ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಮಂಗಳವಾರ ಎಎಪಿ ನೇತೃತ್ವದ ಪಂಜಾಬ್ ಸರ್ಕಾರ ಸೇಡಿನ ರಾಜಕೀಯದಲ್ಲಿದೆ. ಇತ್ತೀಚೆಗೆ ಪಕ್ಷ ತೊರೆದು ಬಿಜೆಪಿ ಸೇರಿದ ನಾಯಕರ ಮೇಲೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಂಸದ ಸಂದೀಪ್ ಪಾಠಕ್, ರಾಜೇಂದರ್ ಗುಪ್ತಾ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಛಡ್ಡಾ ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಸಭೆಯ ನಂತರ ಮಾತನಾಡಿದ ಛಡ್ಡಾ, “ಎಎಪಿ ಜತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿ, ಪಕ್ಷವನ್ನು ತೊರೆಯಲು ಆಯ್ಕೆ ಮಾಡಿದ ಎಲ್ಲಾ ಸಂಸದರು ಇಂದು ರಾಷ್ಟ್ರಪತಿಗಳ ಮುಂದೆ ಇದ್ದಾರೆ. ನಾವು ವಿಧೇಯರಾಗಿರುವವರೆಗೆ, ನಮ್ಮನ್ನು ಸುಸಂಸ್ಕೃತರೆಂದು ಪರಿಗಣಿಸಲಾಗುತ್ತಿತ್ತು. ನಾವು ಹೋದ ಕ್ಷಣ, ನಮ್ಮನ್ನು ಭ್ರಷ್ಟರೆಂದು ಹಣೆಪಟ್ಟಿ ಕಟ್ಟಲಾಗುತ್ತಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೇಸರಿ ಶಾಲು ಹೊದಿಸಿಕೊಂಡ ರಾಘವ ಛಡ್ಡಾ | ಮಹಾರಾಷ್ಟ್ರ ಮಾದರಿಯ ಆಪರೇಷನ್ ಗೆ ಬಿಜೆಪಿ ಸನ್ನಾಹ
“ಎಎಪಿ ಇಂದು ರಾಜಕೀಯ ಪಕ್ಷದಂತೆ ವರ್ತಿಸುತ್ತಿಲ್ಲ. ಒಂದು ಕಾಲದಲ್ಲಿ ಸೇಡಿನ ಕೂಗು ಕೂಗುತ್ತಿದ್ದ ಪಕ್ಷವು ಈಗ ಅದರ ಅತ್ಯಂತ ವಿಷಕಾರಿ ರೂಪವನ್ನು ತಾಳುತ್ತಿದೆ. ಸಾಂವಿಧಾನಿಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಆಯ್ಕೆಗಳನ್ನು ಗೌರವಿಸಬೇಕು ಎಂಬ ರಾಷ್ಟ್ರಪತಿಗಳ ಭರವಸೆಯಿಂದ ನಾವು ಬಲ ಪಡೆಯಬಹುದು” ಎಂದು ತಿಳಿಸಿದ್ದಾರೆ.
“ವಿಶ್ವಕಪ್ ವಿಜೇತ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಮನೆಯ ಹೊರಗೆ ‘ದೇಶದ್ರೋಹಿ’ ಎಂದು ಬರೆಯಲಾಗಿತ್ತು. ಪಂಜಾಬ್ ಪೊಲೀಸರ ಸಹಾಯದಿಂದ ಅವರ ನಿವಾಸದ ಮೇಲೆ ಕಲ್ಲುಗಳನ್ನು ಎಸೆಯಲಾಗಿದೆ. ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.




