ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ ಮನಸ್ಸಿಗೆ ಮುದ ನೀಡಲು ಮತ್ತು ಶುದ್ಧ ಗಾಳಿಯನ್ನು ಪಡೆಯಲು ವಿಶ್ರಾಂತಿ ತಾಣವಾಗಿರುತ್ತದೆ. ದಟ್ಟವಾದ ಮರಗಿಡಗಳು ವಾತಾವರಣದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು, ಶುದ್ಧ ಆಮ್ಲಜನಕವನ್ನು (Oxygen) ಬಿಡುಗಡೆಗೊಳಿಸುವ ಮೂಲಕ ವಾಯು ಮಾಲಿನ್ಯವನ್ನು ನಿಯಂತ್ರಿಸುತ್ತವೆ.
ಆದರೆ, ಚಿಕ್ಕಮಗಳೂರು ಜಿಲ್ಲೆ ಶಾರದಾಂಬೆಯ ಕ್ಷೇತ್ರವಾಗಿರುವ ಶೃಂಗೇರಿ ತಾಲೂಕಿನ ಶಾರದ ನಗರದಲ್ಲಿ ಉದ್ಯಾನವನ ಮತ್ತು ಒಳಾಂಗಣ ಕ್ರೀಡಾಂಗಣಕೆಂದು ಮೀಸಲಿಟ್ಟ ಜಾಗದಲ್ಲಿ ತಾಲೂಕು ಆಡಳಿತ ಅಧಿಕಾರಿಯಾದ ಅನೂಪ್ ಸಂಜೋಗ್ ವಾರದ ಸಂತೆ ನಡೆಸಲು ಮುಂದಾಗಿದ್ದಾರೆ. ಸಾರ್ವಜನಿಕರ ದೈನಂದಿನ ನಡಿಗೆ, ವ್ಯಾಯಾಮ, ಮಕ್ಕಳ ಆಟೋಟ ಮತ್ತು ವಿಶ್ರಾಂತಿಗಾಗಿ ಎಲ್ಲಾ ವಯಸ್ಸಿನ ಜನರು, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳು ಒಟ್ಟಾಗಿ ಸಮಯ ಕಳೆಯಲು ಮತ್ತು ಒತ್ತಡದಿಂದ ಹೊರ ಬರಲು ನಗರ ಪ್ರದೇಶಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇಂತಹ ಜಾಗದಲ್ಲಿ ಸಂತೆ ನಡೆಸಲು ಮುಂದಾಗಿರುವುದು ಸರಿಯೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ.

ಈ ದಿನ.ಕಾಮ್ ಜೊತೆ ಮಾತನಾಡಿದ ಖ್ಯಾತ ಪರಿಸರವಾದಿ ಡಾ. ಕಲ್ಕುಳಿ ವಿಠಲ್ ಹೆಗಡೆ, ” ಈ ಹಿಂದೇ ಶಾರದಾ ನಗರ ಅಜ್ಜನ ಆಸ್ತಿಯಾಗಿತ್ತು. ನಮ್ದು ಭಾರತೀ ನಗರದಲ್ಲಿ ಸೈಟ್ ಜಾಗವಿತ್ತು. ಆ ಜಾಗಕ್ಕೆ ಪಟ್ಟಣ ಪಂಚಾಯಿತಿಯವರು ಸಾರ್ವಜನಿಕರಿಗೆ ಓಡಾಡಲು ರಸ್ತೆ ಮಾಡಲು ನನ್ನ ಬಳಿ ಮನವಿ ಮಾಡಿದ್ದರಿಂದ ಆ ಜಾಗ ಪಂಚಾಯಿತಿಗೆ ಕೊಡಬೇಕಾಯಿತು. ಹಾಗೆಯೇ ಆ ಜಾಗದ ಬದಲು ಶಾರದ ನಗರದಲ್ಲಿ ಜಾಗ ಕೊಟ್ಟರು. ಜಾಗ ಕೊಡುವಾಗ ಹೇಳಿದರು ಇಲ್ಲಿ ಬೇರೆ ಯಾವುದೇ ಕಟ್ಟಡಗಳು ನಿರ್ಮಾಣವಾಗುವುದಿಲ್ಲ ಈ ಜಾಗದಲ್ಲಿ ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಒಳಾಂಗಣ ಕ್ರೀಡಾಂಗಣ ಮಾಡುತ್ತೇವೆಂದು ತಿಳಿಸಿದರಿಂದ ನಾನು ಈ ಜಾಗವನ್ನು ತೆಗೆದುಕೊಳ್ಳಲು ಒಪ್ಪಿಗೆ ಕೊಡಲಾಯಿತು. 2012-18-22ರಲ್ಲಿ ಉದ್ಯಾನವನ ಮಾಡಿ ಎಂದು ಹಲವು ಬಾರಿ ಮನವಿ ಮಾಡಿದ್ದೆ, ಮಾಡುತ್ತೇವೆಂದು ಅಧಿಕಾರಿಗಳು ತಿಳಿಸಿದ್ದರು. ಆದರೇ ಈಗ ಆಡಳಿತದಲ್ಲಿರುವ ಅನೂಪ್ ಸಂಜೋಗ್ ತಹಶೀಲ್ದಾರ್ ದುರುದ್ದೇಶದಿಂದ ಪಾರ್ಕ್ ನಿರ್ಮಾಣ ಮಾಡಬೇಕಿರುವ ಜಾಗದಲ್ಲಿ ವಾರದ ಸಂತೆ ನಡೆಸಲು ಮುಂದಾಗಿರುವುದನ್ನು ಖಂಡಿಸುತ್ತೇವೆ” ಎಂದು ಹೇಳಿದರು.
