ಅಹಿಂದ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು, ಅಧಿಕಾರ ಸಿಕ್ಕ ಬಳಿಕ ಅದೇ ಸಮುದಾಯಗಳ ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವುದು ಎಷ್ಟು ಸರಿ? ಎಂದು ರೈತ ಯುವ ಮುಖಂಡ ಯಲ್ಲಪ್ಪ ಹೆಗಡೆ ಪ್ರಶ್ನಿಸಿದರು.
ಬಸವಣ್ಣನವರ ಕರ್ಮಭೂಮಿ ಕೂಡಲಸಂಗಮದಿಂದ ಆರಂಭಗೊಂಡ ಅಹಿಂದ ಜನಜಾಗೃತಿ ಯಾತ್ರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ತಲುಪಿದ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಅಹಿಂದ ಸಮುದಾಯಗಳ ಹಕ್ಕುಗಳನ್ನು ಚುನಾವಣಾ ಪ್ರಣಾಳಿಕೆ ಹಾಗೂ ರಾಜಕೀಯ ಭಾಷಣಗಳಿಗೆ ಸೀಮಿತಗೊಳಿಸದೆ, ಅವುಗಳನ್ನು ವಾಸ್ತವದಲ್ಲಿ ಜಾರಿಗೊಳಿಸಬೇಕು ಎಂಬ ಒತ್ತಾಯದೊಂದಿಗೆ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ.ಅಧಿಕಾರಕ್ಕೆ ಬರುವ ಮುನ್ನ ಅಹಿಂದ ವರ್ಗಗಳ ಪರವಾಗಿ ಮಾತನಾಡುವ ಪಕ್ಷಗಳು ಅಧಿಕಾರದಲ್ಲಿದ್ದಾಗ ಅವರ ಬೇಡಿಕೆಗಳಿಗೆ ಸ್ಪಂದಿಸದಿರುವುದನ್ನು ಜನರ ಮುಂದೆ ಪ್ರಶ್ನಿಸುವುದು ಯಾತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಜಾತಿ ಜನಗಣತಿ ವರದಿ ಸ್ವೀಕರಿಸದಿದ್ದರೆ ಅದರ ಉದ್ದೇಶವೇನು?
ಕಾಂಗ್ರೆಸ್ ಸರ್ಕಾರ ಅಹಿಂದ ಸಮುದಾಯಗಳ ಪರವಾಗಿ ನಿಲ್ಲುವುದಾಗಿ, ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡುವುದಾಗಿ ಹಾಗೂ ಯಾವ ಸಮುದಾಯದ ಜನಸಂಖ್ಯೆ ಹೆಚ್ಚಿದೆಯೋ ಅದಕ್ಕೆ ಅನುಗುಣವಾಗಿ ಆದ್ಯತೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, 2025ರಲ್ಲಿ ಮಧುಸೂದನ್ ನೇತೃತ್ವದಲ್ಲಿ ಜಾತಿ ಜನಗಣತಿ ಪ್ರಕ್ರಿಯೆ ನಡೆದಿದ್ದರೂ ಸರ್ಕಾರ ಈವರೆಗೆ ವರದಿಯನ್ನು ಸ್ವೀಕರಿಸಿಲ್ಲ. ಇದು ಶೋಷಿತ, ಹಿಂದುಳಿದ ಹಾಗೂ ಅವಕಾಶ ವಂಚಿತ ಸಮುದಾಯಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ಜನಗಣತಿ ವರದಿಯನ್ನು ತಕ್ಷಣ ಬಿಡುಗಡೆಗೊಳಿಸಿ, ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಹಾಗೂ ಸಾಮಾಜಿಕ ನ್ಯಾಯದ ಅವಕಾಶಗಳನ್ನು ಕಲ್ಪಿಸಬೇಕು. ವರದಿಯನ್ನು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಕ್ಕೆ ಬಳಸದೆ, ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಆಧಾರವಾಗಿಸಬೇಕು ಎಂದು ಆಗ್ರಹಿಸಿದರು.
2ಬಿ ಮೀಸಲಾತಿ ಮರುಜಾರಿ ಭರವಸೆ ಏನಾಯಿತು?
ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ 2ಬಿ ಮೀಸಲಾತಿಯನ್ನು ರದ್ದುಗೊಳಿಸುವ ಮೂಲಕ ಸಮುದಾಯದ ಹಕ್ಕುಗಳಿಗೆ ಧಕ್ಕೆ ಉಂಟುಮಾಡಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 2ಬಿ ಮೀಸಲಾತಿಯನ್ನು ಮರುಜಾರಿಗೊಳಿಸುವ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದು ಇಷ್ಟು ಸಮಯ ಕಳೆದರೂ ಭರವಸೆ ಈಡೇರಿಲ್ಲ. ಹಾಗಾದರೆ ಕಾಂಗ್ರೆಸ್ ನೀಡಿದ್ದ ಭರವಸೆಗೆ ಬೆಲೆ ಇಲ್ಲವೇ? ಎಂದು ಮುಖಂಡರು ಪ್ರಶ್ನಿಸಿದರು.
ಅದೇ ರೀತಿ ನಾಗಮೋಹನ ದಾಸ್ ಆಯೋಗದ ವರದಿಯ ಶಿಫಾರಸುಗಳಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಜಾರಿಗೊಳಿಸಬೇಕು. ಮೀಸಲಾತಿ ವಿಚಾರದಲ್ಲಿ ರಾಜಕೀಯ ಲೆಕ್ಕಾಚಾರ ಮಾಡದೆ, ಸಂವಿಧಾನದ ಆಶಯದಂತೆ ಎಲ್ಲ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಾತಿ-ಧರ್ಮದ ಹೆಸರಿನಲ್ಲಿ ವಿಭಜನೆಯಾಗದೆ ಒಂದಾಗಿ
ಅಹಿಂದ ಸಮುದಾಯಗಳು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು. ಜಾತಿ, ಧರ್ಮ ಹಾಗೂ ರಾಜಕೀಯ ಪಕ್ಷಗಳ ಹೆಸರಿನಲ್ಲಿ ವಿಭಜನೆಯಾಗದೆ ಸಾಮಾಜಿಕ ನ್ಯಾಯದ ಪ್ರಶ್ನೆಯಲ್ಲಿ ಒಂದಾಗಬೇಕು. ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ಮತ್ತು ಸಂವಿಧಾನಬದ್ಧ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಬೇಕು ಎಂಬ ಸಂದೇಶವನ್ನು ಯಾತ್ರೆಯ ಮೂಲಕ ಸಾರಲಾಯಿತು.
ಕೂಡಲಸಂಗಮದಿಂದ ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡ ಯಾತ್ರೆಯಲ್ಲಿ ಪಕ್ಷಾತೀತವಾಗಿ ವಿವಿಧ ಸಮುದಾಯಗಳ ಮುಖಂಡರು ಹಾಗೂ ಹೋರಾಟಗಾರರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮೈಬೂಬ ಗೋಳಸಂಗಿ, ಪಿ.ಬಿ. ಮಾಥಿನ, ಮುತ್ತು ಟಕ್ಕಳಕಿ, ಅನಿಲ ವಾಲಿಕಾರ, ಅಜಯ ಮುದ್ನಾಳ, ಜುಮ್ಮಣ್ಣ ಹೊಕ್ರಾಣಿ, ಮಾಳಪ್ಪ ಸಿದ್ದಾಪುರ, ಪ್ರತಾಪ ಮಡಿಕೇಶ್ವರ, ಸಿದ್ದು ಕೂಡಗಿ, ಆನಂದ ಮುದುರ, ಆನಂದ ಕೆಂಗಲ್, ಮಾಳಪ್ಪ ಮಡಿಕೇಶ್ವರ, ಮಾಳಪ್ಪ ವಗ್ಗರ, ಮಹೇಂದ್ರ ಬಂಗಾರಗುಂಡ,ಸಂತೋಷ ನಾಯ್ಕೋಡಿ, ಸಿದ್ದು ನಾಯ್ಕೋಡಿ ಸೇರಿದಂತೆ ಎಸ್‌ಡಿಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.




