ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್ ತಡವಾಗುತ್ತಿರುವುದೇಕೆ... ವಿವರ ಇಲ್ಲಿದೆ ನೋಡಿ.
2015ರಲ್ಲಿ ಬುಲೆಟ್ ಟ್ರೈನ್ ತುಂಬಾ ಸುದ್ದಿ ಮಾಡಿತ್ತು. ಈ ವೇಳೆಗೆ ಅದು ಪ್ರಾರಂಭವಾಗಿ ಒಂದು ವರ್ಷವಾಗಬೇಕಿತ್ತು. ಆದರೆ ಸುದ್ಧಿಯೇ ಇಲ್ಲ. ಕೆಲವು ಪತ್ರಿಕೆಗಳು ಆ ಬಗ್ಗೆ ವರದಿ ಮಾಡಿವೆ. ‘ಫೈನಾನ್ಸಿಯಲ್ ಟೈಮ್ಸ್’ ಪತ್ರಿಕೆಯಲ್ಲೂ ಒಂದು ವಿವರವಾದ ಲೇಖನ ಆ ಬಗ್ಗೆ ಪ್ರಕಟವಾಗಿದೆ.
ಭಾರತವು ತನ್ನ ಮೊದಲ ಬುಲೆಟ್ ಟ್ರೈನ್ ನಿರ್ಮಿಸಲು ಮುಂದಾದಾಗ, ಜಪಾನ್ ಜೊತೆ ಒಪ್ಪಂದ ಮಾಡಿಕೊಂಡಿತು. ಜಪಾನ್ ಹೈಸ್ಪೀಡ್ ರೈಲುಗಳ ಜನಕ, ಜೊತೆಗೆ ಅದು ಭಾರತಕ್ಕೆ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಒಪ್ಪಿಕೊಂಡಿತು. ಹಾಗಾಗಿ ಜಪಾನ್ ಕಡೆ ಮುಖ ಮಾಡಿದ್ದು ಅಚ್ಚರಿಯ ವಿಷಯವೇನೂ ಆಗಿರಲಿಲ್ಲ. ಆದರೆ ದಶಕವೇ ಕಳೆದರೂ ಯೋಜನೆ ಇನ್ನೂ ನನೆಗುದಿಯಲ್ಲೇ ಇದೆ. ಯೋಜನೆ ವಿಳಂಬ, ಗಗನಕ್ಕೇರಿದ ವೆಚ್ಚ ಮತ್ತು ಗುತ್ತಿಗೆ ಹಂಚಿಕೆಗೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಉಂಟಾಗಿರುವ ತೀವ್ರ ಭಿನ್ನಾಭಿಪ್ರಾಯಗಳು ಈಗ ಬಹಿರಂಗವಾಗಿವೆ. ಮೂಲಸೌಕರ್ಯದ ಆಶಯಗಳಲ್ಲಿ ಎರಡೂ ದೇಶಗಳ ಗುರಿಗಳು ವಿಭಿನ್ನ ಹಳಿಯಲ್ಲಿ ಸಾಗುತ್ತಿರುವಂತೆ ತೋರುತ್ತಿದೆ.
ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಇದನ್ನು ಘೋಷಿಸಿದ್ದರು. ಇದಕ್ಕಾಗಿ 2015ರಲ್ಲಿ ಜಪಾನ್‌ನೊಂದಿಗೆ ₹98 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದಕ್ಕೆ ಜಪಾನ್ ಶೇ 0.1ರ ಅತ್ಯಲ್ಪ ಬಡ್ಡಿದರದಲ್ಲಿ 50 ವರ್ಷಗಳ ದೀರ್ಘಾವಧಿಯ ಸಾಲವನ್ನು ನೀಡಲು ಒಪ್ಪಿತ್ತು.
ಆರಂಭದಲ್ಲಿ 2023ರ ವೇಳೆಗೆ ಈ ರೈಲು ಆರಂಭವಾಗಬೇಕಿತ್ತು. ಆದರೆ ಭೂಸ್ವಾಧೀನದಲ್ಲಿನ ವಿಳಂಬದಿಂದಾಗಿ ಇದು ಸಾಧ್ಯವಾಗಲಿಲ್ಲ. ಅಧಿಕೃತ ಅಂದಾಜಿನ ಪ್ರಕಾರ, ಯೋಜನೆಯ ವೆಚ್ಚವು ಈಗ ಬರೋಬ್ಬರಿ ₹1.87 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದರೆ ಎರಡುಪಟ್ಟು ಹೆಚ್ಚಾಗಿದೆ.
ಇದನ್ನು ಓದಿದ್ದೀರಾ?: CEC ನೇಮಕ ಬಲು ದೊಡ್ಡ ತಲೆನೋವು ಎಂದಿದ್ದ ಸಂವಿಧಾನ ರಚನಾ ಸಭೆ; ಯಾಕೆ ಗೊತ್ತೇ?
