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು. ತಮ್ಮದೇ ಕ್ಷೇತ್ರದಲ್ಲಿ ತಮಗೆ ಅಭದ್ರತೆ ಎದುರಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಕೆಲವು ಹೇಳಿಕೆಗಳ ಕುರಿತಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಡಿಯಾ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಖುದ್ದು ಹಾಜರಾಗಲು ಕಲ್ಕತ್ತಾ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಇದೇ ಅಭದ್ರತೆಯ ಕಾರಣಕ್ಕಾಗಿ ತಾವು ಆನ್‌ಲೈನ್‌ನಲ್ಲಿ ವಿಚಾರಣೆಗೆ ಹಾಜರಾಗಲು ಅನುಮತಿ ಕೋರಿ ಮೊಯಿತ್ರಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿದೆ. ಇದಾದ ಕೆಲವೇ ದಿನಗಳಲ್ಲಿ ಸರ್ಕಾರಿ ಕೊಠಡಿಯನ್ನು ಖಾಲಿ ಮಾಡಬೇಕೆಂದು ಜಿಲ್ಲಾಡಳಿತ ಒತ್ತಾಯಿಸಿರುವ ಘಟನೆ ನಡೆದಿದೆ.



