ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಕಾರ್ಯವೈಖರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಮಂಗಳವಾರ, ಚುನಾವಣಾ ಆಯೋಗವು ಸಲ್ಲಿಸಿದ್ದ ‘ಕೌಂಟರ್ ಅಫಡವಿಟ್’ಗೆ ಪ್ರತ್ಯುತ್ತರ ಸಲ್ಲಿಸಲು ಅರ್ಜಿದಾರರಿಗೆ 10 ದಿನಗಳ ಕಾಲಾವಕಾಶ ನೀಡಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ.
ಚುನಾವಣಾ ಆಯೋಗದಲ್ಲಿ ಇಬ್ಬರು ಸಹ ಆಯುಕ್ತರ ಅಭಿಪ್ರಾಯಗಳನ್ನು ಲೆಕ್ಕಿಸಲು ಗ್ಯಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅವರು ಜಾರಿಗೊಳಿಸಿರುವ ಎಸ್‌ಐಆರ್ ಮತ್ತು ಚುನಾವಣಾ ಕ್ರಮಗಳನ್ನು ರದ್ದುಗೊಳಿಸಿ, ತನಿಖೆಗೆ ಒಳಪಡಿಸಬೇಕು ಎಂದು ಹಿರಿಯ ವಕೀಲ ರಾಕೇಶ್ ಸಿಂಗ್, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇಂಡಿಯಾ ಮೈತ್ರಿಕೂಟದ ನಾಯಕರು, ಟಿಎಂಸಿ ಸಂಸದೆ ಡೋಲಾ ಸೇನ್ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಸೇರಿದಂತೆ ಹಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠವು ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆಯ ಸಮಯದಲ್ಲಿ ವಿಪಕ್ಷ ನಾಯಕರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, “ಚುನಾವಣಾ ಆಯೋಗದ ಆಂತರಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಕಡತಗಳ ಟಿಪ್ಪಣಿಗಳು ಮತ್ತು ಆಂತರಿಕ ಸಂವಹನಗಳನ್ನು ಸುರಕ್ಷಿತವಾಗಿ ಕಾಯ್ದಿರಿಸಲು ಆದೇಶಿಸಬೇಕು. ನಿರ್ಧಾರಗಳು ಸರ್ವಾನುಮತದಿಂದ ತಗೆದುಕೊಂಡದ್ದೋ ಅಥವಾ ಏಕಪಕ್ಷೀಯವೋ ಎಂಬುದನ್ನು ನಿರ್ಧರಿಸಲು ಈ ದಾಖಲೆಗಳು ಅತ್ಯಗತ್ಯ” ಎಂದು ಮನವಿ ಮಾಡಿದರು.
ಅವರ ಮನವಿಗೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯ ಕಾಂತ್, “ನಮಗೆ ಎಲ್ಲವೂ ತಿಳಿದಿದೆ, ನಾವು ಇದನ್ನು ವಿವರವಾಗಿ ಪರಿಶೀಲಿಸುತ್ತೇವೆ” ಎಂದು ಭರವಸೆ ನೀಡಿದರು.
ಇದೇ ವೇಳೆ, ಟಿಎಂಸಿ ಸಂಸದೆ ಡೋಲಾ ಸೇನ್ ಪರ ವಾದಿಸಿದ ಹಿರಿಯ ವಕೀಲ ಡಾ. ಮೇನಕಾ ಗುರುಸ್ವಾಮಿ, “ಚುನಾವಣಾ ಆಯೋಗದ ಪ್ರಮಾಣಪತ್ರವು ಅರ್ಜಿದಾರರ ಆರೋಪಗಳಿಗೆ ಪುಷ್ಟಿ ನೀಡುತ್ತದೆ. ಆಯೋಗವು ಫಾರ್ಮ್-6ಅನ್ನು ತಿದ್ದುಪಡಿ, ಇದಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದೆ” ಎಂದು ಪೀಠದ ಗಮನಕ್ಕೆ ತಂದರು.
ಆದಾಗ್ಯೂ, ಈ ವಾದಗಳನ್ನು ತನ್ನ ‘ಕೌಂಟರ್ ಅಫಿಡವಿಟ್’ನಲ್ಲಿ ತಳ್ಳಿಹಾಕಿರುವ ಚುನಾವಣಾ ಆಯೋಗವು, “ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಆಯೋಗವು ಸರ್ವಾನುಮತದಿಂದಲೇ ತೆಗೆದುಕೊಂಡಿದೆ. ಸಂವಿಧಾನದ ವಿಧಿ 324(5) ರ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ತೆಗೆದುಹಾಕುವ ರೀತಿಯಲ್ಲೇ ವಜಾಗೊಳಿಸಬೇಕೇ ಹೊರತು, ನೇರವಾಗಿ ಹುದ್ದೆಯಿಂದ ತೆಗೆದುಹಾಕಲು ಸಾಧ್ಯವಿಲ್ಲ, ಹಾಗಾಗಿ ಅವರನ್ನು ಕಾರ್ಯನಿರ್ವಹಿಸದಂತೆ ತಡೆಯಲು ಕೋರಿರುವ ಅರ್ಜಿ ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ” ಎಂದು ವಾದಿಸಿದೆ.