ಎರಡು ದೇಶಗಳ ನಡುವಿನ ಭಿನ್ನಾಭಿಪ್ರಾಯ ಈ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ‘ಫೈನಾನ್ಸಿಯಲ್ ಟೈಮ್ಸ್’ ಕೆಲವು ಕಾರಣಗಳನ್ನು ನೀಡುತ್ತದೆ.
ಮೊದಲನೆಯದಾಗಿ ಭಾರತವು ಸಿಗ್ನಲಿಂಗ್ ವ್ಯವಸ್ಥೆಯ ದೊಡ್ಡ ಗುತ್ತಿಗೆಯನ್ನು ಜಪಾನ್‌ನ ಪ್ರತಿಸ್ಪರ್ಧಿಯಾದ ಜರ್ಮನಿಯ ಕೈಗಾರಿಕಾ ಸಂಸ್ಥೆ ಸೀಮೆನ್ಸ್‌ಗೆ ನೀಡಿರುವುದು ಜಪಾನಿನ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. ಈ ಕ್ರಮವು ಒಪ್ಪಂದದ ಉಲ್ಲಂಘನೆ ಎಂದು ಜಪಾನ್ ಅಧಿಕಾರಿಗಳು ಆರೋಪಿಸಿದ್ದಾರೆ. ಜಪಾನ್‌ನ ಪ್ರಕಾರ, ಸಂಪೂರ್ಣ ಸಂಯೋಜಿತ (Integrated) ವ್ಯವಸ್ಥೆಯಿಂದ ಮಾತ್ರ ಅವರ ಬುಲೆಟ್ ಟ್ರೈನ್‌ಗಳ ದಕ್ಷತೆ, ಸುರಕ್ಷತೆ ಮತ್ತು ಸಮಯಪಾಲನೆ ಇವೆಲ್ಲಾ ಸಾಧ್ಯ. ಜಪಾನಿ ಹಳಿಗಳು, ಯುರೋಪಿಯನ್ ಸಿಗ್ನಲಿಂಗ್ ಮತ್ತು ಭಾರತೀಯ ರೈಲುಗಳ ಈ ಮಿಶ್ರ ವ್ಯವಸ್ಥೆಯನ್ನು ಈ ಮೊದಲು ಪರೀಕ್ಷಿಸಿಯೇ ಇಲ್ಲ.
ಎರಡನೆಯದಾಗಿ ಭಾರತೀಯ ಸಮಾಲೋಚಕರು ವೆಚ್ಚವನ್ನು ತಗ್ಗಿಸಲು, ಸ್ಥಳೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮತ್ತು ಭವಿಷ್ಯದ ಸ್ವಾತಂತ್ರ್ಯವನ್ನು ಹೆಚ್ಚಿಸಿಕೊಳ್ಳಲು ಪಟ್ಟು ಹಿಡಿದಿದ್ದಾರೆ. ಆದರೆ ಜಪಾನ್, ಮೂಲಸೌಕರ್ಯ ರಫ್ತನ್ನು ಸಮಗ್ರ ಪ್ಯಾಕೇಜ್ ರೂಪದಲ್ಲಿಯೇ ಉಳಿಸಿಕೊಳ್ಳಲು ಬಯಸುತ್ತಿದೆ.
ಜಪಾನ್‌ನ ಮಾಜಿ ನ್ಯಾಯ ಸಚಿವರಾದ ಹಿಡೆಕಿ ಮಕಿಹಾರ ಅವರು ಜುಲೈನಲ್ಲಿ ಎಕ್ಸ್ (ಟ್ವಿಟರ್) ತಾಣದಲ್ಲಿ, “ಯೋಜನೆ ವಿಳಂಬಕ್ಕೆ ಶೇ. 100ರಷ್ಟು ಭಾರತವೇ ಹೊಣೆ. ಅವರು ಎಂದಿಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಿಲ್ಲ” ಎಂದು ಕಟುವಾಗಿ ಬರೆದಿದ್ದರು.
ಇದನ್ನು ಓದಿದ್ದೀರಾ?: ಕಳೆದ ಆರು ತಿಂಗಳಲ್ಲಿ ನೆಲ ಕಚ್ಚಿದೆ ಗ್ರಾಮೀಣ ಗ್ರಾಹಕರ ವಿಶ್ವಾಸ- RBI ಸಮೀಕ್ಷೆ
ಜಪಾನಿನ ರಾಜತಾಂತ್ರಿಕರ ಪ್ರಕಾರ, ಭಾರತೀಯರು ಗುರಿಗಳನ್ನು ಬಹಳ ಎತ್ತರಕ್ಕೆ ಇಟ್ಟುಕೊಳ್ಳುತ್ತಾರೆ. ಆದರೆ ಅನುಷ್ಠಾನದಲ್ಲಿ ಸಂಪೂರ್ಣವಾಗಿ ವಿಫಲರಾಗುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಜಪಾನಿಯರು ವಾಸ್ತವಿಕ ಗುರಿಗಳನ್ನು ನಿಗದಿಪಡಿಸಿಕೊಂಡು ಅದನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುತ್ತಾರೆ ಎಂಬುದು ಅವರ ವಾದ.

