ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ, ಬಲವಂತವಾಗಿ ಗರ್ಭಪಾತ ಮಾಡಿಸಿದ ಹಾಗೂ ಬೆದರಿಕೆ ಹಾಕಿದ ಗಂಭೀರ ಆರೋಪದ ಮೇಲೆ ಹೈದರಾಬಾದ್ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.
ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಯು. ಶ್ರೀನಿವಾಸುಲು ರೆಡ್ಡಿ ಆರೋಪಿ ಮತ್ತು ಅಮಾನತುಗೊಂಡ ಪೊಲೀಸ್ ಅಧಿಕಾರಿ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ 31 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರು ಶ್ರೀನಿವಾಸುಲು ರೆಡ್ಡಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಪ್ರಾಥಮಿಕ ತನಿಖಾ ವರದಿ ಆಧಾರದ ಮೇಲೆ ಕ್ರಮ ಕೈಗೊಂಡಿದೆ. ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಅವರು ಸಜ್ಜನರ್ ತಿಳಿಸಿದ್ದಾರೆ.
2021ರಲ್ಲಿ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಮಹಿಳೆಯು ಅಮೀನ್‌ಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಈ ವೇಳೆ, ಆ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸುಲು ಅವರ ಪರಿಚಯವಾಗಿತ್ತು. ಬಳಿಕ ಪ್ರಕರಣದ ವಿಚಾರವಾಗಿ ಸಂಪರ್ಕದಲ್ಲಿದ್ದ ಶ್ರೀನಿವಾಸುಲು ತಮಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ.
“ಶ್ರೀನಿವಾಸುಲು ಅವರು ಕೆಪಿಎಚ್‌ಬಿಯಲ್ಲಿರುವ ತಮ್ಮ ನಿವಾಸಕ್ಕೆ ಬರುವಂತೆ ಒತ್ತಾಯಿಸಿದ್ದರು, ನಿರಾಕರಿಸಿದಾಗ ಮನೆಗೆ ಬರುವುದಾಗಿ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ” ಎಂದು ಡಿಜಿಪಿ ಸಿ.ವಿ ಆನಂದ್ ಅವರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ. ಅಲ್ಲದೆ, ಸಂತ್ರಸ್ತೆ ಗರ್ಭಿಣಿಯಾದಾಗ ಆಸ್ಪತ್ರೆಗೆ ಕರೆದೊಯ್ದು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದೂ ಆರೋಪಿಸಲಾಗಿದೆ.
ತನ್ನ ವಿರುದ್ಧದ ಆರೋಪಗಳನ್ನು ಆಧಾರರಹಿತವೆಂದು ಶ್ರೀನಿವಾಸುಲು ತಳ್ಳಿಹಾಕಿದ್ದಾರೆ. ತಮಗೆ ಮಹಿಳೆಯೇ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.



