ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಗುಂಪನ್ನು ಪ್ರಚೋದಿಸಿದ ಕಾರಣಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ ನಂತರ ಬಿಜೆಪಿ ಆಡಳಿತದ ಅಸ್ಸಾಂ ರಾಜ್ಯದ ವಿರುದ್ಧ ಕಾಂಗ್ರೆಸ್ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾತ್ರೆಯ ಏಳನೆ ದಿನ ಅಸ್ಸಾಂನ ಬರ್‌ಪೇಟ ಜಿಲ್ಲೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ವಿರುದ್ಧ ಅವರು ಎಷ್ಟು ಪ್ರಕರಣಗಳನ್ನು ದಾಖಲಿಸಿದರೂ ತಾವು ಎದೆಗುಂದುವುದಿಲ್ಲ. ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ. ಭೂಹಗರಣ ಸೇರಿದಂತೆ ಹಲವು ಹಗರಣಗಳು ಅವರ ವಿರುದ್ಧ ಇವೆ ಎಂದು ತಿಳಿಸಿದರು.
“ಹಿಮಂತ ಬಿಸ್ವಾ ಶರ್ಮಾ ಅವರಿಗೆ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಆಲೋಚನೆ ಹೇಗೆ ಬಂದಿತೋ ಗೊತ್ತಿಲ್ಲ. ನಿಮಗೆ ಸಾಧ್ಯವಾದರೆ ಹಲವು ಪ್ರಕರಣ ದಾಖಲಿಸಿ. 25 ಪ್ರಕರಣಗಳನ್ನು ದಾಖಲಿಸಿದರೂ ನೀವು ನನ್ನನ್ನು ಬೆದರಿಸುವುದಕ್ಕೆ ಸಾಧ್ಯವಿಲ್ಲ. ಬಿಜೆಪಿ –ಆರ್‌ಎಸ್‌ಎಸ್ ಕೂಡ ನನ್ನನ್ನು ಎದರಿಸಲು ಸಾಧ್ಯವಿಲ್ಲ” ಎಂದು ರಾಹುಲ್ ಹೇಳಿದರು.
ಗುವಾಹಟಿ ಪೊಲೀಸರು ಮಂಗಳವಾರ ರಾಹುಲ್ ಗಾಂಧಿ ಹಾಗೂ ಇತರ ನಾಯಕರ ವಿರುದ್ಧ ರಾಜ್ಯ ರಾಜಧಾನಿಯಲ್ಲಿ ಹಿಂಸಾಚಾರಪ್ರೇರಿತ ಕೃತ್ಯವೆಸಗಿರುವುದಕ್ಕೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಎಫ್‌ಐಆರ್ ದಾಖಲಿಸಿದ್ದಾರೆ.
“ಬಿಜೆಪಿ- ಆರ್‌ಎಸ್‌ಎಸ್‌ನವರು ಭಾಷೆ, ಸಂಸ್ಕೃತಿ ಹಾಗೂ ಇತಿಹಾಸವನ್ನು ನಾಶ ಮಾಡಲು ಬಯಸುತ್ತಾರೆ. ಅವರು ನಾಗಪುರದಿಂದ ಅಸ್ಸಾಂಅನ್ನು ನಿಯಂತ್ರಿಸಲು ಬಯಸುತ್ತಾರೆ. ಆದರೆ ನಾವು ಇದಕ್ಕೆ ಅವಕಾಶ ನೀಡುವುದಿಲ್ಲ.ಅಸ್ಸಾಂ ಸರ್ಕಾರ ಅಸ್ಸಾಂ ಜನರಿಂದಲೇ ನಡೆಯಬೇಕು” ಎಂದರು.
ಭದ್ರತೆ ನೀಡಲು ಅಮಿತ್ ಶಾಗೆ ಖರ್ಗೆ ಪತ್ರ
ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಅಸ್ಸಾಂನಲ್ಲಿ ಪ್ರಕರಣ ದಾಖಲಿಸಿದ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಅವರಿಗೆ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿಯ ಕೆಲವು ಕಿಡಿಗೇಡಿಗಳು ಯಾತ್ರೆ ನಡೆದ ಕೆಲವು ಮಾರ್ಗಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸೇರಿದಂತೆ ಕೆಲವರ ಮೇಲೆ ದಾಳಿ ನಡೆಸಿದ್ದಾರೆ. ಕೆಲವು ಕಡೆ ಯಾತ್ರೆಯನ್ನು ತಡೆದು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಎಲ್ಲ ಘಟನೆಗಳನ್ನು ಗಮನಿಸಿದರೆ ಅಸ್ಸಾಂ ಪೊಲೀಸರು ವ್ಯವಸ್ಥಿತವಾಗಿ ದಾಳಿ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರ ಪರವಾಗಿ ನಿಂತಿದ್ದಾರೆ. ರಾಹುಲ್ ಹಾಗೂ ಇತರ ನಾಯಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಭದ್ರತೆ ನೀಡಲು ಅಸ್ಸಾಂ ಸಿಎಂ ಹಾಗೂ ಡಿಜಿಪಿ ಅವರೊಂದಿಗೆ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.
ಮಂಗಳವಾರ ಭಾರತ ಜೋಡೊ ನ್ಯಾಯಯಾತ್ರೆ ಗುವಾಹಟಿ ನಗರ ಪ್ರವೇಶಿಸದಂತೆ ಅಸ್ಸಾಂ ಸರ್ಕಾರ ತಡೆಯೊಡ್ಡಿತ್ತು.ಯಾತ್ರೆಯನ್ನು ತಡೆದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಕೆಲ ಕಾರ್ಯಕರ್ತರು ಗಾಯಗೊಂಡಿದ್ದರು.