ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ, ವಕೀಲರೊಬ್ಬರು ಯಾವುದೇ ಆಧಾರವಿಲ್ಲದಯೇ ರಾಹುಲ್ ಗಾಂಧಿ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪದ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ. ಆ ವಕೀಲರನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮಾಧ್ಯಮಗಳ ಗಮನ ಸೆಳೆಯರು ಹೀಗೆ ಮಾಡ್ತೀರಾ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಮೂಲದ ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ಸಲ್ಲಿಸಿದ್ದ ದೂರಿನನ್ವಯ ರಾಹುಲ್ ಗಾಂಧಿ ಅವರ ಆಸ್ತಿಗಳ ಕುರಿತು ತನಿಖೆ ನಡೆಸುವಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಅಲಹಾಬಾದ್ ಹೈಕೋರ್ಟ್ ಮೇ ತಿಂಗಳಲ್ಲಿ ಆದೇಶ ನೀಡಿತ್ತು. ಆದರೆ, ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ವಾದ ಆಲಿಸದೆ ಹೈಕೋರ್ಟ್ ಆದೇಶ ಹೊರಡಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಆಗಸ್ಟ್‌ನಲ್ಲಿ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಮಾತ್ರವಲ್ಲದೆ, ಸಿಬಿಐ ಮತ್ತು ಇ.ಡಿ ಸಂಸ್ಥೆಗಳು ಹೈಕೋರ್ಟ್‌ಗೆ ಯಾವುದೇ ವರದಿ ಸಲ್ಲಿಸಬಾರದು ಎಂದು ನಿರ್ಬಂಧಿಸಿತ್ತು.
ಆದಾಗ್ಯೂ, ಮಂಗಳವಾರ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಪ್ರಸ್ತಾಪಿಸುವ ಪ್ರಕ್ರಿಯೆಯ ವೇಳೆ ವಕೀಲರೊಬ್ಬರು ಈ ವಿಷಯವನ್ನು ಮತ್ತೆ ಎತ್ತಿದರು. “ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರು ತಮಗೆ ಇ.ಡಿ ಮತ್ತು ಸಿಬಿಐನ ಸುಮಾರು 200 ಅಧಿಕಾರಿಗಳ ಸಂಪರ್ಕವಿದೆ ಎಂದಿದ್ದಾರೆ. ಹೀಗಾಗಿ, ಈ ಪ್ರಕರಣವನ್ನು ತುರ್ತು ವಿಚಾರಣಾ ಪಟ್ಟಿಗೆ ಸೇರಿಸಬೇಕು” ಎಂದು ವಕೀಲರು ಕೋರಿದರು.
ಅವರ ಪ್ರಸ್ತಾಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿಜೆಐ ಸೂರ್ಯಕಾಂತ್, “ಈ ಪ್ರಸ್ತಾಪದಲ್ಲಿ ಯಾವುದೇ ಗಂಭೀರತೆ ಅಥವಾ ಹುರುಳಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಮೆನ್ಷನ್ ಆಗುವ ಲೈವ್ ಸ್ಟ್ರೀಮಿಂಗ್ ನೋಡಿಕೊಂಡು, ಕೇವಲ ಮಾಧ್ಯಮಗಳ ಗಮನ ಸೆಳೆಯುವ ಹಾಗೂ ಪ್ರಚಾರ ಪಡೆಯುವ ಏಕೈಕ ಉದ್ದೇಶದಿಂದ ಈ ರೀತಿ ವಿಷಯಗಳನ್ನು ಪ್ರಸ್ತಾಪಿಸಲಾಗುತ್ತಿದೆ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೆ, ನ್ಯಾಯಾಲಯದಲ್ಲಿ ಪ್ರಕರಣಗಳ ತುರ್ತು ಪ್ರಸ್ತಾಪದ ಪ್ರಕ್ರಿಯೆಯ ನೇರ ಪ್ರಸಾರವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.




