ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿರುವ ಹುಂಡಿ ಹಣ ಲೂಟಿ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ, ರಾಮಮಂದಿರ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹುದ್ದೆಗೆ ನೇಮಕಾತಿ ನಡೆಸಲು ಅರ್ಜಿ ಆಹ್ವಾನಿಸಲಾಗಿದ್ದು, ಕೇವಲ 24 ಗಂಟೆಗಳಲ್ಲಿ 1,000ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ ನಿವೃತ್ತ ಐಎಎಸ್, ಐಪಿಎಸ್ ಹಾಗೂ ಹಿರಿಯ ಅಧಿಕಾರಶಾಹಿಗಳೇ ಹೆಚ್ಚಾಗಿದ್ದಾರೆ ಎಂದು ವರದಿಯಾಗಿದೆ.
ರಾಮಮಂದಿರದ ಸಿಇಒ ನೇಮಕಕ್ಕಾಗಿ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ’ ಟ್ರಸ್ಟ್ ಸೋಮವಾರ (ಜುಲೈ 13) ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನವಾಗಿದೆ. ಈಗ, ಭಾರೀ ಪ್ರಮಾಣದಲ್ಲಿ ಅರ್ಜಿಗಳು ಬರುತ್ತಿರುವುದರಿಂದ ಅಭ್ಯರ್ಥಿಗಳನ್ನು ಅರ್ಹತಾ ಮಾನದಂಡಗಳ ಆಧಾರದ ಮೇಲೆ ವರ್ಗೀಕರಿಸಲು ಆಯ್ಕೆ ಸಮಿತಿಯು ವಿಶೇಷ ಕಾರ್ಯದರ್ಶಿಯೊಬ್ಬರನ್ನು ನೇಮಿಸಲು ನಿರ್ಧರಿಸಿದೆ.
“ಅಧಿಸೂಚನೆ ಹೊರಡಿಸಿದ ಮೊದಲ ದಿನವೇ ಸುಮಾರು 750 ಅರ್ಜಿಗಳು ಬಂದಿವೆ. ಜುಲೈ 18ರ ವೇಳೆಗೆ ಈ ಸಂಖ್ಯೆ ಸಾವಿರಾರು ತಲುಪುವ ನಿರೀಕ್ಷೆಯಿದೆ. ಹೀಗಾಗಿ ಅರ್ಜಿಗಳ ಪರಿಶೀಲನೆಗೆ ಕಾರ್ಯದರ್ಶಿಯ ಅಗತ್ಯವಿದೆ. ಜುಲೈ 19 ರಂದು ಸಮಿತಿ ಸಭೆ ಸೇರಿ ಸಂದರ್ಶನದ ದಿನಾಂಕವನ್ನು ನಿಗದಿಪಡಿಸಲಿದೆ,” ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ರೇಸ್ನಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಕೂಡ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆ ಬಗ್ಗೆ ಹೇಳಿಕೊಂಡಿರುವ ಠಾಕೂರ್, “ಟ್ರಸ್ಟ್ ನಿಗದಿಪಡಿಸಿರುವ ಎಲ್ಲ ಅರ್ಹತೆಗಳು ನನಗಿರುವುದರಿಂದ ನಾನು ಅರ್ಜಿ ಸಲ್ಲಿಸಿದ್ದೇನೆ” ಎಂದು ಹೇಳಿದ್ದಾರೆ.
ಹೊಸ ಸಿಇಒ ಆಯ್ಕೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ; ಜಸ್ಟಿಸ್ ಪ್ರಮೋದ್ ಕೊಹ್ಲಿ (ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು), ಲೆಫ್ಟಿನೆಂಟ್ ಜನರಲ್ ವಿಶ್ವಕಾಂತ್ ಚತುರ್ವೇದಿ (ನಿವೃತ್ತ ಸೇನಾ ಅಧಿಕಾರಿ) ಹಾಗೂ ಸುರೇಶ್ ಹಾವರೆ (ನಿವೃತ್ತ ಪರಮಾಣು ವಿಜ್ಞಾನಿ, ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ನ ಮಾಜಿ ಅಧ್ಯಕ್ಷರು) ಇದ್ದಾರೆ.



