ಆಶಾ ಕಾರ್ಯಕರ್ತೆಯರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ಮೈಸೂರು ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರಾಜ್ಯದ ಆಶಾ ಕಾರ್ಯಕರ್ತೆಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಖ್ಯವಾಗಿ ಕಳೆದ ಒಂದು ವರ್ಷದಿಂದ ಮಾಸಿಕ ಗೌರವಧನ ಹಾಗೂ ಕೇಂದ್ರದ ಪ್ರೋತ್ಸಾಹಧನ ನಿಯಮಿತವಾಗಿ ಲಭ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ 3-4 ತಿಂಗಳ ಕೇಂದ್ರದ ಪ್ರೋತ್ಸಾಹಧನ ಹಾಗೂ 1-2 ತಿಂಗಳ ಗೌರವಧನ ಬಾಕಿ ಉಳಿದಿರುವುದರಿಂದ ಕಾರ್ಯಕರ್ತೆಯರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.
ಇದಲ್ಲದೆ, ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಕ್ಕೆ ತಕ್ಕ ಪ್ರೋತ್ಸಾಹಧನ ದೊರೆಯುತ್ತಿಲ್ಲ. ಟಿಬಿ, ಟಿಬಿಐ, ಎನ್ಸಿಡಿ ಸೇರಿದಂತೆ ವಿವಿಧ ಯೋಜನೆಗಳಡಿ ಹಲವು ವರ್ಷಗಳಿಂದ ಬಾಕಿ ಇರುವ ಹಣ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು. ಕೆಲವು ಕಾರ್ಯಕರ್ತೆಯರ ಗೌರವಧನ ಮತ್ತು ಪ್ರೋತ್ಸಾಹಧನ ಅನ್ಯಾಯವಾಗಿ ಕಡಿತಗೊಂಡಿರುವುದನ್ನೂ ಖಂಡಿಸಿದರು.

ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮಸ್ಯೆಗಳನ್ನು ತಿಳಿಸಿದರೂ ‘ರಾಜ್ಯ ಮಟ್ಟದ ಸಮಸ್ಯೆ’ ಎಂದು ಹೇಳಿ ಪರಿಹಾರ ನೀಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು 21-04-2026ರಂದು ಹೊರಡಿಸಿದ ಪತ್ರದಂತೆ 9 ವಿವಿಧ ಆಶಾ ಸೇವೆಗಳನ್ನು ‘ಆಶಾ ನಿಧಿ’ ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಪ್ರತಿ ಕಾರ್ಯಕರ್ತೆಗೆ ರೂ. 500 ರಿಂದ 1000ರವರೆಗೆ ಪ್ರೋತ್ಸಾಹಧನ ಕಡಿತವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಈ ಸೇವೆಗಳು ತಾಯಿ-ಮಗು ಸುರಕ್ಷತೆ ಹಾಗೂ ಬಡಜನರ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿರುವುದರಿಂದ ಅವುಗಳನ್ನು ನಿಲ್ಲಿಸಬಾರದು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಬರಿಮಲೆ ವಿವಾದ | ನೀವು ದೇಶದ ಪ್ರಧಾನ ಅರ್ಚಕರೇ?- ಅರ್ಜಿ ಸಲ್ಲಿಸಿದವರಿಗೆ ಸುಪ್ರೀಂ ತರಾಟೆ
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷೆ ಎಂ. ಉಮಾದೇವಿ, ಜಿಲ್ಲಾ ಗೌರವಾಧ್ಯಕ್ಷೆ ಸಂಧ್ಯಾ ಪಿ.ಎಸ್., ನಗರ ಸಮಿತಿ ಸಲಹೆಗಾರ್ತಿ ಸೀಮಾ ಜಿ.ಎಸ್., ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆಯರಾದ ಕೋಮಲಾ, ಮಣಿಲಾ, ಸುಧಾ, ಮಂಜುಳಾ, ಸುನೀತಾ, ಲಕ್ಷ್ಮಿ, ಲೀಲಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಮುಖ ಆಗ್ರಹಗಳು:
- ಬಾಕಿ ಇರುವ 3-4 ತಿಂಗಳ ಕೇಂದ್ರದ ಪ್ರೋತ್ಸಾಹಧನ ಹಾಗೂ 1-2 ತಿಂಗಳ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡಬೇಕು.
- ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸಲು ಉದ್ದೇಶಿಸಿರುವ 9 ಸೇವೆಗಳನ್ನು ಮುಂದುವರಿಸಿ, ಪ್ರೋತ್ಸಾಹಧನ ನೀಡಬೇಕು.
- ಟಿಬಿ, ಟಿವಿಎ, ಎನ್ಸಿಡಿ ಸೇರಿದಂತೆ ಬಾಕಿ ಇರುವ ಎಲ್ಲಾ ಕಾಂಪೋನೆಂಟ್‌ಗಳ ಹಣವನ್ನು ಬಿಡುಗಡೆ ಮಾಡಬೇಕು.
- ಸಮಸ್ತ ಆ್ಯಪ್ ಮೂಲಕ ದಾಖಲಾತಿ ಮಾಡಿಸುವುದನ್ನು ಕೈಬಿಡಬೇಕು.
- ಮೌಲ್ಯಮಾಪನ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯನ್ನು ನಿಲ್ಲಿಸಬೇಕು.
- ನಿವೃತ್ತ ಆಶಾಗಳಿಗೆ ಇಡಿಗಂಟು (ಪಿಂಚಣಿ/ಲಾಭ) ನೀಡಬೇಕು.
- ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು.
- ಸಮಸ್ಯೆಗಳ ಪರಿಹಾರಕ್ಕೆ ಸಂಘದ ಪದಾಧಿಕಾರಿಗಳೊಂದಿಗೆ ತಕ್ಷಣ ಸಭೆ ಕರೆಯಬೇಕು.
- ಕನಿಷ್ಠ ಮಾಸಿಕ ರೂ.10,000 ಗೌರವಧನ ನೀಡುವ ಕ್ರಮ ಕೈಗೊಳ್ಳಬೇಕು.
- ಸರ್ಕಾರ ನೀಡಿದ ಭರವಸೆಯಂತೆ ರೂ.1,000 ವೇತನ ಹೆಚ್ಚಳವನ್ನು ಜಾರಿಗೆ ತರಬೇಕು.
ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಸಂಘದ ಪದಾಧಿಕಾರಿಗಳು ಎಚ್ಚರಿಸಿದರು.