ಹಾಗೆಯೇ, ಸುಮಾರು 22-23 ವರ್ಷದ ಹಿಂದೆ ಪಟ್ಟಣ ಪಂಚಾಯಿತಿ, ಸರ್ಕಾರದ ವಿಶೇಷ ಅನುದಾನದಲ್ಲಿ ಶಾರದಾ ನಗರದಲ್ಲಿಯೇ ನೂತನವಾಗಿ ವ್ಯವಸ್ಥಿತ ಕಟ್ಟಡವನ್ನು ನಿರ್ಮಿಸಿ, ಸಂತೆ ನಡೆಯಲು ಅನುಕೂಲ ಕಲ್ಪಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಸಂತೆ ನಡೆದುಕೊಂಡು ಬರುತ್ತಿದೆ. ಇದೀಗ ಬಹು ದೊಡ್ಡ ಮಟ್ಟದಲ್ಲಿ ಸಂತೆ ನಡೆಯುತ್ತಿದೆ. ಇಲ್ಲಿಯ ಬಡಾವಣೆಯಲ್ಲಿ ವ್ಯವಸ್ಥಿತ ಸಂತೆ ಕಟ್ಟಡವಿದ್ದು, ಅನೇಕ ವರ್ಷಗಳಿಂದ ಸಂತೆ ನಡೆಯುತ್ತಿದೆ. ಬೀದಿ ವ್ಯಾಪಾರಿಗಳು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ. ಅದಕ್ಕೆ ಯಾರ ಆಕ್ಷೇಪಣೆ ಇಲ್ಲ. ಸಂತೆ ಮಾಡುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದು ಎಂದು ಹೇಳಿದರು.

ಕರ್ನಾಟಕ ಜನಶಕ್ತಿ ಸಂಘಟನೆಯ ಕೆ.ಎಲ್ ಅಶೋಕ್ ಈ ದಿನ.ಕಾಮ್ ಜೊತೆ ಮಾತಾಡಿ, “ಒಳಾಂಗಣ ಕ್ರೀಡಾಂಗಣ ಮತ್ತು ಮಕ್ಕಳು ಆಟವಾಡಲು ಪಾರ್ಕ್‌ಗೆ ಮೀಸಲಿಟ್ಟ ಜಾಗದಲ್ಲಿ ಶಾಸಕ ಟಿ.ಡಿ ರಾಜೇಗೌಡ ಅವರು ಜನ ವಸತಿ ಪ್ರದೇಶದಲ್ಲಿ ಸಂತೆ ನಡೆಸದಂತೆ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಮತ್ತು ತಹಶೀಲ್ದಾರ್‌ಗೆ ಮೌಖಿಕವಾಗಿ ಸೂಚಿಸಿದ್ದರೂ ಉದ್ದಟತನ ತೋರಿ ವಾರದ ಸಂತೆ ನಡೆಸಲು ಮುಂದಾಗಿರುವುದು ಸರಿಯಲ್ಲ. ವ್ಯಾಪಾರಸ್ಥರಿಗೆ ಸೂಕ್ತ ಜಾಗ ನೀಡಿ ಸಂತೆ ನಡೆಯಲು ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಬೃಹತ್ ಮಟ್ಟದ ಹೋರಾಟ” ಮಾಡುವುದಾಗಿ ಎಚ್ಚರಿಸಿದರು.
ಶೃಂಗೇರಿ ಕ್ಷೇತ್ರ ಶಾಸಕರಾದ ಟಿ. ಡಿ ರಾಜೇಗೌಡ ಮಾತನಾಡಿ, “ಶಾರದ ನಗರದಲ್ಲಿ ಅಂಬೇಡ್ಕರ್ ಭವನಕ್ಕೆಂದು ದಸಂಸ ಸಂಘಟಕರು ಹೋರಾಟ ನಡೆಸಿದಾಗ ಆ ಜಾಗ ಅಂಬೇಡ್ಕರ್ ಭವನ ಕಟ್ಟಲು ಕಾಯ್ದಿರಿಸಲಾಗಿದೆ. ಪಾರ್ಕ್ ಮಾಡುವ ಜಾಗದಲ್ಲಿ ತಹಶೀಲ್ದಾರ್ ಸಂತೆ ಮಾಡಲು ಮುಂದಾಗಿರುವುದನ್ನು ತಡೆ ಹಿಡಿಯಲಾಗಿದೆ. ಸಧ್ಯಕ್ಕೆ ಇರುವಂತಹ ಸ್ಥಿತಿಯಲ್ಲಿರುತ್ತದೆ. ಮುಂದಿನ ದಿನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂದುವರಿಯಲಾಗುತ್ತದೆ” ಎಂದು ತಿಳಿಸಿದರು.
