ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯನ್ನು ‘ಹೇಡಿ’ ಎಂದು ಕರೆದಿದ್ದಾರೆ. ‘ಪುಕ್ಕಲುತನದ ಪ್ರಧಾನಿ ಮೋದಿ ಅವರು ದೇಶದ ಇಂಧನ ಭದ್ರತೆಯನ್ನು ಅಮೆರಿಕಕ್ಕೆ ಹಸ್ತಾಂತರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪರವಾಗಿ ತಿರುವನಂತಪುರದ ಪುತಂತೋಪುನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. “ಮೋದಿ ಅವರು ‘ಎಪ್ಸ್ಟೀನ್ ಫೈಲ್ಸ್’ನಲ್ಲಿ ತಮ್ಮ ಹೆಸರು ಇರುವುದರಿಂದ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ರೈತರಿಗೆ ‘ಅನ್ಯಾಯ’ ಮಾಡುವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಮೋದಿ ಅವರು ಅಮೆರಿಕ ಮತ್ತು ಇಸ್ರೇಲ್ ಮುಂದೆ ನಡುಬಾಗಿದ್ದಾರೆ. ನಮ್ಮ ಪ್ರಧಾನಿ ಬೆನ್ನೆಲುಬಿಲ್ಲದ ಹೇಡಿ ಮತ್ತು ರಾಜಿ ಮಾಡಿಕೊಂಡ ವ್ಯಕ್ತಿ. ಅವರು ಭಾರತದ ಪರವಾಗಿ ನಿಲ್ಲುವ ಧೈರ್ಯ ತೋರುತ್ತಿಲ್ಲ. ಪರಿಣಾಮವಾಗಿ ನಾವು ಪ್ರತಿದಿನ ಬೆಲೆ ತೆರುತ್ತಿದ್ದೇವೆ. ಇತರ ರಾಷ್ಟ್ರಗಳ ಜೊತೆಗೆ ಭಾರತವೂ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದ್ದಾರೆ.
“ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದ ಸಮಯದಲ್ಲಿ ಗಲ್ಫ್ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಮೋದಿ ಅವರ ನೀತಿಗಳು ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸಿಲ್ಲ” ಎಂದೂ ಅವರು ದೂರಿದ್ದಾರೆ.
ಇದೇ ವೇಳೆ, ಎಲ್‌ಡಿಎಫ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, “ಎಲ್‌ಡಿಎಫ್ ಮೋದಿ ಅವರ ‘ಬಿ-ಟೀಮ್’ ಆಗಿದೆ. ಒಮ್ಮೆ ಯೋಚಿಸಿ ನೋಡಿ. ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತಿ, ಜಾರಿ ನಿರ್ದೇಶನಾಲಯ (ED), ಆದಾಯ ತೆರಿಗೆ ಇಲಾಖೆ (IT), ಸಿಬಿಐ ಅಥವಾ ಅವರ ಇತರ ಸಂಸ್ಥೆಗಳಿಂದ ದಾಳಿಗೆ ಒಳಗಾದ ಎಲ್‌ಡಿಎಫ್‌ನ ಒಬ್ಬನೇ ಒಬ್ಬ ನಾಯಕನನ್ನು ಗುರುತಿಸಿ” ಎಂದು ಸವಾಲು ಹಾಕಿದ್ದಾರೆ.
“ರಾಜ್ಯದ ಎಡರಂಗ ಸರ್ಕಾರವು ಅಧಿಕಾರದಲ್ಲಿದ್ದಷ್ಟೂ ಜನರಿಗೆ ಕಡಿಮೆ ಅವಕಾಶಗಳು ದೊರೆಯುತ್ತಿವೆ. ಎಡರಂಗ ಸರ್ಕಾರವು ರಾಜ್ಯದ ಜನರ ಅಗತ್ಯಗಳು ಮತ್ತು ಸಮಸ್ಯೆಗಳ ಬಗ್ಗೆ ‘ನಿರ್ಲಕ್ಷ್ಯ’ ವಹಿಸುತ್ತಿದೆ” ಎಂದು ಆರೋಪಿಸಿದ್ದಾರೆ.
ಕೇರಳದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ, ವೈದ್ಯಕೀಯ ಉಪಕರಣಗಳು ಹಾಗೂ ಔಷಧಿಗಳ ಕೊರತೆಯಿದ್ದು, ರಾಜ್ಯದ ಆರೋಗ್ಯ ವ್ಯವಸ್ಥೆಯು ಕುಸಿಯುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.



