ಹೋಮ್ ಗಾರ್ಡ್ (ಗೃಹ ರಕ್ಷಕ ಸಿಬ್ಬಂದಿ) ನೇಮಕಾತಿಯ ದೈಹಿಕ ದಾರ್ಢ್ಯ ಪರೀಕ್ಷೆಯ ಮೈದಾನದಲ್ಲಿ, ಕ್ರೀಡಾ ಸಮವಸ್ತ್ರವಾಗಲಿ ಅಥವಾ ಟ್ರ್ಯಾಕ್ ಸೂಟ್ ಆಗಲಿ ಇಲ್ಲದೆ, ಉಟ್ಟ ಸೀರೆಯನ್ನೇ ನೆರಿಗೆ ಹಿಡಿದು ಓಡಿದ ಆ ಬಡ ಮಹಿಳೆಯ ವಿಡಿಯೋ ಸದ್ಯ ದೇಶಾದ್ಯಂತ ಲಕ್ಷಾಂತರ ಜನರ ಮನ ಮುಟ್ಟಿದೆ. ಸಾವಿರಾರು ಸವಾಲುಗಳು ಕಣ್ಣಮುಂದಿದ್ದರೂ, ಬದುಕಿನ ಭರವಸೆಯೊಂದನ್ನೇ ಗುರಿಯಾಗಿಸಿಕೊಂಡು ಓಡಿದ ಆಕೆಯ ಪ್ರತಿ ಹೆಜ್ಜೆಯಲ್ಲೂ ಆರ್ಥಿಕ ಸಂಕಷ್ಟದ ಕಥೆಯಿತ್ತು; ಜೊತೆಗೆ ಸ್ವಾವಲಂಬಿಯಾಗಿ ಬಾಳಬೇಕೆಂಬ ದೃಢನಿಶ್ಚಯವಿತ್ತು ಎಂಬ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸಾಮಾನ್ಯವಾಗಿ ಪೋಲಿಸ್ ಅಥವಾ ಹೋಮ್ ಗಾರ್ಡ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಸೂಕ್ತವಾದ ಕ್ರೀಡಾ ಉಡುಪು, ಶೂಗಳನ್ನು ಧರಿಸಿ ತಿಂಗಳುಗಟ್ಟಲೆ ತರಬೇತಿ ಪಡೆದು ಬರುತ್ತಾರೆ. ಆದರೆ, ಈ ಮಹಿಳೆಗೆ ಸ್ಪೋರ್ಟ್ಸ್ ವೇರ್ ಖರೀದಿಸುವುದಕ್ಕೂ ಆರ್ಥಿಕ ಅನುಕೂಲವಿರಲಿಲ್ಲ. ಬಡತನದ ಪರಿಸ್ಥಿತಿಯ ನಡುವೆಯೂ ಉದ್ಯೋಗ ಗಿಟ್ಟಿಸಿಕೊಂಡು ಕುಟುಂಬಕ್ಕೆ ಆಸರೆಯಾಗಬೇಕು ಎನ್ನುವ ಏಕೈಕ ಕನಸು ಆಕೆಯನ್ನು ಮೈದಾನಕ್ಕೆ ಕರೆತಂದಿತ್ತು.
ಇದನ್ನೂ ಓದಿ: ʼಹೋಂಬೌಂಡ್ʼ – ಮೌನವಾಗಿ ಮಣ್ಣುಗೂಡಿದ ಕನಸುಗಳು!
ಸೀರೆಯನ್ನೇ ಬಿಗಿಯಾಗಿ ಉಟ್ಟು, ಕಾಲಿಗೆ ಸೂಕ್ತವಾದ ಶೂಗಳಿಲ್ಲದಿದ್ದರೂ ಛಲ ಬಿಡದೆ ಮೈದಾನದ ಟ್ರ್ಯಾಕ್‌ನಲ್ಲಿ ಇತರರೊಂದಿಗೆ ಧಾವಿಸಿದ ಆಕೆಯ ದೃಶ್ಯ, ಅಲ್ಲಿ ನೆರೆದಿದ್ದ ಅಧಿಕಾರಿಗಳು ಹಾಗೂ ಇತರೆ ಸ್ಪರ್ಧಿಗಳ ಗಮನ ಸೆಳೆಯಿತು. ದೇಹದ ಆಯಾಸಕ್ಕಿಂತ ಬದುಕಿನ ನಿರೀಕ್ಷೆಯೇ ಆಕೆಯನ್ನು ಗುರಿ ತಲುಪುವಂತೆ ಮಾಡಿತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಿಂದ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. “ಓಟಕ್ಕಾಗಿ ಬೇಕಾದ ಉಡುಪು ಅಥವಾ ಸೌಲಭ್ಯಗಳಿಲ್ಲದಿದ್ದರೂ ಗುರಿ ತಲುಪುವ ಛಲವೊಂದಿದ್ದರೆ ಸಾಕು ಎಂಬುದಕ್ಕೆ ಈ ಮಹಿಳೆಯೇ ಜೀವಂತ ನಿದರ್ಶನ. ಆಕೆಯ ನಿಷ್ಠೆ ಮತ್ತು ಕಷ್ಟಪಡುವ ಗುಣಕ್ಕೆ ಸಲಾಂ” ಎಂದು ಅನೇಕರು ಎಕ್ಸ್ (ಟ್ವಿಟರ್) ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
“ಯಾವುದೇ ನೆಪಗಳನ್ನು ಹೇಳದೆ ಬದುಕಿಗಾಗಿ ಹೋರಾಡುವ ಪ್ರತಿಯೊಬ್ಬ ತಾಯಿ ಮತ್ತು ಹೆಣ್ಣಿಗೆ ಈಕೆಯ ಓಟವೇ ಪ್ರೇರಣೆ” ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಜಾಲತಾಣಗಳಲ್ಲಿ ಅನೇಕ ಬಳಕೆದಾರರು ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಗೆ ಮನವಿ ಮಾಡಿದ್ದು, “ಈ ರೀತಿಯ ನೈಜ ಆಸಕ್ತಿ ಮತ್ತು ಶ್ರಮವಿರುವ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಬೇಕು ಹಾಗೂ ಸೂಕ್ತ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಹಾಗೆಯೇ ಈ ಓಟ ಕೇವಲ ಒಂದು ನೇಮಕಾತಿ ಪರೀಕ್ಷೆಯಾಗಿರಲಿಲ್ಲ; ಅದು ಬಡತನದ ವಿರುದ್ಧ, ಆರ್ಥಿಕ ಸಂಕಷ್ಟಗಳ ವಿರುದ್ಧ ಒಬ್ಬ ಮಹಿಳೆ ನಡೆಸಿದ ದಿಟ್ಟ ಹೋರಾಟ ಎನ್ನುತ್ತಿದ್ದಾರೆ ನಟ್ಟಿಗರು.