ಶೃಂಗೇರಿ ತಾಲೂಕು ಆಡಳಿತ ಕಛೇರಿ ಮುಖ್ಯ ಅಧಿಕಾರಿ ಸರಸ್ವತಿ ಮಾತನಾಡಿ, ” ಪಾರ್ಕ್ ಜಾಗದಲ್ಲಿ ಸಂತೆ ನಡೆಸಲು ಮುಂದಾಗಿದ್ದಾಗ ಎಲ್ಲರ ಆಕ್ಷೇಪಣೆಯಂತೆ ತೆರವುಗೊಳಿಸಿ ಪಾರ್ಕ್ ಜಾಗದ ಗೇಟ್ ಗೆ ಬೀಗ ಹಾಕಿಸಲಾಗಿದೆ. ಮೊದಲು ಎಲ್ಲಿ ಸಂತೆ ನಡೆಯುತ್ತಿತ್ತು ಎಂದಿನಂತೆ ಸಧ್ಯಕೆ ಅದೇ ಜಾಗದಲ್ಲಿ ನಡೆಯುತ್ತದೆ” ಎಂದು ಹೇಳಿದರು.

ಶೃಂಗೇರಿ ಪಟ್ಟಣ ಪಂಚಾಯಿತಿ ಶಾರದ ನಗರದಲ್ಲಿರುವ (ಅ.ನಂ 800/764/41/1 ರಂತೆ) ಜಾಗದಲ್ಲಿ ಒಳಾಂಗಣ ಕ್ರೀಡಾಂಗಣ ವಿಚಾರವಾಗಿ ವಿವಿಧ ಜನಪರ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಸಭೆ ನಡೆಸಿ ಎಲ್ಲಾ ದಾಖಲೆಗಳು ಪರಿಶೀಲಿಸಿದಾಗ ಶೃಂಗೇರಿ ಪಟ್ಟಣ ಪಂಚಾಯಿತಿಯ ಶಾರದ ನಗರದಲ್ಲಿರುವ ತೆರೆದ ಜಾಗವನ್ನು 1989-90ನೇ ಸಾಲಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ನಗರ ಯೋಜನಾ ಇಲಾಖೆಯವರ ನಕ್ಷೆಯಲ್ಲಿ ಒಳಾಂಗಣ ಕ್ರೀಡಾಂಗಣ ಮಕ್ಕಳ ಆಟದ ಮೈದಾನಕ್ಕೆ ಮೀಸಲಿರುವುದು ಹಾಗೂ ನಿರ್ಣಯ ತೆಗೆದುಕೊಂಡಿರುವುದು ಉಲ್ಲೇಖವಾಗಿದೆ. ಈ ಜಾಗವನ್ನು ಪಾರ್ಕ್ ಮಾಡಲು ಮೀಸಲಿಡಬೇಕು ಹಾಗೂ ಸಂತೆ ಪ್ರಾಂಗಣವನ್ನು ಸುಸಜ್ಜಿತಗೊಳಿಸಬೇಕು ಎಂದು ವಿವಿಧ ಜನಪರ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿಯವರಿಗೆ ಅಗ್ರಹಿಸಿದ್ದಾರೆ.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು | ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು
ಈ ಸಂದರ್ಭದಲ್ಲಿ ಹಾಗಲಗಂಚಿ ವೆಂಕಟೇಶ್, ಅತ್ತೀಕುಳಿ ಸುಂದರೇಶ್, ತ್ರಿಮೂರ್ತಿ, ಮಂಜುನಾಥ್ ಕೆ.ಟಿ, ವೆಂಕಟೇಶ್, ಸುರೇಶ್, ಕೌಳಿ ರಾಮು, ಗುರುಪ್ರಸಾದ್, ಅನಿಲ್ ಡೆನಿಲ್ಲೋ, ಶೇಖರ್, ದಿನೇಶ್, ಸಂಜಯ್, ಮಂಜುನಾಥ್ ಡಿ.ಎಸ್ ಹಾಗೂ ಇನ್ನಿತರರಿದ್ದರು. ಮುಂದಿನ ದಿನಗಳಲ್ಲದರೂ ತಾಲೂಕು ಆಡಳಿತ ಅಧಿಕಾರಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಒಳಾಂಗಣ ಕ್ರೀಡಾಂಗಣದಿಂದ ಮಕ್ಕಳಿಗೆ ಆಟದ ಮೈದಾನ ನಿರ್ಮಾಣವಾಗಲಿ ಎಂದು ಆಶೀಸೋಣ.