ಭಾರತದ ನಿಲುವು ಮತ್ತು ಭವಿಷ್ಯದ ಸವಾಲುಗಳು
ಭಾರತದ ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, ಎರಡೂ ದೇಶಗಳ ನಡುವೆ ಸಮನ್ವಯವಿದ್ದು, ವಿಸ್ತೃತ ಮಾತುಕತೆಯ ನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜಪಾನಿನ ರೈಲುಗಳ ಸಾಮರ್ಥ್ಯಕ್ಕೆ ಸರಿಸಮನಾದ ಹೈಸ್ಪೀಡ್ ರೈಲುಗಳನ್ನು ದೇಶೀಯವಾಗಿಯೇ ತಯಾರಿಸಬಹುದು ಎಂದು ಭಾರತ ಪ್ರತಿಪಾದಿಸಿದೆ.
ಮುಂದಿನ ಬೇಸಿಗೆಯ ವೇಳೆಗೆ 100 ಕಿ.ಮೀ ಮಾರ್ಗದಲ್ಲಿ ಭಾರತೀಯ ನಿರ್ಮಿತ, ಕೊಂಚ ಕಡಿಮೆ ವೇಗದ ರೈಲುಗಳನ್ನು ಓಡಿಸಲು ಭಾರತ ಸಿದ್ಧತೆ ನಡೆಸುತ್ತಿದೆ. ಆದರೆ ಜಪಾನಿ ಅಧಿಕಾರಿಗಳ ಪ್ರಕಾರ, ಮೊದಲ ಹಂತವು ಕೇವಲ 50 ಕಿ.ಮೀ ಮಾತ್ರ ಪೂರ್ಣಗೊಳ್ಳಬಹುದು ಮತ್ತು ಈ ಗಡುವಿನ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಹಮದಾಬಾದ್-ಮುಂಬೈ ಮಾರ್ಗದ ಹೊರತಾಗಿ, ಭಾರತವು ಸುಮಾರು 4,000 ಕಿ.ಮೀ ಉದ್ದದ 7 ಪ್ರತ್ಯೇಕ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಗುರುತಿಸಿದ್ದು, ಇದಕ್ಕಾಗಿ ₹16 ಲಕ್ಷ ಕೋಟಿ ($167 ಶತಕೋಟಿ) ಹೂಡಿಕೆಯನ್ನು ನಿರೀಕ್ಷಿಸುತ್ತಿದೆ.
ರಾಜತಾಂತ್ರಿಕ ಮಹತ್ವ
ಚೀನಾದ ಪ್ರಾಬಲ್ಯವನ್ನು ಎದುರಿಸಲು ಭಾರತ ಮತ್ತು ಜಪಾನ್ ನಡುವೆ ಉತ್ತಮ ದ್ವಿಪಕ್ಷೀಯ ಸಂಬಂಧವನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಜುಲೈನಲ್ಲಿ ನವದೆಹಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ಜಪಾನ್ ಪ್ರಧಾನಿ ಸನೇ ತಕೈಚಿ ಅವರು, ಎರಡೂ ದೇಶಗಳು ‘ಅಣ್ಣ-ತಂಗಿಯ ಸಂಬಂಧ’ವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದ್ದರು.
ಭಾರತದ ಹಿರಿಯ ರಾಜತಾಂತ್ರಿಕರೊಬ್ಬರು ಮಾರ್ಮಿಕವಾಗಿ ನುಡಿದಂತೆ: “ಹೈಸ್ಪೀಡ್ ರೈಲು ಯೋಜನೆಯ ವೇಗಕ್ಕಿಂತಲೂ, ಭಾರತ-ಜಪಾನ್ ನಡುವಿನ ದ್ವಿಪಕ್ಷೀಯ ಬಾಂಧವ್ಯದ ವೇಗವೇ ಸದ್ಯಕ್ಕೆ ತೀರಾ ವೇಗವಾಗಿದೆ.”

ಟಿ.ಎಸ್. ವೇಣುಗೋಪಾಲ್
ಕನ್ನಡದ ಪ್ರಮುಖ ಅರ್ಥಶಾಸ್ತ್ರಜ್ಞರು, ಅಂಕಣಕಾರರು ಹಾಗೂ ಲೇಖಕರು. ಅವರು ದೇಶದ ಆರ್ಥಿಕತೆ, ಜಿಡಿಪಿ (GDP) ಬೆಳವಣಿಗೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತ್ಯಂತರಗಳ ಕುರಿತು ಪ್ರಮುಖ ಮಾಧ್ಯಮಗಳಲ್ಲಿ ನಿಯಮಿತವಾಗಿ ವಿಶ್ಲೇಷಣಾತ್ಮಕ ಲೇಖನಗಳನ್ನು ಬರೆಯುತ್ತಾರೆ.



