ಕೇಂದ್ರ ಸರ್ಕಾರ ಜಾರಿಗೊಳಿಸಲು ಹವಣಿಸುತ್ಇತರುವ ‘ಕ್ಷೇತ್ರ ಮರುವಿಂಗಡಣೆ’ (Delimitation) ಕುರಿತು ಮುಖ್ಯಮಂತ್ರಿ ವಿಜಯ್ ಅವರ ಟಿವಿಕೆ ಸರ್ಕಾರ ಕರೆದಿರುವ ತಮಿಳುನಾಡಿನ ಸರ್ವಪಕ್ಷ ಸಂಸದರ ಸಭೆಯನ್ನು ಬಹಿಷ್ಕರಿಸುವುದಾಗಿ ಡಿಎಂಕೆ ಘೋಷಿಸಿದೆ.
ಡಿಎಂಕೆ ನಿರ್ಧಾರದ ಕುರಿತು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ, ಸಂಸದೆ ಕನಿಮೊಳಿ ಹೇಳಿಕೆ ನೀಡಿದ್ದಾರೆ. ಟಿವಿಕೆ ಸರ್ಕಾರದ ಈ ಸಭೆಯನ್ನು ಕೇವಲ ‘ರಾಜಕೀಯ ನಾಟಕ’ ಎಂದು ಬಣ್ಣಿಸಿದ್ದಾರೆ. “ಪ್ರಸ್ತುತ ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದಿರುವ ಮೇಕೆದಾಟು ಅಣೆಕಟ್ಟು ವಿವಾದ ಮತ್ತು ಕಾವೇರಿ ನೀರು ಹಂಚಿಕೆ ಸಮಸ್ಯೆಯಿಂದ ಸಾರ್ವಜನಿಕರು ಮತ್ತು ರೈತರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಈ ಹೊಸ ಸಭೆಯ ನಾಟಕವಾಡುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
“ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್ ಅವರು ಈಗಾಗಲೇ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗಾಗುವ ಅಪಾಯಗಳ ಕುರಿತು ಎಚ್ಚರಿಸಿದ್ದರು. ಈ ಹಿಂದೆ, ಡಿಎಂಕೆ ನೇತೃತ್ವದಲ್ಲಿಯೇ ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ನಡೆಸಿ, ದಕ್ಷಿಣದ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ನಾಯಕರೊಂದಿಗೆ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಲಾಗಿತ್ತು. ಆ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯಗಳಿಗೆ ಪಕ್ಷವು ಈಗಲೂ ಬದ್ಧವಾಗಿದೆ” ಎಂದು ಕನಿಮೊಳಿ ತಿಳಿಸಿದ್ದಾರೆ.
“2026ರ ನಂತರದ ಮುಂದಿನ 30 ವರ್ಷಗಳ ಕಾಲ ಸಂಸದೀಯ ಕ್ಷೇತ್ರಗಳ ಮರುವಿಂಗಡಣೆಗೆ 1971ರ ಜನಗಣತಿಯನ್ನೇ ಮಾನದಂಡವಾಗಿ ಮುಂದುವರಿಸಲು ಕೇಂದ್ರ ಸರ್ಕಾರ ಸಂವಿಧಾನಾತ್ಮಕ ತಿದ್ದುಪಡಿ ತರಬೇಕು. ಸಂಸತ್ತಿನ ಒಟ್ಟು ಆಸನಗಳ ಸಂಖ್ಯೆಯನ್ನು ಹೆಚ್ಚಿಸಿದರೆ, ತಮಿಳುನಾಡಿನ ಪ್ರಾತಿನಿಧ್ಯ (7.18%) ಸೇರಿದಂತೆ ಇತರ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣವನ್ನು 1971ರ ಜನಸಂಖ್ಯೆಯ ಅನುಪಾತದಲ್ಲೇ ಕಾಯ್ದುಕೊಳ್ಳಬೇಕು. ಕಳೆದ ಐದು ದಶಕಗಳಲ್ಲಿ ಜನಸಂಖ್ಯೆ ನಿಯಂತ್ರಣ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ದಕ್ಷಿಣದ ರಾಜ್ಯಗಳಿಗೆ ಸಂಸತ್ತಿನ ಪ್ರಾತಿನಿಧ್ಯವನ್ನು ಕಡಿತಗೊಳಿಸುವ ಮೂಲಕ ಶಿಕ್ಷೆ ವಿಧಿಸಬಾರದು – ಇವು ಡಿಎಂಕೆಯ ಪ್ರಮುಖ ಒತ್ತಾಯಗಳಾಗಿವೆ” ಎಂದು ಕನಿಮೊಳಿ ಹೇಳಿದ್ದಾರೆ.
“ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಐಯುಎಂಎಲ್ ಸೇರಿದಂತೆ ಮಿತ್ರಪಕ್ಷಗಳು ಈಗಾಗಲೇ ಈ ನಿರ್ಣಯಗಳನ್ನು ಬೆಂಬಲಿಸಿವೆ. ಪ್ರಸ್ತುತ, ಕೇಂದ್ರ ಸರ್ಕಾರವು ಸಂಸತ್ತಿನ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಸೂದೆ ಅಥವಾ ತಿದ್ದುಪಡಿ ಕರಡನ್ನು ಮಂಡಿಸದಿರುವಾಗ, ಈ ಹಂತದಲ್ಲಿ ಹೊಸದಾಗಿ ಚರ್ಚಿಸಲು ಏನೂ ಇಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.
“ರಾಜ್ಯದ ರೈತರು ಮತ್ತು ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆ ವಿರುದ್ಧ ಸರ್ವಪಕ್ಷ ಸಭೆ ಕರೆಯುವಂತೆ ಸತತವಾಗಿ ಒತ್ತಾಯಿಸುತ್ತಿದ್ದರೂ ಟಿವಿಕೆ ಸರ್ಕಾರ ಮೌನ ವಹಿಸಿದೆ. ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಅವರು ಈಗಾಗಲೇ ನೀಡಿರುವ ಹೇಳಿಕೆಯಂತೆ, ಮೇಕೆದಾಟು ಅಣೆಕಟ್ಟು ವಿಚಾರವಾಗಿ ಮೊದಲು ಸರ್ವಪಕ್ಷ ಸಭೆ ಕರೆದರೆ ಮಾತ್ರ ಕ್ಷೇತ್ರ ಮರುವಿಂಗಡಣೆ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು. ಕಾವೇರಿ ಹಕ್ಕುಗಳು ಮತ್ತು ರೈತರ ಹಿತರಕ್ಷಣೆಯಲ್ಲಿ ಸರ್ಕಾರಕ್ಕೆ ನಿಜಕ್ಕೂ ಬದ್ಧತೆ ಇದ್ದರೆ, ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ವಿರುದ್ಧ ಅಂಗೀಕರಿಸಲಾದ ನಿರ್ಣಯವನ್ನು ನೇರವಾಗಿ ಕೇಂದ್ರ ಜಲಶಕ್ತಿ ಸಚಿವರಿಗೆ ತಲುಪಿಸಲು ಪ್ರತಿನಿಧಿಗಳ ನಿಯೋಗವನ್ನು ದೆಹಲಿಗೆ ಕಳುಹಿಸಲಿ” ಎಂದು ಟಿವಿಕೆ ಆಡಳಿತಕ್ಕೆ ಕನಿಮೊಳಿ ಸವಾಲು ಹಾಕಿದ್ದಾರೆ.



